ಮಸೀದಿಯಿಂದ ತೆರವುಗೊಳಿಸಿದ ಲೌಡ್ ಸ್ಪೀಕರ್ ಶಾಲೆಗೆ ದಾನ!
* ಮಸೀದಿ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಿಂದ ಧ್ವನಿವರ್ಧಕಗಳ ತೆಗೆಯುವಂತೆ ಸಿಎಂ ಯೋಗಿ ಆದೇಶ
* ಉ.ಪ್ರ: ಮಸೀದಿಯಿಂದ ತೆರವುಗೊಳಿಸಿದ ಲೌಡ್ ಸ್ಪೀಕರ್ ಶಾಲೆಗೆ ದಾನ
* ತೆರವುಗೊಳಿಸಿದ ಧ್ವನಿವರ್ಧಕಗಳನ್ನು ಶಾಲೆಗಳಿಗೆ ದಾನ
ಪೀಲಿಭೀತ್(ಮೇ.29): ಕಳೆದ ತಿಂಗಳುಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಸೀದಿ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಬೆನ್ನಲ್ಲೇ ಪೀಲಿಭೀತ್ ಜಿಲ್ಲೆಯ ಧಾರ್ಮಿಕ ಮುಖಂಡರು, ಧಾರ್ಮಿಕ ಕ್ಷೇತ್ರಗಳಿಂದ ತೆರವುಗೊಳಿಸಿದ ಧ್ವನಿವರ್ಧಕಗಳನ್ನು ಶಾಲೆಗಳಿಗೆ ದಾನ ಮಾಡಿದ್ದಾರೆ.
ಪೋಲಿಸ್ ಸೂಪರಿಂಟೆಂಡೆಂಟ್ ದಿನೇಶ್ ಕುಮಾರ್ ಅವರ ನಿರ್ದೇಶನ ಮೇರೆಗೆ ಜಿಲ್ಲೆಯ ದೇವಾಲಯಗಳು, ಮಸೀದು, ಗುರುದ್ವಾರಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇವುಗಳನ್ನು ಸ್ಥಳೀಯ ಶಾಲೆ ಹಾಗೂ ಕಾಲೇಜುಗಳಿಗೆ ಸ್ವ ಇಚ್ಛೆಯಿಂದ ಧಾರ್ಮಿಕ ಮುಖಂಡರು ದಾನವಾಗಿ ನೀಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸಾಂಸ್ಕೃತಿಕ, ಕ್ರೀಡಾ ಚಟುಚಟಿಕೆಗಳ ಆಯೋಜನೆಯಲ್ಲಿ, ಅಗಸ್ಟ್ 15, ಜನವರಿ 26 ಮೊದಲಾದ ವೇಳೆ ಇವುಗಳನ್ನು ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಧಾರ್ಮಿಕ ಮುಖಂಡರ ಈ ನಡೆ ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಮಸೀದಿ ಮೇಲೆ ಲೌಡ್‌ಸ್ಪೀಕರ್ ಅಳವಡಿಕೆ ಮೂಲಭೂತ ಹಕ್ಕಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಅಳವಡಿಕೆ ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ದೇಶದ ಹಲವೆಡೆ ಮಸೀದಿಗಳಲ್ಲಿ ಅಕ್ರಮವಾಗಿ ಲೌಡ್‌ಸ್ಪೀಕರ್ ಹಾಕಿ ಆಜಾನ್ ಮೊಳಗಿಸಲಾಗುತ್ತಿದೆ ಎಂದು ಗಲಾಟೆಗಳ ನಡೆದಿರುವ ನಡುವೆಯೇ, ಹೈಕೋರ್ಚ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ ಹಾಗೂ ಅಳವಡಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ.
