Asianet Suvarna News Asianet Suvarna News

ಮೇಲ್ವರ್ಗ ಮೀಸಲು: ಕ್ರೆಡಿಟ್ ಪಡೆಯಲು ಬಿಜೆಪಿ, ಕಾಂಗ್ರೆಸ್‌ ಪೈಪೋಟಿ

ಶೇ.10 ಮೇಲ್ವರ್ಗ ಮೀಸಲು ನೀಡುವ ಕಾಯ್ದೆಯನ್ನು ಸುಪ್ರೀಂಕೋರ್ಟ್‌  ಎತ್ತಿ ಹಿಡಿದ ಬೆನ್ನಲ್ಲೇ, ಆ ಮೀಸಲಾತಿ ಒದಗಿಸಿದ ಶ್ರೇಯಕ್ಕಾಗಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ನಡೆದಿದೆ.

Upper class reservation Act, BJP, Congress vie for taking its credit akb
Author
First Published Nov 8, 2022, 9:32 AM IST

ನವದೆಹಲಿ: ಶೇ.10 ಮೇಲ್ವರ್ಗ ಮೀಸಲು ನೀಡುವ ಕಾಯ್ದೆಯನ್ನು ಸುಪ್ರೀಂಕೋರ್ಟ್‌  ಎತ್ತಿ ಹಿಡಿದ ಬೆನ್ನಲ್ಲೇ, ಆ ಮೀಸಲಾತಿ ಒದಗಿಸಿದ ಶ್ರೇಯಕ್ಕಾಗಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ನಡೆದಿದೆ. ದೇಶದ ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದು, ಇದು ಅವರಿಗೆ ಸಂದ ಜಯ. ಸಾಮಾಜಿಕ ನ್ಯಾಯದ ಹಾದಿಯಲ್ಲಿ ದೊಡ್ಡ ಉತ್ತೇಜನ ಎಂದು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಟ್ವೀಟ್‌ ಮಾಡಿದ್ದಾರೆ. ಇದನ್ನೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪುನರುಚ್ಚರಿಸಿದ್ದಾರೆ.

ಆದರೆ, ‘ಮೇಲ್ವರ್ಗ ಮೀಸಲು ಸಂವಿಧಾನ ತಿದ್ದುಪಡಿ (constitutional amendment) ಎಂಬುದು ಡಾ ಮನಮೋಹನ ಸಿಂಗ್‌ ಸರ್ಕಾರ (Dr Manmohan Singh government) 2005-06ರಲ್ಲಿ ಸಿನ್ಹೋ ಸಮಿತಿ (Sinho Committee) ರಚಿಸುವ ಮೂಲಕ ಆರಂಭಿಸಿದ ಪ್ರಕ್ರಿಯೆ. ಆ ಸಮಿತಿ 2010ರ ಜುಲೈನಲ್ಲೇ ವರದಿ ನೀಡಿತ್ತು. ಈ ಬಗ್ಗೆ ವಿಸ್ತೃತ ಸಮಾಲೋಚನೆ ನಡೆದು, 2014ರೊಳಗೆ ಮಸೂದೆಯೂ ಸಿದ್ಧವಾಗಿತ್ತು. ಆದರೆ ಅದನ್ನು ಜಾರಿಗೆ ತರಲು ಮೋದಿ ಸರ್ಕಾರ 5 ವರ್ಷಗಳನ್ನು ತೆಗೆದುಕೊಂಡಿತು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (Congress general secretary) ಜೈರಾಮ್‌ ರಮೇಶ್‌ (Jairam Ramesh) ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮೀಸಲಾತಿ ಪಟ್ಟಿಯಿಂದ ಹೊರಗಿರುವ ಸಮುದಾಯಗಳಲ್ಲಿನ(ಮೇಲ್ವರ್ಗ) ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೇ.10 ಮೀಸಲು ಕಲ್ಪಿಸಲು ಮೂರೂವರೆ ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮಾಡಿದ್ದ ಸಂವಿಧಾನದ 103ನೇ ತಿದ್ದುಪಡಿಯನ್ನು ಸರ್ವೋಚ್ಚ ನ್ಯಾಯಾಲಯ 3:2 ಬಹುಮತದೊಂದಿಗೆ ಎತ್ತಿ ಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದರೊಂದಿಗೆ, ಮೇಲ್ವರ್ಗ ಮೀಸಲು ಇರುತ್ತಾ? ಅಥವಾ ನ್ಯಾಯಾಲಯದ ಅಗ್ನಿಪರೀಕ್ಷೆಯಲ್ಲಿ ರದ್ದಾಗಿಬಿಡುತ್ತಾ ಎಂಬ ಆತಂಕ ನಿವಾರಣೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ನಿರ್ವಿಘ್ನವಾಗಿ ಮೀಸಲು ಲಾಭ ಪಡೆಯಲು ಸುಪ್ರೀಂಕೋರ್ಟಿನ (Supreme Court) ಮುದ್ರೆಯೂ ಬಿದ್ದಂತಾಗಿದೆ.

