ಭಾರತ-ನೇಪಾಳದ ಸೋನೌಲಿ ಗಡಿಯಲ್ಲಿ ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್ ಬ್ರೌನ್‌ನನ್ನು ಬಂಧಿಸಲಾಗಿದೆ. ತಾನು ಅಮೆರಿಕದ ಮಾಜಿ ನೌಕಾಪಡೆ ಸದಸ್ಯನೆಂದು ಹೇಳಿಕೊಂಡಿರುವ ಈತ, ಸಮುದ್ರ ಮಾರ್ಗವಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾಗಿ ಹೇಳಿಕೆ ನೀಡಿದ್ದು, ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಉತ್ತರ ಪ್ರದೇಶ (ಜು.13): ಭಾರತ ಮತ್ತು ನೇಪಾಳದ ಅಂತರಾಷ್ಟ್ರೀಯ ಗಡಿಯಾದ ಸೋನೌಲಿ ಬಳಿ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆಯನ್ನು ಸಶಸ್ತ್ರ ಸೀಮಾ ಬಲ್ (SSB) ಮತ್ತು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕ್ಯಾಲಿಫೋರ್ನಿಯಾದ 36 ವರ್ಷದ ಜೋರ್ಡಾನ್ ಬ್ರೌನ್ ಎಂದು ಗುರುತಿಸಲಾಗಿದೆ.
ಸಿನೆಮಾ ಶೈಲಿಯ ಸಬೂಬು!
ಪೊಲೀಸರ ವಿಚಾರಣೆಯ ವೇಳೆ ಜೋರ್ಡಾನ್ ಬ್ರೌನ್ ನೀಡಿರುವ ಹೇಳಿಕೆಗಳು ತನಿಖಾ ಸಂಸ್ಥೆಗಳನ್ನು ದಂಗಾಗಿಸಿವೆ. ಆತ ತಾನು ಅಮೆರಿಕದ ನೌಕಾಪಡೆ (US Navy) ಮತ್ತು ವಿಶೇಷ ಪಡೆಗಳ (Special Forces) ಮಾಜಿ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ತನ್ನ ಪ್ರಯಾಣದ ಬಗ್ಗೆ ವಿವರಿಸುತ್ತಾ, 'ನಾನು ಪ್ರವಾಸಿ ವೀಸಾದ ಮೇಲೆ ಥೈಲ್ಯಾಂಡ್‌ಗೆ ಹೋಗಿದ್ದೆ, ಅಲ್ಲಿ ನನ್ನ ಪಾಸ್‌ಪೋರ್ಟ್ ಕಳೆದುಹೋಯಿತು. ನಂತರ ಅಲ್ಲಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ತಲುಪಿ, ಅಲ್ಲಿಂದ ನವೆಂಬರ್ 2, 2025 ರಂದು (ವರದಿಯ ಪ್ರಕಾರ) ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದೆ' ಎಂದು ತಿಳಿಸಿದ್ದಾನೆ.
ಗೋವಾದಲ್ಲಿ ವಾಸ, ನೇಪಾಳಕ್ಕೆ ಪಯಣ:
ಭಾರತಕ್ಕೆ ಬಂದ ನಂತರ ಆತ ಕಳೆದ ಕೆಲವು ಸಮಯದಿಂದ ಗೋವಾದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಜುಲೈ 11 ರಂದು ಸೋನೌಲಿ ಗಡಿಯ ಮೂಲಕ ನೇಪಾಳಕ್ಕೆ ಹೋಗಲು ಯತ್ನಿಸುತ್ತಿದ್ದಾಗ, ವಾಡಿಕೆಯ ತಪಾಸಣೆಯ ವೇಳೆ ಎಸ್‌ಎಸ್‌ಬಿ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಿಲೋಮೀಟರ್ ದೂರದ ಚೇಸ್ ಬಳಿಕ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.
ಕಾನೂನು ಕ್ರಮ ಮತ್ತು ತನಿಖೆ:
ಮಹಾರಾಜ್‌ಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಅವರು ನೀಡಿರುವ ಮಾಹಿತಿಯಂತೆ, ಜೋರ್ಡಾನ್ ಬ್ರೌನ್ ಬಳಿ ಯಾವುದೇ ಮಾನ್ಯವಾದ ವೀಸಾ ಅಥವಾ ಪ್ರಯಾಣ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋನೌಲಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಇಮಿಗ್ರೇಷನ್ ಮತ್ತು ವಿದೇಶಿಯರ ಕಾಯ್ದೆಯ (Foreigners Act) ಸೆಕ್ಷನ್ 21/23 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ (Crime No. 68/26). ಪ್ರಸ್ತುತ ಅಮೆರಿಕ ಪ್ರಜೆಯ ಹೇಳಿಕೆಗಳನ್ನು ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.


