ಲಕ್ನೋ(ಡಿ.31): ಸುಪ್ರೀಂಕೋರ್ಟ್ ಅಯೋಧ್ಯೆ-ಬಾಬರಿ ಮಸೀದಿ ವಿವಾದದ ತೀರ್ಪಿನನ್ವಯ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸೂಕ್ತ ಎನಿಸುವ ಐದು ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತಿಸಿದೆ.

ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಮೀನು ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಆದೇಶ ನೀಡಿತ್ತು. ಅದರಂತೆ ಮಸೀದಿ ನಿರ್ಮಾಣಕ್ಕೆ ಒಟ್ಟು ಐದು ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.

ಜನವರಿಯಲ್ಲಿ ಅಯೋಧ್ಯೆ ದೇಗುಲ ನಿರ್ಮಾಣ ಟ್ರಸ್ಟ್?

ಅಯೋಧ್ಯೆಯ ಮಿರ್ಜಾಪುರ್, ಶಂಶುದ್ದೀನ್'ಪುರ್ ಮತ್ತು ಚಾಂದ್'ಪುರ್'ನಲ್ಲಿ ಐದು ಸೂಕ್ತ ನಿವೇಶನಗಳನ್ನು ಗುರುತಿಸಿದ್ದು, ಇವು ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ ಎಂದು ಸರ್ಕಾರ ತಿಳಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಈ ಸ್ಥಳವನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
 
ಅಯೋಧ್ಯೆ-ಬಾಬರಿ  ಮಸೀದಿ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ 18 ಅರ್ಜಿಗಳನ್ನು ಕಳೆದ ಡಿಸೆಂಬರ್ 12ರಂದು ನ್ಯಾಯಾಲಯ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!