Asianet Suvarna News Asianet Suvarna News

ರಾಜೀವ್ ಚಂದ್ರಶೇಖರ್ ಕಾಶ್ಮೀರ ಪ್ರವಾಸದಲ್ಲಿ ಕಂಡ ಹೊಸ ಭರವಸೆ, ಅಪೂರ್ವ ಲೋಕ

ಮೋದಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 75 ವರ್ಷಗಳಿಂದ ಅಲುಗಾಡದೆ ನಿಂತಿದ್ದ ಅಭಿವೃದ್ಧಿಯ ಗಡಿಯಾರದ ಮುಳ್ಳನ್ನು ಬಹಳ ಮುಂದಕ್ಕೆ ಸರಿಸಿದ್ದಾರೆ. ನಿಸ್ಸಂದಿಗ್ಧವಾಗಿ ಇದೆಲ್ಲವೂ ಜಮ್ಮು ಮತ್ತು ಕಾಶ್ಮೀರದ ಆಡಳಿತ, ಪೊಲೀಸ್‌ ಮತ್ತು ಭದ್ರತಾ ಪಡೆಗಳು ಮಾಡಿರುವ ಪ್ರಯತ್ನ, ಸೇವೆ ಮತ್ತು ತ್ಯಾಗದಿಂದ ಆಗಿದೆ.

Union Minister Rajeev Chandrasekhar Visits Jammu and Kashmir as part of Outreach Programme hls
Author
Bengaluru, First Published Oct 12, 2021, 1:44 PM IST
  • Facebook
  • Twitter
  • Whatsapp

ನಾನು ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ನಾನು ಇದುವರೆಗೆ ದೇಶ ಮತ್ತು ಪ್ರಪಂಚದಾದ್ಯಂತ ಸುತ್ತಾಡಿದ್ದರೂ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದು ವಿಷಾದದ ಸಂಗತಿ, ಆದರೆ ನಿಜ.

ಪ್ರಾಮಾಣಿಕವಾಗಿ ಹೇಳುತ್ತೇನೆ, ಕೆಲವರು ಗಲಭೆ ಪೀಡಿತ ಪ್ರದೇಶ ಎಂದು ನಿರ್ಧರಿಸಿರುವ ಇಲ್ಲಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಯ ಸಚಿವನಾಗಿ ನಾನು ಏನು ಹೇಳುತ್ತೇನೆ ಅಥವಾ ಏನು ಮಾಡುತ್ತೇನೆ ಎಂಬುದರ ಬಗ್ಗೆ ಹಲವರಲ್ಲಿ ಅನುಮಾನವಿತ್ತು. ನನ್ನ ಭೇಟಿಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಬದ್ಗಾಮ್‌, ಬಾರಾಮುಲ್ಲಾ ಜಿಲ್ಲೆಗಳಲ್ಲಿ ಪ್ರಯಾಣ ಮಾಡಿದೆ. ಪ್ರಧಾನಮಂತ್ರಿಯವರ ನಿರೀಕ್ಷೆಯಂತೆ, ನನ್ನ ಕಾರ್ಯಕ್ರಮ ಜನರನ್ನು ಭೇಟಿ ಮಾಡುವುದು, ಅವರೊಂದಿಗೆ ಮಾತುಕತೆ ನಡೆಸುವುದು ಮತ್ತು ಈ ಸವಾಲಿನ ಕೋವಿಡ್‌ ಅವಧಿಯಲ್ಲಿ ಪೂರ್ಣಗೊಂಡ ಕೆಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವುದು ಆಗಿತ್ತು.

ಭಯೋತ್ಪಾದನೆಯ ಕರಿನೆರಳು

ನನ್ನ ಪ್ರವಾಸದುದ್ದಕ್ಕೂ ಜೊತೆಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಅ​ಧಿಕಾರಿಯೊಬ್ಬರ ಹೇಳಿಕೆಯೊಂದು ಪ್ರವಾಸದಾದ್ಯಂತ ನನ್ನೊಂದಿಗೆ ಉಳಿದಿತ್ತು. ಪ್ರವಾಸದ ಆರಂಭದಲ್ಲೇ ನಾನು ಅವರೊಂದಿಗೆ ಮಾತನಾಡುವಾಗ, ‘ಕಳೆದ 30 ವರ್ಷಗಳಿಂದ ಈ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಆತಂಕವಾದದಿಂದಾಗಿ ನಾವು ಹಿಂದುಳಿದ್ದೇವೆ ಎಂದು ನಮ್ಮ ರಾಜ್ಯದ ಮಕ್ಕಳಿಗೆ ಗೊತ್ತಿದೆ. ಭಾರತ ಮತ್ತು ಜಗತ್ತಿನ ಉಳಿದ ಭಾಗಗಳಂತೆಯೇ ಅವರು ಉತ್ತಮ ಜೀವನವನ್ನು ಬಯಸುತ್ತಾರೆ’ ಎಂದು ಅವರು ಹೇಳಿದ್ದರು.

