Asianet Suvarna News Asianet Suvarna News

ರಕ್ತದೊಳಗೆ ಪ್ಲೇಟ್‌ಲೇಟ್ ಬದಲು ಜ್ಯೂಸ್ ಹಾಕಿ ಎಡವಟ್ಟು, ಡೆಂಗ್ಯೂ ರೋಗಿ ಸಾವು, ಆಸ್ಪತ್ರೆ ಸೀಲ್‌ಡೌನ್!

ಆಸ್ಪತ್ರೆ ಎಡವಟ್ಟಿನಿಂದ ಡೆಂಗ್ಯೂ ರೋಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇದಕ್ಕೆ ಕಾರಣ ರೋಗಿ ರಕ್ತದೊಳಗೆ ಪ್ಲೇಟ್‌ಲೇಟ್ ಬದಲು ಜ್ಯೂಸ್ ಹಾಕಿ ಅತೀ ದೊಡ್ಡ ತಪ್ಪು ಮಾಡಲಾಗಿದೆ. ಇದರ ಪರಿಣಾಮ ಆಸ್ಪತ್ರೆ ರಣಾಂಗಣವಾಗಿದೆ. 

Dengue patient died after allegedly blood transfused with fruit juice instead of platelets in Prayagraj private hospital ckm
Author
First Published Oct 21, 2022, 4:38 PM IST

ಪ್ರಯಾಗರಾಜ್(ಅ.21): ರೋಗಿಯ ಚಿಕಿತ್ಸೆ ವೇಳೆ ಆಸ್ಪತ್ರೆ ಹಾಗೂ ಸಿಬ್ಬಂದಿಗಳು ಅತ್ಯಂತ ಮುತುವರ್ಜಿಯಿಂದ ಆರೈಕೆ ಮಾಡಬೇಕು. ಸಣ್ಣ ತಪ್ಪು ಕೂಡ ಅತೀ ದೊಡ್ಡ ದುರಂತಕ್ಕೆ ಕಾರಣವಾಗಲಿದೆ. ಇದೀಗ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿನ ಖಾಸಗಿ ಆಸ್ಪತ್ರೆ ಮಾಡಿದ ಎಡವಟ್ಟಿನಿಂದ ಡಂಗ್ಯೂ ರೋಗಿ ಮೃತಪಟ್ಟ ಘಟನೆ ನಡೆದಿದೆ. ಡೆಂಗ್ಯೂನಿಂದ ಬಳಲುತ್ತದ್ದ ರೋಗಿ ಆರೋಗ್ಯ ಕ್ಷೀಣಿಸಿದೆ. ಇಂತಹ ಸಂದರ್ಭದಲ್ಲಿ ರೋಗಿಯ ರಕ್ತಕ್ಕೆ ನೇರವಾಗಿ ಪ್ಲೇಟ್‌ಲೇಟ್ ಹಾಕುವುದು ಸಾಮಾನ್ಯ. ಇದೇ ರೀತಿ ಆಸ್ಪತ್ರೆ ಸಿಬ್ಬಂದಿಗಳು ರೋಗಿಯ ರಕ್ತಕ್ಕೆ ಪ್ಲೇಟ್‌ಲೇಟ್ ಸೇರಿಸಲು ಮುಂದಾಗಿದ್ದಾರೆ. ಆದರೆ ಪ್ಲೇಟ್‌ಲೇಟ್ ಬದಲು ರೋಗಿಗೆ ಮೂಸಂಬಿ ಜ್ಯೂಸ್ ಹಾಕಿದ್ದಾರೆ. ಜ್ಯೂಸ್ ನೇರವಾಗಿ ರಕ್ತದೊಳಕ್ಕೆ ಸೇರಿ ರೋಗಿ ಮೃತಪಟ್ಟಿದ್ದಾರೆ ಎಂದು ರೋಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಇಷ್ಟೇ ಅಲ್ಲ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿದೆ.

ಬರ್ಮೌಲಿ ನಿವಾಸಿ ಪ್ರದೀಪ್ ಪಾಂಡೆ ಡೆಂಗ್ಯೂ ರೋಗದಿಂದ ಜಲ್ವಾ ಪಟ್ಟಣದ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ವಾರ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ ಪ್ರದೀಪ್ ಪಾಂಡೆ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಪ್ರದೀಪ್ ಪಾಂಡೆ ಆರೋಗ್ಯ ಕ್ಷೀಣಿಸುತ್ತಲೇ ಸಾಗಿದೆ. ಈ ಕುರಿತು ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಗರಂ ಆಗಿದ್ದಾರೆ. ಬಳಿಕ ಆಸ್ಪತ್ರೆ ಸಿಬ್ಬಂದಿಗಳು, ವೈದ್ಯರು ರೋಗಿಯನ್ನು ಅಪಾಯದಿಂದ ಪಾರು ಮಾಡಲು ರಕ್ತಕ್ಕೆ ನೇರವಾಗಿ ಪ್ಲೇಟ್‌ಲೇಟ್ ಸೇರಿಸಲು ನಿರ್ಧರಿಸಿದ್ದಾರೆ.

