ರೊಟ್ಟಿಯ ನೆಪ ಹೇಳಿ ವಧುವನ್ನು ಬಿಟ್ಟು ಬೇರೆ ಯುವತಿಯ ಮದ್ವೆಯಾದ ವರ

ಉತ್ತರ ಪ್ರದೇಶದಲ್ಲಿ ರೊಟ್ಟಿ ನೀಡಲು ತಡವಾಯಿತೆಂದು ವರನೊಬ್ಬ ಮದುವೆ ಮುರಿದು, ಅದೇ ಮಂಟಪದಲ್ಲಿ ಬೇರೆ ಯುವತಿಯನ್ನು ವಿವಾಹವಾದ ಘಟನೆ ನಡೆದಿದೆ. ವರದಕ್ಷಿಣೆ ಸೇರಿ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದ ವಧುವಿನ ಕುಟುಂಬ ಈಗ ಪೊಲೀಸರಿಗೆ ದೂರು ನೀಡಿದೆ.

UP Groom Ditches Bride Over Delayed roti Marries Someone Else

ಹಮೀದ್‌ಪುರ್: ಏನೇನೋ ಕಾರಣಕ್ಕೆ ಮದುವೆ ಮಂಟಪದಲ್ಲೇ ಮದುವೆ ಮುರಿದು ಬೀಳುವುದನ್ನು ನೀವು ನೋಡಿರಬಹುದು. ವಿಶೇಷವಾಗಿ ಆಹಾರದ ಕಾರಣಕ್ಕೆ ವಧು ಹಾಗೂ ವರನ ಕುಟುಂಬದ ನಡುವೆ ದೊಡ್ಡ ಮಾರಾಮಾರಿಯೇ ನಡೆದಂತಹ ಹಲವು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಮಟನ್ ಮಾಡಿಲ್ಲ, ಅಂತ ಕ್ಯಾರೆಟ್ ಹಲ್ವಾ ಮಾಡಿಲ್ಲ ಅಂತ ಸಣ್ಣಪುಟ್ಟ ಕಾರಣ ಹೇಳಿ ಕೆಲವು ಸಂಬಂಧಿಗಳು ಜಗಳ ತೆಗೆದು ಕ್ಷುಲ್ಲಕ ಕಾರಣಕ್ಕೆ ಮದುವೆಯನ್ನೇ ನಿಲ್ಲಿಸಿ ಬಿಡುವಂತಹ ಹಲವು ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ಅದೇ ರೀತಿ ಈಗ ಉತ್ತರ ಪ್ರದೇಶದ ಚಂದುಲಿ ಜಿಲ್ಲೆಯ ಹಮೀದ್‌ಪುರ್ ಎಂಬ ಗ್ರಾಮದಲ್ಲಿ ವರನ ಕಡೆಯವರಿಗೆ ರೊಟ್ಟಿ ನೀಡುವುದು ತಡವಾಯ್ತು ಎಂಬ ಕಾರಣಕ್ಕೆ ವರ ಜಗಳ ತೆಗೆದು ಮದುವೆಯನ್ನೇ ಮುರಿದುಕೊಂಡ ಘಟನೆ ನಡೆದಿದೆ. ಅಷ್ಟೇ ಅಲ್ಲ ಆತ  ಅದೇ ಮಂಟಪದಲ್ಲಿ ನಿಗದಿಯಾದ ವಧುವನ್ನು ಬಿಟ್ಟು ಸಂಬಂಧಿಕರ ಹುಡುಗಿಯೊಬ್ಬಳನ್ನು ಮದುವೆಯಾದಂತಹ ವಿಚಿತ್ರ ಘಟನೆ ನಡೆದಿದೆ. 

ರೊಟ್ಟಿ ವಿತರಿಸುವುದು ವಿಳಂಬ ಆಯ್ತು ಎಂದು ವರ ಸಿಟ್ಟಿಗೆದ್ದು, ಮದುವೆ  ನಿಲ್ಲಿಸಲು ಮುಂದಾಗಿದ್ದಾನೆ. ಹೀಗೆ ಸಿಟ್ಟಿಗೆದ್ದ ಕೋಪಿಷ್ಟ ವರನನ್ನು ಸಮಾಧಾನ ಮಾಡಲು ವಧುವಿನ ಕಡೆಯವರು ಮುಂದಾಗಿದ್ದಾರೆ. ಆದರೆ ವಧುವಿನ ಕಡೆಯವರ ಮನವೊಲಿಕೆಗೆ ಕರಗದ ವರ ಅದೇ ಮಂಟಪದಲ್ಲಿ ತನ್ನದೇ ಸಂಬಂಧಿಯೊಬ್ಬಳ ಜೊತೆ ಹಸೆಮಣೆ ಏರಿದ್ದಾನೆ. ಡಿಸೆಂಬರ್ 22 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವರ ಮೆಹ್ತಾಬ್ ಹಾಗೂ ವರನ ಕಡೆಯವರು ರೊಟ್ಟಿ ನೀಡುವುದು ಬಿಳಂಬವಾಯ್ತು ಎಂದು ವಧುವಿನ ಕಡೆಯವರನ್ನು ನಿಂದಿಸುತ್ತಾ ಮಂಟಪ ಬಿಟ್ಟು ನಡೆದಿದ್ದಾರೆ. ಬರೀ ಇಷ್ಟೇ ಅಲ್ಲ ಅದೇ ದಿನ ವರ ಸಂಬಂಧಿಯೊಬ್ಬಳ ಜೊತೆ ಹಸೆಮಣೆ ಏರಿದ್ದಾನೆ. ಇದು ವಧುವಿನ ಕಡೆಯವರನ್ನು ತೀವ್ರ ಆಕ್ರೋಶಗೊಳ್ಳುವಂತೆ ಮಾಡಿದೆ. ವರ ಹಾಗೂ ಆತನ ಸಂಬಂಧಿಗಳ ವಿರುದ್ಧ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. 

ಇಂಡಸ್ಟ್ರಿಯಲ್ ನಗರ ಪೊಲೀಸ್ ಠಾಣೆಯಲ್ಲಿ ವರ ಮೆಹ್ತಾಬ್ ವಿರುದ್ಧ ವಧುವಿನ ಕುಟುಂಬದವರು ದೂರು ದಾಖಲಿಸಿದ್ದಾರೆ. ಆದರೆ ವರನ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಇದಾದ ನಂತರ ವಧುವಿನ ಕಡೆಯವರು ಡಿಸೆಂಬರ್ 24 ರಂದು ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಘಟನೆಗೆ ಕಾರಣರಾದ ವರನ ಕಡೆಯ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ವಧುವಿನ ಕಡೆಯವರು ಆಗ್ರಹಿಸಿದ್ದಾರೆ. 

ವರನ ಸಹೋದರ ರಾಜು ಮಾತನಾಡಿ ಜಿಲ್ಲಾ ಎಸ್‌ಪಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಈ ಮದುವೆಗಾಗಿ ಒಟ್ಟು 7 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಅದರಲ್ಲಿ 1.5 ಲಕ್ಷ ರೂಪಾಯಿಯನ್ನು ವರನಿಗೆ ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ವಧುವಿನ ಸೋದರ ಅಳಲು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವೀಗ ವೈರಲ್ ಆಗಿದ್ದು, ವರನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಸದ್ಯ ವಧು ಮದುವೆಗೆ ಮೊದಲೇ ಬಚವಾದಳು ಎಂದು ಕಾಮೆಂಟ್ ಮಾಡ್ತಿದ್ದಾರೆ. 

Latest Videos
Follow Us:
Download App:
  • android
  • ios