ನಾನು ಹೊಸ ಉಪ ವಿಭಾಗ ಆಸ್ಪತ್ರೆ, ಚರಾರ್‌-ಇ-ಷರೀಫ್‌ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದೆ. ಯುವ ಕಾಶ್ಮೀರಿಗಳು, ಉದ್ಯಮಿಗಳು, ರೈತರು, ಸರಪಂಚರು ಮತ್ತು ಬುಡಕಟ್ಟು ಸಮುದಾಯಗಳ ಸದಸ್ಯರು ಮತ್ತು ಈ ಜಿಲ್ಲೆಗಳ ಅಧಿ​ಕಾರಿಗಳೊಂದಿಗೆ ಸಭೆ ನಡೆಸಿದೆ. ಪ್ರತಿಯೊಂದು ಸಭೆಗಳ ಸಂವಾದ ಮತ್ತು ಬೇಡಿಕೆ ಮತ್ತು ವಿನಂತಿಗಳು ವರ್ತಮಾನ ಮತ್ತು ಭವಿಷ್ಯದ ಬಗ್ಗೆಯೇ ಇದ್ದವು. ಕಳೆದುಹೋದ ಅವಕಾಶಗಳಿಗಾಗಿ ವಿಷಾದಿಸುವುದನ್ನು ಹೊರತುಪಡಿಸಿದರೆ, ಯಾರೂ ಸಹ ಗತಕಾಲವನ್ನು ನೆನಪಿಸಿಕೊಳ್ಳಲು ಬಯಸಲಿಲ್ಲ.

ಶಾಂತಿ ಅರಸಿ ತವರಿಗೆ ಮರಳಿದ್ದ ಕಾಶ್ಮೀರಿ ಪಂಡಿತರಿಗೆ ಮತ್ತೆ 90 ರ ಆತಂಕ

ಬದ್ಗಾಮ್‌ ಅಥವಾ ಬಾರಾಮುಲ್ಲಾ ಅಥವಾ ಶ್ರೀನಗರದಲ್ಲಿ ನನ್ನೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ ಯುವ ವಿದ್ಯಾರ್ಥಿಗಳು ತಮ್ಮ ಕೌಶಲ್ಯದ ಅವಕಾಶಗಳನ್ನು ಸುಧಾರಿಸುವ ಅಥವಾ ತಮ್ಮ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ನಿರ್ದಿಷ್ಟವಾಗಿ ಚರ್ಚಿಸಿದರು. ಚರಾರ್‌-ಇ-ಶೇರಿಫ್‌ನಲ್ಲಿರುವ ಎಸ್‌ಡಿಎಚ್‌ (ಆಸ್ಪತ್ರೆ) ಉತ್ತಮ ಗುಣಮಟ್ಟದ ಆರೋಗ್ಯ ಕೇಂದ್ರವಾಗಿದೆ. ಅದು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ, ನಿಜವಾಗಿಯೂ ಧನಾತ್ಮಕ ಮತ್ತು ಸಮರ್ಥ ಸಿಬ್ಬಂದಿಯನ್ನು ಹೊಂದಿದೆ. ಇದು ಗ್ರಾಮಸ್ಥರು ದೂರದ ಜಿಲ್ಲಾ ಆಸ್ಪತ್ರೆಗೆ ದೀರ್ಘ ಪ್ರಯಾಣ ಮಾಡಬೇಕಾದ ಕಷ್ಟವನ್ನು ನಿವಾರಿಸಿದೆ.

