ಭಾರತದ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನದ ವಾಯುನೆಲೆಗಳು ಹೇಗೆ ಚಿಂದಿಯಾಗಿವೆ ಎಂಬುದಕ್ಕೆ ಹೊಸ ಸಾಕ್ಷ್ಯ ಸಿಕ್ಕಿದೆ. ಅಮೆರಿಕದ ಮ್ಯಾಕ್ಸರ್ ಕಂಪನಿ ಧ್ವಂಸವಾದ ರನ್‌ವೇ ಮತ್ತು ಕಟ್ಟಡಗಳ ಹೈ ರೆಸಲ್ಯೂಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ನವದೆಹಲಿ: ಭಾರತ ನಡೆಸಿದ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನದ ರನ್ ವೇ, ವಾಯುನೆಲೆಗಳು ಹೇಗೆ ಚಿಂದಿಯಾಗಿವೆ ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಅಮೆರಿಕದ ಮ್ಯಾಕ್ಸರ್ ಕಂಪನಿ ಭಾರತದ ದಾಳಿಗೆ ಧ್ವಂಸವಾದ ಪಾಕ್ ರನ್‌ವೇ, ಕಟ್ಟಡಗಳ ಹೈ ರೆಸಲ್ಯೂಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಕಳೆದ ವಾರ ಪ್ರತಿಕಾಗೋಷ್ಠಿಯ ಸಂದರ್ಭದಲ್ಲಿ ವಿಂಗ್ ಕಮಾಂಡರ್ ವೋಮಿಕಾ ಸಿಂಗ್ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮಿಲಿಟರಿ ಪಡೆಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಖಚಿತಪಡಿಸಿದ್ದರು. ಸೇನೆಯು ಇದಕ್ಕೆ ಸಂಬಂಧಿಸಿದ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಅಮೆರಿಕದ ಏರೋಸ್ಪೇಸ್ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಉಪಗ್ರಹದಲ್ಲಿ ಸೆರೆಹಿಡಿದ ಚಿತ್ರ ಬಿಡುಗಡೆ ಮಾಡಿದ್ದು ಚಿಂದಿಯಾದ ಪಾಕಿಸ್ತಾನದ ಸೇನಾ ನೆಲೆಗಳು ಸೆರೆಯಾಗಿವೆ.
ಇದರಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಸುಕ್ಕೂರಿನ ಒಂದು ಕಟ್ಟಡ, ಜಕೋಬಾಬಾದ್ ವಾಯುನೆಲೆಯ ಪ್ಯಾಂಗರ್, ಸಗೋರ್ಧಾದ ಮುಷಾಫ್ ವಾಯುನೆಲೆಯ ರನ್ ವೇ ಮತ್ತು ರಹೀಮ್ ಯಾರ್ ಖಾನ್ ವಾಯುನೆಲೆ ರನ್ ವೇ ಹೇಗೆ ಧ್ವಂಸವಾಗಿದೆ ಎಂಬ ಚಿತ್ರಗಳಿದೆ.
ಶೆಲ್ ದಾಳಿ ತಡೆಗೆ ರಜೌರಿ ಪೂಂಛಲ್ಲಿ ಹೊಸ ಬಂಕರ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಮತ್ತು ಪೂಂಬ್ ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನದ ಸೇನೆ ಇತ್ತೀಚೆಗೆ ನಡೆಸಿದ ಗುಂಡು ಮತ್ತು ಶೆಲ್ ದಾಳಿಯಲ್ಲಿ ಹಲವು ನಾಗರಿಕರು ಸಾವನ್ನಪ್ಪಿ, ಹಲವರು ಗಾಯಗೊಂಡ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಇತರ ಅಸುರಕ್ಷಿತ ಪ್ರದೇಶಗಳಲ್ಲಿ ಸಮುದಾಯ ಬಂಕರ್‌ಗಳನ್ನು ನಿರ್ಮಿಸಲು ಸರ್ಕಾರ ತಯಾರಿ ನಡೆಸಿದೆ.
