ಆಸ್ಪತ್ರೆ ಕಟ್ಟಡದ ನಕ್ಷೆ ಇರದೇ ಇರುವ ಕಾರಣಕ್ಕೆ ಪ್ರಯಾಗ್‌ರಾಜ್‌ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಈ ಆಸ್ಪತ್ರೆಗೆ ನೆಲಸಮ ನೋಟಿಸ್‌ ಜಾರಿ ಮಾಡಿದೆ. ನಕ್ಷೆ ನೀಡಿದಲ್ಲಿ ಮಾತ್ರವೇ ಈ ಕಟ್ಟಡ ಉಳಿದುಕೊಳ್ಳಲಿದೆ ಎಂದು ಹೇಳಿದೆ. ಈ ಸೂಚನೆಯ ನಂತರ ಆಸ್ಪತ್ರೆ ಕಟ್ಟಡವನ್ನು ಶೀಘ್ರದಲ್ಲೇ ಕೆಡವಬಹುದು ಎಂದು ನಂಬಲಾಗಿದೆ.

ನವದೆಹಲಿ (ಅ. 26): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಝಲ್ವಾದಲ್ಲಿರುವ ಗ್ಲೋಬಲ್ ಹಾಸ್ಪಿಟಲ್ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಡೆಂಗ್ಯೂ ಆಗಿದ್ದ ರೋಗಿಗೆ ಪೇಟ್ಲೆಟ್ಸ್‌ ಬದಲು ಮೂಸಂಬಿ ಜ್ಯೂಸ್‌ಅನ್ನು ರಕ್ತದೊಳಗೆ ನೀಡಲಾಗಿತ್ತು. ಅದರಿಂದಾಗಿ ಆತ ಸಾವು ಕಂಡಿದ್ದು ಎರಡು ದಿನಗಳ ಹಿಂದೆ ವರದಿಯಾಗಿತ್ತು. ಆದರೆ, ಈ ವಿಚಾರವಾಗಿ ಸಂಪೂರ್ಣ ತನಿಖಾ ವರದಿ ಬಂದಿದ್ದು, ಡೆಂಗ್ಯೂ ರೋಗಿಗೆ ರಕ್ತದಲ್ಲಿ ಮೂಸಂಬಿ ಜ್ಯೂಸ್‌ ನೀಡಿರಲಿಲ್ಲ. ಬದಲಾಗಿ ಕೆಟ್ಟ ಪೇಟ್ಲೆಟ್ಸ್‌ಗಳನ್ನು ನೀಡಲಾಗಿತ್ತು. ಅದರಿಂದಾಗಿ ಆತ ತಕ್ಷಣವೇ ಸಾವು ಕಂಡಿದ್ದಾನೆ ಎನ್ನಲಾಗಿದೆ. ಸಂಪೂರ್ಣ ತನಿಖೆ ನಡೆಸಿರುವ ಅಧಿಕಾರಿಗಳು, ಆಸ್ಪತ್ರೆಯಲ್ಲಿ ಮೃತಪಟ್ಟ ಡೆಂಗ್ಯೂ ರೋಗಿಗೆ ಕಳಪೆಯಾಗಿ ಸಂರಕ್ಷಿಸಲ್ಪಟ್ಟ ಪ್ಲೇಟ್‌ಲೆಟ್‌ಗಳನ್ನು ನೀಡಲಾಗಿದೆಯೇ ಹೊರತು ಮೂಸಂಬಿ ಜ್ಯೂಸ್ ಅಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆಯ ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲಿಯೇ ಪ್ರಯಾಗ್‌ರಾಜ್‌ ಅಭಿವೃದ್ಧಿ ಪ್ರಾಧಿಕಾರ ಆಸ್ಪತ್ರೆಯ ದಾಖಲೆಗಳನ್ನು ಕೇಳಿದೆ. ಇದರಲ್ಲಿ ಪ್ರಮುಖವಾಗಿ ಆಸ್ಪತ್ರೆಗೆ ಮಂಜೂರಾದ ನಕ್ಷೆಯೇ ನಾಪತ್ತೆಯಾಗಿದೆ. ಆದಷ್ಟು ಶೀಘ್ರವಾಗಿ ನಕ್ಷೆಯನ್ನು ಪ್ರಸ್ತುತ ಪಡಿಸಬೇಕು ಇಲ್ಲದೇ ಇದಲ್ಲಿ ಶೀಘ್ರವೇ ಕಟ್ಟಡವನ್ನು ಕೆಡವಲಾಗುವುದು ಎಂದು ಹೇಳಿದೆ.