ಬದಾಯೂ ಜಿಲ್ಲೆಯ ಧೋರನ್‌ಪುರ ಗ್ರಾಮದ ನೂರಾನಿ ಮಸೀದಿಯಲ್ಲಿ ಆಜಾನ್ ಮೊಳಗಿಸಲು ಲೌಡ್‌ಸ್ಪೀಕರ್ ಅಳವಡಿಕೆಗೆ ಅನುಮತಿ ಕೋರಿ, ಬಿಸೌಲಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಯನ್ನು ಉಪವಿಭಾಗಾಧಿಕಾರಿಗಳು 2021ರ ಡಿ.3ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಇರ್ಫಾನ್ ಎಂಬ ವ್ಯಕ್ತಿ ಹೈಕೋರ್ಚ್ ಮೊರೆ ಹೋಗಿದ್ದ. ‘ಉಪವಿಭಾಗಾಧಿಕಾರಿಗಳ ನಿರ್ಧಾರದಿಂದ ನಮ್ಮ ಕಾನೂನಾತ್ಮಕ ಹಕ್ಕು ಹಾಗೂ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ’ ಎಂದು ವಾದಿಸಿದ್ದ.
ಆದರೆ ಅರ್ಜಿ ತಿರಸ್ಕರಿಸಿದ ಹೈಕೋರ್ಚ್‌ನ ದ್ವಿಸದಸ್ಯ ಪೀಠ, ‘ಮಸೀದಿ ಮೇಲೆ ಲೌಡ್ ಸ್ಪೀಕರ್ ಅಳವಡಿಕೆ ಮೂಲಭೂತ ಹಕ್ಕಲ್ಲ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಸೀದಿಗಳ ಧ್ವನಿವರ್ಧಕ ಕೂಡಲೇ ತೆರವು ಮಾಡಿ
ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಕೂಡಲೇ ತೆರವು ಮಾಡದಿದ್ದರೇ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಶಯದಂತೆ ಇನ್ನು ಮುಂದೆ ಪ್ರತಿನಿತ್ಯ ಬೆಳಿಗ್ಗೆ 5ರಿಂದ 6ವರೆಗೂ ದೇವಸ್ಥಾನದಲ್ಲಿ ಮೈಕ್ ಮೂಲಕ ಭಜನೆ ಕಾರ್ಯಕ್ರಮ ಆಂದೋಲನ ಮಾಡಲಾಗುವುದು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವುಗೊಳಿಸಲು ಸುಪ್ರೀಂ ಕೋರ್ಚ್ ಆದೇಶವಿದ್ದರೂ ರಾಜ್ಯ ಸರ್ಕಾರವೂ ಕಾಟಾಚಾರಕ್ಕೆ ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಈ ದಿಸೆಯಲ್ಲಿ ಮೇ 8 ರೊಳಗೆ ಮಸೀದಿಗಳಲ್ಲಿ ಧ್ವನಿವರ್ಧಕ ತೆರವು ಮಾಡದಿದ್ದರೆ ಮೇ 9ರಿಂದ ಹಿಂದೂ ದೇವಸ್ಥಾನಗಳಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿ ಪ್ರಸಾರ ಮಾಡಲು ತೀರ್ಮಾನಿಸಲಾಗಿದೆ. ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಭಜನೆ, ಪ್ರಾರ್ಥನೆ, ಪೂಜೆಗೆ ವಿಶೇಷ ಫಲದ ಉಲ್ಲೇಖವಿದೆ.
ಪ್ರತಿದಿನ ಬೆಳಿಗ್ಗೆ 5ರಿಂದ 6ರವರೆಗೂ ಸನಾತನ ಹಿಂದೂ ಧರ್ಮ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ, ಮಂತ್ರ, ವಚನ, ಭಜನೆ, ಗಾಯತ್ರಿ ಮಂತ್ರ, ಶಿವನ ಓಂಕಾರಗಳನ್ನು ಮೈಕ್ ಮೂಲಕ ಹಾಕಲು ವಿನಂತಿಸುತ್ತೇವೆ. ನಂತರದಲ್ಲಿ ಪ್ರತಿ ಮನೆ ಮನೆಗಳಲ್ಲೂ ಧ್ವನಿವರ್ಧಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು. ಇದೆ ವೇಳೆ ಶ್ರೀರಾಮಸೇನೆ ಜಿಲ್ಲಾ ಉಪಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಇತರರು ಉಪಸ್ಥಿತರಿದ್ದರು.