ಮರ ಕಡಿಯಲು ಹೋದವರು ಪೂಜೆ ಮಾಡ್ತಾರೆ!: ಪರಿಸರವಾದಿಯ ಐಡಿಯಾ ಫುಲ್ ಕ್ಲಿಕ್!
ಮರಗಳನ್ನು ಉಳಿಸಲು ವಿನೂತನ ಅಭಿಯಾನ| ಈ ಊರಿನಲ್ಲಿ ದೇವರೇ ಮರಗಳನ್ನು ರಕ್ಷಿಸ್ತಾರೆ| ಮರ ಕಡಿಯಲು ಹೋದವರು ಪೂಜೆ ಮಾಡ್ತಾರೆ| ಪರಿಸರವಾದಿಯ ಐಡಿಯಾ ಫುಲ್ ಕ್ಲಿಕ್
ಲಕ್ನೋ[ಡಿ.16]: ಕಳೆದ ಹಲವಾರು ದಶಕಗಳಿಂದ ಪರಿಸರವಾದಿಗಳು ವಿಭಿನ್ನ ಚಳುವಳಿಗಳ ಮೂಲಕ ಜನರು ಮರ ಕಡಿಯದಂತೆ ತಡೆದಿದ್ದಾರೆ. ಇವುಗಳಲ್ಲಿ ಅಪ್ಪಿಕೋ ಚಳುವಳಿ ಬಹಳಷ್ಟು ಫೇಮಸ್ ಆಗಿತ್ತು. ಆದರೀಗ ಉತ್ತರ ಪ್ರದೇಶದ ಗೊಂಡಾದಲ್ಲಿ ಪರಿಸರವಾದಿಯೊಬ್ಬ ಕಾಡಿನಲ್ಲಿರುವ ಮರ ಕಡಿಯುವುದನ್ನು ನಿಷೇಧಿಸಲು 'ದೇವರ'ನ್ನೇ ಬಳಸಿಕೊಂಡಿದ್ದಾರೆ. ತನ್ನ ಈ ವಿನೂತನ ಐಡಿಯಾದಿಂದ ಪರಾಗದತ್ತ್ ಮಿಶ್ರಾ ಈವರೆಗೂ ಸಾವಿರಕ್ಕೂ ಅಧಿಕ ಮರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಿಶ್ರಾ 'ಅಭಿವೃದ್ಧಿ, ರಸ್ತೆ ಅಗಲೀಕರಣ ಹೆಸರಲ್ಲಿ ಅರಣ್ಯವನ್ನು ನಾಶಪಡಿಸಲಾಗುತ್ತಿದೆ, ಮರಗಳ ಮಾರಣಹೋಮ ನಡೆಯುತ್ತಿದೆ. ಪರಿಸರ ಸಮತೋಲನ ಹಾಗೂ ಹವಾಮಾನ ಬದಲಾವಣೆ ಕುರಿತು ಗ್ರಾಮಸ್ಥರಿಗೆ ಏನೂ ತಿಳಿದಿಲ್ಲ. ಆದರೀಗ ಮರದ ಮೇಲೆ ಬಿಡಿಸಲಾದ ದೇವ, ದೇವತೆಯರ ಚಿತ್ರ ಅವರನ್ನು ನಂಬುವ ಜನರನ್ನು ಮರ ಕಡಿಯದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ನಾನು ದೇವತೆಯರನ್ನೇ ಮರಗಳ ರಕ್ಷಕರನ್ನಾಗಿ ಮಾಡಿದ್ದೇನೆ’ ಎಂದು ತಮ್ಮ ಈ ವಿನೂತನ ಪ್ರಯೋಗದ ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅಡಿಕೆ ತೋಟದಲ್ಲೂ ಬತ್ತದ ಕೃಷಿ; ಹೊಸ ಪ್ರಯೋಗಕ್ಕೆ ಕೈ ಹಾಕಿದ ರೈತ!
ಹೌದು ದೇವದತ್ತ್ ಮಿಶ್ರಾ ಮರಗಳ ಕಾಂಡದ ಮೇಲೆ ನೈಸರ್ಗಿಕವಾಗಿ ತಯಾರಿಸಿದ ಬಣ್ಣ ಅಥವಾ ಕುಂಕುಮ ಹಾಗೂ ಅರಶಿಣದಿಂದ ದೇವ, ದೇವತೆಯರ ಚಿತ್ರಗಳನ್ನು ಬಿಡಿಸುತ್ತಾರೆ. ಇದನ್ನು ನೋಡಿದ ಜನರು ಮರಗಳನ್ನು ಕಡಿಯುವ ಯೋಚನೆ ಬಿಟ್ಟು, ಮರವನ್ನು ಪೂಜಿಸಲಾರಂಭಿಸುತ್ತಾರೆ.