ಏನಿದು ಪ್ರಕರಣ: ಡೆಂಗ್ಯೂವಿನಿಂದ ಬಳಲುತ್ತಿದ್ದ ಬಮ್ರೌಲಿಯ ನಿವಾಸಿ ಪ್ರದೀಪ್ ಪಾಂಡೆ ಅವರನ್ನು ಅಕ್ಟೋಬರ್ 14 ರಂದು ಝಲ್ವಾದಲ್ಲಿನ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಅಕ್ಟೋಬರ್‌ 16ರ ವೇಳೆಗೆ ಅವರ ಪೇಟ್ಲೆಟ್‌ಗಳ ಸಂಖ್ಯೆ 17 ಸಾವಿರಕ್ಕೆ ಇಳಿದಿತ್ತು. ಈ ಹಂತದಲ್ಲಿ ಅವರಿಗೆ ಮೂರು ಯುನಿಟ್‌ಗಳ ಪೇಟ್ಲೆಟ್‌ಅನ್ನು ಆಸ್ಪತ್ರೆಯ ನರ್ಸ್‌ಗಳು ನೀಡಿದ್ದರು. ಅದೇ ಸಮಯದಲ್ಲಿ, ಪ್ಲೇಟ್ಲೆಟ್ಗಳನ್ನು ವರ್ಗಾವಣೆ ಮಾಡುವಾಗ ರೋಗಿಯ ಸ್ಥಿತಿಯು ಹದಗೆಟ್ಟಿತು. ನಂತರ ಆಸ್ಪತ್ರೆಯು ರೋಗಿಯನ್ನು ಬೇರೆ ಆಸ್ಪತ್ರೆಗೆ ರೆಫರ್ ಮಾಡಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರೋಗಿಯು ಅಕ್ಟೋಬರ್ 19 ರಂದು ನಿಧನರಾಗಿದ್ದರು.

ಇದಾದ ನಂತರ ಮೃತ ಪ್ರದೀಪ್ ಪಾಂಡೆ ಅವರ ಸೋದರ ಸಂಬಂಧಿ ಸೌರಭ್ ತ್ರಿಪಾಠಿ ಅವರು ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ವಿರುದ್ಧ ಆರೋಪ ಮಾಡಿದ್ದರು. ನನ್ನ ಸಹೋದರನಿಗೆ ಪೇಟ್ಲೆಟ್ಸ್‌ಗಳ ಬದಲು ರಕ್ತದಲ್ಲಿ ಮೂಸಂಬಿ ಜ್ಯೂಸ್‌ ನೀಡಲಾಗಿತ್ತು ಎಂದು ಆರಪಿಸಿದ್ದರು. ಇದರಿಂದ ರೋಗಿಯ ರಕ್ತನಾಳಗಳು ಒಡೆದು ಆತ ಸಾವನ್ನಪ್ಪಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಆಸ್ಪತ್ರೆಯ ಸೀಲ್‌ ಡೌನ್‌ ಮಾಡುವಂತೆ ಆದೇಶ ಹೊರಡಿಸಿ, ತನಿಖೆಗೆ ಆದೇಶಿಸಿದ್ದರು.

ರಕ್ತದೊಳಗೆ ಪ್ಲೇಟ್‌ಲೇಟ್ ಬದಲು ಜ್ಯೂಸ್ ಹಾಕಿ ಎಡವಟ್ಟು, ಡೆಂಗ್ಯೂ ರೋಗಿ ಸಾವು, ಆಸ್ಪತ್ರೆ ಸೀಲ್‌ಡೌನ್!

ನಕಲಿ ಪೇಟ್ಲೆಟ್ಸ್‌ ಮಾರಾಟ ಮಾಡುತ್ತಿದ್ದ 10 ಜನರ ಬಂಧನ: ಈ ನಡುವೆ ಪ್ರಯಾಗ್‌ರಾಜ್‌ ಪೊಲೀಸರು ನಕಲಿ ಪೇಟ್ಲೆಟ್ಸ್‌ ಮಾರಾಟ ಮಾಡುತ್ತಿದ್ದ 10 ಜನರನ್ನು ಈ ಘಟನೆಯ ಬಳಿಕ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ವಿವಿಧ ರಕ್ತನಿಧಿಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡ ನಂತರ ರೋಗಿಗಳಿಗೆ ನಕಲಿ ಪ್ಲೇಟ್‌ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಸೂಕ್ತ ಸುಳಿವು ಸಿಕ್ಕ ಕಾರಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಆರೋಪಿ ಗ್ಯಾಂಗ್ ಸದಸ್ಯರ ವಶದಿಂದ ನಕಲಿ ಪ್ಲೇಟ್‌ಲೆಟ್ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಾನ್‌ವೆಜ್‌ ತಿನ್ನೋದು ಓಕೆ, ಆದ್ರೆ ಡೆಂಗ್ಯೂ ಇದ್ದಾಗ ಅಪ್ಪಿತಪ್ಪಿಯೂ ಮುಟ್ಬೇಡಿ

ಪ್ರಯಾಗ್‌ರಾಜ್‌ನಲ್ಲಿ ರೋಗಿಗಳಿಗೆ ನಕಲಿ ಪ್ಲೇಟ್‌ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ತಂಡದ ಹತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆರೋಪಿಗಳು ರಕ್ತ ನಿಧಿಗಳಿಂದ ಪ್ಲಾಸ್ಮಾವನ್ನು ಪಡೆದುಕೊಂಡು, ನಂತರ ಅದನ್ನು ಪೌಚ್‌ನಲ್ಲಿ ಹಾಕಿ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ಮಾರಾಟ ಮಾಡುತ್ತಿದ್ದರು ಎಂದು ಪಾಂಡೆ ಹೇಳಿದ್ದಾರೆ.