ಎಸಿಬಿ ರದ್ದು ಮಾಡಿದ ಕೋರ್ಟ್, ಸಿದ್ಧರಾಮಯ್ಯ ಜನರ ಕ್ಷಮೆ ಕೇಳಲಿ ಎಂದ ರಾಜೀವ್ ಚಂದ್ರಶೇಖರ್!
2016ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ. ಇದರ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯ ಈ ವಿಚಾರವಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಆ. 13): ಇತ್ತೀಚಿನ ಅತೀದೊಡ್ಡ ಬೆಳವಣಿಗೆಯಲ್ಲಿ ಕರ್ನಾಟಕ ಹೈಕೋರ್ಟ್ 2016ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತಕ್ಕೆ ಪರ್ಯಾಯವಾಗಿ ರಚಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಎಸಿಬಿಯನ್ನು ರದ್ದು ಮಾಡಿದೆ. ಈಗಾಗಲೇ ಎಸಿಬಿ ಅಡಯಲ್ಲಿ ದಾಖಲಾಗಿರುವ ಎಲ್ಲಾ ದೂರುಗಳನ್ನು ಲೋಕಾಯುಕ್ತಕ್ಕೆ ನೀಡುವಂತೆ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಲೋಕಾಯುಕ್ತವನ್ನು ಹಲ್ಲಿಲ್ಲದ ಹುಲಿಯಂತೆ ಮಾಡಿ, ತಮ್ಮ ಅಣತಿಯಂತೆ ಕಾರ್ಯನಿರ್ವಹಿಸುವ ಎಸಿಬಿಯನ್ನು ರಚನೆ ಮಾಡಿದ್ದ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಈ ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರ ತನಿಖಾ ಅಧಿಕಾರವನ್ನು ಹಿಂಪಡೆದು ಅದನ್ನು ಎಸಿಬಿಗೆ ವಿಸ್ತರಿಸುವ ಮೂಲಕ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸುವ ಹಲ್ಲಿಲ್ಲದ ಎಸಿಬಿಯನ್ನು ಸೃಷ್ಟಿಸಿರುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕೂಡಲೇ ಕರ್ನಾಟಕದ ಜನರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದಕ್ಕಾಗಿ ನಡೆದ ನಿರಂತರ ಹೋರಾಟ, ಲೋಕಾಯುಕ್ತವನ್ನು ವಿಫಲಗೊಳಿಸುವಲ್ಲಿ ಮಾಡಿದ ಸಂಚು, ಲೋಕಾಯುಕ್ತಕ್ಕೆ ತಾವು ಸಲ್ಲಿಸಿದ್ದ ದೂರುಗಳ ಟ್ವಿಟರ್ ಸಂದೇಶವನ್ನು ರಾಜೀವ್ ಚಂದ್ರಶೇಖರ್ ಹಂಚಿಕೊಂಡಿದ್ದಾರೆ.
ಲೋಕಾಯುಕ್ತ ಕರ್ನಾಟಕದಲ್ಲಿ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದ ಪ್ರಬಲ ಸಂಸ್ಥೆಯಾಗಿರುವಾಗ, ಅದರ ಅಧಿಕಾರವನ್ನು ಮೊಟಕುಗೊಳಿಸಿ, ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರವು ಅನೇಕ ಭ್ರಷ್ಟಾಚಾರ ಆರೋಪಗಳಿಂದ ತಮ್ಮನ್ನು ಮತ್ತು ತಮ್ಮ ಮಂತ್ರಿಗಳನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಎಸಿಬಿಯನ್ನು ರಚಿಸಿತ್ತು ಎನ್ನುವುದು ಮೊದಲಿನಿಂದಲೂ ನನ್ನ ವಾದವಾಗಿತ್ತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಎಸಿಬಿ ಎಂದಿಗೂ ಸ್ವತಂತ್ರ ತನಿಖಾ ಸಂಸ್ಥೆಯಾಗಿರಲಿಲ್ಲ; ಅದು ಮುಖ್ಯಮಂತ್ರಿಯ ಅಧಿಕಾರದ ಅಡಿಯಲ್ಲಿ ಕೆಲಸ ಮಾಡಿತು. ಸೇವೆಯಲ್ಲಿರುವ ಯಾವುದೇ ಅಧಿಕಾರಿಗಳು ತಾವು ಅಧೀನ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಯ ವಿರುದ್ಧ ವಿಚಾರಣೆ ನಡೆಸುವ ಸ್ಥಿತಿಯಲ್ಲಿರುವುದಿಲ್ಲ ಎಂದು ಈ ಮೊದಲೇ ತಿಳಿಸಿದ್ದೆ ಎಂದಿದ್ದಾರೆ.
