ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ 13ನೇ ದಿನ ಕುಟುಂಬಸ್ಥರು ತಿಥಿ ಅಥವಾ ತೆಹ್ರವಿ ಕಾರ್ಯಕ್ರಮ ನಡೆಸುವುದು ಸಂಪ್ರದಾಯ. ಆದರೆ ಉತ್ತರ ಪ್ರದೇಶದ 80 ವರ್ಷದ ವ್ಯಕ್ತಿಯೊಬ್ಬರು ತಾವು ಬದುಕಿರುವಾಗಲೇ ತಮ್ಮದೇ 13ನೇ ದಿನದ ತಿಥಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ 13ನೇ ದಿನ ಕುಟುಂಬಸ್ಥರು ತಿಥಿ ಅಥವಾ ತೆಹ್ರವಿ ಕಾರ್ಯಕ್ರಮ ನಡೆಸುವುದು ಸಂಪ್ರದಾಯ. ಆದರೆ ಉತ್ತರ ಪ್ರದೇಶದ 80 ವರ್ಷದ ವ್ಯಕ್ತಿಯೊಬ್ಬರು ತಾವು ಬದುಕಿರುವಾಗಲೇ ತಮ್ಮದೇ 13ನೇ ದಿನದ ತಿಥಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣವೂ ವಿಶೇಷವಾಗಿದೆ. ತಮಗೆ ಗಂಡು ಮಗನಿಲ್ಲ, ಒಬ್ಬಳೇ ಮಗಳಿದ್ದು, ತಮ್ಮ ಸಾವಿನ ನಂತರ ಆಕೆಯ ಮೇಲೆ ಯಾವುದೇ ಜವಾಬ್ದಾರಿ ಬೀಳಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

ಬದುಕಿರುವಾಗಲೇ ತನ್ನದೇ ತಿಥಿ ಕಾರ್ಯಕ್ರಮ!

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಬರೌತ್ ತಹಸಿಲ್ ವ್ಯಾಪ್ತಿಯ ಜೋಹ್ರಿ ಗ್ರಾಮದ 80 ವರ್ಷದ ಬಲ್ಜೋರ್ ಸಿಂಗ್ ಈ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ವ್ಯಕ್ತಿ. ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ 13ನೇ ದಿನ ನಡೆಯುವ ತೆಹ್ರವಿ ಕಾರ್ಯಕ್ರಮವನ್ನು ಅವರು ಭಾನುವಾರ ತಮ್ಮ ಜೀವಿತಾವಧಿಯಲ್ಲೇ ನಡೆಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಸಾವಿನ 13ನೇ ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಬಳಿಕ ಸಂಬಂಧಿಕರು, ಗ್ರಾಮಸ್ಥರು ಹಾಗೂ ಇತರರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇಂತಹ ಕಾರ್ಯಗಳನ್ನು ಮೃತರ ಮಕ್ಕಳು, ವಿಶೇಷವಾಗಿ ಗಂಡು ಮಕ್ಕಳು ನಿರ್ವಹಿಸುವ ಸಂಪ್ರದಾಯವಿದೆ.

ಆದರೆ ಬಲ್ಜೋರ್ ಸಿಂಗ್ ಅವರು ತಮ್ಮ ಮರಣದ ನಂತರ ಮಗಳಿಗೆ ಇಂತಹ ಜವಾಬ್ದಾರಿಗಳು ಹೊರೆಯಾಗಬಾರದು ಎಂಬ ಕಾರಣಕ್ಕೆ ತಾವೇ ಈ ಕಾರ್ಯಕ್ರಮ ನಡೆಸಿದ್ದಾರೆ.

900 ಜನರಿಗೆ ಭರ್ಜರಿ ಊಟದ ವ್ಯವಸ್ಥೆ!

ಈ ಕಾರ್ಯಕ್ರಮವನ್ನು ಸಾಮಾನ್ಯವಾಗಿ ನಡೆಸುವ ತಿಥಿ ಕಾರ್ಯದಂತೆಯೇ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸುಮಾರು 900 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಎಂಟು ಮಂದಿ ಅಡುಗೆ ಕೆಲಸಗಾರರನ್ನು ನೇಮಿಸಲಾಗಿತ್ತು. ಪೂರಿ, ತರಕಾರಿ ಪಲ್ಯ ಸೇರಿದಂತೆ ವಿವಿಧ ಖಾದ್ಯಗಳು ಮತ್ತು ಸಿಹಿತಿಂಡಿಗಳನ್ನು ತಯಾರಿಸಲಾಗಿತ್ತು. ಭಾನುವಾರ ಸಂಪ್ರದಾಯದಂತೆ ಹವನವನ್ನೂ ನಡೆಸಲಾಯಿತು. ಗ್ರಾಮಸ್ಥರು, ಸಂಬಂಧಿಕರು ಸೇರಿದಂತೆ ಸುಮಾರು 900 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಸವಿದರು.

