ನವದೆಹಲಿ(ಮಾ.23): ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆ ಯೋಜನೆ ಕೆನ್‌- ಬೇಟ್ವಾಗೆ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಉತ್ತರಪ್ರದೇಶ- ಮಧ್ಯಪ್ರದೇಶ ಸರ್ಕಾರಗಳ ನಡುವೆ ಸೋಮವಾರ ಒಪ್ಪಂದವೇರ್ಪಟ್ಟಿದೆ.

ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಅವರು ನದಿ ಜೋಡಣೆ ಯೋಜನೆಗೆ ಅಂಕಿತ ಹಾಕಿದರು. ಹೆಚ್ಚುವರಿ ನೀರು ಹೊಂದಿರುವ ನದಿಗಳಿಂದ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿರುವ ನದಿಗಳಿಗೆ ನೀರು ಹರಿಸುವ ಸಲುವಾಗಿ ನದಿ ಜೋಡಣೆ ಮಾಡಬೇಕು ಎಂದು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕನಸು ಕಂಡಿದ್ದರು. ಆಗ ರೂಪುಗೊಂಡ ಯೋಜನೆಗಳಲ್ಲಿ ಕೆನ್‌- ಬೇಟ್ವಾ ಜೋಡಣೆ ಕೂಡ ಒಂದು. ಅದು ಈಗ ಸಾಕಾರವಾಗುತ್ತಿದೆ.

ಯೋಜನೆ ಏನು?:

ಮಧ್ಯಪ್ರದೇಶದಲ್ಲಿ ಕೆನ್‌ ಹಾಗೂ ಬೇಟ್ವಾ ನದಿಗಳು ಹರಿಯುತ್ತವೆ. ಈ ಪೈಕಿ ಕೆನ್‌ ನದಿಯಲ್ಲಿ ನೀರಿನ ಹರಿವು ಚೆನ್ನಾಗಿದೆ. ಅದನ್ನು ನೀರಿನ ಕೊರತೆ ಹೊಂದಿರುವ ಬೇಟ್ವಾ ನದಿಗೆ 230 ಕಿ.ಮೀ. ಕಾಂಕ್ರೀಟ್‌ ನಾಲೆ ಹಾಗೂ ಧೌಧನ್‌ ಅಣೆಕಟ್ಟೆನಿರ್ಮಿಸುವ ಮೂಲಕ ಹರಿಸಲಾಗುತ್ತದೆ. ಇದರಿಂದ 10.62 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರು ಸಿಗಲಿದೆ. 62 ಲಕ್ಷ ಮಂದಿಗೆ ಕುಡಿಯುವ ನೀರು ಲಭ್ಯವಾಗಲಿದೆ. ಜತೆಗೆ 103 ಮೆಗಾವ್ಯಾಟ್‌ ಜಲ ವಿದ್ಯುತ್‌ ಕೂಡ ಉತ್ಪಾದನೆಯಾಗಲಿದೆ.

ಬರಪೀಡಿತ ಪ್ರದೇಶವಾಗಿರುವ ಬುಂದೇಲ್‌ಖಂಡ್‌ ಪ್ರಾಂತ್ಯದಲ್ಲಿನ ಉತ್ತರಪ್ರದೇಶದ 4 ಹಾಗೂ ಮಧ್ಯಪ್ರದೇಶದಲ್ಲಿನ 8 ಜಿಲ್ಲೆಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಈ ಯೋಜನೆಯು ದೇಶದಲ್ಲಿ ಮತ್ತಷ್ಟುನದಿಗಳ ಜೋಡಣೆಗೆ ಹಾದಿ ಸುಗಮಗೊಳಿಸಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಹುಲಿಧಾಮ ನಾಶ:

ಕೆನ್‌- ಬೇಟ್ವಾ ನದಿ ಜೋಡಣೆಯಿಂದ ಮಧ್ಯಪ್ರದೇಶದಲ್ಲಿನ ಪನ್ನಾ ಹುಲಿ ಅಭಯಾರಣ್ಯ ನಾಶವಾಗಲಿದೆ. 10 ವರ್ಷಗಳ ಹಿಂದೆಯೇ ಪರಾರ‍ಯಯ ಯೋಜನೆಗಳನ್ನು ಸೂಚಿಸಿದ್ದೆ. ಅದೆಲ್ಲವನ್ನೂ ಕಡೆಗಣಿಸಲಾಯಿತು ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಕಿಡಿಕಾರಿದ್ದಾರೆ.