Asianet Suvarna News Asianet Suvarna News

ಶಾಂತಿ ಅರಸಿ ತವರಿಗೆ ಮರಳಿದ್ದ ಕಾಶ್ಮೀರಿ ಪಂಡಿತರಿಗೆ ಮತ್ತೆ 90 ರ ಆತಂಕ

- ಕಾಶ್ಮೀರದಲ್ಲಿ ಮತ್ತೆ 90ರ ಆತಂಕ

- ಹಿಂದೂಗಳನ್ನು ಗುರಿಯಾಗಿಸಿ ಮತ್ತೆ ಆರಂಭವಾದ ಹತ್ಯಾಕಾಂಡ

- ಶಾಂತಿ ಅರಸಿ ತವರಿಗೆ ಮರಳಿದ್ದ ಕಾಶ್ಮೀರಿ ಪಂಡಿತರಿಗೆ ಮತ್ತೆ ಆತಂಕ

Panic Stricken Kashmiri Pandits Returning to Jammu hls
Author
Bengaluru, First Published Oct 11, 2021, 11:38 AM IST

ನವದೆಹಲಿ (ಅ. 11): ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದೀಚೆಗೆ ಅಲ್ಪಸಂಖ್ಯಾತರು, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಲಾಗುತ್ತಿದೆ.

ಈ ಬೆಳವಣಿಗೆಯ ನಂತರ ಕಾಶ್ಮೀರದ ಭದ್ರತಾ ಪರಿಸ್ಥಿತಿ ಹದಗೆಡುತ್ತಿದ್ದು, 90ರ ದಶಕದಲ್ಲಿ ನಡೆದ ಅರಾಜಕ ಪರಿಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ಅದಕ್ಕೆ ಸರಿಯಾಗಿ ಸದ್ಯದ ಪರಿಸ್ಥಿತಿ ಕಂಡು ಭೀತಿಗೊಂಡ ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯವನ್ನು ತೊರೆಯಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ 90ರ ದಶಕದಲ್ಲಿ ಏನಾಗಿತ್ತು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾಶ್ಮೀರಿ ಪಂಡಿತರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಯತ್ನ ಮತ್ತೆ ವಿಫಲವಾಯಿತೇ ಎಂಬ ಮಾಹಿತಿ ಇಲ್ಲಿದೆ.

ಕಣಿವೆಯಲ್ಲಿ ಏನಾಗುತ್ತಿದೆ?

ಕಳೆದ ಕೆಲ ದಿನಗಳಿಂದ ವೈದ್ಯರು, ಸರ್ಕಾರಿ ಶಾಲೆ ಶಿಕ್ಷಕ, ಪ್ರಾಂಶುಪಾಲ, ಬೀದಿಬದಿ ವ್ಯಾಪಾರಿ ಸೇರಿದಂತೆ ಏಳು ಜನರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಇವರೆಲ್ಲಾ ಸ್ಥಳೀಯ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್‌ ಸಮುದಾಯಕ್ಕೆ ಸೇರಿದವರು. ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ಖರನ್ನು ಗುರಿಯಾಗಿಸಿ ಕಳೆದೊಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಆರಂಭವಾಗಿರುವ ಹತ್ಯೆಯ ಪ್ರಕರಣಗಳು, ಕಾಶ್ಮೀರಿ ಪಂಡಿತರಲ್ಲಿ ಆತಂಕ ಹುಟ್ಟುಹಾಕಿದ್ದು ಅವರೆಲ್ಲಾ ಕಣಿವೆಯಿಂದ ವಲಸೆ ಆರಂಭಿಸಿದ್ದಾರೆ.

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಹೈಬ್ರೀಡ್ ಭಯೋತ್ಪಾದಕರ ಬಳಕೆ!

ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಅಸುರಕ್ಷಿತ ಕಾಶ್ಮೀರ ಕಣಿವೆಯಿಂದ ಜಮ್ಮು ವಲಯಯಕ್ಕೆ ಗುಳೆ ಶುರು ಮಾಡಿಕೊಂಡಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಪಂಡಿತರಿಗೆಂದೇ ವಿಶೇಷವಾಗಿ ಸ್ಥಾಪಿಸಲಾಗಿದ್ದ ಶೇಖ್‌ಪೋರಾ ಪ್ರದೇಶದಲ್ಲಿ ನೆಲೆಸಿದ್ದ 400ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ ಕುಟುಂಬಗಳು ಒಂದೋ ಹಿಂದೂಗಳು ಬಹುಸಂಖ್ಯಾತರಾಗಿರುವ ಜಮ್ಮು ವಲಯಕ್ಕೆ ವಲಸೆ ಹೋಗಲು ಇಲ್ಲವೇ ರಾಜ್ಯವನ್ನೇ ತೊರೆಯಲು ಆರಂಭಿಸಿದ್ದಾರೆ. ಶೇಖ್‌ಪೋರಾ ಈಗ ನಿರ್ಜನವಾಗಿದೆ.

