ಮುಕ್ತ ಸ್ವಾತಂತ್ರ್ಯ ನೀಡಿದ್ದೇನೆ, ಕಲ್ಲು ತೂರಿದ ಒಬ್ಬರನ್ನೂ ಬಿಡಬೇಡಿ, ಉತ್ತರ ಪ್ರದೇಶದಲ್ಲಿ ಯೋಗಿಯ ಖಡಕ್ ಆದೇಶ!

ನೂಪುರ್ ಶರ್ಮ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೇಶವ್ಯಾಪಿ ನಡೆದ ಪ್ರತಿಭಟನೆಯಲ್ಲಿ ಬಹುಪಾಲು ಉತ್ತರಪ್ರದೇಶದಿಂದಲೇ ದಾಖಲಾಗಿದ್ದವು. ಲಕ್ನೋದಿಂದ ಪ್ರಯಾಗ್ ರಾಜ್ ವರೆಗೆ ನಡೆದ ಹಿಂಸಾಚಾರದ ನಿಟ್ಟಿನಲ್ಲಿ ಯೋಗಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲಿ ಈವರೆಗೂ 123 ಮಂದಿಯನ್ನು ಬಂಧನ ಮಾಡಲಾಗಿದ್ದು, ಗಲಭೆಯ ಹಿನ್ನಲೆಯಲ್ಲಿ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು. ಕಾನೂನು ಕೈಗೆತ್ತಿಕೊಂಡವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸ್ವತಃ ಯೋಗಿ ಪೊಲೀಸರಿಗೆ ತಿಳಿಸಿದ್ದಾರೆ.

Yogi Adityanath government strict on ruckus in UP, police have been given free hand for action against criminals 123 arrested san

ಲಕ್ನೋ (ಜೂನ್ 10): ಪ್ರವಾದಿ ಮೊಹಮ್ಮದ್ (Prophet Controversy, ) ಕುರಿತು ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಹೇಳಿಕೆಯ ಕುರಿತಾಗಿ ಮುಸ್ಲಿಮರಿಂದ (Muslims) ಶುಕ್ರವಾರ ದೇಶವ್ಯಾಪಿ ಪ್ರತಿಭಟನೆಗಳು ನಡೆದವು. ಶುಕ್ರವಾರದ ಎಂದಿನ ಪ್ರಾರ್ಥನೆಯ ಬಳಿಕ ಏಕಕಾಲದಲ್ಲಿ ದೇಶಪೂರ್ತಿ ನಡೆದ ಪ್ರತಿಭಟನೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಆಯಾ ರಾಜ್ಯಗಳು ಭದ್ರತೆಯ ಕುರಿತಾಗಿ ಸೂಕ್ತ ನಿರ್ಧಾರಗಳು ತೆಗೆದುಕೊಂಡ ಬಳಿಕ ಸಂಜೆಯ ವೇಳೆಗೆ ಪರಿಸ್ಥಿತಿಗಳು ತಿಳಿಯಾದವು.

ದೇಶದ ಒಟ್ಟಾರೆ 8 ರಾಜ್ಯಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರಗಳು ನಡೆದವು. ಅದರಲ್ಲೂ ಪ್ರಮುಖವಾಗಿ ಉತ್ತರ ಪ್ರದೇಶದ (Uttar Pradesh) ಅನೇಕ ನಗರಗಳಲ್ಲಿ ಹಿಂಸಾಚಾರ ದಾಖಲಾದವು. ಇಂತಹ ಪರಿಸ್ಥಿತಿಯಲ್ಲಿ ಯೋಗಿ ಸರ್ಕಾರ (Yogi Government ) ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲಿ ಈವರೆಗೆ 123 ಮಂದಿಯನ್ನು ಬಂಧಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಹಿರಿಯ ಅಧಿಕಾರಿಗಳೊಂದಿಗೆ ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇತ್ತೀಚಿನ ಪರಿಸ್ಥಿತಿ ಅವಲೋಕನ ಮಾಡಲಾಗಿದೆ. ಸಭೆಯಲ್ಲಿ ಈ ಸಮಾಜಘಾತುಕರನ್ನು ಕಟ್ಟುನಿಟ್ಟಾಗಿ ಎದುರಿಸಲು ಅಧಿಕಾರಿಗಳಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಹೇಳಲಾಗುತ್ತಿದೆ. ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಏತನ್ಮಧ್ಯೆ, ಆಡಳಿತವು ಸಹರಾನ್‌ಪುರದಲ್ಲಿ 45, ಹತ್ರಾಸ್‌ನಲ್ಲಿ 24, ಅಂಬೇಡ್ಕರ್ ನಗರದಲ್ಲಿ 23, ಪ್ರಯಾಗ್‌ರಾಜ್‌ನಲ್ಲಿ 22, ಮೊರಾದಾಬಾದ್‌ನಲ್ಲಿ 7 ಮತ್ತು ಫಿರೋಜಾಬಾದ್‌ನಲ್ಲಿ 2 ಜನರನ್ನು ಬಂಧಿಸಿದೆ.

