ರಾಜ್ಯದ ಕ್ರಮ ಎತ್ತಿ ಹಿಡಿದ ಸುಪ್ರೀಂ: ಬಂಡೀಪುರ ಹೆದ್ದಾರಿ ಬಂದ್, 5 ಬದಲಿ ಮಾರ್ಗ!
ಬಂಡೀಪುರಕ್ಕೆ 5 ಬದಲಿ ಮಾರ್ಗ| ಕರ್ನಾಟಕದ 2, ಕೇರಳದ 3 ರಸ್ತೆ ಸೂಚಿಸಿ ಸುಪ್ರೀಂಗೆ ಕೇಂದ್ರ ಅಫಿಡವಿಟ್
ನವದೆಹಲಿ[ನ.16]: ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766 (ಹಿಂದೆ 212) ಅನ್ನು ಶಾಶ್ವತವಾಗಿ ಮುಚ್ಚಿದರೆ ಅದಕ್ಕೆ ಪರ್ಯಾಯವಾಗಿ ರಾಜ್ಯ ಹೆದ್ದಾರಿ- 90, ರಾಜ್ಯ ಹೆದ್ದಾರಿ- 89, ರಾಜ್ಯ ಹೆದ್ದಾರಿ- 59 ಮತ್ತು ಪ್ರಮುಖ ಜಿಲ್ಲಾ ರಸ್ತೆಗಳಾದ 002, 001 ಅನ್ನು ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.
ಕರ್ನಾಟಕ ಸರ್ಕಾರ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿ ಸಂಚಾರವನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕದ ಕ್ರಮವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚುವ ನಿಟ್ಟಿನಲ್ಲಿ ಯೋಚನೆ ಮಾಡುವಂತೆಯೂ, ಪರ್ಯಾಯ ರಸ್ತೆಯನ್ನು ಹುಡುಕುವಂತೆಯೂ ಆ.7ರಂದು ಸೂಚಿಸಿ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಸಮಯ ನೀಡಿತ್ತು. ಅದರಂತೆ ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದ ಮುಖ್ಯ ಎಂಜಿನಿಯರ್ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಬಂಡೀಪುರ : ಮತ್ತೆ ಕೇರಳ ಪರವಾಗಿ ನಿಂತ ರಾಹುಲ್
ಶುಕ್ರವಾರ ಪ್ರಕರಣದ ವಿಚಾರಣೆ ನ್ಯಾ.ರೋಹಿಂಟನ್ ನಾರಿಮನ್ ಮತ್ತು ನ್ಯಾ.ರವೀಂದ್ರ ಭಟ್ ಅವರ ನ್ಯಾಯಪೀಠದ ಮುಂದೆ ಬಂದ ಸಂದರ್ಭದಲ್ಲಿ ಅಫಿಡವಿಟ್ ಸಲ್ಲಿಕೆಯಾಗಿರಲಿಲ್ಲ. ಇದಕ್ಕೆ ನ್ಯಾ.ನಾರಿಮನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇಂದೇ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ ಕೇಂದ್ರ ಸರ್ಕಾರ ಆ ಬಳಿಕ ಆಫಿಡವಿಟ್ ಸಲ್ಲಿಕೆ ಮಾಡಿದೆ.
ಬಂಡಿಪುರ ರಾತ್ರಿ ಸಂಚಾರ ನಿಷೇಧ ಮುಂದುವರಿಕೆ
ರಾಜ್ಯ ಸರ್ಕಾರದ್ದೇ ಜವಾಬ್ದಾರಿ:
ರಾಜ್ಯ ಹೆದ್ದಾರಿ 90, ರಾಜ್ಯ ಹೆದ್ದಾರಿ 89 ಕರ್ನಾಟಕದಲ್ಲಿದ್ದು, ರಾಜ್ಯ ಹೆದ್ದಾರಿ 59 ಮತ್ತು ಪ್ರಮುಖ ಜಿಲ್ಲಾ ರಸ್ತೆಗಳಾದ 002, 001 ಕೇರಳದಲ್ಲಿವೆ. ಕೇರಳವು ತನ್ನ ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಯನ್ನಾಗಿ ತಾಂತ್ರಿಕವಾಗಿ ಮತ್ತು ಜಾಗದ ಅಗತ್ಯಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಬೇಕು. ಈ ರಸ್ತೆಗಳನ್ನು ದ್ವಿಪಥಗೊಳಿಸಿ ರಸ್ತೆಯ ಬದಿಯಲ್ಲಿ ನಿರ್ದಿಷ್ಟಪ್ರಮಾಣದ ಜಾಗವನ್ನು ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ನಿರ್ವಹಿಸಬೇಕು. ರಾಜ್ಯ ಹೆದ್ದಾರಿಗಳ ಮಾನದಂಡವನ್ನು ಈ ರಸ್ತೆಗಳು ಪೂರೈಸಿದರೆ ಬಳಿಕ ಆ ಪರ್ಯಾಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿಗಣಿಸಲು ಚಿಂತಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಕೇರಳದ ಕೋಳಿಕ್ಕೋಡ್ ಅನ್ನು ಕರ್ನಾಟಕದ ಕೊಳ್ಳೇಗಾಲದೊಂದಿಗೆ ಬೆಸೆಯುವ 272 ಕಿ.ಮೀ.ಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಬಂಡೀಪುರ: ರಾಹುಲ್ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ!