Asianet Suvarna News Asianet Suvarna News

ಉತ್ತರಕಾಶಿ ಸುರಂಗ ಕುಸಿತ : ಕಾರ್ಮಿಕರ ರಕ್ಷಣೆಗೆ ಯಂತ್ರಗಳ ಕೈ ಬಿಟ್ಟು ಸಲಾಕೆಯಿಂದಲೇ ಅಗೆತ ಶುರು

ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಭರದ ಕಾರ್ಯಾಚರಣೆ ನಡೆಯುತ್ತಿರುವಾಗಲೇ, ಹಲ್ಲುಜ್ಜುವ ಪೇಸ್ಟ್‌, ಬ್ರಷ್‌, ಟವೆಲ್‌, ಬಟ್ಟೆ ಹಾಗೂ ಒಳ ಉಡುಪುಗಳನ್ನೂ ಕಳುಹಿಸಿಕೊಡಲಾಗಿದೆ. ಚಲನಚಿತ್ರಗಳು ಹಾಗೂ ವಿಡಿಯೋ ಗೇಮ್‌ಗಳನ್ನು ಹೊಂದಿರುವ ಮೊಬೈಲ್‌ ಫೋನ್‌ಗಳನ್ನು ತಲುಪಿಸಲಾಗಿದೆ.

Uttarkashi Tunnel Collapse: Excavation started from scratch leaving the hands of the machines to save the workers akb
Author
First Published Nov 28, 2023, 12:26 PM IST

ಪಿಟಿಐ ಉತ್ತರಕಾಶಿ: ಉತ್ತರಾಖಂಡದ ನಿರ್ಮಾಣ ಹಂತದ ಸಿಲ್‌ಕ್ಯಾರಾ ಸುರಂಗದಲ್ಲಿ 16 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಶತಪ್ರಯತ್ನ ಮುಂದುವರಿದಿದೆ. ಸುರಂಗದೊಳಗೆ ಅಡ್ಡಲಾಗಿ ರಂಧ್ರ ತೋಡಲು ಹೋಗಿ ಸಿಲುಕಿ, ಸ್ಫೋಟಗೊಂಡಿದ್ದ ಅಮೆರಿಕ ಯಂತ್ರದ ಅಳಿದುಳಿದ ಭಾಗವನ್ನು ಹೊರತೆಗೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಆ ಯಂತ್ರದ ಬಿಡಿಭಾಗ ಕತ್ತರಿಸಲು ಪ್ಲಾಸ್ಮಾ ಯಂತ್ರ (Plasma machine), ಗ್ಯಾಸ್‌ ಕಟರ್‌ಗಳನ್ನು ಬಳಕೆ ಮಾಡಿದ್ದರಿಂದ ಸುರಂಗದ ಒಳಗೆ ಬಿಸಿಯ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಅದು ತಣ್ಣಗಾದ ಬೆನ್ನಲ್ಲೇ ಕಾರ್ಮಿಕರನ್ನು ಕಳುಹಿಸಿ ಸಲಾಕೆಯಿಂದ ಅಗೆಯುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ದೆಹಲಿಯಿಂದ 11 ಮಂದಿ ‘ರ್‍ಯಾಟ್‌ ಹೋಲ್‌ ಮೈನರ್‌’ಗಳನ್ನು ಕರೆಸಿಕೊಳ್ಳಲಾಗಿದೆ.

ಈ ನಡುವೆ, ಅಡ್ಡಲಾಗಿ ರಂಧ್ರ ತೋಡುವ ಕೆಲಸಕ್ಕೆ ಅಡ್ಡಿಯಾದ ಬೆನ್ನಲ್ಲೇ ಭಾನುವಾರದಿಂದ ಸುರಂಗದ ಮೇಲ್ಭಾಗದಿಂದ ನಡೆಯುತ್ತಿರುವ ರಂಧ್ರ ಕೊರೆಯುವ ಕೆಲಸ ಭರದಿಂದ ಸಾಗಿದ್ದು, ಈವರೆಗೆ 31 ಮೀ. ಆಳವನ್ನು ತೋಡಲಾಗಿದೆ. ಆದರೆ ಕಾರ್ಮಿಕರನ್ನು ತಲುಪಲು 87 ಮೀಟರ್‌ನಷ್ಟು ಆಳಕ್ಕೆ ಕೊರೆಯಬೇಕಾಗಿರುವುದರಿಂದ ಅದಕ್ಕೆ ಇನ್ನೂ 2-3 ದಿನ ಬೇಕಾಗುವ ಅಂದಾಜಿದೆ.

ಪ್ರಧಾನಿ ಕಚೇರಿ ಅಧಿಕಾರಿಗಳ ಭೇಟಿ:

ಏತನ್ಮಧ್ಯೆ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ (PK Mishra), ಗೃಹ ಕಾರ್ಯದರ್ಶಿ ಅಜಯ್‌ ಕೆ. ಭಲ್ಲಾ (Ajay K. Balla) ಹಾಗೂ ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಎಸ್‌.ಎಸ್‌. ಸಂಧು (S S Sandhu) ಅವರು ರಕ್ಷಣಾ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಿಸಿದ್ದಾರೆ. ಅಲ್ಲದೆ ಮಿಶ್ರಾ ಅವರು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಜತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

ಮತ್ತೊಂದೆಡೆ, ಸರ್ಕಾರದ ಹಲವು ಸಂಸ್ಥೆಗಳು ಕಾರ್ಯಾಚರಣೆಯಲ್ಲಿ ನಿರತರಾಗಿದ್ದರೂ 16 ದಿನಗಳಿಂದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮನಸ್ಥಿತಿ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಅವರಿಗೆ ಮೊಬೈಲ್‌ ಕೊಟ್ಟು ಗೇಮ್‌ (Mobile game) ಆಡಲು, ಇನ್ನಿತರೆ ಆಟಿಕೆ ಸಾಮಗ್ರಿ ಕಳುಹಿಸಿ ಅದರಲ್ಲಿ ತೊಡಗಿಸಿಕೊಳ್ಳಲು ಸೂಚಿಸಲಾಗುತ್ತಿದೆ. ಲ್ಯಾಂಡ್‌ಲೈನ್‌ ಫೋನ್‌ ಅನ್ನು ಕಳುಹಿಸಿ ಕುಟುಂಬದ ಜತೆ ಮಾತನಾಡಲು ಅವಕಾಶ ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ.

ರ್‍ಯಾಟ್‌ ಹೋಲ್‌ ಮೈನರ್‌ ಕೆಲಸ ಏನು?:

11 ಮಂದಿ ರ್‍ಯಾಟ್‌ ಹೋಲ್‌ ಮೈನರ್‌ಗಳ ಪೈಕಿ ಆರು ಮಂದಿ ನುರಿತ ಸಿಬ್ಬಂದಿಯನ್ನು ಈಗಾಗಲೇ ಕೊರೆಯಲಾಗಿರುವ ಕೊಳವೆಯೊಳಗೆ ರವಾನಿಸಿ, ಉಳಿದ ಭಾಗವನ್ನು ಅಗೆಯುವ ಹೊಣೆ ನೀಡಲಾಗಿದೆ. ಉಳಿದ 5 ಮಂದಿ ಮೀಸಲು ಸಿಬ್ಬಂದಿಯಾಗಿ ಇರಲಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಲಾಕೆ ಹಿಡಿದು 2ರಿಂದ 3 ಮೂವರು ಪರಿಣತರು ಕೊಳವೆ ಪ್ರವೇಶಿಸಿ, ಸಲಾಕೆಯಿಂದ ಸುರಂಗದ ಮಣ್ಣು ಅಗೆಯಲಿದ್ದಾರೆ. ಬಳಿಕ ಅದನ್ನು ಗಾಲಿಯುಳ್ಳ ಗಾಡಿಯಲ್ಲಿ ಹೊರಕ್ಕೆ ಕಳುಹಿಸುತ್ತಾರೆ. ಕೊಳವೆಯೊಳಗೆ ಆಮ್ಲಜನಕಕ್ಕೆ ಕೊರತೆ ಎದುರಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಿದ್ದಾರೆ.

ಯಂತ್ರಗಳಿಗೆ ಲೋಹದ ವಸ್ತುಗಳು ಎದುರಾದರೆ ತುಂಡಾಗುತ್ತವೆ. ಆದರೆ ಈ ರ್‍ಯಾಟ್‌ ಹೋಲ್‌ ಮೈನರ್‌ಗಳು (Rat Hole Miner) ಲೋಹವನ್ನೂ ಕತ್ತರಿಸಿ ತೆಗೆಯುವ ಚಾಕಚಕ್ಯತೆ ಹೊಂದಿರುತ್ತಾರೆ. ಹೆಲ್ಮೆಟ್‌, ಸಮವಸ್ತ್ರ, ಮಾಸ್ಕ್‌ ಹಾಗೂ ಗ್ಲಾಸ್‌ ಧರಿಸಿ ಕೊಳವೆಯೊಳಕ್ಕೆ ಹೋಗಲಿದ್ದಾರೆ. ಸುರಂಗದ ಮೇಲ್ಭಾಗದಿಂದ ಈಗಾಗಲೇ ರಂಧ್ರ ಕೊರೆಯಲಾಗುತ್ತಿದೆಯಾದರೂ ಅದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. 10ರಿಂದ 12 ಮೀಟರ್‌ ದೂರವನ್ನು ಅಡ್ಡಲಾಗಿ ತೋಡಿದರೆ ಕಾರ್ಮಿಕರನ್ನು ಸುಲಭವಾಗಿ ರಕ್ಷಿಸಬಹುದಾಗಿದೆ. ಆದಾಗ್ಯೂ ಸುರಂಗದ ಮೇಲಿನ ಕಾರ್ಯಾಚರಣೆಯನ್ನೂ ಮುಂದುವರಿಸಲಾಗಿದೆ.

 ಕಾರ್ಮಿಕರ ಉಪಾಹಾರಕ್ಕೆ ನಿತ್ಯ ಮೊಟ್ಟೆ, ಹಾಲು, ಖಿಚಡಿ, ಚಹಾ

ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಭರದ ಕಾರ್ಯಾಚರಣೆ ನಡೆಯುತ್ತಿರುವಾಗಲೇ, ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನೂ ನಿರಂತರವಾಗಿ ಪೂರೈಸಲಾಗುತ್ತಿದೆ.

ಆರಂಭದ ದಿನಗಳಲ್ಲಿ ಕಾರ್ಮಿಕರಿಗೆ ಜ್ಯೂಸ್‌ ಹಾಗೂ ಎನರ್ಜಿ ಡ್ರಿಂಕ್ಸ್‌ಗಳನ್ನು ಕಳುಹಿಸಲಾಗುತ್ತಿತ್ತು. ಈಗ ಉತ್ತಮ ಆಹಾರ ಸರಬರಾಜು ಮಾಡಲಾಗುತ್ತಿದೆ. ಬೆಳಗ್ಗೆ ಹೊತ್ತು ಬೇಯಿಸಿದ ಮೊಟ್ಟೆ, ಹಾಲು, ಚಹಾ ಹಾಗೂ ದಾಲಿಯಾ (ಗೋಧಿ ನುಚ್ಚಿನ ಖಿಚಡಿ) ಕೊಡಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿಗೆ ದಾಲ್‌, ಅನ್ನ, ಚಪಾತಿ ಮತ್ತು ಸಬ್ಜಿಯನ್ನು ಪೂರೈಸಲಾಗುತ್ತಿದೆ. ಜತೆಗೆ ಬಳಸಿ ಎಸೆಯಬಹುದಾದ ಪ್ಲೇಟ್‌ಗಳನ್ನು ಕೂಡ ರವಾನಿಸಲಾಗುತ್ತಿದೆ ಎಂದು ವೈದ್ಯಕೀಯ ತಂಡದಲ್ಲಿರುವ ಹಿರಿಯ ವೈದ್ಯ ಡಾ। ಪ್ರೇಮ್‌ ಪೋಖ್ರಿಯಾಲ್‌ ತಿಳಿಸಿದ್ದಾರೆ.

ಕಾರ್ಮಿಕರ ದೇಹದಲ್ಲಿ ನೀರಿನಂಶ ಕಡಿಮೆಯಾಗದಿರಲಿ ಎಂಬ ಕಾರಣಕ್ಕೆ ಒಆರ್‌ಎಸ್‌ ಕುಡಿಯಲು ಸೂಚಿಸಲಾಗಿದೆ. ಆ ಪುಡಿಯನ್ನು ಮೊದಲೇ ಕಳುಹಿಸಲಾಗಿದೆ. ಕಣ್ಣಿನ ಔಷಧ, ವಿಟಮಿನ್‌ ಮಾತ್ರೆ ಹಾಗೂ ಎನರ್ಜಿ ಡ್ರಿಂಕ್ಸ್‌ಗಳನ್ನು ಕೊಡಲಾಗಿದೆ. ಇದೆಲ್ಲದರ ಜತೆಗೆ ಒಣಹಣ್ಣುಗಳು ಹಾಗೂ ಬಿಸ್ಕತ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಲಾಗಿದೆ ಎಂದಿದ್ದಾರೆ. ಹಲ್ಲುಜ್ಜುವ ಪೇಸ್ಟ್‌, ಬ್ರಷ್‌, ಟವೆಲ್‌, ಬಟ್ಟೆ ಹಾಗೂ ಒಳಉಡುಪುಗಳನ್ನೂ ಕಳುಹಿಸಿಕೊಡಲಾಗಿದೆ. ಚಲನಚಿತ್ರಗಳು ಹಾಗೂ ವಿಡಿಯೋ ಗೇಮ್‌ಗಳನ್ನು ಹೊಂದಿರುವ ಮೊಬೈಲ್‌ ಫೋನ್‌ಗಳನ್ನು ತಲುಪಿಸಲಾಗಿದೆ.

