ಡಿಎಂಕೆ, ಕಾಂಗ್ರೆಸ್ 3ಜಿ, 4ಜಿ ಪಕ್ಷ; ಈ ಪಕ್ಷಗಳಿಂದ ಹಲವು ತಲೆಮಾರಿನ ಭ್ರಷ್ಟಾಚಾರ: ಅಮಿತ್ ಶಾ ವ್ಯಂಗ್ಯ
ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು 2ಜಿ, 3ಜಿ, 4ಜಿ ಪಕ್ಷಗಳು. ಹಾಗೆಂದು ನಾನು 2ಜಿ ಹಗರಣದ ಬಗ್ಗೆ ಮಾತನಾಡುತ್ತಿಲ್ಲ. 2ಜಿ ಅಂದರೆ ಎರಡು ತಲೆಮಾರು, 3ಜಿ ಅಂದರೆ ಮೂರು ತಲೆಮಾರು, 4ಜಿ ಅಂದರೆ 4 ತಲೆಮಾರು ಎಂದು ಅಮಿತ್ ಶಾ ಹೇಳಿದ್ದಾರೆ.
ವೆಲ್ಲೋರ್ (ಜೂನ್ 12, 2023): ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳ ವಂಶಪಾರಂಪರ್ಯ ರಾಜಕೀಯ ಮತ್ತು ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಎರಡೂ ಪಕ್ಷಗಳನ್ನು 2ಜಿ, 3ಜಿ ಮತ್ತು 4ಜಿ ಪಕ್ಷಗಳು ಎಂದು ಮೂದಲಿಸಿದ್ದಾರೆ. ಅಲ್ಲದೆ ತಮಿಳುನಾಡಿನ ಜನತೆ ಈ ಪಕ್ಷಗಳನ್ನು ಕಿತ್ತೊಗೆಯುವ ಸಮಯ ಬಂದಿದ್ದು, ಇದು ಮಣ್ಣಿನ ಮಗನಿಗೆ ಅಧಿಕಾರ ನೀಡುವ ಸಮಯ ಎಂದು ಬಣ್ಣಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 9 ವರ್ಷದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಇಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ‘ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು 2ಜಿ, 3ಜಿ, 4ಜಿ ಪಕ್ಷಗಳು. ಹಾಗೆಂದು ನಾನು 2ಜಿ ಹಗರಣದ ಬಗ್ಗೆ ಮಾತನಾಡುತ್ತಿಲ್ಲ. 2ಜಿ ಅಂದರೆ ಎರಡು ತಲೆಮಾರು, 3ಜಿ ಅಂದರೆ ಮೂರು ತಲೆಮಾರು, 4ಜಿ ಅಂದರೆ 4 ತಲೆಮಾರು. ಡಿಎಂಕೆಯ ಮಾರನ್ ಕುಟುಂಬ 2 ತಲೆಮಾರುಗಳಿಂದ ಭ್ರಷ್ಟಾಚಾರ ನಡೆಸುತ್ತಿದೆ. ಕರುಣಾನಿಧಿ ಕುಟುಂಬ 3 ತಲೆಮಾರುಗಳಿಂದ ಭ್ರಷ್ಟಾಚಾರ ನಡೆಸುತ್ತಿದೆ. ಇನ್ನು ಗಾಂಧಿ ಕುಟುಂಬ 4 ತಲೆಮಾರುಗಳಿಂದ ಭ್ರಷ್ಟಾಚಾರ ನಡೆಸುತ್ತಿದೆ. ಇದೀಗ ಈ 2ಜಿ, 3ಜಿ, 4ಜಿ ಪಕ್ಷಗಳನ್ನು ಕಿತ್ತೊಗೆದು, ಮಣ್ಣಿನ ಮಗನಿಗೆ ಅಧಿಕಾರ ನೀಡುವ ಸಮಯ ಬಂದಿದೆ’ ಎಂದು ಹೇಳಿದರು.
ಇದನ್ನು ಓದಿ: ಕುಸ್ತಿಪಟುಗಳ ಪ್ರೊಟೆಸ್ಟ್ ಅಂತ್ಯ : ಅಮಿತ್ ಶಾ ಸಂಧಾನದ ಬಳಿಕ ಪ್ರತಿಭಟನೆ ಕೈಬಿಟ್ಟ ಕ್ರೀಡಾಳುಗಳು
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಬೇಕಿತ್ತೇ? ಬೇಡವೇ, ಕಾಶ್ಮೀರ ನಮ್ಮದು ಹೌದೇ? ಅಲ್ಲವೇ ಎಂದು ಸಭಿಕರನ್ನು ಪ್ರಶ್ನಿಸಿದರು. ಜೊತೆಗೆ ಡಿಎಂಕೆ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ 370ನೇ ವಿಧಿ ರದ್ದುಪಡಿಸುವುದನ್ನು ವಿರೋಧಿಸಿದ್ದವು ಎಂದು ಹರಿಹಾಯ್ದರು. ಇದೇ ವೇಳೆ ತಮಿಳು ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಒತ್ತು ನೀಡಿದೆ ಎಂದು ಅಮಿತ್ ಶಾ ಪ್ರಸ್ತಾಪಿಸಿದರು.
ತಮಿಳ್ನಾಡಲ್ಲಿ ಬಿಜೆಪಿ 20 ಸೀಟು ಗೆಲ್ಲಬೇಕು
ಈ ಹಿಂದೆಯೂ ತಮಿಳರು ಪ್ರಧಾನಿಯಾಗುವ ಅವಕಾಶ ಎರಡು ಬಾರಿ ಬಂದಿತ್ತು. ಆದರೆ ಡಿಎಂಕೆಯಿಂದಾಗಿ ಈ ಅವಕಾಶ ಕೈತಪ್ಪಿತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲು ಪ್ರಯತ್ನಿಸಬೇಕು.
- ಅಮಿತ್ ಶಾ, ಕೇಂದ್ರ ಗೃಹ ಸಚಿವ
ಇದನ್ನೂ ಓದಿ: ಅಮಿತ್ ಶಾ, ನಡ್ಡಾ ಭೇಟಿಯಾದ ಚಂದ್ರಬಾಬು ನಾಯ್ಡು: ಮತ್ತೆ ಬಿಜೆಪಿ ಜತೆ ಮೈತ್ರಿ!