Asianet Suvarna News Asianet Suvarna News

ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ಹಕ್ಕಿ, ತುರ್ತು ಭೂಸ್ಪರ್ಶ!

  • ವಾರಣಾಸಿ ಟೇಕ್ ಆಫ್ ಆದ ಬೆನ್ನಲ್ಲೇ ಹಕ್ಕಿ ಡಿಕ್ಕಿ
  • ತುರ್ತು ಭೂಸ್ಪರ್ಶ ಮಾಡಿದ ಸಿಎಂ ಹೆಲಿಕಾಪ್ಟರ್
  • ಎರಡು ದಿನದ ಪ್ರವಾಸ ಕೈಗೊಂಡಿದ್ದ ಸಿಎಂ ಯೋಗಿ
Uttar Pradesh CM Yogi Adityanath helicopter made emergency landing after bird hit in Varanasi ckm
Author
Bengaluru, First Published Jun 26, 2022, 3:43 PM IST | Last Updated Jun 26, 2022, 3:43 PM IST

ವಾರಣಾಸಿ(ಜೂ.26): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹಕ್ಕಿ ಡಿಕ್ಕಿಯಾದ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. ವಾರಣಾಸಿಯಿಂದ ಲಖನೌಗೆ ಪ್ರಯಾಣ ಬೆಳೆಸಲು ಹೆಲಿಕಾಪ್ಟರ್ ಟೇಕ್ ಆಫ್ ಆದ ಬೆನ್ನಲ್ಲೇ ಈ ಘಟನೆ ನಡೆದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಿಎಂ ಯೋಗಿ ಆದಿತ್ಯನಾಥ್ ವಾರಣಾಸಿಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಕೆಲ ಯೋಜನೆಗಳ ಪರಿಶೀಲನೆ ಯೋಗಿ ಆದಿತ್ಯನಾಥ್ ಹಾಜರಾಗಿದ್ದರು. ಕಾರ್ಯಕ್ರಮ ಮುಗಿಸಿ ಮತ್ತೆ ಲಖನೌಗೆ ಪ್ರಯಾಣಕ್ಕೆ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಹತ್ತಿದ್ದರು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್‌ಗೆ ವೇಗವಾಗಿ ಬಂದ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. 

ಮುಸ್ಲಿಂ ಹುಡುಗನ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ!

ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಒಂದು ಕ್ಷಣ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಎದುರಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲೆಟ್ ಹೆಲಿಕಾಪ್ಟರನ್ನು ತುರ್ತು ಭೂಸ್ಪರ್ಶ ಮಾಡಿಸಿದರು. ಇದರಿಂದ ಅಪಾಯವನ್ನು ತಪ್ಪಿಸಿದರು.

ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೆಲ ಅಧಿಕಾರಿಗಳು ಈ ಹೆಲಿಕಾಪ್ಟರ್‌ನಲ್ಲಿದ್ದರು. ಭೂಸ್ಪರ್ಶದ ಬಳಿಕ ಬೇರೊಂದು ಹೆಲಿಕಾಪ್ಟರ್‌ನಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಇತರ ಅಧಿಕಾರಿಗಳು ಲಖನೌಗೆ ಪ್ರಯಾಣ ಬೆಳೆಸಿದರು.ಆದಿತ್ಯನಾಥ್ ಹೆಲಿಕಾಪ್ಟರ್‌ಗೆ ಹಕ್ಕಿ ಡಿಕ್ಕಿಯಾದ ಸುದ್ದಿಯಿಂದ ಸ್ಪಷ್ಟ ಮಾಹಿತಿ ಸಿಗದೆ ಕೆಲ ಕಾಲ ಆತಂಕ ನಿರ್ಮಾಣವಾಗಿತ್ತು. 