ಯುವಜನತೆಯ ಬೇಡಿಕೆ

ಬದ್ಗಾಮ್‌ ಪದವಿ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ, ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದ ಪಾಲಿಟೆಕ್ನಿಕ್‌ ಕಾಲೇಜಿನ ಯುವತಿಯರ ಗುಂಪು ನನ್ನೊಂದಿಗಿನ ಸಂವಾದದಲ್ಲಿ ‘ನಮ್ಮ ಪಾಲಿಟೆಕ್ನಿಕ್‌ನಲ್ಲಿ ನಮಗೆ ಹೊಸ ಕೋರ್ಸ್‌ಗಳು ಬೇಕು, ನಮಗೆ ಕೇವಲ ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಡಿಪ್ಲೊಮಾ ಬದಲು ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್‌ ಕೋರ್ಸ್‌ಗಳು ಬೇಕು’ ಎಂದಿತು. ಬದ್ಗಾಂನಲ್ಲಿರುವ ಐಟಿಐ ನಾನು ಭೇಟಿ ನೀಡಿರುವ ಅತ್ಯುತ್ತಮ ಐಟಿಐಗಳಲ್ಲೊಂದು. ಇದು ಅತ್ಯುತ್ತಮ ಆಟೋಮೋಟಿವ್‌ ನಿರ್ವಹಣೆ ತರಬೇತಿ ಸೌಲಭ್ಯವನ್ನು ಹೊಂದಿದೆ. ನಾನು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದೆ. ಅವರಲ್ಲಿ ಬಹುತೇಕರು ಯುವತಿಯರು. ನಮ್ಮ ಸಂವಾದಗಳಲ್ಲಿ ಅವಕಾಶಗಳ ಬಗ್ಗೆ ವಿನಂತಿಗಳು ಇರುತ್ತಿದ್ದವು.

ಜಿಲ್ಲೆಯಲ್ಲಿ ಆಟೋಮೊಬೈಲ್‌ ಸಂಬಂಧಿ​ ಕೈಗಾರಿಕೆಗಳನ್ನು ಆರಂಭಿಸಿದರೆ, ತರಬೇತಿ ಪಡೆದ ನಂತರ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ಮನವಿ ಮಾಡಿದರು. ಗೃಹ ಸಚಿವ ಅಮಿತ್‌ ಶಾ ಅವರ 50,000 ಕೋಟಿ ರು. ಹೂಡಿಕೆಯ ಘೋಷಣೆಯ ಬಗ್ಗೆ ಇನ್ನಷ್ಟುತಿಳಿದುಕೊಳ್ಳಲು ಅವರು ಕಾತುರರಾಗಿದ್ದರು. ಇದು ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿದೆ ಎಂದು ಅವರಿಗೆ ಗೊತ್ತಿದೆ. ಏಕೆಂದರೆ ನರೇಂದ್ರ ಮೋದಿಯವರ ಸರ್ಕಾರದ 3 ಹಂತದ ವ್ಯವಸ್ಥೆಯ ಮೂಲಕ ಈ ಹಣವು ಆರ್ಥಿಕ ಚಟುವಟಿಕೆಯನ್ನು ವಿಸ್ತರಿಸುತ್ತದೆ ಮತ್ತು ಜನರನ್ನು ನೇರವಾಗಿ ತಲುಪುತ್ತದೆ ಎಂಬ ವಿಶ್ವಾಸ ಅವರಿಗಿದೆ.

ಕೌಶಲ್ಯವು ಉದ್ಯೋಗಾವಕಾಶದ ಹೆಬ್ಬಾಗಿಲು ಎಂಬ ನರೇಂದ್ರ ಮೋದಿಯರ ದೃಷ್ಟಿಕೋನ ಮತ್ತು ಕೌಶಲ್ಯಕ್ಕೆ ಬಲವಾದ ಉದ್ಯೋಗ ಸಂಪರ್ಕಗಳನ್ನು ಕಲ್ಪಿಸಲು ಅವರು ನೀಡಿರುವ ನಿರ್ದೇಶನಗಳ ಬಗ್ಗೆ ನಾನು ತಿಳಿಸಿದಾಗ ವಿದ್ಯಾರ್ಥಿಗಳಲ್ಲಿ ನಿಜವಾದ ಉತ್ಸಾಹ ಕಂಡುಬಂತು. ನಾನು ಭೇಟಿ ನೀಡಿರುವ ಪ್ರತಿಯೊಂದು ರಾಜ್ಯದ ಯುವಕರಂತೆ, ಇಲ್ಲಿನ ಯುವಕರು ಸಹ ಐಟಿ ಉದ್ಯಮಕ್ಕೆ ಸೇರಲು ಬಯಸುತ್ತಾರೆ. ಏಕೆಂದರೆ ಅವರು ಭಾರತದ ಉಳಿದ ಭಾಗಗಳ ಪ್ರಗತಿಯ ಬಗ್ಗೆ ಓದಿದ್ದಾರೆ ಮತ್ತು ಕೇಳಿದ್ದಾರೆ.

