Asianet Suvarna News Asianet Suvarna News

ಮೀಸಲಾತಿಗಾಗಿ ಜನಜಾಗೃತಿ ಅತ್ಯವಶ್ಯಕ; ವಚನಾನಂದ ಶ್ರೀ

  • ಮೀಸಲಾತಿಗಾಗಿ ಜನಜಾಗೃತಿ ಅವಶ್ಯ
  •  ಶ್ರೀಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀ
Public awareness is essential for reservation says Vachanananda Shri rav
Author
First Published Oct 30, 2022, 10:48 AM IST

ಮುಂಡ​ರಗಿ (ಅ.30) : ನಮ್ಮ ಮಕ್ಕಳು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಮಗೆ ಮೀಸಲಾತಿ ಬೇಕೆ ಬೇಕು. ಮೀಸಲಾತಿ ನಮ್ಮ ಹಕ್ಕು. ಆದ್ದರಿಂದ ಪಂಚಮಸಾಲಿ ಸಮಾಜ ಬಾಂಧವರು 2ಎ ಮೀಸಲಾತಿ ಪಡೆದುಕೊಳ್ಳುವುದು ಅವಶ್ಯವಾಗಿದ್ದು, ಮೀಸಲಾತಿ ಜನಜಾಗೃತಿಗಾಗಿ ಶ್ರೀಗಳ ನಡೆ ಹಳ್ಳಿಕಡೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹರಿಹರ ಪಂಚಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಪಂಚಮಸಾಲಿಗೆ ಶೀಘ್ರ 2ಎ ಮೀಸಲು: ವಚನಾನಂದ ಶ್ರೀ

ಅವರು ಶನಿವಾರ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಾಗಪ್ಪ ಮಜ್ಜಗಿ ಅವರ ಮನೆಯಿಂದ 2ಎ ಮೀಸಲಾತಿಗಾಗಿ ವಚನಾನಂದ ಶ್ರೀಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಪ್ರಾರಂಭಿಸಿ ಮಾತನಾಡಿದರು.

ಇಂದು ಎಲ್ಲ ಉದ್ಯೋಗ ಅವಕಾಶಗಳಿಗೂ ಹೆಚ್ಚು ಬೇಡಿಕೆಗಳಿದ್ದು, ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಸೌಲಭ್ಯಗಳು ದೊರೆಯುವುದು ಅತ್ಯಂತ ವಿರಳ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಸರ್ಕಾರ 2ಎ ಮೀಸಲಾತಿ ನೀಡಿದರೆ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ಲಿಂಗಾಯತ ಒಳಪಂಗಡಗಳಲ್ಲಿ ಕೆಲವರು ಈ 2ಎ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿದ್ದು, ಅದು ಇದೀಗ ಒಂದು ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಈಗಾಗಲೇ ಕುಲಶಾಸ್ತ್ರ ಅಧ್ಯಯನ ಪ್ರಕ್ರಿಯೆ ಪ್ರಾರಂಭಿಸಿದ್ದು, ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ. ಹೀಗಾಗಿ ಸರ್ಕಾರ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸುವುದು ಶತಸಿದ್ಧ. ಆದರಿಂದ ಮೀಸಲಾತಿ ಬರುವ ಪೂರ್ವದಲ್ಲಿ 3ಬಿ ಯಲ್ಲಿರುವ ಎಲ್ಲ ಪಂಚಮಸಾಲಿಗಳು ಜಾತಿ ಪ್ರಮಾಣ ಪತ್ರದ ಖಾಲಂ ನಂಬರ್‌ 19ರಲ್ಲಿ ಪಂಚಮಸಾಲಿ ಹಾಗೂ ಉಪಜಾತಿ ಖಾಲಂ ನಲ್ಲಿ ಪಂಚಮಸಾಲಿ ಎಂದು ಬರೆಸಬೇಕು. ಈಗಿನಿಂದಲೇ ಪಂಚಮಸಾಲಿ ಎಂದು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಅಂದಾಗ ಮುಂದೆ 2ಎ ಮೀಸಲಾತಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ.

