ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಯುಎಸ್‌ಎ ವಿರುದ್ಧ ಗೆದ್ದ ಭಾರತ ತಂಡ, ಸೂಪರ್-6 ಹಂತವನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶವನ್ನು ಎದುರಿಸಲಿದೆ. ವೈಭವ್ ಸೂರ್ವವಂಶಿ ಅವರಂತಹ ಆಟಗಾರರ ಮೇಲೆ ನಿರೀಕ್ಷೆ ಇದ್ದರೂ, 2020ರ ಚಾಂಪಿಯನ್ ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಬುಲವಾಯೊ(ಜಿಂಬಾಬ್ವೆ): 5 ಬಾರಿ ಚಾಂಪಿಯನ್ ಭಾರತ ತಂಡ ಈ ಬಾರಿ ಐಸಿಸಿ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ಸೂಪರ್-6 ಹಂತಕ್ಕೆ ಪ್ರವೇಶ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ತಂಡ ಶನಿವಾರ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ.
ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಯುಎಸ್‌ಎ ವಿರುದ್ಧ 6 ವಿಕೆಟ್ ಗೆಲುವು ಲಭಿಸಿತ್ತು. ಬಲಗೈ ವೇಗಿ ಹೆನಿಲ್ ಪಟೇಲ್ 16 ರನ್‌ಗೆ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸುಲಭ ಗುರಿಯನ್ನು ಬೆನ್ನತ್ತುವಾಗ ಭಾರತ 4 ವಿಕೆಟ್ ಕಳೆದುಕೊಂಡಿತ್ತು. ಬಾಂಗ್ಲಾದೇಶ ವಿರುದ್ಧ ಹೀಗಾಗದಂತೆ ನೋಡಿಕೊಳ್ಳಬೇಕಿದೆ. ಪ್ರಮುಖವಾಗಿ, ಕ್ರಿಕೆಟ್ ಲೋಕದ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿರುವ 14 ವರ್ಷದ ವೈಭವ್ ಸೂರ್ವವಂಶಿ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದ್ದು, ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ನಾಯಕ ಆಯುಶ್ ಮ್ಹಾತ್ರೆ, ಉಪನಾಯಕ ವಿಹಾನ್ ಮಲ್ಹೋತ್ರ, ಆಲ್ರೌಂಡರ್ ಆ್ಯರೊನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂಡು ಮೇಲೆ ಕೂಡ ತಂಡಕ್ಕೆ ಹೆಚ್ಚಿನ ನಿರೀಕ್ಷೆಯಿದೆ. ಹೆನಿಲ್ ಜೊತೆ ದೀಪೇಶ್, ಅಂಬರೀಶ್, ಕಿಶನ್ ಕುಮಾರ್, ಉಧವ್ ಮೋಹನ್ ತಂಡಕ್ಕೆ ವೇಗದ ಬೌಲಿಂಗ್ ಆಯ್ಕೆಗಳಾಗಿದ್ದು, ಕನಿಶ್ಕ್ ಚೌಹಾನ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್ ಸ್ಪಿನ್ ಅಸ್ತ್ರಗಳಾಗಿ ತಂಡದ ಜೊತೆಗಿದ್ದಾರೆ.
ಮೊದಲ ಜಯ ಗುರಿ:
ಅಂಡರ್-19 ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಯಾವುದೇ ತಂಡಕ್ಕೂ ಆಘಾತ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಬಾಂಗ್ಲಾ, 2020ರಲ್ಲಿ ಟ್ರೋಫಿಯನ್ನೂ ಗೆದ್ದಿದೆ. ಈ ಬಾರಿ ತಂಡ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಎಲ್ಲಾ ವಿಭಾಗದಲ್ಲೂ ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಭಾರತವನ್ನು ಮಣಿಸಬಹುದು.
ಪಂದ್ಯ: ಮಧ್ಯಾಹ್ನ 1ಕ್ಕೆ । ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್.
ಆಸೀಸ್ ಶುಭಾರಂಭ
4 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಈ ಬಾರಿ ವಿಶ್ವಕಪ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ತಂಡ ಶುಕ್ರವಾರ ಐರ್ಲೆಂಡ್ ವಿರುದ್ಧ 8 ವಿಕೆಟ್ ಗೆಲುವು ಸಾಧಿಸಿತು. ಮತ್ತೆರಡು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ ಜಯಗಳಿಸಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ಗೆಲುವು ತನ್ನದಾಗಿಸಿಕೊಂಡಿತು.