1980ರ ದಶಕದಲ್ಲಿ ಏನಾಗಿತ್ತು?

1980ರ ದಶಕದ ದ್ವಿತೀಯಾರ್ಧ ಕಾಶ್ಮೀರ ಕಣಿವೆಯಲ್ಲಿ ವಾಸವಿದ್ದ ಪಂಡಿತ ಸಮುದಾಯಕ್ಕೆ ಅತ್ಯಂತ ಕರಾಳ ದಿನಗಳು. ಜಮ್ಮು-ಕಾಶ್ಮೀರದ ಲಿಬರೇಷನ್‌ ಫ್ರಂಟ್‌ ಮತ್ತು ಇಸ್ಲಾಮಿಕ್‌ ಉಗ್ರವಾದದ ಅಟ್ಟಹಾಸದಿಂದ ಸುಮಾರು 3.5 ಲಕ್ಷ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ಆಸ್ತಿ-ಪಾಸ್ತಿಗಳನ್ನೆಲ್ಲ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ರಾತ್ರೋರಾತ್ರಿ ಓಡಬೇಕಾದ ಪರಿಸ್ಥಿತಿ ಬಂದಿತ್ತು. 1989ರ ಸೆಪ್ಟೆಂಬರ್‌ನಲ್ಲಿ ಶಸ್ತ್ರ ಸಜ್ಜಿತ ಗುಂಪು ಬಿಜೆಪಿ ನಾಯಕ ಪಂಡಿತ ರಾಜಕೀಯ ಕಾರ‍್ಯಕರ್ತ ಟೀಕಾ ಲಾಲ್‌ ತಪ್ಲೋ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತು. ಇಲ್ಲಿಂದ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ಆರಂಭವಾಯಿತು.

ಮಸೀದಿಗಳ ಮೈಕಿನಿಂದ ಪಂಡಿತರೇ ಇಲ್ಲಿಂದ ಹೊರಡಿ ಎಂದು ಫಾರ್ಮಾನು ಹೊರಡುತ್ತಿತ್ತು. ವ್ಯವಸ್ಥಿತವಾಗಿ ನಡೆದ ಅಮಾನವೀಯ ದೌರ್ಜನ್ಯದಿಂದ ಕಾಶ್ಮೀರಿ ಹಿಂದೂಗಳು ಅಲ್ಲಿಂದ ಅನಿವಾರ‍್ಯವಾಗಿ ವಲಸೆ ಹೋಗುವಂತಾಯಿತು. 1997 ಮಾಚ್‌ರ್‍ನಲ್ಲಿ 7 ಕಾಶ್ಮೀರಿ ಪಂಡಿತರನ್ನು ಮನೆಯಿಂದ ಹೊರಗೆಳೆದುಕೊಂಡು ಬಂದ ಭಯೋತ್ಪಾದರು ಗುಂಡಿಕ್ಕಿ ಹತ್ಯೆಗೈದರು. 1998 ಜನವರಿಯಲ್ಲಿ ವಂಧಾಮಾ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಸೇರಿ 23 ಕಾಶ್ಮೀರ ಪಂಡಿತರನ್ನು ಹತ್ಯೆ ಮಾಡಲಾಯಿತು.

ಜನವರಿ 1990ರಂದು ಕಣಿವೆ ರಾಜ್ಯದ ಮಸೀದಿಗಳ ಮುಂದೆ ಬೃಹತ್‌ ಜನಸ್ತೋಮ ನೆರೆದು ಪಂಡಿತ್‌ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆ ಕೂಗಲು ಆರಂಭಿಸಿದರು. ಅಲ್ಲಿಂದ ಕಾಶ್ಮೀರಿ ಪಂಡಿತರ ಮಹಾ ವಲಸೆ ಆರಂಭವಾಯಿತು. ಮುಂದಿನ ಕೆಲ ತಿಂಗಳ ಕಾಲ ಮುಗ್ಧ ಕಾಶ್ಮೀರಿ ಪಂಡಿತರಿಗೆ ಚಿತ್ರ ಹಿಂಸೆ ನೀಡಿದರು, ಹಲವರನ್ನು ಕೊಂದರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರು. ವರ್ಷದ ಅಂತ್ಯದ ವೇಳೆಗೆ ಸುಮಾರು 3.5 ಲಕ್ಷ ಪಂಡಿತರು ಕಾಶ್ಮೀರ ತೊರೆದು ಪಲಾಯನ ಮಾಡಿದರು. ಅವರ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಲಾಯಿತು. ಅಥವಾ ತುರ್ತಾಗಿ ಕಾಶ್ಮೀರಿ ಮುಸ್ಲಿಮರಿಗೆ ಮಾರಾಟ ಮಾಡಲಾಯಿತು.

