22 ದಿನಗಳ ಹಿಂದೆ ಅಚಾನಕ್ ಕಾಣೆಯಾಗಿದ್ದ ವ್ಯಕ್ತಿಯ ಪತ್ನಿಯೊಬ್ಬರು ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಪಕ್ಕದ ಹಾಸಿಗೆಯಲ್ಲೇ ಪತ್ತೆಯಾದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಉನ್ನಾವೋ: 22 ದಿನಗಳ ಹಿಂದೆ ಅಚಾನಕ್ ಕಾಣೆಯಾಗಿದ್ದ ವ್ಯಕ್ತಿಯ ಪತ್ನಿಯೊಬ್ಬರು ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಪಕ್ಕದ ಹಾಸಿಗೆಯಲ್ಲೇ ಪತ್ತೆಯಾದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. 50 ವರ್ಷದ ರಾಕೇಶ್ ಕುಮಾರ್ ಎಂಬುವವರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಂತರ ಎದ್ದು ಕುಳಿತಾಗ ಅವರಿಗೆ ಪಕ್ಕದಲ್ಲೇ ಒಂದು ಬಹಳ ಪರಿಚಿತವೆನಿಸಿದ ಸ್ವರವೊಂದು ನೀರು ನೀಡುವಂತೆ ಕೇಳುತ್ತಿರುವುದು ತಿಳಿದು ಬಂತು ಕೂಡಲೇ ತಿರುಗಿ ನೋಡಿದಾಗ ಆಕೆ ಅವರ ಪತ್ನಿಯೇ ಆಗಿದ್ದಳು. ಆದರೆ ಪತ್ನಿ ತನ್ನ ಪತಿಯನ್ನು ಗುರುತಿಸಲು ಸಫಲವಾಗಿಲ್ಲ, ಇಂತಹ ವಿಚಿತ್ರ ಘಟನೆಗೆ ಉನ್ನಾವೋದ ಜಿಲ್ಲಾಸ್ಪತ್ರೆ ಸಾಕ್ಷಿಯಾಯ್ತು.
ವೆಲ್ಡರ್ ಕೆಲಸ ಮಾಡುತ್ತಿದ್ದ ರಾಕೇಶ್ ಕುಮಾರ್ ಅವರ ಪತ್ನಿ ಕೆಲ ದಿನಗಳ ಹಿಂದೆ ಅಂದರೆ ಜನವರಿ 13ರಂದು ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾದ ಪತ್ನಿಗಾಗಿ ರಾಕೇಶ್ ಕುಮಾರ್ ಅವರು ಹುಡುಕಾಡಿ ಹುಡುಕಾಡಿ ಸುಸ್ತಾಗಿದ್ದರು. ಅವರು ಉತ್ತರ ಪ್ರದೇಶದ ಕಾನ್ಪುರ, ಲಕ್ನೋ, ಕನೌಜ್ ಮುಂತಾದ ನಗರಗಳಿಗೂ ಭೇಟಿ ನೀಡಿ ಪತ್ನಿಯ ಹುಡುಕಾಟ ನಡೆಸಿದರು. ಆದರೆ ಪತ್ನಿ ಮಾತ್ರ ಸಿಕ್ಕಿರಲಿಲ್ಲ, ಹೀಗಾಗಿ ಘಟನೆಯಿಂದ ಬೇಸತ್ತ ಅವರು ಕೊನೆಯದಾಗಿ ಜನವರಿ 16ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಮನೆಯಲ್ಲಿ ಪತ್ನಿಯೊಬ್ಬಳು ಬಿಟ್ಟು ಅವರಿಗೆ ಬೇರಾರು ಇರಲಿಲ್ಲ, ಈಗ ಪತ್ನಿಯೂ ನಾಪತ್ತೆಯಾಗಿದ್ದರಿಂದ ಒಂಟಿಯಾಗಿದ್ದ ಅವರು ತಮ್ಮ ಸ್ನೇಹಿತರ ಜೊತೆ ವಾಸ ಮಾಡಲು ನಿರ್ಧರಿಸಿದ್ದರು.