ಇಂತಹ ಅನೇಕ ವಿಷಯಗಳನ್ನು ಪಂಚಮಸಾಲಿ ಸಮಾಜ ಬಾಂಧವರಿಗೆ ತಿಳಿಸುವುದಕ್ಕಾಗಿ ಶ್ರೀಗಳ ನಡೆ ಹಳ್ಳಿಕಡೆ ಎನ್ನುವ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮುಂದೆ ಜಿಲ್ಲೆಯ ಎಲ್ಲ ತಾಲೂಕುಗಳ ಭೇಟಿ ಮುಗಿದ ನಂತರ ಜಿಲ್ಲೆಯಲ್ಲಿಯೇ ಒಂದು ಕಡೆಗೆ ಬೃಹತ್‌ ಸಮಾವೇಶ ನಡೆಸುವ ಮೂಲಕ ನಮ್ಮ ಸಮಾಜಕ್ಕೆ ಮೀಸಲಾತಿ ಏಕೆ ಕೊಡಬೇಕು?, ಕೊಟ್ಟರೆ ಸರ್ಕಾರಕ್ಕೆ ಏನು ಲಾಭ?, ಪಡೆದುಕೊಂಡರೆ ನಮ್ಮ ಸಮಾಜಕ್ಕೆ ಏನು ಲಾಭ? ಎನ್ನುವ ಕುರಿತು ಸರ್ಕಾರಕ್ಕೆ ನಾವು ತಿಳಿಸಬೇಕಾಗಿದೆ. ಅದನ್ನು ವಿವರವಾಗಿ ತಿಳಿಸುವುದಕ್ಕಾಗಿಯೇ ಸಮಾವೇಶ ಆಯೋಜಿಸುವುದಾಗಿ ತಿಳಿಸಿದರು.

ಸಮಾಜದ ಯುವ ಮುಖಂಡ ರಜನಿಕಾಂತ ದೇಸಾಯಿ, ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್‌.ವಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಇಂದು ನಿನ್ನೆಯದಲ್ಲ. ಅದು ಇದೀಗ ಅಂತಿಮ ಹಂತಕ್ಕೆ ಬಂದು ತಲುಪುತ್ತಿದೆ. ಮೀಸಲಾತಿ ಕುರಿತು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಶ್ರೀಗಳ ನಡೆ ಹಳ್ಳಿಕಡೆ ಎನ್ನುವ ಕಾರ್ಯಕ್ರಮದ ಮೂಲಕ ವಚನಾಂದ ಶ್ರೀಗಳೇ ಭಕ್ತರ ಮನೆಗೆ ಆಗಮಿಸಿ ಮೀಸಲಾತಿ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಪಂಚಮಸಾಲಿ ಸಮಾಜ ಬಾಂಧವರಾದ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡುವ ಮೂಲಕ ಶ್ರೀಗಳ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

ಪಂಚಮಸಾಲಿ ಸಮಾಜದ ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮುಧೋಳ, ಯುವ ಮುಖಂಡ ವೀರಣ್ಣ ಮಜ್ಜಗಿ ಮಾತನಾಡಿ, 2ಎ ಮೀಸಲಾತಿಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ಒಗ್ಗಟ್ಟಿನಿಂದ ಹೋರಾಡುವುದು ಅವಶ್ಯವಾಗಿದೆ. ಹರಿಹರ ಪೀಠದ ಪಂಚಮಸಾಲಿ ಶ್ರೀಗಳು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ತಾಲೂಕಿನಲ್ಲಿ ಶನಿವಾರದಿಂದ 3 ದಿನಗಳ ಕಾಲ ವಿವಿಧ ಗ್ರಾಮಕ್ಕೆ ಭೇಟಿ ನೀಡಿ ಸಮಾಜ ಬಾಂಧವರಿಗೆ 2ಎ ಮೀಸಲಾತಿ ಕುರಿತು ಜನಜಾಗೃತಿ ಮೂಡಿಸಲಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

Davanagere: ಪ್ರಾಣಬಿಟ್ಟೇವು ಮೀಸಲಾತಿ‌ ಬಿಡೆವೆಂದ ವಚನಾನಂದ ಸ್ವಾಮೀಜಿ

ಈ ಸಂದರ್ಭದಲ್ಲಿ ಹಿರಿಯರಾದ ನಾಗಪ್ಪ ಮಜ್ಜಗಿ, ಅಶೋಕ ಹಂದ್ರಾಳ, ಸೋಮಶೇಖ ಹಕ್ಕಂಡಿ, ಸಿದ್ದಲಿಂಗಪ್ಪ ದೇಸಾಯಿ, ಮಹೇಶ ಜಂತ್ಲಿ, ನಾಗೇಶ ಹುಬ್ಬಳ್ಳಿ, ರವೀಂದ್ರಗೌಡ ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ, ಮೋಹನ್‌ ದೇಸಾಯಿ, ದೇವಪ್ಪ ಇಟಗಿ, ಮಹಾದೇವಪ್ಪ ಗುಡ್ಲಾನೂರ, ವಿಜಯೇಂದ್ರಗೌಡ ಪಾಟೀಲ, ಈರಣ್ಣ ಬಚೇನಹಳ್ಳಿ, ನವೀನ ಪಾಟೀಲ, ಬಸಣ್ಣ ಗುಡ್ಲಾನೂರ, ಮಲ್ಲಣ್ಣ ಪ್ಯಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow Us:
Download App:
  • android
  • ios