UP Elections: ಜಾಟ್ ಬಾಹುಳ್ಯದ 58 ಕ್ಷೇತ್ರಗಳಿಗೆ ಮತದಾನ, ಕೃಷಿ ಕಾಯಿದೆ ವಿಚಾರ ಪ್ರಭಾವ ಬೀರುತ್ತಾ?
* ನಾಳೆ ಪಶ್ಚಿಮ ಯುಪಿಯ ಜಾಟ್ ಬಾಹುಳ್ಯದ 58 ಕ್ಷೇತ್ರಗಳಲ್ಲಿ ಮತದಾನ
* ಯುಪಿಯಲ್ಲಿ 7 ಪ್ರತಿಶತ ಜಾಟ್ ಮತದಾರರು
* ಕೃಷಿ ಕಾಯಿದೆ ಜಾರಿಗೆ ಬಂದಾಗ ಬೀದಿಗೆ ಬಂದು ಪ್ರತಿಭಟಿಸಿದ್ದು ಜಾಟ್ ಸಮುದಾಯ
ಪ್ರಶಾಂತ್ ನಾತು, ಇಂಡಿಯಾ ಗೇಟ್
ಚಂಡೀಗಢ(ಫೆ.09): ನಾಳೆ ಪಶ್ಚಿಮ ಯುಪಿಯ ಜಾಟ್ ಬಾಹುಳ್ಯದ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಕೃಷಿ ಕಾಯಿದೆ ಹಿಂದೆ ತೆಗೆದುಕೊಂಡ ನಂತರ ಜಾಟ್ ಮತದಾರರು 2014- 17 ಮತ್ತು 19 ರಂತೆ ಮೋದಿ ಮತ್ತು ಬಿಜೆಪಿಗೆ ವೋಟು ನೀಡುತ್ತಾರೋ ಇಲ್ಲವೋ ಸ್ಪಷ್ಟ ವಾಗಲಿದೆ.
ಯುಪಿಯಲ್ಲಿ 7 ಪ್ರತಿಶತ ಜಾಟ್ ಮತದಾರರು ಇದ್ದು ಅದರ ಬಹುಪಾಲು ಇರುವುದು ಪಶ್ಚಿಮ ಯುಪಿಯ ಮೆರಥ್ ಕೈರಾನಾ ಮುಜಫರ್ ನಗರ ಬಾಘಪತ್ ಮಥುರಾ ಮೊರಾದಾಬಾದ್ ನೋಯಿಡಾ ದಂಥ ಕ್ಷೇತ್ರಗಳಲ್ಲಿ .ಹೀಗಾಗಿ ಈ ಕ್ಷೇತ್ರಗಳಲ್ಲಿ ಜಾಟ್ ಮತ್ತು ಮುಸ್ಲಿಮರು ಒಟ್ಟಿಗೆ ಬಂದರೆ ಅಖಿಲೇಶ್ ಯಾದವ ಮತ್ತು ಆರ್ ಎಲ್ ಡಿ ಮೈತ್ರಿಕೂಟಕ್ಕೆ ಲಾಭ ಆಗಲಿದ್ದು ಒಂದು ವೇಳೆ ಬರದೇ ಹೋದರೆ ಮರಳಿ ಬಿಜೆಪಿಗೆ ಲಾಭ ಆಗಲಿದೆ.
Hijab Row: ಬಿಕಿನಿ, ಶಾಲು, ಜೀನ್ಸ್, ಹಿಜಾಬ್: ಮಹಿಳೆಯರಿಗೆ ತಮ್ಮಿಷ್ಟದ ಬಟ್ಟೆ ಧರಿಸುವ ಹಕ್ಕಿದೆ: ಪ್ರಿಯಾಂಕಾ!
2017 ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ತುಷ್ಟಿಕರಣದ ಪೊಲಿಟಿಕ್ಸ್ ನಿಂದ ಬೇಸತ್ತು ಜಾಟ್ ರ 60 ಪ್ರತಿಶತ ಮತಗಳು ಬಿಜೆಪಿಗೆ ಬಂದಿದ್ದರೆ 2019 ರಲ್ಲಿ 91 ಪ್ರತಿಶತ ಮತಗಳು ಬಿಜೆಪಿಗೆ ಬಿದ್ದಿದ್ದವು.ಆದರೆ ಈಗ ಸ್ಥಿತಿ ಬದಲಾಗುತ್ತಿದೆ.
