Asianet Suvarna News Asianet Suvarna News

ರಾಮಮಂದಿರಕ್ಕೆ ಬೃಹತ್‌ ಬೀಗದ ಕೈ, ಪಾದರಕ್ಷೆ ಸೇರಿ ನಾನಾ ರೀತಿ ಉಡುಗೊರೆ

ಸೀತೆಯ ಜನ್ಮಸ್ಥಳ ಎನ್ನಲಾದ ನೇಪಾಳದ ಜನಕಪುರಿಯಿಂದಲೇ ಬೆಳ್ಳಿ ಪಾದರಕ್ಷೆ, ಆಭರಣಗಳು, ಬಟ್ಟೆಗಳು ಸೇರಿದಂತೆ 3,000 ರೀತಿಯ ಉಡುಗೊರೆಗಳು ಅಯೋಧ್ಯೆಗೆ ಬಂದು ತಲುಪಿವೆ. ಶ್ರೀಲಂಕಾದ ಅಶೋಕವನದಿಂದ ಬೃಹತ್ ಬಂಡೆಯನ್ನು ಅಯೋಧ್ಯೆಗೆ ಸಮರ್ಪಿಸಲಾಗಿದೆ.

various kinds of gifts including huge locks of hands and shoes to the ram mandir ash
Author
First Published Jan 11, 2024, 8:13 AM IST

ಅಯೋಧ್ಯೆ (ಜನವರಿ 11, 2024): ರಾಮಮಂದಿರದ ಮೊದಲ ಹಂತ ಲೋಕಾರ್ಪಣೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆ ದೇಗುಲಕ್ಕೆ ವಿಶ್ವದಲ್ಲೇ ಬೃಹತ್‌ ಬೀಗದ ಕೈ, ಚಿನ್ನ ಲೇಪಿತ ಪಾದರಕ್ಷೆ, ಶ್ರೀರಾಮನ ಚಿತ್ರವುಳ್ಳ ಸೀರೆ, 8 ರಾಷ್ಟ್ರಗಳ ಸಮಯ ತೋರಿಸಬಲ್ಲ ಗಡಿಯಾರ ಸೇರಿದಂತೆ ಹಲವು ವಿಶಿಷ್ಟ ಉಡುಗೊರೆಗಳನ್ನು ಭಕ್ತಾದಿಗಳು ಸಮರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ.

ಸೀತೆಯ ಜನ್ಮಸ್ಥಳ ಎನ್ನಲಾದ ನೇಪಾಳದ ಜನಕಪುರಿಯಿಂದಲೇ ಬೆಳ್ಳಿ ಪಾದರಕ್ಷೆ, ಆಭರಣಗಳು, ಬಟ್ಟೆಗಳು ಸೇರಿದಂತೆ 3,000 ರೀತಿಯ ಉಡುಗೊರೆಗಳು ಅಯೋಧ್ಯೆಗೆ ಬಂದು ತಲುಪಿವೆ. ಶ್ರೀಲಂಕಾದ ಅಶೋಕವನದಿಂದ ಬೃಹತ್ ಬಂಡೆಯನ್ನು ಅಯೋಧ್ಯೆಗೆ ಸಮರ್ಪಿಸಲಾಗಿದೆ.

ಇದನ್ನು ಓದಿ: ಬಾಹ್ಯಾಕಾಶ ವಿಜ್ಞಾನಿಗಳ ಸಲಹೆ ಪಡೆದು ಅಯೋಧ್ಯೆ ಶ್ರೀರಾಮನ ವಿಗ್ರಹ ಎತ್ತರದ ವಿನ್ಯಾಸ: ಚಂಪತ್ ರಾಯ್

ಇದರ ಜೊತೆಗೆ ದೇಶದೊಳಗೂ ವಿವಿಧ ರೀತಿಯ ಉಡುಗೊರೆಗಳನ್ನು ಭಕ್ತಾದಿಗಳು ತಯಾರಿಸಿ ಕಳುಹಿಸಿಕೊಡುತ್ತಿದ್ದಾರೆ. ಪ್ರಮುಖವಾಗಿ ವಡೋದರಾದಿಂದ 108 ಅಡಿ ಉದ್ದದ ಅಗರಬತ್ತಿ, ಅಹಮದಾಬಾದ್‌ನಿಂದ 44 ಅಡಿ ಉದ್ದದ ಧ್ವಜಸ್ತಂಭ, 56 ಇಂಚಿನ ದೇಗುಲದ ಡೋಲು ಮತ್ತು ಪಂಚಧಾತುವಿನಿಂದ ತಯಾರಿಸಿದ ಬೃಹತ್‌ ದೀಪ, ಅಲಿಗಢದಿಂದ ವಿಶ್ವದಲ್ಲೇ ಬೃಹತ್‌ ಬೀಗದ ಕೈ, ಉತ್ತರ ಪ್ರದೇಶದ ಜಲೆಸಾರ್‌ನಿಂದ ಅಷ್ಟಧಾತುವಿನಿಂದ ತಯಾರಿಸಿದ ಬೃಹತ್‌ ಘಂಟೆ, ಲಖನ್‌ದಿಂದ 8 ರಾಷ್ಟ್ರದ ಸಮಯ ತೋರಿಸಬಲ್ಲ ಗಡಿಯಾರ, ಸೂರತ್‌ನಿಂದ ಸೀತೆಗೆ ಸೀರೆ ಮತ್ತು ವಜ್ರದ ಕಂಠಾಭರಣ, ಹೈದರಾಬಾದ್‌ನಿಂದ ಚಿನ್ನಲೇಪಿತ ಪಾದರಕ್ಷೆಗಳು ಅಯೋಧ್ಯೆಗೆ ಬಂದು ತಲುಪಿವೆ.