ಉಗ್ರರ ಭೀತಿ: ಕಾಶ್ಮೀರದಿಂದ ಹಿಂದೂಗಳ ಸಾಮೂಹಿಕ ಗುಳೆ!

ಪಂಡಿತರನ್ನು ಟಾರ್ಗೆಟ್‌ ಮಾಡಿದ್ದು ಏಕೆ?

ಶೇಖ್‌ ಅಬ್ದುಲ್ಲಾ 1982ರಲ್ಲಿ ನಿಧನರಾದರು. ಪುತ್ರ ಫಾರೂಕ್‌ ಅಬ್ದುಲ್ಲಾ ನ್ಯಾಷನಲ್‌ ಕಾನ್ಪರೆನ್ಸ್‌ ಪಕ್ಷದ ನೇತೃತ್ವ ವಹಿಸಿದರು. ಆದರೆ ಎರಡೇ ವರ್ಷಗಳಲ್ಲಿ ಕೇಂದ್ರ ಸರ್ಕಾರ ಎನ್‌ಸಿಪಿ ವಜಾ ಮಾಡಿ ಭಿನ್ನಮತೀಯ ಗುಲಾಂ ಮೊಹಮ್ಮದ್‌ ಶಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಇದು ಭಾರೀ ಅಸಮಾಧಾನ ಮತ್ತು ರಾಜಕೀಯ ಅಸ್ಥಿರತೆಗೆ ಕಾರಣವಾಯಿತು. ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌ ತನ್ನ ಚಟುವಟಿಕೆಗಳನ್ನು ಹೆಚ್ಚಿಸಿತು ಮತ್ತು 1984ರಲ್ಲಿ ಉಗ್ರಗಾಮಿ ನಾಯಕ ಮಕ್ಬೂಲ್‌ ಭಟ್‌ನನ್ನು ಗಲ್ಲಿಗೇರಿಸಿದಾಗಿನಿಂದ ಹಿಂದೂಗಳನ್ನು ಗುರಿಯಾಗಿಸಿ ನಡೆಸುವ ದಾಳಿಗಳು ಹೆಚ್ಚಾದವು. 1986ರಲ್ಲಿ, ರಾಜೀವ್‌ ಗಾಂಧಿ ಸರ್ಕಾರವು ಬಾಬ್ರಿ ಮಸೀದಿ ಬೀಗಗಳನ್ನು ತೆರೆದ ನಂತರ ಹಿಂದೂಗಳು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಟ್ಟನಂತರ ಕಾಶ್ಮೀರದಲ್ಲಿ ಅದರ ಕರಿನೆರಳು ಕಾಣಿಸಿಕೊಂಡಿತು. ಆಗಿನ ಕಾಂಗ್ರೆಸ್‌ ನಾಯಕ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಕ್ಷೇತ್ರ ಅನಂತನಾಗ್‌ನಲ್ಲಿ, ಹಿಂದೂ ದೇವಾಲಯಗಳ ಮೇಲೆ ಸರಣಿ ದಾಳಿಗಳು ನಡೆದವು ಮತ್ತು ಕಾಶ್ಮೀರಿ ಪಂಡಿತರ ಅಂಗಡಿಗಳು ಮತ್ತು ಆಸ್ತಿಗಳ ಮೇಲೆ ಪ್ರತ್ಯೇಕತಾವಾದಿಗಳು ದಾಳಿ ಆರಂಭಿಸಿದರು. ಇದು ಪಂಡಿತರ ಮೇಲಿನ ದಾಳಿಗೆ ಮುನ್ನುಡಿಯಾಯಿತು.