ಕರ್ನಾಟಕ ಲೋಕಾಯುಕ್ತಕ್ಕೆ ಫುಲ್ ಪವರ್, ಹೈಕೋರ್ಟ್ ಆದೇಶಕ್ಕೆ ಸಿದ್ದು ಪಂಚರ್!
ಕರ್ನಾಟಕ ಲೋಕಾಯುಕ್ತ ಕಾಯಿದೆಯ ಬಲದ ಮೇಲೆ ಲೋಕಾಯುಕ್ತ ಪೊಲೀಸರು ಯಥಾವತ್ತಾಗಿ ರಚನೆಯಾದಾಗ, ಆಗಿನ ಕಾಂಗ್ರೆಸ್ ಸರ್ಕಾರವು ಕಾರ್ಯಕಾರಿ ಆದೇಶದ ಮೂಲಕ ಎಸಿಬಿಯನ್ನು ರಚಿಸಿದ್ದು ಸಮರ್ಥನೀಯವಲ್ಲ. ಆಕ್ಷೇಪಾರ್ಹ ಸರ್ಕಾರಿ ಆದೇಶ ಮತ್ತು ನಂತರದ ಬೆಂಬಲ ಅಧಿಸೂಚನೆಗಳು ಕರ್ನಾಟಕ ಲೋಕಾಯುಕ್ತದ ಉದ್ದೇಶಕ್ಕೆ ವಿರುದ್ಧವಾಗಿದ್ದವು ಎಂದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ, ಕೆಟ್ಟ ಕಲ್ಪನೆಯ ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ) ರೂಪದಲ್ಲಿ ಘಾತಕ ಪೆಟ್ಟು ನಮ್ಮ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಸಿಕ್ಕಿತ್ತು. ಭ್ರಷ್ಟಾಚಾರ ರಹಿತ ಆಡಳಿತದ ದೊಡ್ಡ ಭರವಸೆಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರವು ಎಸಿಬಿ ಸ್ಥಾಪಿಸುವ ಮೂಲಕ ಲೋಕಾಯುಕ್ತದ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸಲು ಮತ್ತು ದುರ್ಬಲಗೊಳಿಸಲು ಯಶಸ್ವಿಯಾಗಿತ್ತು.. ಸಂಸತ್ತಿನಿಂದ ಮಂಜೂರಾದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಎಸಿಬಿ ಭ್ರಷ್ಟ ಪ್ರಯತ್ನವಾಗಿತ್ತು ಎಂದಿದ್ದಾರೆ.
ಹೈಕೋರ್ಟ್ ತೀರ್ಪು ಗೌರವಿಸಬೇಕು: ಎಸಿಬಿ ರಚನೆ ರದ್ಧತಿ ಬಗ್ಗೆ ಸಿದ್ದರಾಮಯ್ಯ ಮಾತು
ಅತ್ಯಂತ ಶಕ್ತಿಶಾಲಿ ಕರ್ನಾಟಕ ಲೋಕಾಯುಕ್ತವನ್ನು ಹಲ್ಲಿಲ್ಲದ ಹುಲಿಯಾಗಿ ಮಾಡಿದ ಸಿದ್ದರಾಮಯ್ಯ ಸರ್ಕಾರದ ಅನೈತಿಕ ಕಾರ್ಯಕಾರಿ ಆದೇಶವನ್ನು ಮೊದಲ ದಿನದಿಂದ ನಾನು ವಿರೋಧಿಸಿದ್ದೆ. ಐಟಿ ರೈಡ್‌ಗಳು ಮತ್ತು ಸ್ಟೀಲ್ ಫ್ಲೈಓವರ್ ಯೋಜನೆ ಸೇರಿದಂತೆ ಅತಿರೇಕದ ಭ್ರಷ್ಟಾಚಾರವನ್ನು ವಿರೋಧಿಸುವುದು. ಸ್ಟೀಲ್ ಫ್ಲೈಓವರ್ ಯೋಜನೆ ವಿರೋಧಿಸಿ ನಾನು ಕರ್ನಾಟಕ ಲೋಕಾಯುಕ್ತವನ್ನು ಸಂಪರ್ಕಿಸಿದ್ದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರೂ ಆಗಿರುವ ರಾಜೀವ್ ಚಂದ್ರಶೇಖರ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.