ಅಲ್ಲದೆ ಜನವರಿ 22ರ ಪ್ರಾಣಪ್ರತಿಷ್ಠಾಪನೆಯ ದಿನ ಭಕ್ತಾದಿಗಳಿಗೆ ಪ್ರಸಾದ ಸಂತರ್ಪಣೆಗೆ ನಾಗಪುರದ ಅಡುಗೆ ಭಟ್ಟರೊಬ್ಬರು ಬೃಹತ್ ಕಡಾಯಿ ಮೂಲಕ ರಾಮಹಲ್ವಾ ತಯಾರಿಸಿ ಹಂಚಲಿದ್ದಾರೆ ಮತ್ತು ತಿರುಪತಿ ದೇಗುಲ ಮಂಡಳಿ ಒಂದು ಲಕ್ಷ ಲಡ್ಡು ವಿತರಿಸಲಿದೆ. ಮಥುರಾ ಕೃಷ್ಣ ದೇಗುಲ ಯಜ್ಞಕ್ಕೆ 200 ಕೆಜಿ ಲಡ್ಡು ದೇಣಿಗೆ ನೀಡಿದೆ.

ಜೈಲುವಾಸ, ರಾಮಭಕ್ತಿ ಬಿಟ್ಟು ಬೇರೆನಿಲ್ಲ...ಇದು ರಾಮಮಂದಿರದ ಶಬ್ದಕೋಶ ಚಂಪತ್‌ ರೈ ಲೈಫ್‌ ಸ್ಟೋರಿ!

ವಿಶ್ವದ ಬೃಹತ್ ಗಂಟೆ ಸಮರ್ಪಣೆ
ರಾಮ ಮಂದಿರಕ್ಕೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಬರೋಬ್ಬರಿ 25 ಲಕ್ಷ ರೂ. ಮೌಲ್ಯದ 2100 ಕೆಜಿ ತೂಕವುಳ್ಳ ಬೃಹತ್ ಗಂಟೆ ಸಮರ್ಪಿಸಿದ್ದಾರೆ. ಚಿನ್ನ, ಬೆಳ್ಳಿ ಸೇರಿ ಅಷ್ಟಧಾತುಗಳಿಂದ ಇದನ್ನು ತಯಾರಿಸಲಾಗಿದೆ. 

ಜನವರಿ 14ರಿಂದ ಮಹಾ ಯಜ್ಞ ಆರಂಭ
ನಗರದಲ್ಲಿ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಲು ಅಂತಿಮ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ನೇಪಾಳಿ ಬಾಬಾ ಎಂದೇ ಖ್ಯಾತರಾದ ಆತ್ಮಾನಂದ ದಾಸ್‌ ಮಹಾತ್ಯಾಗಿ ನೇತೃತ್ವದಲ್ಲಿ ಜನವರಿ 14ರಿಂದ 25ರವರೆಗೆ ರಾಮನಾಮ ಮಹಾಯಜ್ಞ ನಡೆಯಲಿದೆ.

ರಾಮನಾಮ ಮಹಾಯಜ್ಞದಲ್ಲಿ ನೇಪಾಳದಿಂದ 21 ಸಾವಿರ ಯತಿಗಳು ಭಾಗವಹಿಸಲಿದ್ದು, 1008 ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜನವರಿ 14ರಂದು ಎಲ್ಲ ಯತಿಗಳ ಕೇಶ ಮುಂಡನದೊಂದಿಗೆ ಪ್ರಕ್ರಿಯೆ ಆರಂಭವಾಗುತ್ತದೆ. ಜನವರಿ 17ರಿಂದ ಹವನ ಪ್ರಕ್ರಿಯೆಗಳು ನಡೆಯಲಿದ್ದು, ಈ ವೇಳೆ ಎಲ್ಲ ಯತಿಗಳು ರಾಮಾಯಣದ 24 ಸಾವಿರ ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಹವನ ಪ್ರಕ್ರಿಯೆ ಪೂರ್ಣವಾದ ನಂತರ ಎಲ್ಲ ಶಿವಲಿಂಗಗಳನ್ನು ಸರಯೂ ನದಿಯಲ್ಲಿ ಮುಳುಗಿಸಲಾಗುತ್ತದೆ.

ಈ ಕುರಿತು ಮಾಹಿತಿ ನೀಡಿದ ನೇಪಾಳಿ ಬಾಬಾ, ‘ಯಜ್ಞಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸರಯೂ ನದಿಯ ಘಾಟ್‌ ಪ್ರದೇಶದಲ್ಲಿ 100 ಎಕರೆ ವಿಶಾಲ ಜಾಗದಲ್ಲಿ ಟೆಂಟ್‌ ಸಿಟಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರತಿದಿನ 50 ಸಾವಿರ ಮಂದಿ ಉಳಿದುಕೊಳ್ಳುವ ವ್ಯವಸ್ಥೆಯಿದ್ದು, ಯಜ್ಞದಲ್ಲಿ ಪ್ರತಿನಿತ್ಯ 1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios