ಅಮೆರಿಕದಿಂದ ಆಮದು ಮಾಡಿಕೊಳ್ಳುವ ದ್ವಿದಳ ಧಾನ್ಯಗಳ ಮೇಲೆ ಭಾರತ ಶೇ. 30ರಷ್ಟು ಸುಂಕ ವಿಧಿಸಿದೆ. ಈ ಕಠಿಣ ನಿರ್ಧಾರದಿಂದ ಕಂಗಾಲಾದ ಅಮೆರಿಕದ ಸೆನೆಟರ್‌ಗಳು, ಸುಂಕ ತೆಗೆದುಹಾಕಲು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸುವಂತೆ ಅಧ್ಯಕ್ಷ ಟ್ರಂಪ್‌ಗೆ ಒತ್ತಾಯಿಸಿದ್ದಾರೆ. 

ನವದೆಹಲಿ (ಜ.17): ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತ ಈಗ ರಕ್ಷಣಾತ್ಮಕವಾಗಿಲ್ಲ, ಬದಲಿಗೆ ಆಕ್ರಮಣಕಾರಿ ನಿರ್ಧಾರಗಳ ಮೂಲಕ ದೊಡ್ಡ ರಾಷ್ಟ್ರಗಳಿಗೂ ಸಡ್ಡು ಹೊಡೆಯುತ್ತಿದೆ. ಅಮೆರಿಕ ವಿಧಿಸುವ ನಿರ್ಬಂಧಗಳಿಗೆ ಹೆದರದೆ, ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ದ್ವಿದಳ ಧಾನ್ಯಗಳ ಮೇಲೆ ಶೇ. 30 ರಷ್ಟು ಸುಂಕ ವಿಧಿಸುವ ಮೂಲಕ ಬಲಿಷ್ಠ ರಾಷ್ಟ್ರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಅಮೆರಿಕ ಈ ಹಿಂದೆ ಭಾರತಕ್ಕೆ ಪಾಠ ಕಲಿಸಿದೆ ಎಂದು ಭಾವಿಸಿರಬಹುದು, ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ.

ಟ್ರಂಪ್ ಮೇಲೆ ಒತ್ತಡ ಹೇರಿದ ಸೆನೆಟರ್‌ಗಳು

ಭಾರತದ ಈ ಕಠಿಣ ನಿರ್ಧಾರದಿಂದ ಅಮೆರಿಕದ ರೈತರು ಕಂಗಾಲಾಗಿದ್ದಾರೆ. ಮಾಂಟಾನಾದ ಸ್ಟೀವ್ ಡೈನ್ಸ್ ಮತ್ತು ಉತ್ತರ ಡಕೋಟಾದ ಕೆವಿನ್ ಕ್ರೇಮರ್ ಎಂಬ ಇಬ್ಬರು ಪ್ರಭಾವಿ ರಿಪಬ್ಲಿಕನ್ ಸೆನೆಟರ್‌ಗಳು ಈಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪತ್ರ ಬರೆದಿದ್ದಾರೆ. ಭಾರತ ವಿಧಿಸಿರುವ ಶೇ. 30 ರಷ್ಟು ಸುಂಕವನ್ನು ತಕ್ಷಣವೇ ತೆಗೆದುಹಾಕುವಂತೆ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ. ಭಾರತದ ಮಾರುಕಟ್ಟೆ ಕೈತಪ್ಪುತ್ತಿರುವುದು ಅಮೆರಿಕದ ಕೃಷಿ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ.

ಜಾಗತಿಕ ಬೇಳೆಕಾಳು ಮಾರುಕಟ್ಟೆಯಲ್ಲಿ ಭಾರತವೇ ಬಾಸ್!

ವಿಶ್ವದ ಒಟ್ಟು ದ್ವಿದಳ ಧಾನ್ಯಗಳ ಬಳಕೆಯಲ್ಲಿ ಭಾರತವು ಸುಮಾರು ಶೇ. 27 ರಷ್ಟು ಪಾಲನ್ನು ಹೊಂದಿದೆ. ಅಂದರೆ ಜಗತ್ತಿನ ಅತಿದೊಡ್ಡ ಗ್ರಾಹಕ ರಾಷ್ಟ್ರ ನಮ್ಮದು. ಭಾರತಕ್ಕೆ ಮಸೂರ, ಕಡಲೆ ಮತ್ತು ಒಣ ಬಟಾಣಿಗಳನ್ನು ರಫ್ತು ಮಾಡುತ್ತಿದ್ದ ಅಮೆರಿಕಕ್ಕೆ ಈಗ ಭಾರೀ ಸುಂಕದಿಂದಾಗಿ ವ್ಯಾಪಾರ ಕುಸಿತ ಕಂಡಿದೆ. ಗುಣಮಟ್ಟದ ಉತ್ಪನ್ನಗಳಿದ್ದರೂ ಸುಂಕದ ಕಾರಣದಿಂದ ಅಮೆರಿಕದ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯುತ್ತಿಲ್ಲ ಎಂಬುದು ಸೆನೆಟರ್‌ಗಳ ಆತಂಕಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ-ಟ್ರಂಪ್ ಚರ್ಚೆಗೆ ಆಗ್ರಹ

ಅಮೆರಿಕದ ಸೆನೆಟರ್‌ಗಳು ತಮ್ಮ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವನ್ನು ಉಲ್ಲೇಖಿಸಿದ್ದಾರೆ. 'ಎರಡು ದೇಶಗಳ ನಡುವಿನ ಆರ್ಥಿಕ ಬಾಂಧವ್ಯ ಗಟ್ಟಿಯಾಗಬೇಕಾದರೆ ದ್ವಿದಳ ಧಾನ್ಯಗಳ ಮೇಲಿನ ಸುಂಕ ಇಳಿಕೆಯಾಗಬೇಕು. ಇದು ಅಮೆರಿಕದ ಉತ್ಪಾದಕರಿಗೆ ಲಾಭ ನೀಡುವಂತೆ ಭಾರತದ ಗ್ರಾಹಕರಿಗೂ ಸಹಕಾರಿಯಾಗಲಿದೆ' ಎಂದು ಅವರು ವಾದಿಸಿದ್ದಾರೆ. ಮೋದಿ ಮತ್ತು ಟ್ರಂಪ್ ನಡುವಿನ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ಈ ಸಮಸ್ಯೆ ಬಗೆಹರಿಸಲು ಅಮೆರಿಕದ ನಾಯಕರು ಮುಂದಾಗುತ್ತಿದ್ದಾರೆ.

ಅಂತಿಮ ಹಂತದಲ್ಲಿ ವ್ಯಾಪಾರ ಒಪ್ಪಂದ

ಈ ಬೆಳವಣಿಗೆಗಳ ನಡುವೆ, ಭಾರತದ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸುವ ಅಂತಿಮ ಹಂತಕ್ಕೆ ತಲುಪಿವೆ. ತಾಂತ್ರಿಕ ತಂಡಗಳು ಉಳಿದಿರುವ ಸಣ್ಣಪುಟ್ಟ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದು, ಎರಡೂ ದೇಶಗಳು ಒಪ್ಪಿದ ತಕ್ಷಣ ಅಧಿಕೃತ ಘೋಷಣೆ ಹೊರಬೀಳಲಿದೆ. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಗಡುವನ್ನು ವಿಧಿಸಲಾಗಿಲ್ಲ ಎಂಬುದು ಗಮನಾರ್ಹ.