Liquor Ban in UP: ರಾಮ ಜನ್ಮಭೂಮಿ ಅಯೋಧ್ಯೆ ಮತ್ತು ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಇಂದಿನಿಂದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮದ್ಯ ಮಾರುವವರು ಇನ್ಮೇಲೆ ಹಾಲು ಮಾರಿ ಎಂದು ಸಲಹೆ ಕೂಡ ಯೋಗಿ ಸರ್ಕಾರ ನೀಡಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದ್ದು ಎಣ್ಣೆ ಪ್ರಿಯರಿಗೆ ಬೇಸರ ಮೂಡಿಸಲಿದೆ. ಅಯೋಧ್ಯೆ ಮತ್ತು ಮಥುರಾ ದೇವಾಲಯಗಳ ಸುತ್ತ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ರಾಮ ಜನ್ಮಭೂಮಿ ಮತ್ತು ಕೃಷ್ಣ ಜನ್ಮಭೂಮಿ ಸುತ್ತಲಿನ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡಿದೆ. 

ಈ ಆದೇಶ ಇಂದಿನಿಂದಲೇ (ಜೂನ್‌ 1) ಜಾರಿಗೆ ಬಂದಿದ್ದು, ಸರ್ಕಾರ ಒಟ್ಟೂ 37 ಬಾರ್‌ ಮತ್ತು ರೆಸ್ಟಾರೆಂಟ್‌ಗಳ ಪರವಾನಗಿ ರದ್ದು ಮಾಡಿದೆ. ಜತೆಗೆ ಸ್ಥಳೀಯ ಭಾಂಗ್‌ಗಳನ್ನು ಕೂಡ ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಮಾರಾಟ ಮಾಡಲಾಗುತ್ತಿತ್ತು, ಅದನ್ನೂ ನಿಷೇಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. 

ಎಣ್ಣೆ ಅಂಗಡಿ ಮತ್ತೆ ಬಾಗಿಲು ತೆರೆಯಲ್ಲ:
ಎಣ್ಣೆ ಮಾರುತ್ತಿದ್ದ ಬಾರ್‌ ಓನರ್‌ಗಳಿಗೆ ಸರ್ಕಾರ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದೆ. ಯಾವುದೇ ಕಾರಣಕ್ಕೂ ಕಾಳದಂಧೆಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಮಾಡಿದರೆ ಕಠಿಣ ಶಿಕ್ಷೆ ವಿಧಿಸುವುದಾಗಿ ಸೂಚನೆ ನೀಡಲಾಗಿದೆ. ಮದ್ಯ ಮಾರುವ ಬದಲು ಹಾಲು ಮಾರಾಟ ಮಾಡಿ ಎಂದು ಸಲಹೆಯುನ್ನೂ ಸರ್ಕಾರ ನೀಡಿದೆ. ಮಥುರಾದಲ್ಲಿ ಮೂರು ಹೋಟೆಲ್‌ಗಳಲ್ಲಿ ಬಾರ್‌ ಲೈಸನ್ಸ್‌ ಇತ್ತು, ಅದನ್ನು ಕೂಡ ಕ್ಯಾನ್ಸಲ್‌ ಮಾಡಲಾಗಿದೆ. 

2021ರಲ್ಲೂ ಇದೇ ರೀತಿ ಆದೇಶ:
2021ರ ಸೆಪ್ಟೆಂಬರ್‌ನಲ್ಲಿ ಮಥುರಾ ಸುತ್ತಮುತ್ತ 10 ಸ್ಕ್ವೇರ್‌ ಕಿಮೀಟರ್‌ ಏರಿಯಾವನ್ನು ತೀರ್ಥಕ್ಷೇತ್ರ ಎಂದು ಘೋಷಣೆ ಮಾಡಿ ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಜತೆಗೆ ಈ ಸ್ಥಳದಲ್ಲಿ ಮಾಂಸ - ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಕೃಷ್ಣೋತ್ಸವ ಆಚರಣೆಯ ದಿನ ಯೋಗಿ ಆದಿತ್ಯನಾಥ್‌ ಈ ಘೋಷಣೆಯನ್ನು ಮಾಡಿದ್ದರು. 

