ನವ​ದೆ​ಹ​ಲಿ(ಫೆ.25): ಕಾಂಗ್ರೆಸ್‌ ಮತ್ತು ಅದರ ಮೈತ್ರಿ ಪಕ್ಷ​ಗಳ ಶಾಸ​ಕರ ರಾಜೀ​ನಾಮೆ ಪರ್ವ​ದಿಂದ ಪುದು​ಚೇರಿ ಮಾಜಿ ಮುಖ್ಯ​ಮಂತ್ರಿ ನಾರಾ​ಯಣ ಸಾಮಿ ಸರ್ಕಾರ ಪತ​ನದ ಬೆನ್ನಲ್ಲೇ, ಕೇಂದ್ರಾ​ಡ​ಳಿತ ಪ್ರದೇ​ಶ​ವಾದ ಪುದು​ಚೇರಿ ಮೇಲೆ ಕೇಂದ್ರ ಸರ್ಕಾರ ರಾಷ್ಟ್ರ​ಪತಿ ಆಳ್ವಿಕೆ ಜಾರಿ ಮಾಡಿದೆ.

ಕಾಂಗ್ರೆಸ್‌ ನೇತೃ​ತ್ವದ ಮೈತ್ರಿ ಸರ್ಕಾ​ರದ ಪತ​ನದ ಬಳಿಕ ಯಾವೊಂದು ಪಕ್ಷವೂ ಸರ್ಕಾರ ರಚ​ನೆಗೆ ಮುಂದೆ ಬಂದಿಲ್ಲ. ಹೀಗಾಗಿ ಪುದು​ಚೇರಿ ಮೇಲೆ ರಾಷ್ಟ್ರ​ಪತಿ ಆಳ್ವಿಕೆ ಮಾಡ​ಬೇ​ಕೆಂಬ ಅಲ್ಲಿನ ಉಪ ರಾಜ್ಯ​ಪಾಲೆ ತಮಿ​ಳಿಸೈ ಸೌಂದರ​ರಾ​ಜನ್‌ ಅವ​ರು ಕೇಂದ್ರಕ್ಕೆ ಶಿಫಾ​ರಸು ಮಾಡಿ​ದ್ದರು. ಈ ಪ್ರಸ್ತಾ​ವ​ನೆಗೆ ಬುಧ​ವಾರ ಕೇಂದ್ರ ಸಚಿವ ಸಂಪುಟ ಅಂಗೀ​ಕಾರ ನೀಡಿದೆ. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿದ ಕೇಂದ್ರ ಸಚಿವ ಪ್ರಕಾಶ್‌ ಜಾವ​ಡೇ​ಕರ್‌ ಅವರು, ರಾಷ್ಟ್ರ​ಪ​ತಿ​ಗಳ ಅನು​ಮೋ​ದನೆ ಬಳಿಕ ಪುದು​ಚೇರಿ ವಿಧಾ​ನ​ಸ​ಭೆ​ಯನ್ನು ವಿಸ​ರ್ಜಿ​ಸ​ಲಾ​ಗು​ತ್ತದೆ ಎಂದರು.

ತನ್ಮೂ​ಲಕ ನಾರಾ​ಯ​ಣ​ಸಾಮಿ ರಾಜೀ​ನಾಮೆ ಬಳಿಕ ಎಐ​ಎ​ಡಿ​ಎಂಕೆ ಮತ್ತು ಬಿಜೆಪಿ ಮೈತ್ರಿ​ಯಲ್ಲಿ ಸರ್ಕಾರ ರಚ​ನೆ​ಯಾ​ಗ​ಬ​ಹು​ದೆಂಬ ಕುತೂ​ಹ​ಲಕ್ಕೆ ತೆರೆ​ಬಿ​ದ್ದಿದೆ.