ಏಕರೂಪ ನಾಗರಿಕ ಸಂಹಿತೆ ದೇಶದಲ್ಲೇ ಮೊದಲು ಉತ್ತರಾಖಂಡದಲ್ಲಿ ಜಾರಿ? ಉದ್ಧವ್ ಠಾಕ್ರೆಯಿಂದ್ಲೂ ಬೆಂಬಲ!
ಏಕರೂಪ ನಾಗರಿಕ ಸಂಹಿತೆಯ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಇದೇ ತಿಂಗಳು ನಡೆಯಲಿರುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಮಂಡನೆ ಮಾಡಲು ಉತ್ತರಾಖಂಡ ಸಜ್ಜಾಗಿದೆ.
ಡೆಹ್ರಾಡೂನ್ (ಜುಲೈ 1, 2023): ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿರುವಾಗಲೇ, ಉತ್ತರಾಖಂಡ ಸರ್ಕಾರ ಹಲವು ಹೆಜ್ಜೆ ಮುಂದೆ ಹೋಗಿದೆ. ಏಕರೂಪ ನಾಗರಿಕ ಸಂಹಿತೆಯ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಇದೇ ತಿಂಗಳು ನಡೆಯಲಿರುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಮಂಡನೆ ಮಾಡಲು ಸಜ್ಜಾಗಿದೆ. ಒಂದು ವೇಳೆ ಈ ವಿಧೇಯಕ ಅಂಗೀಕಾರವಾದರೆ, ದೇಶದಲ್ಲೇ ಮೊದಲು ಏಕರೂಪ ನಾಗರಿಕ ಸಂಹಿತೆ ಅಂಗೀಕರಿಸಿದ ರಾಜ್ಯ ಉತ್ತರಾಖಂಡ ಆಗಲಿದೆ.
ಕಳೆದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನ ಉತ್ತರಾಖಂಡದ ಬಿಜೆಪಿ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಈ ಸಮಿತಿ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಅತಿ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದೆ. ‘ಈ ವಿಧೇಯಕ ದೇಶದಲ್ಲಿನ ಜಾತ್ಯತೀತ ವಾತಾವರಣವನ್ನು ಬಲಗೊಳಿಸಲಿದೆ’ ಎಂದು ನ್ಯಾಯಮೂರ್ತಿ ರಂಜನಾ ಹೇಳಿದ್ದಾರೆ.
ಇದನ್ನು ಓದಿ: Uniform Civil Code: ರಾತ್ರೋರಾತ್ರಿ ಮುಸ್ಲಿಂ ಮಂಡಳಿ ಸಭೆ; ಸಂಹಿತೆಗೆ ಆಪ್ ಅಚ್ಚರಿಯ ತಾತ್ವಿಕ ಬೆಂಬಲ
ಇದೇ ವೇಳೆ ಮಾತನಾಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘ಉತ್ತರಾಖಂಡದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗುತ್ತದೆ. ಎಲ್ಲರಿಗೂ ಕಾನೂನು ಒಂದೇ ಆಗಿರುತ್ತದೆ’ ಎಂದಿದ್ದಾರೆ. ಈ ನಡುವೆ, ಇದೇ ತಿಂಗಳು (ಜುಲೈ) ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಏಕರೂಪ ನಾಗರಿಕ ಸಂಹಿತೆಗೆ ಈಗ ಉದ್ಧವ್ ಠಾಕ್ರೆ ಬೆಂಬಲ? ಆಪ್ ಬಳಿಕ ಮತ್ತೊಂದು ಪಕ್ಷದ ಬೆಂಬಲ ಸಾಧ್ಯತೆ
ಮುಂಬೈ: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ಚಿಂತನೆಗೆ ದೆಹಲಿ, ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಆಪ್) ಅಚ್ಚರಿಯ ರೀತಿಯಲ್ಲಿ ತಾತ್ವಿಕ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಪ್ರಭಾವಿ ಪಕ್ಷವಾಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕೂಡ ಅದೇ ಹಾದಿ ತುಳಿಯುವ ಸಾಧ್ಯತೆ ಕಂಡುಬರುತ್ತಿದೆ.
ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂಬುದು ಪಕ್ಷದ ಚಿಂತನೆ ಕೂಡ ಆಗಿದೆ. ಆದರೆ ಕರಡು ಸಿದ್ಧವಾದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಉದ್ಧವ್ ಆಪ್ತರೂ ಆಗಿರುವ ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಇದನ್ನೂ ಓದಿ: ಏಕರೂಪದ ಸಂಹಿತೆ ಪ್ರಸ್ತಾಪಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲ: ಮುಸ್ಲಿಂ ಮಂಡಳಿ ಆಕ್ಷೇಪ
ಏಕರೂಪ ನಾಗರಿಕ ಸಂಹಿತೆಯ ಮಸೂದೆಯನ್ನು ಯಾವಾಗ ಮಂಡನೆ ಮಾಡಲಾಗುತ್ತದೋ, ಆಗ ಪಕ್ಷ ಬೆಂಬಲ ನೀಡಲಿದೆ. ಈ ವಿಚಾರದಲ್ಲಿ ಪ್ರತಿಪಕ್ಷಗಳ ಜತೆ ಯಾವ ರೀತಿ ವ್ಯವಹರಿಸಬೇಕು ಎಂಬುದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದು ಧುರೀಣ ಆನಂದ ದುಬೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸಲು ಗಂಭೀರ ಪ್ರಯತ್ನದಲ್ಲಿವೆ. ಆ ಗುಂಪಿನಲ್ಲಿ ಶಿವಸೇನೆ ಕೂಡ ಇದೆ. ಇದೀಗ ಆ ಪಕ್ಷ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರೆ, ಪ್ರತಿಪಕ್ಷಗಳ ಪಾಳೆಯದಲ್ಲೇ ಬಿರುಕು ಮೂಡುವ ಕಳವಳವೂ ಇದೆ.
ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್