ಒಬಿಸಿ ಬಗ್ಗೆ ಚರ್ಚೆಗೆ ಬರಲು ಸಿಎಂಗೆ ಸಿದ್ದರಾಮಯ್ಯ ಸವಾಲ್

ಮುಖ್ಯ ನ್ಯಾಯಮೂರ್ತಿ (Chief Justice) ಯು.ಯು.ಲಲಿತ್‌ (U.U. Lalit) ನೇತೃತ್ವದ ಪಂಚಸದಸ್ಯ ಸಂವಿಧಾನಿಕ ಪೀಠದ ಮೂವರು ನ್ಯಾಯಮೂರ್ತಿಗಳು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟುಮೀಸಲಾತಿ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದರೆ, ಒಬ್ಬರು ಅದನ್ನು ತಿರಸ್ಕರಿಸಿದರು. ಆ ಒಬ್ಬರ ಅಭಿಪ್ರಾಯವನ್ನೇ ಮುಖ್ಯ ನ್ಯಾಯಮೂರ್ತಿ ಬೆಂಬಲಿಸಿದರು. ಆದಾಗ್ಯೂ 3:2 ಬಹುಮತದೊಂದಿಗೆ ಸರ್ಕಾರದ ಕ್ರಮವನ್ನು ಎತ್ತಿ ಹಿಡಿಯಲಾಯಿತು. ‘ಸರ್ಕಾರದ ನಿರ್ಧಾರ ಸಂವಿಧಾನದ ಮೂಲಸಂರಚನೆಯನ್ನು ಉಲ್ಲಂಘಿಸುವುದಿಲ್ಲ’ ಎಂದು ಬಹುಮತದ ತೀರ್ಪು ಪ್ರಕಟಿಸಲಾಯಿತು.

ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ, ಬೇಲಾ ಎಂ. ತ್ರಿವೇದಿ, ಜೆ.ಬಿ.ಪರ್ದೀವಾಲಾ ಅವರು ಶೇ.10 ಮೀಸಲಾತಿಯನ್ನು ಎತ್ತಿ ಹಿಡಿದರೆ, ನ್ಯಾ ಎಸ್‌.ರವೀಂದ್ರ ಭಟ್‌ ಅವರು ತಿರಸ್ಕರಿಸಿದರು. ಮುಖ್ಯ ನ್ಯಾಯಮೂರ್ತಿಗಳು ನ್ಯಾ ಭಟ್‌ ಅವರ ಕ್ರಮಕ್ಕೆ ಸಹಮತ ಸೂಚಿಸಿದರು. 35 ನಿಮಿಷಗಳ ಕಾಲ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ತೀರ್ಪು ಓದಿದರು.

ಯಾರ ತೀರ್ಪಲ್ಲಿ ಏನಿದೆ?:

‘ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಮೀಸಲಾತಿ ಕಲ್ಪಿಸಿರುವ ಕ್ರಮ ಸಂವಿಧಾನದ ಮೂಲ ಸಂರಚನೆಯನ್ನು ಉಲ್ಲಂಘಿಸುವುದಿಲ್ಲ. ಸಮಾನತೆಯ ಸಮಾಜದ ಗುರಿಯೆಡೆ ಎಲ್ಲರೂ ಸಾಗಲು ಮೀಸಲಾತಿ ಎಂಬುದು ದೃಢೀಕರಿಸಲ್ಪಟ್ಟಸಾಧನ. ಯಾವುದೇ ವರ್ಗ ಅಥವಾ ಸಮುದಾಯದ ಅವಕಾಶ ವಂಚಿತರನ್ನು ಒಳಗೊಳ್ಳುವ ಮಾರ್ಗ’ ಎಂದು ನ್ಯಾ. ಮಹೇಶ್ವರಿ ತಮ್ಮ ತೀರ್ಪು ಓದಿದರು.

