PubG ಆಡ್ತಾ ಭಾರತೀಯ ಯುವಕನ ಜೊತೆ ಪಾಕ್ ಮಹಿಳೆಯ ಪ್ರೇಮ, ಗೂಢಚಾರದ ಶಂಕೆಯಲ್ಲಿ ಪೊಲೀಸ್
ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್‌ಜಿ ಆಡ್ತಾ ಭಾರತೀಯ ಯುವಕನ ಪ್ರೀತಿ ಬಿದ್ದಿದ್ದಳು. ಆಕೆ ಬಳಿಕ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳ ಮಾರ್ಗವಾಗಿ ಭಾರತಕ್ಕೆ ಬಂದಿದ್ದ ಸುದ್ದಿ ನೆನಪಿರಬಹುದು. ಈಗ ಉತ್ತರ ಪ್ರದೇಶ ಪೊಲೀಸರು ಈಕೆಯ ವಿಚಾರದಲ್ಲಿ ಗೂಢಚಾರದ ಅನುಮಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಜು.5): ಇತ್ತೀಚೆಗೆ ಪಬ್‌ಜಿಯಿಂದ ಹುಟ್ಟಿದ ಪ್ರೇಮದ ಬಗ್ಗೆ ಒಂದು ಸುದ್ದಿ ಪ್ರಸಾರವಾಗಿತ್ತು. ಪಾಕಿಸ್ತಾನದ ಮಹಿಳೆಯೊಬ್ಬಳಿಗೆ ಪಬ್ ಜಿ ಆಡುತ್ತಲೇ ಭಾರತೀಯ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಇದು ಎಲ್ಲಿಯವರೆಗೂ ಹೋಗಿ ಮುಟ್ಟಿತ್ತೆಂದರೆ, ಆಕೆ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳ ಮೂಲವಾಗಿ ಭಾರತದ ಉತ್ತರ ಪ್ರದೇಶಕ್ಕೆ ಆಗಮಿಸಿದ್ದಲ್ಲದೆ, ಅಲ್ಲಿ ತನ್ನ ಪ್ರೇಮಿ ಸಚಿನ್ ಜೊತೆ ವಾಸವನ್ನೂ ಆರಂಭಿಸಿದ್ದಳು. 27 ವರ್ಷದ ಸೀಮಾ ಹೈದರ್ ಗುಲಾಮ್ ದೂರದ ಪಾಕಿಸ್ತಾನದ ನೋಯ್ಡಾಕ್ಕೆ ಕೇವಲ ಪ್ರೇಮದ ಸಲುವಾಗಿ ಬಂದಿದ್ದಳು. ಆದರೆ, ಇದು ಪೊಲೀಸರಿಗೆ ಗೊತ್ತಾಗಿದ್ದೆ, ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ನಡುವೆಯೇ ಆಕೆ ಗೂಢಚಾರದ ಕೆಲಸಕ್ಕಾಗಿ ಬಂದಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಆಕೆಯ ಜಾಣ್ಮೆ. ಕೇವಲ 5ನೇ ತರಗತಿ ಓದಿದ್ದೇನೆ ಎಂದು ಹೇಳುವ ಸೀಮಾ, ನಿರರ್ಗಳವಾಗಿ ಯಾವುದೇ ಪದವಿ ಹೊಂದಿದ್ದವರೂ ನಾಚುವ ರೀತಿಯಲ್ಲಿ ಇಂಗ್ಲೀಷ್ ಮಾತನಾಡುತ್ತಾಳೆ. ಅದರೊಂದಿಗೆ ಕಂಪ್ಯೂಟರ್ ಜ್ಞಾನವನ್ನೂ ಹೊಂದಿದ್ದವಳಾಗಿದ್ದಾಳೆ.
PUBG ಆಡುವಾಗ ನೊಯ್ಡಾದ ಸಚಿನ್‌ನ ಸಂಪರ್ಕಕ್ಕೆ ಬಂದಿದ್ದೆ, ಆ ನಂತರ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಮಹಿಳೆ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಮೊದಲ ಪತಿಯನ್ನು ತೊರೆದು 4 ಮಕ್ಕಳೊಂದಿಗೆ ನೋಯ್ಡಾಗೆ ಬಂದಿರುವುದಾಗಿ ತಿಳಿಸಿದ್ದಾಳೆ.