ಕೃಷಿ ಕಾಯಿದೆ ಜಾರಿಗೆ ಬಂದಾಗ ಬೀದಿಗೆ ಬಂದು ಪ್ರತಿಭಟಿಸಿದ್ದು ಜಾಟ್ ಸಮುದಾಯ. ಪಂಜಾಬ್ ನ ಜಾಟ್ ಶಿಖರು ಮತ್ತು ಹರಿಯಾಣ ಪಶ್ಚಿಮ ಯು ಪಿ ಯ ಹಿಂದೂ ಜಾಟ್ ಗಳು ಸತತ ಒಂದು ವರ್ಷ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಮೋದಿ ಮತ್ತು ಬಿಜೆಪಿ ವಿರುದ್ಧ ಜಾಟ್ ಸಮುದಾಯದಲ್ಲಿ ಬೇಸರ ಇದ್ದೇ ಇದೆ.ಆದರೆ ಎಲ್ಲಿ ಸಮಾಜವಾದಿ ಪಕ್ಷ ಗೆದ್ದರೆ ಮುಸ್ಲಿಂ ಪೊಲಿಟಿಕ್ಸ್ ಆರಂಭವಾಗುತ್ತದೋ ಎಂಬ ಆತಂಕ ಕೂಡ ಬಹುವಾಗಿದೆ.ಹೀಗಾಗಿ ಜಾಟ್ ಸಮುದಾಯ ಹೇಗೆ ಮತ ಚಲಾಯಿಸುತ್ತದೆ ಎನ್ನುವುದು ಒಟ್ಟಾರೆ ಬಿಜೆಪಿ ಮತ್ತು ಎಸ್ ಪಿ ಸೀಟು ಗಳ ಸಂಖ್ಯೆ ನಿರ್ಧರಿಸಲಿದೆ.
ನಾಳೆ ನಡೆಯುವ 58 ಕ್ಷೇತ್ರಗಳಲ್ಲಿ 2017 ರಲ್ಲಿ 53 ಬಿಜೆಪಿ ತೆಕ್ಕೆಗೆ ಹೋಗಿದ್ದವು.ತಲಾ ಎರಡನ್ನು ಸಮಾಜವಾದಿಗಳು ಮತ್ತು ಬಿ ಎಸ್ ಪಿ ಗೆದ್ದಿದ್ದರೆ ಒಂದು ಸ್ಥಾನ ಮಾತ್ರ ಜಾಟ್ ಬಾಹುಳ್ಯ ಪಕ್ಷವಾದ ರಾಷ್ಟ್ರೀಯ ಲೋಕದಳ ಗೆದ್ದಿತ್ತು. ಈ ಬಾರಿ ಜಾಟ್ ರನ್ನು ಜೊತೆಗೆ ತೆಗೆದುಕೊಳ್ಳಲು ಅಖಿಲೇಶ್ ಯಾದವ್ ಜಯಂತ್ ಚೌಧರಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಅದರ ಪರಿಣಾಮ ಏನು ಎಂದು ನಾಳೆ ಮತದಾನದ ಪರಿಯಿಂದ ಗೊತ್ತಾಗಲಿದೆ.
ನಾಳೆ ಚುನಾವಣೆ ನಡೆಯುವ 58 ಕ್ಷೇತ್ರಗಳಲ್ಲಿ ಕೃಷಿ ಕಾಯಿದೆ ಜಾಟ್ ಮತ್ತು ಮುಸ್ಲಿಮರ ಕೋಮು ಘರ್ಷಣೆಗಳು ಕಬ್ಬು ಬೆಳೆಗಾರರ ಸಮಸ್ಯೆ ಮಥುರೆ ಕೃಷ್ಣ ದೇವಾಲಯ ವಿವಾದ ಮತ್ತು ಮೋದಿ ಯೋಗಿ ಪರ ಜೊತೆಗೆ ವಿರುದ್ಧದ ಚರ್ಚಾ ವಿಷಯಗಳು ಮತದಾರನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದಾದ ವಿಷಯಗಳು.
ಪಶ್ಚಿಮ ಯು ಪಿ ಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸರಾಸರಿ 25 ರಿಂದ 35 ಪ್ರತಿಶತ ಮುಸ್ಲಿಂ ರಿದ್ದಾರೆ.ಹೀಗಾಗಿ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಅಖಿಲೇಶ ಯಾದವ್ ಎಷ್ಟು ವೋಟು ಮತ್ತು ಸೀಟು ಇಲ್ಲಿ ಪಡೆಯುತ್ತಾರೆ ಅನ್ನುವುದರ ಜೊತೆಗೆ ಓವೈಸಿ ಕೂಡ ಇಲ್ಲಿ ಫೈಟ್‌ನಲ್ಲಿದ್ದು ಎಷ್ಟು ಸಮಾಜವಾದಿ ಪಕ್ಷದ ವೋಟು ಸೆಳೆಯುತ್ತಾರೆ ಅನ್ನುವುದು ಮುಖ್ಯ.
ನಾಳೆ ಯ 58 ಕ್ಷೇತ್ರಗಳಲ್ಲಿ ಹಿಂದೂ ಧ್ರುವೀಕರಣ ಆದರೆ ಬಿಜೆಪಿಗೆ ಲಾಭ ಆಗಲಿದ್ದು ಒಂದು ವೇಳೆ ಜಾಟರು ಪೂರ್ತಿ ಬಿಜೆಪಿ ಮೇಲಿನ ಕೃಷಿ ಕಾಯಿದೆಯ ಸಂಬಂಧಿತ ಮನಸ್ಥಿತಿಯಲ್ಲೇ ವೋಟು ಹಾಕಿದರೆ ಬಿಜೆಪಿಗೆ ನಷ್ಟ ಆಗಲಿದೆ.