ಒಬಿಸಿ ಬಗ್ಗೆ ಚರ್ಚೆಗೆ ಬರಲು ಸಿಎಂಗೆ ಸಿದ್ದರಾಮಯ್ಯ ಸವಾಲ್
- ಒಬಿಸಿ ಬಗ್ಗೆ ಚರ್ಚೆಗೆ ಬರಲು ಸಿಎಂಗೆ ಸಿದ್ದು ಸವಾಲ್
- ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಬಿಜೆಪಿ ಮೊಸಳೆ ಕಣ್ಣೀರು
- ಸುಳ್ಳು ಭಾಷಣ ಮಾಡುವ ಬಿಜೆಪಿಗರಿಗೆ ನಾಚಿಕೆಯಾಗಬೇಕು: ವಾಗ್ದಾಳಿ
- ಹಿಂದುಳಿತ ಜಾತಿಗಳ ಸಮಾವೇಶ ಮಾಡಿ ನನ್ನನ್ನು ಟಾರ್ಗೆಟ್ ಮಾಡುತ್ತಾರೆ
- ಬಿಜೆಪಿಗೆ ನನ್ನ ಕಂಡರೆ ಎಷ್ಟುಭಯ ಅಂತ ಗೊತ್ತಾಗುತ್ತೆ
ಬೆಂಗಳೂರು (ಅ.2) : ‘ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಾ ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ‘ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಯಾವ ಸರ್ಕಾರ ಎಷ್ಟುಎಷ್ಟುಕೆಲಸ ಮಾಡಿದೆ ಎಂಬ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬನ್ನಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಬಗ್ಗೆ ಭಯ ಶುರುವಾಗಿದೆ: ಶ್ರೀರಾಮುಲು
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಹಿಂದುಳಿದ ಜಾತಿಗಳ ಸಮಾವೇಶ ಮಾಡಿ ನನ್ನನ್ನು ಟಾರ್ಗೆಟ್ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿಗೆ ನನ್ನ ಕಂಡರೆ ಎಷ್ಟುಭಯ ಎಂಬುದು ಇದರಿಂದ ಅರ್ಥವಾಗುತ್ತದೆ. ಹಿಂದುಳಿದ ವರ್ಗಗಳ ಕುರಿತು ಮೊಸಳೆ ಕಣ್ಣೀರು ಹಾಕುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಎಂದು ಹೇಳಲಿ, ನಮ್ಮ ಸರ್ಕಾರ ಐದು ವರ್ಷ ಅವಧಿಯಲ್ಲಿ ಯಾವೆಲ್ಲಾ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ಹೇಳುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬನ್ನಿ’ ಎಂದು ಆಹ್ವಾನಿಸಿದರು.
‘ಈ ಹಿಂದೆ ಹಾನಗಲ್ ಉಪ ಚುನಾವಣೆಯಲ್ಲೂ ಇದೇ ರೀತಿ ಸವಾಲು ಹಾಕಿದ್ದೆ. ಆದರೆ, ಇವತ್ತಿನವರೆಗೆ ಅವರು ಬರಲು ತಯಾರಾಗಿಲ್ಲ. ರಾಜ್ಯ ಸರ್ಕಾರ ಜನಗಳಿಗೆ ಸುಳ್ಳು ಹೇಳುವುದನ್ನು ಬಿಡಬೇಕು’ ಎಂದರು.
‘ಹಿಂದುಳಿದ ವರ್ಗಗಳ ಹಲವು ಯೋಜನೆಗಳನ್ನು ಬಿಜೆಪಿ ನಿಲ್ಲಿಸಿದೆ’:
‘ಕಳೆದ ಎರಡು ವರ್ಷಗಳಿಂದ ಹಿಂದುಳಿದ ಜಾತಿ ಮತ್ತು ದಲಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಅರಿವು ಯೋಜನೆ, ಅನುಗ್ರಹ ಯೋಜನೆ, ವಿದ್ಯಾಸಿರಿ ಯೋಜನೆ, ದೇವರಾಜ ಅರಸು ಆಶ್ರಯ ಯೋಜನೆ ಸೇರಿದಂತೆ ಕಾಂಗ್ರೆಸ್ ಸರ್ಕಾರ ತಂದಿದ್ದ ಹಲವು ಹಿಂದುಳಿದ ವರ್ಗಗಳ ಯೋಜನೆಯನ್ನು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ನಿಲ್ಲಿಸಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮ, ಮಡಿವಾಳ ಅಭಿವೃದ್ಧಿ ನಿಗಮಕ್ಕೆ ನಯಾಪೈಸೆ ಅನುದಾನ ನೀಡಿಲ್ಲ. ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ 11 ಅಭಿವೃದ್ಧಿ ನಿಗಮಗಳ ಅನುದಾನ ಕಡಿಮೆ ಮಾಡಿದ್ದಾರೆ. ಈ ರೀತಿ ಹಿಂದುಳಿದ ಜಾತಿಗಳಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿ ಆದ ಅನ್ಯಾಯ ಬೇರೆ ಯಾವ ಸರ್ಕಾರದಿಂದಲೂ ಆಗಿಲ್ಲ’ ಎಂದು ತಿರುಗೇಟು ನೀಡಿದರು.