ಗಲಾಟೆಗೆ ಸಂಬಂಧಿಸಿದಂತೆ 45 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಹರಾನ್‌ಪುರದ ಎಸ್‌ಎಸ್‌ಪಿ ತಿಳಿಸಿದ್ದಾರೆ. ಇದಲ್ಲದೇ ಹತ್ರಾಸ್ ನಲ್ಲಿ 24 ಮಂದಿಯನ್ನು ಬಂಧಿಸಲಾಗಿದೆ. ಹತ್ರಾಸ್‌ನಲ್ಲಿ ನಡೆದ ಗಲಾಟೆಯ ನಂತರ ರಸ್ತೆಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದು ಚಿಕ್ಕ ಪಟ್ಟಣ, ಕಲ್ಲು ತೂರಾಟ ನಡೆದಿದೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಾಂತಿ ಕಾಪಾಡುತ್ತೇವೆ ಎಂದು ಡಿಐಜಿ ದೀಪಕ್ ಕುಮಾರ್ ಹೇಳಿದ್ದಾರೆ.

ನೂಪುರ್ ಶರ್ಮ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಕರ್ನಾಟಕದಲ್ಲೂ ಹಿಂಸಾಚಾರ

ಒಂದು ವಾರದ ಹಿಂದೆ ಇದೇ ಕಾರಣಕ್ಕಾಗಿ ಕಾನ್ಪುರದಲ್ಲಿ ಭಾರೀ ಗಲಭೆ ನಡೆದಿತ್ತು. ಆದರೆ, ಶುಕ್ರವಾರ ಕಾನ್ಪುರದಲ್ಲಿ ಬಹುತೇಕ ಶಾಂತಿ ನೆಲೆಸಿತ್ತು. ಕಾನ್ಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಗಲಾಟೆ ನಡೆಯಲಿಲ್ಲ. ಆದರೆ ಇತರ ನಗರಗಳಲ್ಲಿ, ಪೊಲೀಸರಿಗೆ ಅಂತಹ ಆತಂಕ ಇರಲಿಲ್ಲ, ಆದರೂ ಮುಸ್ಲಿಮರ ಘೋಷಣೆಗಳನ್ನು ಕೂಗಿದ್ದರಿಂದ ಗದ್ದಲ ಉಂಟಾಗಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ವಿವಿಧ ನಗರಗಳಲ್ಲಿ ಕಲ್ಲು ತೂರಾಟದ ಘಟನೆಗಳ ನಂತರ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಎಸಿಎಸ್ ಹೋಮ್ ಅವನೀಶ್ ಅವಸ್ತಿ, ಹಂಗಾಮಿ ಡಿಜಿಪಿ, ಎಡಿಜಿ ಕಾನೂನು ಮತ್ತು ಸುವ್ಯವಸ್ಥೆಯಂತಹ ಅಧಿಕಾರಿಗಳು ಪೊಲೀಸ್ ಪ್ರಧಾನ ಕಚೇರಿಯಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಎಲ್ಲ ಜಿಲ್ಲೆಗಳೂ ಕೂಡ ಈ ಕುರಿತಾದ ವರದಿ ನೀಡಬೇಕು ಎಂದು ಸಿಎಂ ಹೇಳಿದ್ದಾರೆ.

ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಕಿಡಿಗೇಡಿಗಳು: ಹಿಂದೂಪರ ಸಂಘಟನೆಗಳ ಆಕ್ರೋಶ

ಯುಪಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಹಲವು ಜಿಲ್ಲೆಗಳಲ್ಲಿ ಕೋಲಾಹಲ ಎದ್ದಿದ್ದು, ಪಿತೂರಿ ಇದ್ದರೆ ಅದನ್ನೂ ಬಹಿರಂಗಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Maurya) ಹೇಳಿದ್ದಾರೆ. ಸಂಚು ರೂಪಿಸಿ ಎಲ್ಲೆಲ್ಲಿ ಇಂತಹ ದುಷ್ಕೃತ್ಯ ಎಸಗಿದ್ದರೂ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ವಾತಾವರಣ ಹಾಳು ಮಾಡಲು ಯಾರೇ ಪ್ರಯತ್ನಿಸಿದರೂ ತನಿಖೆಯ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಗಲಭೆ ಉಂಟು ಮಾಡಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Latest Videos
Follow Us:
Download App:
  • android
  • ios