ಯುವಜನತೆಗೆ ಭರವಸೆ

ಬದ್ಗಾಮ್‌ ಮತ್ತು ಬಾರಾಮುಲ್ಲಾದಲ್ಲಿ ರತ್ನಗಂಬಳಿ, ಪೇಪರ್‌ ಮ್ಯಾಚೆ ಮತ್ತು ಉಡುಪುಗಳನ್ನು ರಫ್ತು ಮಾಡುವ ಸ್ಥಳೀಯ ಕುಶಲಕರ್ಮಿಗಳ ಎರಡು ಸಾಂಪ್ರದಾಯಿಕ ಕೌಶಲ್ಯ ಗುಂಪುಗಳನ್ನು ನಾನು ಭೇಟಿ ಮಾಡಿದೆ. ಕಳೆದ ಹಲವು ವರ್ಷಗಳಲ್ಲಿ, ಈ ಕೌಶಲ್ಯಗಳು ಮತ್ತು ಕುಶಲಕರ್ಮಿಗಳ ಸಂಖ್ಯೆ ಕಡಿಮೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಈ ಸುಂದರ ಉತ್ಪನ್ನಗಳ ಪ್ರಸ್ತುತ ರಫ್ತು 600 ಕೋಟಿ ರು.ಗಳಷ್ಟಿದೆ ಮತ್ತು ಪ್ರಪಂಚದಲ್ಲಿ ಇವುಗಳಿಗೆ 10-15 ಪಟ್ಟು ಹೆಚ್ಚು ಬೇಡಿಕೆ ಇದೆ. ಅದು ಸುಮಾರು 25-30 ಲಕ್ಷ ಕುಶಲಕರ್ಮಿಗಳಿಗೆ ಉದ್ಯೋಗ ಒದಗಿಸುತ್ತದೆ. ಸಾಂಪ್ರದಾಯಿಕ ಕೌಶಲ್ಯಗಳಿಗೆ ಸಂಬಂಧಿ​ಸಿದ ಉದ್ಯಮದ ಬಗ್ಗೆ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಕ್ಲಸ್ಟರ್‌ಗಳ ಬೆಳವಣಿಗೆ, ಅವುಗಳ ವ್ಯವಹಾರಗಳು ಮತ್ತು ಈ ವ್ಯವಹಾರಗಳನ್ನು ಬೆಳೆಸಲು ಕುಶಲಕರ್ಮಿಗಳಿಗೆ ಅಗತ್ಯವಿರುವ ಕೌಶಲ್ಯವನ್ನು ಬೆಂಬಲಿಸುವುದಾಗಿ ನಾನು ಭರವಸೆ ನೀಡಿದ್ದೇನೆ.

ಕಣಿವೆ ನಾಡಿನ ಭೇಟಿ, ಕೇಂದ್ರಕ್ಕೆ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್

ಸರ್ಕಾರದ ಮಹತ್ವಾಕಾಂಕ್ಷೆ

ನಾನು ನಡೆಸಿದ ಯಾವ ಸಭೆಯಲ್ಲೂ ಭದ್ರತೆ ಅಥವಾ ಭಯೋತ್ಪಾದನೆಯನ್ನು ಒಂದು ಸಮಸ್ಯೆಯಾಗಿ ಯಾರೂ ಪ್ರಸ್ತಾಪಿಸಲಿಲ್ಲ. ನನಗೆ ಖುದ್ದು ಅದರ ಅನುಭವವಾಯಿತು. ಭಯಾನಕವೆನಿಸಿದ್ದ ಶ್ರೀನಗರದ ಲಾಲ್‌ ಚೌಕ್‌ ಸಹ ಪ್ರತಿದಿನ ಸಂಜೆ ತ್ರಿವರ್ಣ ಧ್ವಜದ ಹಾರಾಟದಲ್ಲಿ ಮಿನುಗುತ್ತಿತ್ತು. ಒಬ್ಬ ರಾಜಕೀಯ ನೇತಾರ ತನ್ನ ಜನರ ಹೃದಯ ಮತ್ತು ಮನಸ್ಸಿನಲ್ಲಿ ಎಷ್ಟುಆಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆಯನ್ನು ತುಂಬಿದ್ದಾನೆ ಎಂಬುದರ ಮೇಲೆ ಅವನ ಸಾಧನೆಯನ್ನು ಅಳೆಯಬೇಕು ಎಂಬುದು ನನ್ನ ಅನಿಸಿಕೆ. ಆ ಲೆಕ್ಕದಲ್ಲಿ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 75 ವರ್ಷಗಳಿಂದ ಅಲುಗಾಡದೆ ನಿಂತಿದ್ದ ಅಭಿವೃದ್ಧಿಯ ಗಡಿಯಾರದ ಮುಳ್ಳನ್ನು ಬಹಳ ಮುಂದಕ್ಕೆ ಸರಿಸಿದ್ದಾರೆ.

