ನವದೆಹಲಿ (ಫೆ. 03): ಪದೇಪದೇ ಕ್ಯಾತೆ ತೆಗೆಯುವ ನೆರೆ ದೇಶ ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಭೂಸೇನೆಯ ಪದಾತಿದಳಕ್ಕೆ ಹೆಚ್ಚಿನ ಶಕ್ತಿ ತುಂಬಲು ಮುಂದಾಗಿರುವ ಕೇಂದ್ರ ಸರ್ಕಾರ, ಅಮೆರಿಕದಿಂದ ಕ್ಷಿಪ್ರಗತಿಯಲ್ಲಿ 73 ಸಾವಿರ ಅಸಾಲ್ಟ್‌ ರೈಫಲ್‌ಗಳನ್ನು ಖರೀದಿಸಲು ಉದ್ದೇಶಿಸಿದೆ.

ಈ ಖರೀದಿ ಪ್ರಸ್ತಾವಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅನುಮತಿ ನೀಡಿದ್ದಾರೆ. ಒಂದು ವಾರದಲ್ಲಿ ಒಪ್ಪಂದ ಅಂತಿಮಗೊಳ್ಳಲಿದೆ. ಅದಾದ ಒಂದು ವರ್ಷದಲ್ಲಿ 73 ಸಾವಿರ ರೈಫಲ್‌ಗಳು ಸೇನೆಗೆ ಹಸ್ತಾಂತರವಾಗಲಿವೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಪದಾತಿದಳದ ಯೋಧರು ಭಾರತೀಯ ಶಸ್ತ್ರಾಸ್ತ್ರ ಕಾರ್ಖಾನೆಗಳು ತಯಾರಿಸಿರುವ ಇನ್ಸಾಸ್‌ ರೈಫಲ್‌ಗಳನ್ನು ಬಳಸುತ್ತಿದ್ದಾರೆ. ಅದರ ಬದಲಿಗೆ ಅಮೆರಿಕದ ‘ಸಿಗ್‌ ಸಾವರ್‌’ ರೈಫಲ್‌ಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.

ಅಮೆರಿಕದಲ್ಲಿ ತಯಾರಾಗುವ ಈ ರೈಫಲ್‌ಗಳನ್ನು ಅಮೆರಿಕ ಮಾತ್ರವೇ ಅಲ್ಲದೆ, ಹಲವು ಐರೋಪ್ಯ ದೇಶಗಳು ಕೂಡ ಉಪಯೋಗಿಸುತ್ತಿವೆ. ಭಾರತ- ಚೀನಾ ನಡುವಣ 3600 ಕಿ.ಮೀ. ಉದ್ದದ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಈ ರೈಫಲ್‌ಗಳನ್ನು ಒದಗಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.