ಕಳೆದೊಂದು ದಶಕದಲ್ಲಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪ್ರತ್ಯೇಕ ಮತ್ತು ಸಮುದಾಯ ಬಂಕರ್‌ಗಳನ್ನು ನಿರ್ಮಿಸಿ, ನಾಗರಿಕರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಮೊದಲು ಯಾವುದೇ ಸಂಘರ್ಷದ ಸಂದರ್ಭದಲ್ಲೂ ಪಾಕ್ ಸೇನೆ ರಜೌರಿ ಮತ್ತು ಪೂಂಛ್ ನಗರಗಳ ಮೇಲೆ ಶೆಲ್ಲಿಂಗ್ ನಡೆಸಿರಲಿಲ್ಲ. ಹಾಗಾಗಿ ಅಲ್ಲಿ ಬಂಕರ್‌ಗಳನ್ನು ನಿರ್ಮಿಸಿರಲಿಲ್ಲ. ಆದರೆ ಈ ಬಾರಿ ಇವುಗಳಮೇಲೆ ತೀವ್ರತರವಾದ ಶೆಲ್ ದಾಳಿ ನಡೆಸುತ್ತಿರುವುದರಿಂದ, ಸಮುದಾಯ ಬಂಕರ್‌ಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಹಿಂದೆಂದಿಗಿಂತಲೂ ಈ ಬಾರಿ ದಾಳಿಯ ಸ್ವರೂಪ ಮತ್ತು ತೀವ್ರತೆ ಭಿನ್ನವಾಗಿದೆ. ಇದೇ ಮೊದಲ ಬಾರಿಗೆ, ರಜೌರಿ, ಪೂಂಛ್‌ನಂತಹ ಜನನಿಬಿಡ ಪಟ್ಟಣಗಳು ನೇರ ಗುಂಡಿನ ದಾಳಿಗೆ ಒಳಗಾಗಿವೆ. ಹಾಗಾಗಿ ಸಮುದಾಯ ಬಂಕರ್‌ಗಳ ನಿರ್ಮಾಣ ಅಗತ್ಯ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 19ರಂದು ಪಾಕ್ ಬಗ್ಗೆ ಸ್ಥಾಯಿ ಸಮಿತಿಗೆ ವಿಕ್ರಮ್ ಮಿಸಿ ಮಾಹಿತಿ
ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಮೇ 19ರಂದು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಪಾಕಿಸ್ತಾನದೊಂದಿಗಿನ ಪರಿಸ್ಥಿತಿಯ ಬಗ್ಗೆ ವಿವರಿಸಲಿದ್ದಾರೆ. ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಬಗ್ಗೆ ಮಾಹಿತಿ ನೀಡಿದ್ದು, 'ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ದಾಳಿ, ಎರಡೂ ದೇಶಗಳ ನಡುವಿನ ಸಂಘರ್ಷ ಮತ್ತು ನಂತರ ನಡೆದ ಕದನ ವಿರಾಮದ ಬಗ್ಗೆ ಮಿಸ್ತ್ರಿಯವರು ಮೇ 19ರಂದು ಸಮಿತಿಗೆ ಮಾಹಿತಿ ನೀಡಲಿದ್ದಾರೆ' ಎಂದಿದ್ದಾರೆ. ಬಾಂಗ್ಲಾದೇಶ ಮೊದಲಾದ ಭಾರತದ ನೆರೆಯ ದೇಶಗಳ ಬೆಳವಣಿಗೆಗಳು, ಕೆನಡಾದೊಂದಿಗಿನ ಸಂಬಂಧಗಳು ಸೇರಿದಂತೆ ಹಲವಾರು ವಿದೇಶಾಂಗ ವಿಷಯಗಳ ಕುರಿತು ಮಿಸ್ತ್ರಿ ನಿಯಮಿತವಾಗಿ ಸಮಿತಿಗೆ ವಿವರಣೆ ನೀಡುತ್ತಾ ಬಂದಿದ್ದಾರೆ.
ಸೆನ್ಸೆಕ್ಸ್ 1282 ಅಂಕಗಳ ಭಾರೀ ಕುಸಿತ: 81148 ಅಂಕಗಳಲ್ಲಿ ಮುಕ್ತಾಯ
ಮುಂಬೈ: ಸೋಮವಾರ 2975 ಅಂಕಗಳ ಭಾರೀ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1282 ಅಂಕಗಳ ಭಾರೀ ಕುಸಿತ ಕಂಡು 81148 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 346 ಅಂಕ ಕುಸಿತ ಕಂಡು 24578ರಲ್ಲಿ ಅಂತ್ಯವಾಗಿದೆ. ಸೋಮವಾರ ಬಹುತೇಕ ಷೇರುಗಳ ಬೆಲೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದೇ, ಮಂಗಳವಾರ ಈ ಪ್ರಮಾಣದಲ್ಲಿ ಇಳಿಕೆ ಆಗಲು ಕಾರಣವಾಯ್ತು ಎನ್ನಲಾಗಿದೆ. ಐಟಿ, ಆಟೋಮೊಬೈಲ್, ಖಾಸಗಿ ವಲಯದ ಬ್ಯಾಂಕ್‌ಗಳ ಷೇರುಮೌಲ್ಯ ಭಾರೀ ಕುಸಿತ ಕಂಡಿತು.


