ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಶ್ನಿಸಬೇಕಿತ್ತು. ನಾನೇನಾದರೂ ಅಧ್ಯಕ್ಷ ಆಗಿದ್ದಿದ್ದರೆ ಹಾಗೆ ಮಾಡುತ್ತಿದ್ದೆ ಎಂದು ಒಬಾಮಾ ಹೇಳಿಕೆ ನೀಡಿದ್ದರು.

ವಾಷಿಂಗ್ಟನ್‌/ನವದೆಹಲಿ: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಟೀಕೆ ಮಾಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರಿಗೆ ತವರಲ್ಲೇ ತಪರಾಕಿ ಸಿಕ್ಕಿದೆ. ಒಬಾಮಾ ಅವರು ಭಾರತವನ್ನು ಟೀಕಿಸುವುದಕ್ಕೆ ಶಕ್ತಿ ವ್ಯಯಿಸುವ ಬದಲು ಪ್ರಶಂಸೆಗೆ ಆ ಶಕ್ತಿಯನ್ನು ಬಳಸಿಕೊಳ್ಳಲಿ ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕ ಆಯೋಗದ ಮಾಜಿ ಆಯುಕ್ತ ಜಾನಿ ಮೂರ್‌ ಅವರು ತಿರುಗೇಟು ಕೊಟ್ಟಿದ್ದಾರೆ. ಇದೇ ವೇಳೆ ಭಾರತದ ಸಚಿವರಾದ ರಾಜನಾಥ್‌ ಸಿಂಗ್‌ ಹಾಗೂ ಮುಖ್ತಾರ್‌ ಅಬ್ಬಾಸ್‌ ನಖ್ವಿ ಕೂಡ ಒಬಾಮಾಗೆ ಬಿಸಿ ಮುಟ್ಟಿಸಿದ್ದಾರೆ.

ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಶ್ನಿಸಬೇಕಿತ್ತು. ನಾನೇನಾದರೂ ಅಧ್ಯಕ್ಷ ಆಗಿದ್ದಿದ್ದರೆ ಹಾಗೆ ಮಾಡುತ್ತಿದ್ದೆ ಎಂದು ಒಬಾಮಾ ಹೇಳಿಕೆ ನೀಡಿದ್ದರು. ಇದಕ್ಕೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಮಾತನಾಡಿರುವ ಅಮೆರಿಕದ ಧಾರ್ಮಿಕ ನಾಯಕರೂ ಆಗಿರುವ ಜಾನಿ ಮೂರ್‌, ಮಾನವ ಇತಿಹಾಸದಲ್ಲೇ ಭಾರತ ಅತ್ಯಂತ ವೈವಿಧ್ಯಮಯ ದೇಶ. ಅಮೆರಿಕದಂತೆಯೇ ಅದು ಕೂಡ ಪರಿಪೂರ್ಣ ದೇಶವಲ್ಲ. ಆದರೆ ವಿವಿಧತೆಯೇ ಅದರ ಶಕ್ತಿ. ಭಾರತದಿಂದ ಅಮೆರಿಕ ಸಾಕಷ್ಟನ್ನು ಕಲಿಯಬಹುದು. ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ದೇಶ ಭಾರತ. ಅದು ಧರ್ಮಗಳ ಪ್ರಯೋಗ ಶಾಲೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತ​ದಲ್ಲಿನ ‘ಹುಸೇನ್‌ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ

ಭಾರತದಲ್ಲೂ ಆಕ್ರೋಶ
ಒಬಾಮಾ ಹೇಳಿಕೆಗೆ ಭಾರತದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಮಾತನಾಡಿರುವ ರಾಜನಾಥ್‌ ಸಿಂಗ್‌, ವಿಶ್ವದಲ್ಲಿರುವ ಎಲ್ಲ ಜನರು ಕುಟುಂಬ ಸದಸ್ಯರು ಎಂದು ಪರಿಗಣಿಸುವ ಏಕೈಕ ದೇಶ ಭಾರತ ಎಂಬುದನ್ನು ಒಬಾಮಾ ಮರೆಯಬಾರದು. ಎಷ್ಟು ಮುಸ್ಲಿಂ ದೇಶಗಳ ಮೇಲೆ ದಾಳಿ ಮಾಡಿದ್ದೇನೆ ಎಂಬುದರ ಬಗ್ಗೆ ಒಬಾಮಾ ಯೋಚಿಸಬೇಕು ಎಂದು ಕಿಡಿಕಾರಿದ್ದಾರೆ.
ಭಾರತದಲ್ಲಿ ಇಂದು ಎಲ್ಲ ಸಮಾಜಗಳೂ ಅಭಿವೃದ್ಧಿ ಹೊಂದುತ್ತಿವೆ. 1984ರಲ್ಲಿ ನಡೆದಂತಹ ಗಲಭೆ ಭಾರತದಲ್ಲಿ ಈಗ ನಡೆಯುತ್ತಿಲ್ಲ ಎಂದು ಮುಖ್ತಾರ್‌ ಅಬ್ಬಾಸ್‌ ನಖ್ವಿ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