ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ 18 ವರ್ಷದ ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿನಿ ಪ್ರೀತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಧ್ಯರಾತ್ರಿ ಹಾಸ್ಟೆಲ್ ಗೋಡೆ ಹಾರಿ ಹೊರಹೋಗಿದ್ದ ಈಕೆಯ ಕೊಲೆಗೆ ಕಾಲೇಜು ಪ್ರಾಂಶುಪಾಲ ಮತ್ತು ಅವರ ಮಗನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಫಿರೋಜಾಬಾದ್ (ಅ.30): ಉತ್ತರ ಪ್ರದೇಶ ಪೊಲೀಸ್ ವ್ಯವಸ್ಥೆ ಕಠಿಣವಾಗಿದ್ದರೂ ಕ್ರಿಮಿನಲ್ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದೀಗ ಮತ್ತೊಂದು ಶಾಕಿಂಗ್ ಘಟನೆ ಫಿರೋಜಾಬಾದ್ನಲ್ಲಿ ಬೆಳಕಿಗೆ ಬಂದಿದೆ. 18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಅನುಮಾನಸ್ಪಾದ ರೀತಿ ಶವವಾಗಿ ಪತ್ತೆಯಾಗಿದ್ದು, ಕಾಲೇಜು ಪ್ರಾಂಶುಪಾಲ ಮತ್ತು ಅವರ ಮಗನ ವಿರುದ್ಧವೇ ಕೊಂದ ಆರೋಪ ಕೇಳಿಬಂದಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಹೇಳುವ ಪ್ರಕಾರ, ಮೃತ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸುವವರಿಗೆ ಶವ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ಪೊಲೀಸ್ ಅಧಿಕಾರಿಗಳ ಮನವೊಲಿಕೆ ನಂತರ ಕುಟುಂಬಸ್ತರು ಸ್ವೀಕರಿಸಿದರು ಎಂದು ತಿಳಿಸಿದ್ದಾರೆ.
ಪ್ರಥಮ ವರ್ಷದ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ
ಮೂಲತಃ ಮೈನ್ಪುರಿ ಜಿಲ್ಲೆ ನಿವಾಸಿಯಾದ ಮೃತ ವಿದ್ಯಾರ್ಥಿನಿ ಪ್ರೀತಿ ಫಿರೋಜಾಬಾದ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ(GNM) ಓದುತ್ತಿದ್ದರು. ಬುಧವಾರ ಬೆಳಗ್ಗೆ ಆಕೆಯ ಹಾಸ್ಟೆಲ್ನ ಗೆಳತಿಯರು ಟಿಫೀನ್ ಮಾಡಲು ಹೊರಗೆ ಹೋಗಿದ್ದಾಗ ಪ್ರೀತಿ ಕಾಣೆಯಾಗಿದ್ದಳು.ಕೋಣೆಯಲ್ಲಿ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ಹಾಸ್ಟೆಲ್ನಲ್ಲಿ ಅಳಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮೃತ ವಿದ್ಯಾರ್ಥಿನಿ ಪ್ರೀತಿ ಬೆಳಗಿನ ಜಾವ 2.30 ರ ಸುಮಾರಿಗೆ ಆವರಣ ಗೋಡೆಯನ್ನು ಹತ್ತಿರುವುದು ಕಂಡುಬಂದಿದೆ. ನಂತರ ಒಂಟಿಯಾಗಿ ಕಾಲೇಜು ಆವರಣದಿಂದ ಹೊರಬರುತ್ತಿರುವುದು ಸಹ ಸೆರೆಯಾಗಿದೆ ಪೊಲೀಸ್ ಅಧಿಕಾರಿ ತ್ರಿಪಾಠಿ ಹೇಳಿದ್ದಾರೆ.
ಮೌಡಾ ಕನೆಟಾ ಗ್ರಾಮದ ಬಳಿ ಶವವಾಗಿ ಪತ್ತೆ!
ಅದರ ನಂತರ ಮೌಡಾ ಕನೆಟಾ ಗ್ರಾಮದ ಬಳಿ ಮಹಿಳೆಯೊಬ್ಬರ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ಕಾಣೆಯಾಗಿದ್ದ ವಿದ್ಯಾರ್ಥಿನಿ ಪ್ರೀತಿ ಅವರದ್ದು ಎಂದು ಗುರುತಿಸಲಾಗಿದೆ. ಹಾಗಾದ್ರೆ ಪ್ರೀತಿಯನ್ನು ಕೊಂದಿದ್ದು ಯಾರು? ಯಾಕಾಗಿ ಹಾಸ್ಟೆಲ್ನಿಂದ ಹೊರಹೋಗಿದ್ದು? ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಾಂಶುಪಾಲ ಮತ್ತು ಮಗನ ಮೇಲೆಯೇ ಕುಟುಂಬಸ್ಥರ ಆರೋಪ
ನನ್ನ ತಂಗಿಯನ್ನು ಕೊಂದಿದ್ದು ಕಾಲೇಜು ಪ್ರಾಂಶುಪಾಲ ಸುರೇಶ ದಕ್ಷ ಮತ್ತು ಅವರ ಮಗ ಯಶ್ ಎಂದು ಪ್ರೀತಿ ಸಹೋದರ ರೋಹಿತ್ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಸಂಬಂಧ ಬಿಎನ್ಎಸ್ ಸೆಕ್ಷನ್ 103(1)ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