ನಿಸ್ಸಂದಿಗ್ಧವಾಗಿ ಇದೆಲ್ಲವೂ ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ಜಮ್ಮು ಮತ್ತು ಕಾಶ್ಮೀರದ ಆಡಳಿತ, ಪೊಲೀಸ್‌ ಮತ್ತು ಭದ್ರತಾ ಪಡೆಗಳು ಮಾಡಿರುವ ಪ್ರಯತ್ನ, ಸೇವೆ ಮತ್ತು ತ್ಯಾಗದಿಂದ ಆಗಿದೆ. ನಮ್ಮ ನೆರೆಹೊರೆಯ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ, ಮಹಿಳೆಯರು ಮತ್ತು ಯುವಕರು ತಮ್ಮ ಆಶಯಗಳು ಮತ್ತು ಆಕಾಂಕ್ಷೆಗಳನ್ನು ನಾಶಪಡಿಸುವ ದಬ್ಬಾಳಿಕೆಯ ಆಡಳಿತಗಳ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ಪ್ರಧಾನಿ ಮೋದಿ ಸರ್ಕಾರವು ನಮ್ಮ ಯುವಕರು ಕನಸು ಕಾಣಲು ಮತ್ತು ಸರ್ಕಾರದೊಂದಿಗೆ ಹೆಚ್ಚು ಹೆಚ್ಚು ಭಾಗವಹಿಸಲು ಅನುವು ಮಾಡಿಕೊಡುತ್ತಿದೆ. ಭಾರತವು ಸ್ವಾತಂತ್ರ್ಯದ 100ನೇ ವರ್ಷದೆಡೆಗೆ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ನಮ್ಮ ಯುವಕರಿಗೆ ಭರವಸೆ ಮತ್ತು ಆಕಾಂಕ್ಷೆಯ ದಾರಿದೀಪವಾಗಿದೆ.

ನವ ಭಾರತದ ಭವಿಷ್ಯ

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಹಣೆಬರಹವನ್ನು ಮೂರು ಊಳಿಗಮಾನ್ಯ ಕುಟುಂಬಗಳು ಮತ್ತು ಬಹುಶಃ ಒಬ್ಬ ಕೇಂದ್ರ ಮಂತ್ರಿ ನಿಯಂತ್ರಿಸುತ್ತಿದ್ದರು ಎಂದು ಹೇಳುತ್ತಿದ್ದುದನ್ನು ನನ್ನ ಭೇಟಿಯ ಸಮಯದಲ್ಲಿ ಕೇಳಿದೆ. ಈಗ ನರೇಂದ್ರ ಮೋದಿಯವರ ಆಡಳಿತ ಮತ್ತು ಅವರ 77 ಸಚಿವರ ತಂಡವು ಭಾರತದ ಎಲ್ಲ ಜನರಂತೆ ಜಮ್ಮು ಮತ್ತು ಕಾಶ್ಮೀರದ ಜನರ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ. ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್‌, ಸಬ್ಕಾ ಪ್ರಯಾಸ್‌ ಎಂಬ ಯಾರೂ ತಡೆಯಲಾಗದ ಮತ್ತು ಎದುರಿಸಲಾಗದ ಮಂತ್ರದೊಂದಿಗೆ ನವ ಭಾರತವನ್ನು ಮುನ್ನಡೆಸುತ್ತಿದೆ.

- ರಾಜೀವ್‌ ಚಂದ್ರಶೇಖರ್‌, ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ

Follow Us:
Download App:
  • android
  • ios