Grim start to 2022 : ಸಾಲು ಸಾಲು ದುರಂತಗಳಿಂದಲೇ ಹೊಸ ವರ್ಷಕ್ಕೆ ಸ್ವಾಗತ!
2022ರ ವರ್ಷದ ಮೊದಲ ದಿನವೇ ಹಲವು ದುರಂತ
ಪ್ರಸಿದ್ಧ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ
ಭಿವಾನಿಯಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ
ಬೆಂಗಳೂರು (ಜ. 1): ಭಾರತದ ಪಾಲಿಗೆ 2022ರ ವರ್ಷದ ಮೊದಲ ದಿನ (New Year First Day) ಹರ್ಷದಿಂದ ಪ್ರಾರಂಭವಾಗಲಿಲ್ಲ. ವರ್ಷದ ಮೊದಲ ದಿನವೇ ಪ್ರಸಿದ್ಧ ದೇವಾಲಯ ವೈಷ್ಣೋದೇವಿಯಲ್ಲಿ(Vaishno Devi stampede) ಕಾಲ್ತುಳಿತ ಘಟನೆಯಲ್ಲಿ 12 ಜನರು ಮೃತಪಟ್ಟರೆ, ಹರಿಯಾಣದ (Haryana) ಭಿವಾನಿಯಲ್ಲಿ (Bhiwani ) ನಡೆದ ಗಣಿಗಾರಿಕೆ ಭೂಕುಸಿತ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅದರ ಬೆನ್ನಲ್ಲಿಯೇ ತಮಿಳುನಾಡಿನ (Tamil Nadu) ಪಟಾಕಿ ಕಾರ್ಖಾನೆಯಲ್ಲಿ (Fireworks Manufacturing Unit) ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇವೆಲ್ಲವುಗಳೊಂದಿಗೆ ದೇಶದಲ್ಲಿ ಒಟ್ಟು 22, ಪ್ರಕರಣಗಳು ದಾಖಲಾಗಿದ್ದು, 406 ಸಾವುಗಳು ಸಂಭವಿಸಿದೆ.
ವರ್ಷದ ಮೊದಲ ದಿನವಾದ ಶನಿವಾರ ಮುಂಜಾವಿನಲ್ಲಿಯೇ ಜಮ್ಮುವಿನಲ್ಲಿನ (Jammu) ಮಾತಾ ವೈಷ್ಣೋದೇವಿಯ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಮಂದಿ ಸಾವಿಗೀಡಾದರೆ, 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಬಿತ್ತರವಾದ ಕೆಲ ವಿಡಿಯೋಗಳನ್ನು ಗಮನಿಸಿದರೆ, ದೇವಾಲಯದ ಆವರಣಗಳು ತುಂಬಿ ತುಳುಕುತ್ತಿರುವ ಹಾಗೂ ಭಕ್ತಾದಿಗಳು ದೇವಾಲಯವನ್ನು ತಲುಪಲು ಹೆಣಗಾಟ ನಡೆಸುತ್ತಿರುವ ಪ್ರಸಂಗಗಳು ಕಂಡು ಬಂದಿವೆ. ಮುಂಜಾನೆಯೇ ನೂಕುನುಗ್ಗಲು ಉಂಟಾಗಿ ಭಕ್ತಾದಿಗಳು ಓಡಲು ಆರಂಭಿಸಿದ ಕಾರಣ ಜನರು ಭಯಭೀತರಾಗಿದ್ದರು. ಎರಡು ಗುಂಪುಗಳ ನಡುವಿನ ಜಗಳ ಈ ದುರ್ಘಟನೆಗೆ ಕಾರಣವಾಯಿತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ದೇಶ ಈ ದುರಂತದ ನೋವಿನಲ್ಲಿ ಇರುವಾಗಲೇ ಹರಿಯಾಣದ ಭಿವಾನಿಯಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ ಪ್ರಕರಣಗಳು ಸಂಭವಿಸಿತು. ಇದರಲ್ಲಿ ಇಬ್ಬರು ಅಸುನೀಗಿದರೆ, ಹಲವು ಗಾಯಗೊಂಡರು. ದಡಮ್ (Dhadam) ಗಣಿಗಾರಿಕೆ ಪ್ರದೇಶದ ತೋಷಮ್ ಬ್ಲಾಕ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಘಟನೆ ವೇಳೆ ಸ್ಥಳದಲ್ಲಿದ್ದ 6ಕ್ಕೂ ಹೆಚ್ಚು ಡಂಪರ್ ಟ್ರಕ್‌ಗಳು ಮತ್ತು ಕೆಲವು ಯಂತ್ರಗಳು ಅವಶೇಷಗಳಡಿಯಲ್ಲಿ ಹೂತುಹೋಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೃತರಾದ ಇಬ್ಬರು ಗುರುತೂ ಇನ್ನೂ ಪತ್ತೆಯಾಗಿಲ್ಲ. ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಸಂಜೆಯ ವೇಳೆಗೆ ತಮಿಳುನಾಡಿನ ನಾಥಂಪಟ್ಟಿ ಸಮೀಪದ ಕಳತ್ತೂರು ಗ್ರಾಮದ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಸುದ್ದಿ ಪ್ರಕಟವಾಗಿದೆ. ಬೆಳಗ್ಗೆಯೇ ಸಂಭವಿಸಿದ ಸ್ಫೋಟದಲ್ಲಿ ಒಟ್ಟಾರೆ ಏಳು ಮಂದಿಗೆ ಗಂಭೀರ ಪ್ರಮಾಣದ ಗಾಯವಾಗಿದೆ. ಹೊಸ ವರ್ಷದ ಬೆಳಗ್ಗೆ ಕಾರ್ಮಿಕರು ಎಂದಿನಂತೆ ಕೆಲಸವನ್ನು ಆರಂಭಿಸಿದ್ದು, ಮುಂಜಾನೆ 8.30ರ ವೇಳೆಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡ ಕುಸಿದು ಬಿದ್ದಿದ್ದು, ಕುಸಿದು ಬಿದ್ದ ಸಾಮಗ್ರಿಗಳನ್ನು ತೆರವುಗೊಳಿಸಿ ಕೆಲವು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
30 ಕಾರ್ಮಿಕರಲ್ಲಿ ಮೂವರು, ಎಸ್ ಕುಮಾರ್(38), ಪಿ ಪೆರಿಯಸಾಮಿ (65) ಮತ್ತು ಎಸ್ ವೀರಕುಮಾರ್(40) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೋರ್ವ ಕಾರ್ಮಿಕ ಪಿ ಮುರುಗೇಶನ್ (38) ಅವರನ್ನು ಚಿಕಿತ್ಸೆಗಾಗಿ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ. ಒಂದು ಕೋಣೆಯಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಕಟ್ಟಡದ ಮೂರು ಕೊಠಡಿಗಳು ಸಂಪೂರ್ಣವಾಗಿ ಕುಸಿದಿವೆ" ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.
Vaishno Devi Stampede: ಮಾತಿನ ಚಕಮಕಿ, ನೋಡ ನೋಡುತ್ತಿದ್ದಂತೆ 12 ಸಾವು!
ರಾತ್ರಿ 8 ಗಂಟೆಯ ಸುಮಾರಿಗೆ ಕೇಂದ್ರ ಆರೋಗ್ಯ ಇಲಾಖೆ ಕೋವಿಡ್-19 ಅಂಕಿಯನ್ನು ಪ್ರಕಟಿಸಿದ್ದು, ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಶನಿವಾರ ಒಂದೇ ದಿನ 22, 775 ಕೇಸ್ ಗಳು ದಾಖಲಾಗಿದ್ದರೆ, 406 ಸಾವುಗಳು ಸಂಭವಿಸಿದೆ. ಇದರಲ್ಲಿ ಒಟ್ಟು 1431 ಕೇಸ್ ಒಮಿಕ್ರಾನ್ ವೈರಸ್ ಆಗಿದೆ ಎಂದು ಸರ್ಕಾರ ತಿಳಿಸಿದೆ. ಮುಂಬೈನಲ್ಲಿ ಗರಿಷ್ಠ 6347 ಕೇಸ್ ಗಳು ದಾಖಲಾಗಿದ್ದರೆ, ದೆಹಲಿಯಲ್ಲಿ 2398, ಕೋಲ್ಕತದಲ್ಲಿ 810 ಪ್ರಕರಣಗಳು ಗೊತ್ತಾಗಿವೆ.