ಸುರಂಗದೊಳಗೆ ಕಾರ್ಮಿಕರು ಮಲಗಲು ಜಿಯೋಟೆಕ್ಸ್‌ಟೈಲ್‌ ಶೀಟ್‌ಗಳ ಬಂಡಲ್‌ಗಳು ಒಳಗೇ ಇದ್ದವು. ಅದನ್ನು ಅವರು ಬಳಸುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಯೋಗ, ವ್ಯಾಯಾಮ ಮತ್ತು ವಾಕಿಂಗ್‌ ಮಾಡುತ್ತಿದ್ದಾರೆ. ನಿತ್ಯ ಅವರ ಜತೆ ನಾನು ಮಾತನಾಡುತ್ತೇನೆ ಎಂದು ಪೋಖ್ರಿಯಾಲ್‌ ತಿಳಿಸಿದ್ದಾರೆ.  ಕಾರ್ಮಿಕರು ಸಿಲುಕಿರುವ ಸ್ಥಳ 2 ಕಿ.ಮೀ.ಯಷ್ಟು ವಿಶಾಲವಾಗಿದೆ. ಅಲ್ಲಿ 22ರಿಂದ 24 ಡಿಗ್ರಿಯಷ್ಟು ತಾಪಮಾನ ಇರುವುದರಿಂದ ಅವರಿಗೆ ಉಣ್ಣೆಯ ಬಟ್ಟೆಯ ಅಗತ್ಯವಿಲ್ಲ. ದಿನದ ಇಪ್ಪತ್ನಾಲ್ಕು ತಾಸೂ ವಿದ್ಯುತ್‌ ಸರಬರಾಜಾಗುತ್ತಿದೆ. ಸುರಂಗ ಕುಸಿದರೂ, ಅದರೊಳಗಿನ ವಿದ್ಯುತ್‌ ಸಂಪರ್ಕಕ್ಕೆ ಯಾವುದೇ ಹಾನಿಯಾಗಿಲ್ಲ ಎಂದಿದ್ದಾರೆ.

ಬೆಳಗ್ಗೆ, ಸಂಜೆ ಕಾರ್ಮಿಕರಿಗೆ ವೈದ್ಯರಿಂದ ಕೌನ್ಸೆಲಿಂಗ್‌

ಒಂದೆಡೆ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರಗೆ ಕರೆತರಲು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿರುವಾಗಲೇ, ಅದೇ ಸ್ಥಳದಲ್ಲಿ ಮೈಕ್‌ ಮೂಲಕ ಒಳಗಿರುವ 41 ಕಾರ್ಮಿಕರಿಗೆ ವೈದ್ಯರು ಹಾಗೂ ಮಾನಸಿಕ ತಜ್ಞರು ನಿತ್ಯ ಧೈರ್ಯ ತುಂಬಿ ಅವರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ.

ಸಿಲ್‌ಕ್ಯಾರಾ ಸುರಂಗ ಸ್ಥಳದಲ್ಲೇ ಇಬ್ಬರು ಮಾನಸಿಕ ತಜ್ಞರು ಸೇರಿ 5 ವೈದ್ಯರು ಬೀಡುಬಿಟ್ಟಿದ್ದು ನಿತ್ಯ ಬೆಳಗ್ಗೆ 9ರಿಂದ11 ಹಾಗೂ ಸಂಜೆ 5ರಿಂದ 8ರವರೆಗೆ ಎರಡು ಬಾರಿ ನೌಕರರ ಜತೆ ಮಾತನಾಡುತ್ತಾರೆ. ಅಲ್ಲದೆ ಕುಟುಂಬ ಸದಸ್ಯರೊಂದಿಗೂ ಮಾತನಾಡಲು ಅವಕಾಶ ಕೊಡುತ್ತಾರೆ. ಮತ್ತೊಂದೆಡೆ, ಆತಂಕದಲ್ಲಿ ಮುಳುಗಿರುವ ಕುಟುಂಬ ಸದಸ್ಯರಿಗೂ ಕಾಲಕಾಲಕ್ಕೆ ಧೈರ್ಯ ಹೇಳುತ್ತಲೇ ಇದ್ದಾರೆ.

Latest Videos
Follow Us:
Download App:
  • android
  • ios