ಹೆಸರು ಬದಲಾವಣೆ ಸುಳಿವು 
ಉತ್ತರಪ್ರದೇಶದ ರಾಜಧಾನಿ ಲಖನೌದ ಹೆಸರನ್ನು ಲಕ್ಷ್ಮಣಪುರಿ ಎಂದು ಬದಲಾಯಿಸುವ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸುಳಿವು ನೀಡಿದ್ದಾರೆ.  ಪ್ರಧಾನಿ ಮೋದಿಗೆ ಸ್ವಾಗತ ಕೋರುವಾಗ ಯೋಗಿ ಆದಿತ್ಯನಾಥ್ ‘ಶೇಷಾವತಾರ ಭಗವಾನ್‌ ಲಕ್ಷ್ಮಣ ಅವರ ಪಾವನ ನಗರಿ ಲಖನೌಗೆ ನಿಮಗೆ ಸ್ವಾಗತ’ ಎಂದು ಟ್ವೀಟ್‌ ಮೂಲಕ ಸ್ವಾಗತ ಕೋರಿದ್ದಾರೆ. ಈ ಮೂಲಕ ಲಖನೌ ಹೆಸರನ್ನು ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡುವ ಸುಳಿವು ನೀಡಿದ್ದಾರೆ.

ಮುಕ್ತ ಸ್ವಾತಂತ್ರ್ಯ ನೀಡಿದ್ದೇನೆ, ಕಲ್ಲು ತೂರಿದ ಒಬ್ಬರನ್ನೂ ಬಿಡಬೇಡಿ, ಉತ್ತರ ಪ್ರದೇಶದಲ್ಲಿ ಯೋಗಿಯ ಖಡಕ್ ಆದೇಶ!

ಹಲವು ಬಿಜೆಪಿ ನಾಯಕರು ಈಗಾಗಲೇ ಲಖನೌ ಹೆಸರನ್ನು ಲಕ್ಷ್ಮಣಪುರಿ ಎಂದು ಬದಲಾಯಿಸಬೇಕು ಎಂದು ಪ್ರಸ್ತಾಪ ಸಲ್ಲಿಸಿದ್ದಾರೆ. ನಗರದಲ್ಲಿ ಈಗಾಗಲೇ ಭವ್ಯ ಲಕ್ಷ್ಮಣ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಪ್ರಮುಖ ಸ್ಥಳಗಳಿಗೂ ಲಕ್ಷ್ಮಣ ಕಿಲಾ, ಲಕ್ಷ್ಮಣ ಪಾರ್ಕ್ ಎಂದು ಮರುನಾಮಕರಣ ಮಾಡಲಾಗಿದೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ನಗರವನ್ನು ರಾಮನ ಸೋದರ ಲಕ್ಷ್ಮಣ ಸ್ಥಾಪಿಸಿದ ಎಂಬ ಐತಿಹ್ಯವಿದೆ. ಮೊದಲು ಈ ನಗರವನ್ನು ಲಕ್ಷ್ಮಣಪುರ, ಲಖನ್‌ಪುರ ಎಂದೆಲ್ಲಾ ಕರೆಯಲಾಗುತಿತ್ತು. ಆದರೆ ಬ್ರಿಟೀಷರ ಕಾಲದಲ್ಲಿ ಸ್ಥಳೀಯರು ಬಳಸುವ ಲಖನೌ, ಲಖ್ನೋ ಆಗಿ ಹೊರಹೊಮ್ಮಿತ್ತು.

ಲಖನೌ ಜೊತೆಗೆ, ಇನ್ನಿತರ ಜಿಲ್ಲೆಗಳಾದ ಸುಲ್ತಾನಪುರದ ಹೆಸರನ್ನು ಕುಶಭವನಪುರ, ಅಲಿಗಢವನ್ನು ಹರಿಗಢ, ಮೈನ್‌ಪುರಿಯನ್ನು ಮಾಯನಪುರಿ, ಸಂಭಲ್‌ ಅನ್ನು ಪೃಥ್ವಿರಾಜ ನಗರ ಅಥವಾ ಕಲ್ಕಿ ನಗರ, ಫಿರೋಜಾಬಾದ್‌ ಅನ್ನು ಚಂದ್ರನಗರ ಹಾಗೂ ದೇವಬಂದ್‌ ಹೆಸರನ್ನು ದೇವ್‌ವ್ರಂದ ಎಂದು ಮರುನಾಮಕರಣ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.

Latest Videos
Follow Us:
Download App:
  • android
  • ios