ಮಿಶ್ರಾರವರು ಯಾವತ್ತೂ ತನ್ನೊಂದಿಗೆ ಪೇಂಟ್, ಬ್ರಶ್ ಹಾಗೂ ಚಿತ್ರ ಬಿಡಿಸಲು ಬೇಕಾದ ಇನ್ನಿತರ ಸಾಮಾಗ್ರಿಗಳನ್ನು ಇಟ್ಟುಕೊಂಡೇ ಓಡಾಡುತ್ತಾರೆ. ಸಮಯ ಸಿಕ್ಕಾಗೆಲ್ಲಾ ರಸ್ತೆ ಬದಿಯ ಮರಗಳ ಮೇಲೆ ಚಿತ್ರಗಳನ್ನು ಬಿಡಿಸಿ ಅವುಗಳನ್ನು ಅರಶಿಣ ಹಾಗೂ ಕುಂಕುಮದಿಂದ ಸಿಂಗರಿಸುತ್ತಾರೆ.
ಒಂದು ಮರವನ್ನು ಕೆತ್ತಿ ಚಿತ್ರ ಬಿಡಿಸಲು ಸುಮಾರು 200 ರೂ. ತಗುಲುತ್ತದೆ. ಮಿಶ್ರಾ ಖುದ್ದು ತಾನು ದುಡಿದ ಹಣದಿಂದ ಇದನ್ನು ನಿರ್ವಹಿಸುತ್ತಾರೆ.
ರಾಜ್ಯದ ಕ್ರಮ ಎತ್ತಿ ಹಿಡಿದ ಸುಪ್ರೀಂ: ಬಂಡೀಪುರ ಹೆದ್ದಾರಿ ಬಂದ್, 5 ಬದಲಿ ಮಾರ್ಗ!
ಮರಗಳ ಮಾರಣಹೋಮದ ಕುರಿತು ಪ್ರತಿಕ್ರಿಯಿಸಿದ ಮಿಶ್ರಾ 'ಕಾಡುಗಳು ಅಳಿವಿನಂಚಿನಲ್ಲಿದೆ. ಹೀಗಿದ್ದರೂ ಆಡಳಿತಾಧಿಕಾರಿಗಳು ಅಂಧರಂತೆ ಮರಗಳನ್ನು ಕಡಿಯುತ್ತಿದ್ದಾರೆ. ಆದರೆ ನನ್ನ ಉಪಾಯ ಫಲಿಸಿದ್ದು, ಈಗ ನಮಗೆ ಪ್ರಕೃತಿ ಮಾತೆಯ ಆಶೀರ್ವಾದ ಸಿಕ್ಕಿದೆ. ನಾನು ಪಂಚಾಯತಿ ಮುಖ್ಯಸ್ಥನಾದ ಬಳಿಕ ನೆಟ್ಟಿದ್ದ ಬಹುತೇಕ ಎಲ್ಲಾ ಗಿಡಗಳನ್ನು ಕಡಿಯಲಾಗಿತ್ತು. ಅದು ಬಹುದೊಡ್ಡ ನಷ್ಟ. ಆದರೀಗ 'ದೇವರ' ಕೃಪೆ ನಮಗೆ ಸಹಾಯ ಮಾಡುತ್ತಿದೆ' ಎಂದಿದ್ದಾರೆ.
'ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾವು 8 ಸಾವಿರ ಮಂದಿ ಇದ್ದೇವೆ. ಆದರೆ ಇಲ್ಲಿರುವ ಮರಗಳ ಸಂಖ್ಯೆ 10 ಸಾವಿರ. ಆದರೆ ಜನ ಅವುಗಳನ್ನು ಕಡಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ನಾವು ಬೇರೆ ಉಪಾಯವಿಲ್ಲದೇ ಈ ಅಭಿಯಾನ ಆರಂಭಿಸಿದ್ದೇವೆ' ಎಝಂದು ದೇವದತ್ತ್ ಮಿಶ್ರಾ ತಿಳಿಸಿದ್ದಾರೆ.