ಲಕ್ನೋ(ಜ.26): .303 ರೈಫಲ್ ಭಾರತೀಯ ಪೊಲೀಸರ ಹೆಮ್ಮೆಯ ಪ್ರತೀಕ. ಸ್ವಾತಂತ್ರ್ಯ ಪೂರ್ವದಿಂದಲೂ ಆಂತರಿಕ ಭದ್ರತೆಗೆ ಪೊಲೀಸರು ಮೆಚ್ಚಿಕೊಂಡಿದ್ದ .303 ರೈಫಲ್, ಬ್ರಿಟಿಷ್ ಭಾರತದ ಕೊಡುಗೆ.

ಈ ಐತಿಹಾಸಿಕ .303 ರೈಫಲ್’ಗೆ ಇದೀಗ ಉತ್ತರಪ್ರದೇಶದ ಪೊಲೀಸ್ ಇಲಾಖೆ ಗುಡ್ ಬೈ ಹೇಳಿದೆ. ಈ ಮೂಲಕ ಹಲವಾರು ದಶಕಗಳಿಂದ ಪೊಲೀಸರ ಹೆಗಲ ಮೇಲೆ ರಾರಾಜಿಸುತ್ತಿದ್ದ .303 ರೈಫಲ್ ಇದೀಗ ಇತಿಹಾಸ ಸೇರಿದೆ. 

ಹೌದು, 71ನೇ ಗಣರಾಜ್ಯೋತ್ಸವದ ಅಂಗವಾಗಿ .303 ರೈಫಲ್’ಗಳಿಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಉತ್ತರಪ್ರದೇಶ ಪೊಲೀಸ್ ಇಲಾಖೆ ಬಂದಿದೆ.

ಆಧುನಿಕ ಭಾರತದ ಭದ್ರತೆಗೆ .303 ರೈಫಲ್ ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಬಂದಿರುವ ಯುಪಿ ಪೊಲೀಸ್ ಇಲಾಖೆ, ಇದರ ಬದಲು ಆಧುನಿಕ ಬಂದೂಕುಗಳ ದಾಸ್ತಾನಿನ ಮೊರೆ ಹೋಗಿದೆ.

ಚೀನಾ ಗಡಿಯ ಯೋಧರಿಗೆ 73000 ಅಮೆರಿಕನ್‌ ರೈಫಲ್‌

ಈ ಕುರಿತು ಮಾಹಿತಿ ನೀಡಿರುವ ಯುಪಿಯ ಮಾಜಿ ಪೊಲೀಸ್ ಮಹಾ ನಿರ್ದೇಶಕ ಬ್ರಿಜ್ ಲಾಲ್, ಐತಿಹಾಸಿಕ .303 ರೈಫಲ್’ಗಳ ಬಳಕೆ ನಿಲ್ಲಿಸಿರುವುದು ಖೇದಕರವಾದರೂ, ಇಲಾಖೆಯ ಆಧುನೀಕರಣ ಪ್ರಕ್ರಿಯೆಗೆ ಇದು ಅನಿವಾರ್ಯ ನಿರ್ಧಾರ ಎಂದು ಹೇಳಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ .303 ರೈಫಲ್’ಗಳನ್ನು ಬಳಸಿ ಹಲವು ಅಪಾರಾಧ ಪ್ರಕರಣಗಳನ್ನು ಮಟ್ಟ ಹಾಕಿದ್ದರ ಕುರಿತು ಮಾಜಿ ಡಿಜಿಪಿ ಬ್ರಿಜ್ ಲಾಲ್ ಮೆಲುಕು ಹಾಕಿದ್ದಾರೆ.

.303 ಬೋಲ್ಟ್ ಆಕ್ಷನ್ ಪುನರಾವರ್ತಿತ ವ್ಯವಸ್ಥೆಯ ರೈಫಲ್ ಆಗಿದ್ದು, ಒಂದು ಬಾರಿ ಗುಂಡನ್ನು ಹೊಡೆದು ಬಳಿಕ ಮತ್ತೆ ಬೋಲ್ಟ್’ನ್ನು ಹಿಂದಕ್ಕೆ ಎಳೆದು ಮತ್ತೊಂದು ಗುಂಡನ್ನು ತುಂಬಿ ಹೊಡೆಯಬೇಕು.

ಒಟ್ಟು 5 ಕೆಜಿ ತೂಕದ .303 ರೈಫಲ್ ಉತ್ತರಪ್ರದೇಶವೂ ಸೇರಿದಂತೆ ಭಾರತೀಯ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿದ್ದಂತೂ ಸುಳ್ಳಲ್ಲ.

ಮೋದಿ ಕೈಯಲ್ಲಿ ಅಸ್ಸಾಲ್ಟ್ ರೈಫಲ್: ಸಿಕ್ಕ ಬಲಕ್ಕೆ ಸೈನಿಕರಿಗೆ ಖುಷಿಯಾಗಿದೆ ಫುಲ್!

1945ರಲ್ಲಿ ಅಂದಿನ ಬ್ರಿಟಷ್ ಆಡಳಿತ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ .303 ರೈಫಲ್’ಗಳನ್ನು ಪರಿಚಯಿಸಿತು. ಇದಕ್ಕೂ ಮೊದಲು ಈ ರೈಫಲ್’ಗಳನ್ನು ಕೇವಲ ಬ್ರಿಟಿಷ್ ಭಾರತದ ಸೇನೆಯಲ್ಲಿ ಮಾತ್ರ ಬಳಸಲಾಗುತ್ತಿತ್ತು.

ಬಳಿಕ ಹಂತ ಹಂತವಾಗಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗೆ .303 ರೈಫಲ್’ಗಳನ್ನು ಪರಿಚಯಿಸಲಾಯಿತು.