ಗಾಂಧಿ ಫೋಟೋ ಒಡೆದಿದ್ದೂ ಎಸ್‌ಎಫ್‌ಐ ಎಂಬ ಶಂಕೆ ಇತ್ತು, ಎಸ್‌ಎಫ್‌ಐ ವಿರುದ್ಧ ದೂರಲು ರಾಹುಲ್‌ ಆಪ್ತರಿಂದಲೇ ಫೋಟೋ ಧ್ವಂಸ?

ತಿರುವನಂತಪುರ(ಆ.20): ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್‌ ಗಾಂಧಿ ಅವರ ಕಚೇರಿಯ ಮೇಲೆ ಜೂ.24ರಂದು ಎಸ್‌ಎಫ್‌ಐ ನಡೆಸಿದ್ದ ದಾಳಿ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಫೋಟೋ ಧ್ವಂಸಗೊಳಿಸಿದ ಪ್ರಕರಣ ಸಂಬಂಧ ರಾಹುಲ್‌ ಅವರ ಕಚೇರಿ ಸಹಾಯಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಎಡರಂಗ ಬೆಂಬಲಿತ ಎಸ್‌ಎಫ್‌ಐ ಕಾರ್ಯಕರ್ತರು ವಯನಾಡಿನಲ್ಲಿರುವ ಸಂಸದರ ಕಚೇರಿಗೆ ನುಗ್ಗಿ ಪರಿಸರ ಸೂಕ್ಷ್ಮ ವಲಯ ಘೋಷಣೆ ವಿರುದ್ಧ ದಾಂಧಲೆ ನಡೆಸಿದ್ದರು. ಈ ವೇಳೆ, ಮಹಾತ್ಮ ಗಾಂಧೀಜಿ ಅವರ ಫೋಟೋವನ್ನು ಕೆಳಕ್ಕೆ ಎಸೆದು ಧ್ವಂಸ ಮಾಡಲಾಗಿತ್ತು ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಆದರೆ ಇದೀಗ ಆ ಫೋಟೋಗೆ ಹಾನಿ ಮಾಡಿದ್ದು ಕಚೇರಿ ಸಹಾಯಕ ಸೇರಿ ನಾಲ್ವರು ಎಂಬ ಸಂಗತಿ ಬಯಲಾಗಿದೆ. ಈ ಸಂಬಂಧ ಕಚೇರಿ ಸಹಾಯಕ ಕೆ.ಆರ್‌.ರತೀಶ್‌ ಕುಮಾರ್‌, ಕಚೇರಿ ಸಿಬ್ಬಂದಿ ರಾಹುಲ್‌, ಕಾಂಗ್ರೆಸ್‌ ಕಾರ್ಯಕರ್ತರಾದ ನೌಶಾದ್‌ ಹಾಗೂ ಮುಜೀಬ್‌ ಎಂಬ ನಾಲ್ವರನ್ನು ಬಂಧಿಸಲಾಗಿದೆ. ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಎಸಿಬಿ ರದ್ದು ಮಾಡಿದ ಕೋರ್ಟ್‌, ಸಿದ್ಧರಾಮಯ್ಯ ಜನರ ಕ್ಷಮೆ ಕೇಳಲಿ ಎಂದ ರಾಜೀವ್‌ ಚಂದ್ರಶೇಖರ್‌!

ಕಾಂಗ್ರೆಸ್‌ ಕಿಡಿ:

ಆದರೆ ಈ ಬಂಧನವನ್ನು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್‌ ದೂರಿದೆ. ‘ಕೇಂದ್ರದಲ್ಲಿ ಬಿಜೆಪಿಯನ್ನು ತೃಪ್ತಿಪಡಿಸಲು ಕಾಂಗ್ರೆಸ್ಸಿಗರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಬಂಧಿಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಟಿ. ಸಿದ್ದೀಕ್‌ ಕಿಡಿಕಾರಿದ್ದಾರೆ.

ಈ ಬಗ್ಗೆ ಜು.2ರಂದೇ ವಿಧಾನಸಭೆಯಲ್ಲಿ ಉತ್ತರಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಜೂ.24ರಂದು ಅಪರಾಹ್ನ ಸಂಸದರ ಕಚೇರಿ ಮೇಲೆ ದಾಳಿಯಾಗಿತ್ತು. ಎಸ್‌ಎಫ್‌ಐ ಕಾರ್ಯಕರ್ತರನ್ನು ಪೊಲೀಸರು ತೆರವುಗೊಳಿಸಿದ್ದರು. ಬಳಿಕ ಪೊಲೀಸ್‌ ಫೋಟೋಗ್ರಾಫರ್‌ ಚಿತ್ರ ಸೆರೆ ಹಿಡಿದಾಗ ಗೋಡೆಯಲ್ಲಿ ಗಾಂಧಿ ಚಿತ್ರ ಇತ್ತು. ಆಗ ಕಚೇರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿದ್ದರು. ಸಂಜೆ ಮತ್ತೊಂದು ಫೋಟೋ ತೆಗೆದಾಗ ಗಾಂಧೀಜಿ ಚಿತ್ರ ನೆಲದ ಮೇಲೆ ಬಿದ್ದಿತ್ತು’ ಎಂದು ಹೇಳಿದ್ದರು.

ರಾಷ್ಟ್ರಪಿತ ಗಾಂಧಿ ಫೋಟೋವನ್ನು ಕಾಂಗ್ರೆಸ್‌ ಸಂಸದನ ಕಚೇರಿ ಸಹಾಯಕ ಧ್ವಂಸ ಮಾಡಿರುವುದು ಆಘಾತಕಾರಿ. ಸುಳ್ಳು ಹೇಳುವ ಹಾಗೂ ನಕಲು ಮಾಡುವ ರಾಹುಲ್‌ ನೇತೃತ್ವದ ಕಾಂಗ್ರೆಸ್ಸಿನ ಗುಣಮಟ್ಟ ಇದಾಗಿದೆ ಅಂತ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.