ನವದೆಹಲಿ(ಏ.17): ಲಾಕ್‌ಡೌನ್‌ ಘೋಷಣೆ ಬಳಿಕ ವಿಡಿಯೋ ಸಮಾಲೋಚನೆಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಝೂಮ್‌ ಆ್ಯಪ್‌ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ ತಕ್ಷಣದಿಂದಲೇ ಇದರ ಬಳಕೆ ಬಿಡಬೇಕು ಎಂದು ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. 

ಈ ಹಿಂದೆ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಇದೇ ರೀತಿಯ ಎಚ್ಚರಿಕೆ ನೀಡಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುವ ಸೈಬರ್‌ ಕೋಆರ್ಡಿನೇಷನ್‌ ಸೆಂಟರ್‌ ಕೂಡಾ ಇದೇ ಸಲಹೆ ನೀಡಿದೆ. ಈ ಆ್ಯಪ್‌ ಬಳಸಿದ ವೇಳೆ ಮಾಹಿತಿ ಸೋರಿಕೆಯ, ವಿಡಿಯೋ ಕಾನ್ಫರೆನ್ಸ್‌ ಸಂದರ್ಭದಲ್ಲಿ ವಿಡಿಯೋ ಕಾಲ್‌ಗಳು ಹ್ಯಾಕ್‌ ಆಗುತ್ತಿರುವ, ಪಾಸ್‌ವರ್ಡ್‌ಗಳು ಸೋರಿಕೆ ಆಗುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಹೀಗಾಗಿ ಇವುಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ. 

ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

ಕಾರ್ಪೊರೇಟ್‌ ಸಂಸ್ಥೆಗಳ ವಿಡಿಯೋ ಕಾನ್ಫರೆನ್ಸ್‌ಗಳು ಮತ್ತು ಸಭೆಗಳಿಗಾಗಿ ತಯಾರಿಸಲಾಗಿರುವ ಝೂಮ್‌ ಆ್ಯಪ್‌ ಭಾರೀ ಜನಪ್ರೀಯವಾಗಿದ್ದು, ಡಿಸೆಂಬರ್‌ನಿಂದ ಮಾಚ್‌ರ್‍ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 1 ಕೋಟಿಯಿಂದ 20 ಕೋಟಿಗೆ ಏರಿಕೆ ಕಂಡಿದೆ. ವಿಡಿಯೋ ಕಾನೆ​ರೆನ್ಸ್‌ ವೇಳೆ ಹ್ಯಾಕರ್‌ಗಳು ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡಿದ ಘಟನೆಗಳು ನಡೆದಿವೆ. ಅಲ್ಲದೇ ಝೂಮ್‌ ಆ್ಯಪ್‌ಗಳನ್ನು ಡೆಸ್ಕ್‌ಟಾಪ್‌ ಅಪ್ಲಿಕೇಷನ್‌ ಆಗಿ ಬಳಕೆ ಮಾಡದಂತೆ ಗೂಗಲ್‌ ಕೂಡ ಎಚ್ಚರಿಕೆ ನೀಡಿದೆ.