ಆದರೆ, ಸೀಮಾಳ ಕಥೆಯನ್ನು ಪೊಲೀಸರು ಸಂಪೂರ್ಣವಾಗಿ ಸತ್ಯ ಎಂದು ಒಪ್ಪಿಕೊಂಡಿಲ್ಲ. ಆಕೆಯ ಮೊಬೈಲ್‌ಅನ್ನು ವಶಪಡಿಸಿಕೊಳ್ಳಲಾಗಿದ್ದು,ವಿಧಿವಿಜ್ಞಾನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪಾಕಿಸ್ತಾನಿ ಮಹಿಳೆಯೇ ವೀಸಾ ಪಡೆದಿದ್ದಾಳೆ ಎಂದು ಡಿಸಿಪಿ ಸಾದ್ ಮಿಯಾನ್ ಖಾನ್ ಹೇಳಿದ್ದಾರೆ. ದುಬೈನಿಂದ ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದ್ದಾಗಿ ಆಕೆ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಪಾಕಿಸ್ತಾನದ ಬೇಹುಗಾರಿಕೆಯ ಕೋನವನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹರಿಯಾಣದ ಬಲ್ಲಭಗಢದಲ್ಲಿ ಸೋಮವಾರ ಸಂಜೆ ಪೊಲೀಸರು ಸೀಮಾ ಹೈದರ್ ಅವರನ್ನು ಬಂಧಿಸಿದ್ದಾರೆ. ಆಕೆಯೊಂದಿಗೆ ನಾಲ್ವರು ಮಕ್ಕಳು ಕೂಡ ಇದ್ದಾರೆ. ಪೊಲೀಸರು, ಎಟಿಎಸ್, ಐಬಿ ಮತ್ತು ಎಲ್‌ಐಯು ಅವರ ಕಸ್ಟಡಿಯಲ್ಲಿ ಸೀಮಾ ಮತ್ತು ಸಚಿನ್ ಅವರನ್ನು 48 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಇದಾದ ನಂತರ ಸೀಮಾ, ಆಕೆಯ ಪ್ರಿಯಕರ ಸಚಿನ್ ಮತ್ತು ಸಚಿನ್ ತಂದೆಯನ್ನು ನೋಯ್ಡಾದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PubG ಆಡ್ತಾ ಯುಪಿ ಯುವಕನೊಂದಿಗೆ ಲವ್, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ಮಹಿಳೆ!
ಸಚಿನ್ ಮತ್ತು ಸೀಮಾ ಅವರ ಮೊದಲ ಭೇಟಿ ನೇಪಾಳದ ಕಠ್ಮಂಡುವಿನಲ್ಲಿ ನಡೆಯಿತು. ಇಲ್ಲಿ ಇಬ್ಬರೂ 7 ದಿನಗಳ ಕಾಲ ಹೋಟೆಲ್‌ನಲ್ಲಿ ತಂಗಿದ್ದರು. ನಂತರ ಸೀಮಾ ಮತ್ತೆ ಪಾಕಿಸ್ತಾನಕ್ಕೆ ಹೋಗಿದ್ದಳು. ಇದಾದ ನಂತರ ಸೀಮಾ ತನ್ನ 4 ಮಕ್ಕಳೊಂದಿಗೆ ಟ್ರಾವೆಲ್ ಏಜೆಂಟ್ ಸಹಾಯದಿಂದ ಟೂರಿಸ್ಟ್ ವೀಸಾ ಪಡೆದು ದುಬೈ ತಲುಪಿದ್ದಳು ಅಲ್ಲಿಂದ ನೇಪಾಳ ತಲುಪಿದ್ದ ಸೀಮಾ, ಅಲ್ಲಿಂದ ಬಸ್ ಮೂಲಕ ದೆಹಲಿ ತಲುಪಿ ನಂತರ ನೋಯ್ಡಾದಲ್ಲಿ ಸಚಿನ್‌ನನ್ನು ಸೇರಿಕೊಂಡಿದ್ದಳು.
ಪಬ್‌ಜಿ ಪ್ರಿಯರಿಗೆ ಡಬಲ್ ಖುಷಿ, ಮೊಬೈಲ್ ಗೇಮ್ ರಿ ಲಾಂಚ್‌ಗೆ ಸರ್ಕಾರ ಅನುಮತಿ!
ಸೀಮಾ ಮತ್ತು ಸಚಿನ್ ಇಬ್ಬರೂ ಸೇರಿ ಭಾರತಕ್ಕೆ ತಲುಪಲು ದಾರಿ ಕಂಡುಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದಕ್ಕಾಗಿ ಅವರು ಯೂಟ್ಯೂಬ್‌ನಲ್ಲಿ ಅನೇಕ ವೀಡಿಯೊಗಳನ್ನು ವೀಕ್ಷಿಸಿದ್ದರು. ದಾರಿಯಲ್ಲಿ ಬಸ್ಸಿನಲ್ಲಿ ಕುಳಿತವರಿಂದ ಹಾಟ್‌ಸ್ಪಾಟ್‌ಗಳನ್ನು ತೆಗೆದುಕೊಂಡು ಸಚಿನ್‌ನೊಂದಿಗೆ ಎರಡು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು ಎನ್ನಲಾಗಿದೆ.