ಕೊಟ್ಟ ಮಾತು ಉಳಿಸಿಕೊಂಡ ಸ್ಮೃತಿ ಇರಾನಿ, ಅಮೇಥಿಯಲ್ಲೇ ಮನೆ ನಿರ್ಮಾಣ ಮಾಡಿದ ಕೇಂದ್ರ ಸಚಿವೆ!
ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಅಮೇಥಿಯಲ್ಲಿಯೇ ಮನೆ ಕಟ್ಟಿ ವಾಸವಿರುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ 2019ರಲ್ಲಿ ಹೇಳಿದ್ದರು. ಅದರಂತೆ ಅವರು ಅಮೇಥಿಯಲ್ಲಿ ಹೊಸ ಮನೆ ಕಟ್ಟಿಸಿದ್ದು, ಶೀಘ್ರದಲ್ಲಿಯೇ ಇದರ ಗೃಹಪ್ರವೇಶ ಕೂಡ ನಡೆಯಲಿದೆ.
ನವದೆಹಲಿ (ಫೆ.1): ಕೊಟ್ಟ ಮಾತಿನಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಲ್ಲಿ ತಮ್ಮ ಮನೆ ನಿರ್ಮಿಸಿದ್ದಾರೆ. 2021ರಲ್ಲಿ ಅಮೇಥಿಯಲ್ಲಿ ಮನೆ ನಿರ್ಮಾಣಕ್ಕಾಗಿ 11 ಬಿಸ್ವಾ ಭೂಮಿಯನ್ನು ಖರೀದಿ ಮಾಡಿದ್ದರು. ಈ ಜಮೀನಿನಲ್ಲಿ ಮನೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಸ್ಮೃತಿ ಇರಾನಿ ಮನೆಯ ಗೃಹ ಪ್ರವೇಶ ಮಾಡಲಿದ್ದು, ಬಳಿಕ ಅಲ್ಲಿಯೇ ವಾಸ ಮಾಡಲು ಆರಂಭಿಸಲಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೊಸ ಮನೆ ಅದ್ಭುತವಾಗಿ ಸಿದ್ಧವಾಗಿದ್ದು, ಗೃಹಪ್ರವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸ್ಮೃತಿ ಇರಾನಿ ಬೆಂಬಲಿಗರು ಹಾಗೂ ಸ್ಥಳೀಯ ಬಿಜೆಪಿ ನಾಯಕರಲ್ಲಿಯೂ ಈ ಕುರಿತಾಗಿ ಉತ್ಸಾಹದ ವಾತಾವರಣವಿದ್ದು, ಮನೆಯ ಕೆಲವು ಚಿತ್ರಗಳೂ ವೈರಲ್ ಆಗಿದೆ. 2019 ರ ಲೋಕಸಭೆ ಚುನಾವಣೆ ಸಮಯದ ಸಮಾವೇಶದಲ್ಲಿ ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರು ಜಿಲ್ಲೆಯಲ್ಲಿ ಶೀಘ್ರದಲ್ಲೇ ತಮ್ಮ ಮನೆಯನ್ನು ನಿರ್ಮಿಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಅದರಂತೆ ಅವರು ಅಮೇಥಿಯ ಗೌರಿಗಂಜ್‌ನ ಮೆದಾನ ಮಾವಾಯಿಯಲ್ಲಿ ಜಮೀನು ಖರೀದಿಸಿದ್ದರು. ಇದಾದ ಬಳಿಕ ಅವರ ಮಗ ಭೂಮಿಪೂಜೆಯೊಂದಿಗೆ ಮನೆ ಕಟ್ಟುವ ಪ್ರಕ್ರಿಯೆ ಆರಂಭಿಸಿದ್ದರು. ಅಲ್ಲಿ ಈಗ ಮನೆ ಬಹುತೇಕ ಸಿದ್ಧವಾಗಿದ್ದು, ಶೀಘ್ರದಲ್ಲೇ ಅದರ ಗೃಹ ಪ್ರವೇಶ ನಡೆಯಲಿದೆ.
