ವೃದ್ಧೆಯೊಬ್ಬರು ತಮ್ಮ ಮೊಮ್ಮಗನ ಶವದೊಂದಿಗೆ 10 ದಿನ ಕಳೆದ ವಿಲಕ್ಷಣ ಘಟನೆ ಉತ್ತರಪ್ರದೇಶದ ಬರಬಂಕಿ (Barabanki) ಜಿಲ್ಲೆಯ ಮೊಹ್ರಿಪುರ್ವ (Mohripurva) ಪ್ರದೇಶದಲ್ಲಿ ನಡೆದಿದೆ.

ಬರಾಬಂಕಿ: ವೃದ್ಧೆಯೊಬ್ಬರು ತಮ್ಮ ಮೊಮ್ಮಗನ ಶವದೊಂದಿಗೆ 10 ದಿನ ಕಳೆದ ವಿಲಕ್ಷಣ ಘಟನೆ ಉತ್ತರಪ್ರದೇಶದ ಬರಬಂಕಿ (Barabanki) ಜಿಲ್ಲೆಯ ಮೊಹ್ರಿಪುರ್ವ (Mohripurva) ಪ್ರದೇಶದಲ್ಲಿ ನಡೆದಿದೆ. 65 ವರ್ಷದ ವರ್ಷದ ವೃದ್ಧೆಯೊಬ್ಬರು ತಮ್ಮ 17 ವರ್ಷದ ಮೊಮ್ಮಗನ ಶವದೊಂದಿಗೆ 10 ದಿನ ಕಳೆದಿದ್ದಾರೆ. ವೃದ್ಧೆ ವಾಸ ಮಾಡುತ್ತಿದ್ದ ಮನೆಯ ನೆರಹೊರೆಯವರು ಏನೋ ಕೆಲ ದಿನಗಳಿಂದ ಕೊಳೆತಂತೆ ಕೆಟ್ಟ ವಾಸನೆ ಬರಲು ಶುರುವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಬಿನು ಸಿಂಗ್ (Binu Singh) ಹೇಳಿದ್ದಾರೆ.

ಭಾನುವಾರ ರಾತ್ರಿ ಪೊಲೀಸರು ವೃದ್ಧೆ ವಾಸ ಮಾಡುತ್ತಿದ್ದ ಮನೆಗೆ ತೆರಳಿದ್ದಾಗ ವೃದ್ಧೆ ಮಿಥಿಲೇಶ್ ತನ್ನ ಮೊಮ್ಮಗ ಪ್ರಿಯಾಂಶು ಸಿಂಗ್‌ನ ಕೊಳೆತ ಶವದ ಪಕ್ಕದಲ್ಲೇ ಕುಳಿತಿರುವುದು ಕಂಡು ಬಂದಿದೆ. ನಂತರ ಪೊಲೀಸರು ಮೊಮ್ಮಗ ಪ್ರಿಯಾಂಶು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಇದೇ ವೇಳೆ ವೃದ್ಧೆ ಮಿಥಿಲೇಶ್ ಅವರನ್ನು ಮನೋವೈದ್ಯರ ಬಳಿ ತಪಾಸಣೆಗಾಗಿ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಮೊಮ್ಮಗ ಪ್ರಿಯಾಂಶು ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. 

Bengaluru: ಕುಡಿಯಲು ಹಣ ಕೊಡಲಿಲ್ಲವೆಂದು ತಂದೆ ಕೊಲೆಗೈದ ಪಾಪಿ ಪುತ್ರ: ಶವದೊಂದಿಗೆ 15 ದಿನ ಕಳೆದ

ಈ ಬಗ್ಗೆ ವೃದ್ಧೆಯ ನೆರೆಮನೆಯವರು ಮಾತನಾಡಿ, ಕಳೆದ ಮೂರು ನಾಲ್ಕು ದಿನಗಳಿಂದ ಮಿಥಿಲೇಶ್ ಮನೆಯಿಂದ ಬಹಳ ಕೆಟ್ಟದಾದ ವಾಸನೆ ಬರುತ್ತಿತ್ತು. ಭಾನುವಾರದ ವೇಳೆ ವಾಸನೆ ಸಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದೆವು ಎಂದು ಹೇಳಿದ್ದಾರೆ. ವೃದ್ಧೆ ವಾಸವಿದ್ದ ಮೊಹ್ರಿಪುರ ಪ್ರದೇಶದ ಜನರು ಹೇಳುವ ಪ್ರಕಾರ, ಕಳೆದ ಕೆಲ ವರ್ಷಗಳಿಂದ ಪ್ರಿಯಾಂಶು ತನ್ನ ಅಜ್ಜಿಯ ಜೊತೆ ವಾಸ ಮಾಡುತ್ತಿದ್ದ. ವೃದ್ಧೆ ಮಿಥಿಲೇಶ್ ಪತಿ ಸರ್ಕಾರಿ ನೌಕರರಾಗಿದ್ದು, ಕೆಲ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಹೀಗಾಗಿ ಪತ್ನಿ ಮಿಥಿಲೇಶ್‌ಗೆ ಗಂಡನ ಪಿಂಚಣಿ ಬರುತ್ತಿತ್ತು. ಅವರ ದೈನಂದಿನ ಅಗತ್ಯಗಳಿಗೆ ಈ ಪಿಂಚಣಿಹಣ ಸಾಕಾಗುತ್ತಿತ್ತು. ವೃದ್ಧೆ ಮಿಥಿಲೇಶ್‌(Mithilesh)ಗೆ ಇಬ್ಬರು ಹೆಣ್ಣು ಮಕ್ಕಳಾಗಿದ್ದು, ಇಬ್ಬರ ವಿವಾಹವೂ ಆಗಿತ್ತು. ಅವರಲ್ಲಿ ಮೊದಲ ಮಗಳು ಹಾಗೂ ಆಕೆಯ ಗಂಡ ಅನಾರೋಗ್ಯದಿಂದಾಗಿ ಆರು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಕೊನೆಯ ಹಾಗೂ ಕಿರಿಯ ಪುತ್ರಿ ಲಖೀಂಪುರ ಕೇರಿಯಲ್ಲಿ ವಾಸ ಮಾಡುತ್ತಿದ್ದು, ಆಕೆಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

13 ವರ್ಷಗಳ ಕಾಲ ಅಮ್ಮನ ಶವದೊಂದಿಗೆ ದಿನ ಕಳೆದ ಮಗ