ಈತ ರಾಕೇಶ್ ಕುಮಾರ್ ಅವರಿಗೆ ದೃಷ್ಟಿ ಸಮಸ್ಯೆ ಇತ್ತು. ಅದು ದಿನೇ ದಿನೇ ಉಲ್ಬಣಗೊಳ್ಳುತ್ತಿತ್ತು. ಹೀಗಾಗಿ ರಾಕೇಶ್ ಕುಮಾರ್ ಸ್ನೇಹಿತ, ಉನ್ನಾವೋ ಆಸ್ಪತ್ರೆಯಲ್ಲಿ ವಾಹನ ನಿಲ್ದಾಣ ನಿರ್ವಹಕನಾಗಿ ಕೆಲಸ ಮಾಡುತ್ತಿದ್ದ ರಾಜೋಲ್ ಶುಕ್ಲಾ ಅವರು ರಾಕೇಶ್ ಕುಮಾರ್ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿರುವುದನ್ನು ಗಮನಿಸಿ ಅವರನ್ನು ವೈದ್ಯಕೀಯ ನೆರವು ಪಡೆಯುವಂತೆ ಒತ್ತಾಯಿಸಿದರು.
ಹೀಗಾಗಿ ರಾಕೇಶ್ ಕುಮಾರ್ ಅವರು ವೈದ್ಯರನ್ನು ಭೇಟಿಯಾಗಲು ಉನ್ನಾವೋ ಜಿಲ್ಲಾ ಆಸ್ಪತ್ರೆಗೆ ಬಂದರು. ಅಲ್ಲಿ ಅವರನ್ನು ತಪಾಸಣೆ ನಡೆಸಿದ ವೈದ್ಯರು ಅವರಿಗೆ ಕಟರಾಕ್ಟ್ ಶಸ್ತ್ರಚಿಕಿತ್ಸೆಗೆ ಸೂಚಿಸಿದರು. ಅದರಂತೆ ಅವರಿಗೆ ಶಸ್ತ್ರಚಿಕಿತ್ಸೆ ನಡೆದು ಅವರ ಕಣ್ಣಿನ ಬ್ಯಾಂಡೇಜನ್ನು ಕೂಡ ತೆಗೆಯಲಾಯ್ತು. ಆದರೆ ಬ್ಯಾಂಡೆಜ್ ತೆಗೆದ ದಿನವೇ ಅವರಿಗೆ ಪರಿಚಿತ ಧ್ವನಿಯೊಂದು ಕೇಳಿ ಬಂದಿದ್ದು, ನೋಡಿದರೆ ಅಲ್ಲಿ ಅವರ ನಾಪತ್ತೆಯಾಗಿದ್ದ ಪತ್ನಿ ಪಕ್ಕದ ಹಾಸಿಗೆಯಲ್ಲೇ ಮಲಗಿದ್ದರು. ಆದರೆ ಪತ್ನಿ ಶಾಂತಿ ದೇವಿ ಅವರಿಗೆ ಗಂಭೀರ ಗಾಯಗಳಾಗಿದ್ದರಿಂದ ಅವರು ರಾಕೇಶ್ ಕುಮಾರ್ ಅವರನ್ನು ಗುರುತಿಸಲು ಯಶಸ್ವಿಯಾಗಲಿಲ್ಲ. ಆದರೆ ಕ್ರಮೇಣ ಅವರಿಗೆ ನೆನಪು ಬಂದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಉನ್ನಾವೋ ಜಿಲ್ಲಾಸ್ಪತ್ರೆಯ ವೈದ್ಯ ಕೌಶಲೇಂದ್ರ ಪ್ರತಾಪ್, ಮಾತನಾಡಿದ್ದು, ಶಾಂತಿ ದೇವಿಯವರು ಜಿಲ್ಲಾಸ್ಪತ್ರೆಗೆ ದಾಖಲಾಗುವಾಗಲೇ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಇದರಿಂದಾಗಿ ಅವರು ಮಾತನಾಡಲು ಹಾಗೂ ಅರ್ಥ ಮಡಿಕೊಳ್ಳಲು ವಿಫಲವಾಗಿದ್ದರು. ಆದರೆ ಚಿಕಿತ್ಸೆ ಹಾಗೂ ನಂತರದಲ್ಲಿ ಪತಿಯ ಸಂಪೂರ್ಣ ಬೆಂಬಲದಿಂದಾಗಿ ಅವರ ಸ್ಥಿತಿ ಸುಧಾರಿಸಿತು ಹಾಗೂ ಅವರನ್ನು ಅವರು ಯಾರು ಎಂದು ನೆನಪು ಮಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು ಎಂದು ಹೇಳಿದರು.