'ಮಗಳಿಗೆ ಜವಾಬ್ದಾರಿ ಹೊರೆಯಾಗಬಾರದು'

ತಮ್ಮ ಈ ನಿರ್ಧಾರದ ಬಗ್ಗೆ ಮಾತನಾಡಿರುವ ಬಲ್ಜೋರ್ ಸಿಂಗ್, "ನನಗೆ ಗಂಡು ಮಗನಿಲ್ಲ. ಹೀಗಾಗಿ ನನ್ನ ಮಗಳ ಮೇಲೆ ಈ ಜವಾಬ್ದಾರಿಗಳು ಬೀಳಬಾರದು ಎಂದು ಯೋಚಿಸಿದೆ. ನಾನು ಬದುಕಿರುವಾಗಲೇ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ನಿರ್ಧರಿಸಿದೆ" ಎಂದು ಹೇಳಿದ್ದಾರೆ. ಅವರಿಗೆ ಒಬ್ಬಳೇ ಮಗಳಿದ್ದು, ಆಕೆಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಸೇರಿದಂತೆ ಮೂವರು ಮಕ್ಕಳಿದ್ದಾರೆ. ತಮ್ಮ ಬಳಿ ಇರುವ ಎರಡು ಬಿಘಾ ಜಮೀನನ್ನು ಈಗಾಗಲೇ ಮೊಮ್ಮಗನಿಗೆ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ಮೊಮ್ಮಗನಿಗೆ ಪೇಟ ತೊಡಿಸಿ ಕುಟುಂಬದ ಜವಾಬ್ದಾರಿ ಹಸ್ತಾಂತರ

ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ತಮ್ಮ 10 ವರ್ಷದ ಮೊಮ್ಮಗ ಮುಕುಲ್‌ಗೆ ಬಲ್ಜೋರ್ ಸಿಂಗ್ ಪೇಟ ತೊಡಿಸಿದ್ದಾರೆ. ತಮ್ಮ ನಂತರ ಕುಟುಂಬದ ಜವಾಬ್ದಾರಿಯನ್ನು ಮೊಮ್ಮಗ ವಹಿಸಿಕೊಳ್ಳಬೇಕು ಎಂಬ ಸಂಕೇತವಾಗಿ ಈ ಸಂಪ್ರದಾಯ ನೆರವೇರಿಸಿದ್ದಾರೆ. ತಂದೆಯ ಈ ನಿರ್ಧಾರದ ಬಗ್ಗೆ ಮಾತನಾಡಿದ ಮಗಳು ಪಿಂಕಿ, "ನನ್ನ ತಂದೆ ಬದುಕಿರುವಾಗಲೇ ತಮ್ಮ ತೆಹ್ರವಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ನಾನು ಅವರ ಒಬ್ಬಳೇ ಮಗಳು. ನನಗೆ ಸಹೋದರರಿಲ್ಲ. ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ" ಎಂದು ಹೇಳಿದ್ದಾರೆ.

ಈ ವಿಶಿಷ್ಟ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಸಚಿವ ಕೆ.ಪಿ. ಸಿಂಗ್ ಕೂಡ ಹಾಜರಾಗಿದ್ದರು. ಬಲ್ಜೋರ್ ಸಿಂಗ್ ಅವರ ವಿಭಿನ್ನ ಪ್ರಯತ್ನವನ್ನು ಅಭಿನಂದಿಸಿದ್ದಾರೆ.

ಒಟ್ಟಿನಲ್ಲಿ, ತಮ್ಮ ಮರಣದ ನಂತರ ಮಗಳ ಮೇಲೆ ಯಾವುದೇ ಹೊರೆ ಬೀಳಬಾರದು ಎಂಬ ಉದ್ದೇಶದಿಂದ 80 ವರ್ಷದ ವ್ಯಕ್ತಿಯೊಬ್ಬರು ಬದುಕಿರುವಾಗಲೇ ತಮ್ಮದೇ ತಿಥಿ ಕಾರ್ಯಕ್ರಮ ನಡೆಸಿರುವುದು ಜೋಹ್ರಿ ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದೆ.