ಧೋತಿ ಉಟ್ಟು ಬ್ಯಾಟಿಂಗ್ ಬೌಲಿಂಗ್: ಸಂಸ್ಕೃತದಲ್ಲಿ ಕಾಮೆಂಟರಿ: ವೀಡಿಯೋ ವೈರಲ್
ಮಧ್ಯಪ್ರದೇಶದಲ್ಲಿ ಸಂಸ್ಕೃತಿಯ ಉಳಿವಿಗಾಗಿ ಸಂಘಟನೆಯೊಂದು ಕ್ರಿಕೆಟ್ ಟೂರ್ನ್‌ಮೆಂಟ್ ಆಯೋಜಿಸಿದ್ದು, ಈ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಟಗಾರರು ಧೋತಿ ಕಚ್ಚೆ ತೊಟ್ಟು ಬ್ಯಾಟಿಂಗ್ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ಭೋಪಾಲ್: ಭಾರತೀಯ ಸನಾತನ ಸಂಸ್ಕೃತಿ ಆಚಾರ ವಿಚಾರಗಳು ಅಳಿವಿನಂಚಿನಲ್ಲಿವೇ ಎಂಬ ಕೂಗು ಆಗಾಗ ಕೇಳಿ ಬರುತ್ತಿವೆ. ಸಂಸ್ಕೃತಿಯ ಉಳಿವಿಗಾಗಿ ಕೆಲವು ಸಂಘಟನೆಗಳು ತೆರೆಮರೆಯಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿರುತ್ತಾರೆ. ನಮ್ಮ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸಿ ಉಳಿಸಿ ಬೆಳೆಸಬೇಕು ಎನ್ನುವುದು ಇವರ ಆಶಯ. ಅದೇ ರೀತಿ ಈಗ ಮಧ್ಯಪ್ರದೇಶದಲ್ಲಿ ಸಂಸ್ಕೃತಿಯ ಉಳಿವಿಗಾಗಿ ಸಂಘಟನೆಯೊಂದು ಕ್ರಿಕೆಟ್ ಟೂರ್ನ್‌ಮೆಂಟ್ ಆಯೋಜಿಸಿದ್ದು, ಈ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಟಗಾರರು ಧೋತಿ ಕಚ್ಚೆ ತೊಟ್ಟು ಬ್ಯಾಟಿಂಗ್ ಬೌಲಿಂಗ್ ವಿಶೇಷವಾಗಿತ್ತು.
ಅಂದಹಾಗೆ ಮಧ್ಯಪ್ರದೇಶದ ಸಂಸ್ಕೃತಿ ಬಚಾವೋ ಮಂಚ್ ಸಂಘಟನೆ ರಾಜಧಾನಿ ಭೋಪಾಲ್‌ನಲ್ಲಿ ಈ ವಿಶೇಷ ಕ್ರಿಕೆಟ್ ಟೂರ್ನ್‌ಮೆಂಟ್ ಆಯೋಜಿಸಿತ್ತು. ಈ ಟೂರ್ನ್‌ಮೆಂಟ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು ಎಂದು ಆಯೋಜಕರು ಹೇಳಿದ್ದಾರೆ. ಈ ವಿಶೇಷ ಪಂದ್ಯಾವಳಿಯ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಟ್ವಿಟ್ ಮಾಡಿದ್ದು, 6 ನಿಮಿಷಗಳ ಈ ವೀಡಿಯೋದಲ್ಲಿ ಆಟಗಾರರು ಧೋತಿ, ಪಂಚೆ, ಕಚ್ಚೆ ತೊಟ್ಟು ಬ್ಯಾಟಿಂಗ್ ಬೌಲಿಂಗ್ ಫೀಲ್ಡಿಂಗ್ ಮಾಡುವುದನ್ನು ಕಾಣಬಹುದಾಗಿದೆ. ನಮ್ಮ ಪ್ರಾಚೀನ ಸಂಸ್ಕೃತ ಭಾಷೆಯಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯ ಕಾಮೆಂಟರಿ ಹೇಳುತ್ತಿದ್ದಿದ್ದು, ಈ ಕ್ರಿಕೆಟ್ ಟೂರ್ನ್‌ಮೆಂಟ್‌ನ ಇನ್ನೊಂದು ವಿಶೇಷತೆ.
ಗುಜರಾತ್‌ನಲ್ಲಿ 50 ಸಾವಿರ ಜನರಿಂದ ಏಕಕಾಲಕ್ಕೆ ಸೂರ್ಯನಮಸ್ಕಾರ ಮಾಡಿ ಗಿನ್ನೆಸ್ ವಿಶ್ವದಾಖಲೆ: ಮೋದಿ ಅಭಿನಂದನೆ
ಇನ್ನು ಈ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಗೆದ್ದ ತಂಡದ ಸದಸ್ಯರನ್ನು ಸಂಸ್ಕೃತಿ ಬಚಾವೋ ಮಂಚ್ ಸಂಘಟನೆ, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ದರ್ಶನಕ್ಕೆ ಕರೆದೊಯ್ಯಲಿದೆ ಎಂದು ಸಂಘಟನೆ ಹೇಳಿದೆ. ಅದೇನೆ ಇರಲಿ ಸಂಸ್ಕೃತಿಯ ಉಳಿವಿಗಾಗಿ ಧೋತಿಯುಟ್ಟು ಕ್ರಿಕೆಟ್ ಇವರು ವಿದೇಶಿ ಆಟ ಕ್ರಿಕೆಟ್ ಆಡಿದ್ದೇಕೆ? ಧೋತಿಯುಟ್ಟು ಕಬ್ಬಡಿ ಕೋಕೋ ಆಡಬಹುದಿತ್ತಲ್ಲ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕ್ರಿಕೆಟ್ ವಸಾಹತುಸಾಹಿಗಳ ಆಟ ಸಂಸ್ಕೃತಿ ಉಳಿಸುವವರು ಈ ಆಟವನ್ನೇಕೆ ಆಡಿದರು, ಬೇರೆ ದೇಶಿ ಆಟ ಇರಲಿಲ್ಲವೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬ್ರಿಟಿಷರ ಆಟ ಆಡುವುದರಿಂದ ಸಂಸ್ಕೃತಿ ಹೇಗೆ ಉಳಿಯಲಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದು, ಈ ವೀಡಿಯೋ ಒಳ್ಳೆ ಮಜಾ ನೀಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.