ದೆಹಲಿ, ಪುಣೆ, ವಿದೇಶಗಳಿಗೆ ಪರಾರಿ

ರಾತ್ರೋರಾತ್ರಿ ಕಣಿವೆ ಬಿಟ್ಟು ಪಲಾಯನಗೈದ ಕಾಶ್ಮೀರಿ ಪಂಡಿತರು ತಾವು ವಾಪಸ್‌ ಆಗುವುದು ಅಸಾಧ್ಯ ಎಂದು ಭಾವಿಸಿರಲಿಲ್ಲ. ಆದರೆ ಕಾಶ್ಮೀರದಲ್ಲಿ ಉಗ್ರವಾದ ಹೆಚ್ಚಾಗುತ್ತಿದ್ದ ಕಾರಣ ಮಧ್ಯಮವರ್ಗದ ಮನೆ-ಮಠಗಳನ್ನು ಕಳೆದುಕೊಂಡ ಪಂಡಿತರು ಕಣಿವೆಯಿಂದ ಬಂದು ಜಮ್ಮುವಿನಲ್ಲಿ ಟೆಂಟ್‌ಗಳಲ್ಲಿ ಬಂದು ನೆಲೆಸಲು ಆರಂಭಿಸಿದರು. ಇನ್ನೂ ಕೆಲವರು ದೆಹಲಿ, ಪುಣೆ, ಮುಂಬೈ, ಮತ್ತು ಅಹ್ಮದಾಬಾದ್‌, ಜೈಪುರ, ಲಖನೌ ಮತ್ತು ವಿದೇಶಗಳಲ್ಲಿ ಹೋಗಿ ನೆಲೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವಾಪಸ್‌

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರಿ ಪಂಡಿತರನ್ನು ವಾಪಸ್‌ ಕರೆಸಿಕೊಳ್ಳುವ ಹಲವು ಪ್ರಯತ್ನಗಳು ನಡೆದವು. ಸಾಮಾಜಿಕ ಜಾಲತಾಣಗಳಲ್ಲಿ ‘ಹಮ್‌ ವಾಪಸ್‌ ಜಾಯೇಂಗೇ’ ಟ್ರೆಂಡ್‌ ಸಹ ಆರಂಭವಾಗಿತ್ತು. ಕಾಶ್ಮೀರಿ ಮುಸ್ಲಿಮರೂ ಪಂಡಿತರ ಆಗಮನವನ್ನು ಸ್ವಾಗತಿಸಿದ್ದರು. ಆದರೆ ಅವರಿಗೆ ಪುನರ್‌ವಸತಿ ಕಲ್ಪಿಸಿಕೊಡುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ನಡುವೆ 2019 ಆ.5ರಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್‌ 370ಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು ಕಾಶ್ಮೀರಿ ಪಂಡಿತರಲ್ಲಿ ಸಂತಸ ತಂದಿತ್ತು.

2015 ರ ಪುನರ್ವಸತಿ ಯೋಜನೆ ವಿಫಲ

ಕಾಶ್ಮೀರಿ ಪಂಡಿತರನ್ನು ವಾಪಸ್‌ ಕರೆಸಿಕೊಳ್ಳುವ ವಾಗ್ದಾನ ನೀಡಿದ್ದ ಕೇಂದ್ರ ಸರ್ಕಾರ ಪುನರ್‌ವಸತಿ ಯೋಜನೆಯ ಭಾಗವಾಗಿ ಕಳೆದ ಕೆಲ ವರ್ಷಗಳಿಂದ ಕಾಶ್ಮೀರಕ್ಕೆ ಸಾವಿರಾರು ಪಂಡಿತರು ಮರಳಿದ್ದರು. ಸರ್ಕಾರ ಅವರಿಗೆ ಉದ್ಯೋಗವನ್ನೂ ಒದಗಿಸಿತ್ತು. ಆರ್ಟಿಕಲ್‌ 370 ರದ್ದಾಗಿದ್ದರಿಂದ ಅವರಿಗೆ ಅಭದ್ರತೆಯ ಆತಂಕವೂ ದೂರವಾಗಿತ್ತು. ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 80,000 ಕೋಟಿ ರು. ಬಿಡುಗಡೆ ಮಾಡಿ ಪಂಡಿತರ ಪುನರ್ವಸತಿಗೂ ಅನುದಾನ ಮೀಸಲಿಟ್ಟಿತ್ತು.

ಕಾಶ್ಮೀರಿ ಪಂಡಿತರಿಗೆಂದೇ 25,000 ಸರ್ಕಾರಿ ಉದ್ಯೋಗ ಮೀಸಲಿಡುವ ಯೋಜನೆ ರೂಪಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ 1990ರ ದಶಕದಲ್ಲಿ ಭುಗಿಲೆದ್ದ ಇಸ್ಲಾಮಿಕ್‌ ಉಗ್ರವಾದದಿಂದಾಗಿ ಲಕ್ಷಾಂತರ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದ ರೀತಿ ಈಗಲೂ ಆಗುತ್ತದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಹಾಗಾಗಿ ಮತ್ತೆ ಕಾಶ್ಮೀರಿ ಪಂಡಿತರ ವಲಸೆ ಆರಂಭವಾಗಿದೆ.

Follow Us:
Download App:
  • android
  • ios