ಸ್ಥಳೀಯ ಜನರು ತಮ್ಮ ಸಂಸದರನ್ನು ಭೇಟಿ ಮಾಡಲು ದೆಹಲಿಗೆ ಹೋಗಬೇಕಾಗಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿ ಜನರಿಗೆ ಭರವಸೆ ನೀಡಿದ್ದರು. ಅಮೇಠಿಯಲ್ಲಿಯೇ ಮನೆ ನಿರ್ಮಿಸಿ ಜನರ ಸಮಸ್ಯೆ ಆಲಿಸಲಿದ್ದೇನೆ ಎಂದಿದ್ದರು. ಇದಾದ ನಂತರ ಸ್ಮೃತಿ ಇರಾನಿ ಅವರು ಮನೆ ಕಟ್ಟುವ ಪ್ರಕ್ರಿಯೆ ಆರಂಭಿಸಿದ್ದರು. ಇದೇ ತಿಂಗಳಲ್ಲಿ ಮನೆಯ ಗೃಹ ಪ್ರವೇಶ ನಡೆಯಲಿದೆ ಎಂದು ವರದಿಯಾಗಿದೆ.
ಸ್ಮೃತಿ ಇರಾನಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ. ಚುನಾವಣಾ ಕುರಿತಾದ ಕೆಲಸಗಳು ಇದೇ ಮನೆಯಿಂದ ನಡೆಸಲಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಜತೆಗೆ ಇಲ್ಲಿ ಜನತಾ ದರ್ಬಾರ್ ನಡೆಸುವ ಮೂಲಕ ಜನರ ಸಮಸ್ಯೆ ಆಲಿಸಲಿದ್ದಾರೆ. ಈ ಹಿಂದೆಯೂ ಕೇಂದ್ರ ಸಚಿವರ ಮನೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಗೊತ್ತೇ ಇದೆ. ಇತ್ತೀಚೆಗೆ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರವು ಈ ಹೊಸ ಮನೆಯಲ್ಲಿಯೇ ನಡೆಯಿತು, ಇದರಲ್ಲಿ ಸ್ಮೃತಿ ಇರಾನಿ ಭಾಗವಹಿಸಿದ್ದರು.
ಹೊಸ ನಿವಾಸದ ಬಗ್ಗೆ ಅಮೇಥಿಯ ಬಿಜೆಪಿ ನಾಯಕ ಅತುಲ್ ವಿಕ್ರಮ್ ಸಿಂಗ್ ಮಾತನಾಡಿದ್ದು, ಇನ್ನು ತಮ್ಮ ಸಂಸದರನ್ನು ಭೇಟಿಯಾಗಲು ಜನರು ದೆಹಲಿಗೆ ಹೋಗಬೇಕಿಲ್ಲ. ಅವರು ಇನ್ನು ಅಮೇಥಿಯಲ್ಲಿಯೇ ಸಿಗುತ್ತಾರೆ. ಕೇಂದ್ರ ಸಚಿವರು ಸಾರ್ವಜನಿಕರಿಗೆ ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಈ ಹಿಂದೆ ಸಂಸದರನ್ನು ಭೇಟಿಯಾಗಲು ಜನರು ದೆಹಲಿಗೆ ಹೋಗಬೇಕಿತ್ತು. ಆದರೆ, ಅವರ ಭೇಟಿ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಮುಟ್ಟು ಅಂಗವೈಕಲ್ಯತೆಯಲ್ಲ, ಮಹಿಳೆಯರ ಪಿರೇಡ್ಸ್ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ
ಇದೇ ವೇಳೆ ಕೇಂದ್ರ ಸಚಿವರಿಗೆ ಅಮೇಥಿಯಲ್ಲಿಯೇ ಮನೆ ಇದ್ದಲ್ಲಿ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರವೀಣ್ ಪಾಂಡೆ. ಜನರು ಸಮಸ್ಯೆಗಳಿಂದ ದೆಹಲಿಗೆ ಓಡಬೇಕಾಗಿಲ್ಲ. ಅದನ್ನು ಇಲ್ಲಿಯೇ ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ಬೇಕು ಎಂದ ಮಹುವಾ, ತಿರುಗೇಟು ನೀಡಿದ ಸ್ಮೃತಿ ಇರಾನಿ!