Dengue Fever Diet: ಡೆಂಗ್ಯೂದಿಂದ ಬೇಗ ಚೇತರಿಸಿಕೊಳ್ಳಬೇಕೆ? ಈ ರೀತಿ ಆಹಾರ ಸೇವಿಸಿ

ಆದರೆ ಪ್ಲೇಟ್‌ಲೇಟ್ ಪ್ಯಾಕೆಟ್ ಬದಲು ಹಳದಿ ಬಣ್ಣದ ಮೂಸಂಬಿ ಜ್ಯೂಸ್ ರಕ್ತಕ್ಕೆ ಸೇರಿಸಲಾಗಿದೆ. ಇದರಿಂದ ಪ್ರದೀಪ್ ಪಾಂಡೆ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಬಳಿಕ ತುರ್ತು ನಿಘಾ ಘಟಕದಲ್ಲಿ ಪ್ರದೀಪ್ ಪಾಂಡೆಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ರೋಗಿ ಮೃತಪಟ್ಟಿದ್ದಾರೆ. ಈ ಕುರಿತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಸಂಬಿ ಜ್ಯೂಸ್ ರಕ್ತಕ್ಕೆ ಸೇರಿಸಲಾಗಿದೆ. ಇದರಿಂದ ರೋಗಿ ಮೃತಪಟ್ಟಿದ್ದಾರೆ ಎಂದು ಸಂಬಂಥಿಕರು ವಿಡಿಯೋ ಮಾಡಿದ್ದಾರೆ.

ಆದರೆ ಪ್ರಯಾಗರಾಜ್ ಮೆಡಿಕಲ್ ಆಫೀಸರ್ ನಾನಕ್ ಶರಣ್ ಈ ಆರೋಪ ಅಲ್ಲಗೆಳೆದಿದ್ದಾರೆ. ಆರಂಬಿಕ ಹಂತದಲ್ಲಿ 3 ಪ್ಯಾಕ್ ಪ್ಲೇಟ್‌ಲೇಟ್ ಹಾಕಲಾಗಿದೆ. ಬಳಿಕ 5 ಪ್ಯಾಕ್ ಪ್ಲೇಟ್‌ಲೇಟ್ ಹಾಕಲಾಗಿದೆ. ಈ 5 ಪ್ಯಾಕ್ ಪ್ಲೇಟ್‌ಲೇಟ್ ರಿಯಾಕ್ಷನ್ ಆಗಿದೆ. ಇದರಿಂದ ರೋಗಿ ಮೃತಪಟ್ಟಿದ್ದಾರೆ ಎಂದಿದ್ದಾರೆ. ಇತ್ತ ಆಸ್ಪತ್ರೆ ಮುಖ್ಯಸ್ಥರು ಆರೋಪವನ್ನು ತಳ್ಳಿ ಹಾಕಿದ್ದಾರೆ. ರೋಗಿ ಪ್ಲೇಟ್‌ಲೇಟ್ 17,000 ಇಳಿಕೆಯಾಗಿದೆ. ಈ ವೇಳೆ ಕುಟುಂಬಸ್ಥರಲ್ಲಿ ಪ್ಲೇಟ್‌ಲೇಟ್ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಕುಟುಂಬಸ್ಥರು ತಂದ ಪ್ಲೇಟ್‌ಲೇಟ್‌ಗಳನ್ನೇ ಹಾಕಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥರು ಹೇಳಿದ್ದಾರೆ.

ಪ್ಲೇಟ್ ಲೆಟ್ ಕೊರತೆ ಕಾಡುತ್ತಿದೆಯೇ? ಈ ಎಲೆ ಬಳಸಿ ಮ್ಯಾಜಿಕ್ ನೋಡಿ

ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆ ಆವರಣ ರಣಾಂಗಣವಾಗಿದೆ. ರೋಗಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಆಸ್ಪತ್ರೆ ವಿರುದ್ಧ ಮಾಡಿರುವ ಆರೋಪ ಗಂಭೀರವಾಗಿದೆ. ಹೀಗಾಗಿ ಸರ್ಕಾರ ತಕ್ಷಣವೇ ತನಿಖೆಗೆ ಆದೇಶಿಸಿದೆ. ಇಷ್ಟೇ ಅಲ್ಲ ಪ್ಲೇಟ್‌ಲೇಟ್ ಪ್ಯಾಕೆಟ್, ಖರೀದಿ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಲಾಗಿದೆ. ಪ್ಲೇಟ್‌ಲೇಟ್ ಪ್ಯಾಕೆಟ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇತ್ತ ಪರಿಸ್ಥಿತಿ ತೀವ್ರತೆ ಪಡೆಯುತ್ತಿದ್ದ ಕಾರಣ ಆಸ್ಪತ್ರೆಯನ್ನು ಪೊಲೀಸರು ಸೀಲ್‌ಡೌನ್ ಮಾಡಿದ್ದಾರೆ.

Follow Us:
Download App:
  • android
  • ios