‘ಕುರುಬರ ಬಗ್ಗೆ ಪ್ರೀತಿ ಇದ್ದರೆ ಈಶ್ವರಪ್ಪರನ್ನು ಸಿಎಂ ಮಾಡಿ’
‘ಸಿದ್ದರಾಮಯ್ಯನವರ ಅವಧಿಯಲ್ಲಿ ಕುರುಬರು ಮಂತ್ರಿಯಾಗಿರಲಿಲ್ಲ’ ಎಂದು ಬಿಜೆಪಿಯವರು ಹೇಳುತ್ತಾರೆ. ಎಚ್.ಎಂ ರೇವಣ್ಣ , ಎಚ್.ವೈ. ಮೇಟಿ, ಎಂಟಿಬಿ ನಾಗರಾಜ್ ಸಚಿವರಾಗಿರಲಿಲ್ಲವಾ? ಪ್ರಮೋದ್ ಮಧ್ವರಾಜ್, ವಿಜಯ… ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ, ಚಿಂಚನಸೂರು, ಪುಟ್ಟರಂಗಶೆಟ್ಟಿಇವರೆಲ್ಲಾ ಯಾವ ಜಾತಿಯವರು? ಹಿಂದುಳಿದವರಲ್ವಾ? ಕುರುಬರ ಬಗ್ಗೆ ತುಂಬಾ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಅಥವಾ ಇನ್ಯಾವುದಾರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ’ ಎಂದು ಸವಾಲು ಹಾಕಿದರು.
ಕಟೀಲ್ ಉಪ್ಪಿನಕಾಯಿ ನೆಕ್ತಿದ್ದಾರಾ?: ಸಿದ್ದು
‘ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇವೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ… ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಟೀಲ… ಒಬ್ಬ ಜೋಕರ್. ಅವನ ಬಗ್ಗೆ ಹೆಚ್ಚು ಮಾತನಾಡೋದಿಲ್ಲ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಲಿ. ನನ್ನ ಬಗ್ಗೆ ದಾಖಲೆಗಳು ಇದ್ದರೆ ಇಟ್ಟುಕೊಂಡು ಉಪ್ಪಿನಕಾಯಿ ಹಾಕಿಕೊಂಡು ನೆಕ್ಕುತ್ತಿದ್ದಾರಾ?’ ಎಂದು ವ್ಯಂಗ್ಯವಾಡಿದರು.
ಕಟೀಲ್ ಜೋಕರ್, ಯಾವುದೇ ಹೋರಾಟ ಮಾಡಿಲ್ಲ: ಸಿದ್ದರಾಮಯ್ಯ
ಪ್ರಚಾರಕ್ಕೆ ಯೋಜನೆ ಘೋಷಣೆ:
‘ಕಲಬುರಗಿ ಸಮಾವೇಶದಲ್ಲಿ ಬಸವರಾಜ ಬೊಮ್ಮಾಯಿ ಕುರುಬರಿಗೆಂದು ಘೋಷಿಸಿರುವ ಕುರಿ ಘಟಕ ನಿರ್ಮಾಣಕ್ಕೆ 1.75 ಲಕ್ಷ ರು. ನೀಡುವ ಯೋಜನೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಶೇ.50 ಹಣವನ್ನು ಎನ್.ಸಿ.ಡಿ.ಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಶೇ.25ರಷ್ಟುಸರ್ಕಾರದ ಸಬ್ಸಿಡಿ ಮತ್ತು ಉಳಿದ ಶೇ.25ರಷ್ಟುಹಣವನ್ನು ಫಲಾನುಭವಿ ಹಾಕಬೇಕು. ಭಾಷಣದಲ್ಲಿ ಸುಳ್ಳು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಆದೇಶವನ್ನು ಭಾಷಣ ಮಾಡಿದ ದಿನವೇ ಸಿದ್ಧಪಡಿಸಿಕೊಂಡು ಹೋಗಿದ್ದು, ಸಚಿವ ಸಂಪುಟ ಸಭೆಯ ಮುಂದೆ ಕೂಡ ಪ್ರಸ್ತಾಪಿಸಿಲ್ಲ. ಶೇ.25ರಷ್ಟುಹಣವನ್ನು ಕುರಿಗಾರ ಎಲ್ಲಿಂದ ಹಾಕಬೇಕು? ಇತರೆ ಸಮುದಾಯದ ಕುರಿಗಾರರು ಏನು ಮಾಡಬೇಕು? ಈ ಕಾರ್ಯಕ್ರಮ ಅನುಷ್ಠಾನವೇ ಆಗಲ್ಲ. ಸುಮ್ಮನೆ ದೊಡ್ಡದಾಗಿ ಪ್ರಚಾರ ಮಾಡಲಾಗಿದೆ’ ಎಂದು ತಿಳಿಸಿದರು.