ವಾರಣಾಸಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ ಹೋಟೆಲ್ ಸಿಬ್ಬಂದಿಯ ವಿರುದ್ಧ ಇಬ್ಬರು ಸಹೋದರಿಯರು ಆಕ್ರೋಶಗೊಂಡು ದಾಂಧಲೆ ನಡೆಸಿದ ಘಟನೆ ನಡೆದಿದೆ. ಹೋಟೆಲ್‌ಗೆ ನುಗ್ಗಿ ಪಾತ್ರೆಗಳನ್ನು ಉರುಳಿಸಿ, ಸಿಬ್ಬಂದಿಯ ಮೇಲೆ ನೀರೆರಚಿದ ದೃಶ್ಯಾವಳಿ ವೈರಲ್ ಆಗಿದೆ.

ವಾರಣಸಿ (ನ.16): 'ಅಂಗಡಿ ಮುಚ್ಚು..' ಎಂದು ಕೂಗಾಡುತ್ತಾ ರಸ್ತೆಬದಿಯ ಹೋಟೆಲ್‌ಗೆ ನುಗ್ಗಿದ ಇಬ್ಬರು ಸಹೋದರಿಯರು, ಅಲ್ಲಿದ್ದ ದೋಸೆ ಹಿಟ್ಟಿನ ಪಾತ್ರೆಯನ್ನು ಕೈಯಿಂದ ತಟ್ಟಿ ಉರುಳಿಸಿ, ಸಿಬ್ಬಂದಿಯ ಮೇಲೆ ನೀರೆರಚಿ ಭಾರಿ ದಾಂಧಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಈ ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡಿರುವ ಯೂಸರ್‌ ಒಬ್ಬರ ಪ್ರಕಾರ, ದಾಂಧಲೆ ನಡೆಸಿರುವ ಇಬ್ಬರು ಯುವತಿಯರು ಸಹೋದರಿಯರಾಗಿದ್ದು, ಹೋಟೆಲ್ ಸಿಬ್ಬಂದಿ ತಮ್ಮ ಅಪ್ಪನ ಮೇಲೆ ಹಲ್ಲೆ ನಡೆಸಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ವರದಿಗಳ ಪ್ರಕಾರ, ಕಳೆದ ನವೆಂಬರ್ 4 ರಂದು ಈ ಯುವತಿಯರ ತಂದೆ ಮತ್ತು ಹೋಟೆಲ್ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಹೋಟೆಲ್ ಸಿಬ್ಬಂದಿ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕುಟುಂಬಸ್ಥರು ಸ್ಥಳೀಯ ಭೇಲುಪುರ (Bhelupur) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡ ಸಹೋದರಿಯರು ತಾವೇ ಕಾನೂನನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಹೈಡ್ರಾಮಾ

ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ಇಬ್ಬರು ಯುವತಿಯರು ಸ್ಕೂಟರ್‌ನಲ್ಲಿ ಹೋಟೆಲ್ ಬಳಿ ಬಂದು, ಮೊದಲು ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಆರಂಭಿಸುತ್ತಾರೆ. ತಕ್ಷಣವೇ ಅವರಲ್ಲಿ ಒಬ್ಬಳು ಹೋಟೆಲ್‌ನತ್ತ ನುಗ್ಗಿ, ಅಲ್ಲಿ ತುಂಬಿಟ್ಟಿದ್ದ ಹಿಟ್ಟಿನ ಪಾತ್ರೆಯನ್ನು ಕೆಳಕ್ಕೆ ತಳ್ಳಿ ಉರುಳಿಸುತ್ತಾಳೆ. ಅಲ್ಲದೆ, ಅಲ್ಲಿದ್ದ ಕೆಲಸಗಾರನ ಮೇಲೆ ನೀರನ್ನು ಎರಚಿ 'ಅಂಗಡಿ ಮುಚ್ಚು' ಎಂದು ಜೋರಾಗಿ ಕೂಗಾಡಿದ್ದಾಳೆ.

ಸ್ಥಳೀಯರಿಗೂ 'ಬಾಯಿ ಮುಚ್ಚು' ಎಂದ ಯುವತಿ!

ಹೋಟೆಲ್ ಬಳಿ ನಿಂತಿದ್ದ ಸ್ಥಳೀಯರು ಈ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಅವರಲ್ಲಿ ಒಬ್ಬರು ಯುವತಿಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಅದು ವಿಫಲವಾಯಿತು. 'ಇಲ್ಲಿ ಚಿಕ್ಕ ಮಕ್ಕಳಿದ್ದಾರೆ. ನಿಮಗೆ ಸ್ವಲ್ಪವಾದರೂ ಪ್ರಜ್ಞೆ ಇರಬೇಕು. ಇಲ್ಲಿ ಏಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀರಿ?' ಎಂದು ಸ್ಥಳೀಯರೊಬ್ಬರು ಪ್ರಶ್ನಿಸಿದಾಗ, ಆಕ್ರೋಶದಲ್ಲಿದ್ದ ಯುವತಿ ಅವರಿಗೇ 'ಬಾಯಿ ಮುಚ್ಚು' ಎಂದು ಗದರಿದ್ದಾಳೆ.

ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಇತರ ಸ್ಥಳೀಯರು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ಯುವತಿಯ ಕೈಯಲ್ಲಿದ್ದ ಫೋನ್ ಕಸಿದುಕೊಳ್ಳಲು ಮುಂದಾಗಿದ್ದು, ಆ ಯುವತಿ ಸ್ಥಳೀಯರಲ್ಲಿ ಕ್ಷಮೆಯಾಚಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಹೋಟೆಲ್ ಮಾಲೀಕನ ದೂರು: ಪ್ರಕರಣ ದಾಖಲು

ತಮ್ಮ ಮಾತನ್ನು ಯುವತಿಯರು ಕೇಳಲು ನಿರಾಕರಿಸಿದ ಕಾರಣ ತಾವು ಪೊಲೀಸರಿಗೆ ದೂರು ನೀಡಿರುವುದಾಗಿ ಹೋಟೆಲ್ ಮಾಲೀಕ ತಿಳಿಸಿದ್ದಾರೆ. ಮಾಲೀಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಪಿ ಗೌರವ್ ಕುಮಾರ್ (ACP Gaurav Kumar), ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Scroll to load tweet…