‘ಸಂವಿಧಾನ ತಿದ್ದುಪಡಿ ತಾರತಮ್ಯ ಹೊಂದಿದೆ ಎಂಬ ಕಾರಣ ನೀಡಿ ಅದನ್ನು ರದ್ದುಗೊಳಿಸಲಾಗದು. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಲಾಭಕ್ಕಾಗಿ ಸಂಸತ್ತು ಕೈಗೊಂಡಿರುವ ಕ್ರಮ ಎಂದು ಅದನ್ನು ನೋಡಬೇಕು’ ಎಂದು ನ್ಯಾ ತ್ರಿವೇದಿ ತೀರ್ಪು ನೀಡಿದರು. ಇಬ್ಬರೂ ನ್ಯಾಯಮೂರ್ತಿಗಳ ವಾದಕ್ಕೆ ಸಹಮತ ಸೂಚಿಸಿದ ನ್ಯಾ. ಜೆ.ಬಿ.ಪರ್ದೀವಾಲಾ ಅವರು, ಸಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದರು.

ಮೀಸಲಾತಿಗಾಗಿ ಜನಜಾಗೃತಿ ಅತ್ಯವಶ್ಯಕ; ವಚನಾನಂದ ಶ್ರೀ

ಆದರೆ ನ್ಯಾ ಎಸ್‌.ರವೀಂದ್ರ ಭಟ್‌ ಅವರು ಮೂವರೂ ನ್ಯಾಯಮೂರ್ತಿಗಳಿಗೆ ವಿರುದ್ಧವಾದ ಭಿನ್ನ ತೀರ್ಪು ನೀಡಿದರು. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲು ಕಲ್ಪಿಸಲು ಸಂವಿಧಾನಿಕ ತಿದ್ದುಪಡಿ ಮಾಡಿದ ಸರ್ಕಾರದ ಕ್ರಮವನ್ನು ರದ್ದುಗೊಳಿಸಿದರು. ‘ಈ ತಿದ್ದುಪಡಿ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸುತ್ತದೆ’ ಎಂದು ಹೇಳಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಸಹಮತ ವ್ಯಕ್ತಪಡಿಸಿದರು.

ಏನಿದು ಪ್ರಕರಣ?:

ಮೀಸಲಾತಿಯ ಪರಿಧಿಯಿಂದ ಹೊರಗಿರುವ ಸಮುದಾಯಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ.10 ಮೀಸಲಾತಿಯನ್ನು ನೀಡಲು ಕೇಂದ್ರ ಸರ್ಕಾರ ಸಂವಿಧಾನಿಕ ತಿದ್ದುಪಡಿ ಮಸೂದೆ ರೂಪಿಸಿತ್ತು. 2019ರ ಜ.8 ಹಾಗೂ 9ರಂದು ಕ್ರಮವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾಗಿತ್ತು. ಬಳಿಕ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅದಕ್ಕೆ ಅನುಮೋದನೆ ನೀಡಿದ್ದರು. ಪರಿಶಿಷ್ಟಜಾತಿ, ಪಂಗಡ, ಇತರೆ ಹಿಂದುಳಿದವರಿಗೆ ದೇಶದಲ್ಲಿ ದೊರೆಯುತ್ತಿರುವ ಶೇ.50 ಮೀಸಲಾತಿಯಿಂದಾಚೆಗೆ ಶೇ.10 ಮೇಲ್ವರ್ಗ ಮೀಸಲು ನೀಡುವ ಕ್ರಮ ಇದಾಗಿತ್ತು.

ಇದರ ವಿರುದ್ಧ 2019ರಲ್ಲಿ ಜನಹಿತ ಅಭಿಯಾನ ಎಂಬ ಸಂಘಟನೆ ಸೇರಿದಂತೆ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳು ಸಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನೇ ಪ್ರಶ್ನೆ ಮಾಡಿದ್ದವು. ವಿವಿಧ ಹೈಕೋರ್ಚ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳೆಲ್ಲವನ್ನೂ ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ನ್ಯಾಯಾಲಯದ ಮೊರೆ ಹೋಗಿತ್ತು. ಸೆಪ್ಟೆಂಬರ್‌ನಲ್ಲಿ ಆರೂವರೆ ದಿನಗಳ ಕಾಲ ವಿಚಾರಣೆ ನಡೆದಿತ್ತು. ಘಟಾನುಘಟಿ ವಕೀಲರು ವಾದ ಮಂಡಿಸಿದ್ದರು. ಸೆ.27ರಂದು ನ್ಯಾಯಾಲಯ ತೀರ್ಪು ಕಾದಿರಿಸಿತ್ತು.
 

Follow Us:
Download App:
  • android
  • ios