ಧಾರ್ಮಿಕ ಕೇಂದ್ರಗಳಿಂದ ಮೈಕ್‌ ತೆರವು:

ಕಳೆದ ತಿಂಗಳುಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮಸೀದಿ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಬೆನ್ನಲ್ಲೇ ಪೀಲಿಭೀತ್‌ ಜಿಲ್ಲೆಯ ಧಾರ್ಮಿಕ ಮುಖಂಡರು, ಧಾರ್ಮಿಕ ಕ್ಷೇತ್ರಗಳಿಂದ ತೆರವುಗೊಳಿಸಿದ ಧ್ವನಿವರ್ಧಕಗಳನ್ನು ಶಾಲೆಗಳಿಗೆ ದಾನ ಮಾಡಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ ಯೋಗಿ ಆದಿತ್ಯನಾಥ್!

ಪೋಲಿಸ್‌ ಸೂಪರಿಂಟೆಂಡೆಂಟ್‌ ದಿನೇಶ್‌ ಕುಮಾರ್‌ ಅವರ ನಿರ್ದೇಶನ ಮೇರೆಗೆ ಜಿಲ್ಲೆಯ ದೇವಾಲಯಗಳು, ಮಸೀದು, ಗುರುದ್ವಾರಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇವುಗಳನ್ನು ಸ್ಥಳೀಯ ಶಾಲೆ ಹಾಗೂ ಕಾಲೇಜುಗಳಿಗೆ ಸ್ವ ಇಚ್ಛೆಯಿಂದ ಧಾರ್ಮಿಕ ಮುಖಂಡರು ದಾನವಾಗಿ ನೀಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸಾಂಸ್ಕೃತಿಕ, ಕ್ರೀಡಾ ಚಟುಚಟಿಕೆಗಳ ಆಯೋಜನೆಯಲ್ಲಿ, ಅಗಸ್ಟ್‌ 15, ಜನವರಿ 26 ಮೊದಲಾದ ವೇಳೆ ಇವುಗಳನ್ನು ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಧಾರ್ಮಿಕ ಮುಖಂಡರ ಈ ನಡೆ ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಮಸೀದಿ ಮೇಲೆ ಲೌಡ್‌ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ. ದೇಶದ ಹಲವೆಡೆ ಮಸೀದಿಗಳಲ್ಲಿ ಅಕ್ರಮವಾಗಿ ಲೌಡ್‌ಸ್ಪೀಕರ್‌ ಹಾಕಿ ಆಜಾನ್‌ ಮೊಳಗಿಸಲಾಗುತ್ತಿದೆ ಎಂದು ಗಲಾಟೆಗಳ ನಡೆದಿರುವ ನಡುವೆಯೇ, ಹೈಕೋರ್ಚ್‌ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ ಹಾಗೂ ಅಳವಡಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ.

ಇದನ್ನೂ ಓದಿ: ಮಸೀದಿಯಿಂದ ತೆರವುಗೊಳಿಸಿದ ಲೌಡ್‌ ಸ್ಪೀಕರ್‌ ಶಾಲೆಗೆ ದಾನ!

ಬದಾಯೂ ಜಿಲ್ಲೆಯ ಧೋರನ್‌ಪುರ ಗ್ರಾಮದ ನೂರಾನಿ ಮಸೀದಿಯಲ್ಲಿ ಆಜಾನ್‌ ಮೊಳಗಿಸಲು ಲೌಡ್‌ಸ್ಪೀಕರ್‌ ಅಳವಡಿಕೆಗೆ ಅನುಮತಿ ಕೋರಿ, ಬಿಸೌಲಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಯನ್ನು ಉಪವಿಭಾಗಾಧಿಕಾರಿಗಳು 2021ರ ಡಿ.3ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಇರ್ಫಾನ್‌ ಎಂಬ ವ್ಯಕ್ತಿ ಹೈಕೋರ್ಚ್‌ ಮೊರೆ ಹೋಗಿದ್ದ. ‘ಉಪವಿಭಾಗಾಧಿಕಾರಿಗಳ ನಿರ್ಧಾರದಿಂದ ನಮ್ಮ ಕಾನೂನಾತ್ಮಕ ಹಕ್ಕು ಹಾಗೂ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ’ ಎಂದು ವಾದಿಸಿದ್ದ.

ಆದರೆ ಅರ್ಜಿ ತಿರಸ್ಕರಿಸಿದ ಹೈಕೋರ್ಚ್‌ನ ದ್ವಿಸದಸ್ಯ ಪೀಠ, ‘ಮಸೀದಿ ಮೇಲೆ ಲೌಡ್‌ ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.