ಕೇಂದ್ರ ಬಜೆಟ್‌ನಲ್ಲಿ ಬಿಹಾರಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಲಾಗಿದ್ದು, ರಾಜ್ಯದಲ್ಲಿ ಸಂತಸ ಮನೆ ಮಾಡಿದೆ. ವಿಮಾನ ನಿಲ್ದಾಣಗಳಿಂದ ಹಿಡಿದು ರೈತರಿಗೆ ಉತ್ತೇಜನದವರೆಗೆ, ಬಿಹಾರಕ್ಕೆ ಭರ್ಜರಿ ಕೊಡುಗೆಗಳು ಸಿಕ್ಕಿವೆ.
ಕೇಂದ್ರ ಬಜೆಟ್ ಇಂದು ಮಂಡನೆಯಾಗಿರೋದು ಗೊತ್ತೆ ಇದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರಂತರ 8ನೇ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ ಈ ಬಾರಿಯ ಬಜೆಟ್‌ನಲ್ಲಿ ವಿಧಾನಸಭಾ ಚುನಾವಣೆ ಇರುವ ಬಿಹಾರಕ್ಕೆ ಜಾಕ್‌ಪಾಟ್ ಸಿಕ್ಕಿದೆ. ಈ ವಿಚಾರವೀಗ ನೆಟ್ಟಿಗರ ಗಮನ ಸೆಳೆದಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಬ್ಬವೇ ನಡೆಯುತ್ತಿದೆ.
ಹೌದು ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಬಿಹಾರಗೆ ಸಿಕ್ಕದೆ ಇರೋ ಯೋಜನೆಗಳೇ ಇಲ್ಲ ಎಂಬಷ್ಟು ಯೋಜನೆಗಳನ್ನು ಬಿಹಾರಗೆ ಘೋಷಿಸಲಾಗಿದೆ. ಹೀಗಾಗಿ ಪ್ರಸ್ತುತ ಬಿಹಾರದಲ್ಲಿ 'ನಮ್ಗೂ ಟೈಮ್ ಬರುತ್ತೆ' (Apna time aayega) ಎಂಬಂತಹ ವಾತಾವರಣ ನಿರ್ಮಾಣವಾದಂತೆ ತೋರುತ್ತದೆ. ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಂದ ಹಿಡಿದು, ರೈತರಿಗೆ ಉತ್ತೇಜನ, ಉತ್ತಮ ಆರ್ಥಿಕ ಬೆಳವಣಿಗೆ ಸೇರಿದಂತೆ ಬಿಹಾರ ಎಲ್ಲವನ್ನೂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಿರೀಕ್ಷೆಯಂತೆ ಬಜೆಟ್‌ನಲ್ಲಿ ಬಿಹಾರದ ಪಾಲು ದೊಡ್ಡದಾಗಿದೆ.
ಇತ್ತ ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಸೀತಾರಾಮನ್ ಅವರು ಮಂಡಿಸುತ್ತಿರುವ ದಾಖಲೆಯ 8ನೇ ಬಜೆಟ್ ಇದಾಗಿದೆ. ಹೀಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಹಾರಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಹೀಗಾಗಿ ಬಿಹಾರ ರಾಜ್ಯಕ್ಕೆ ಹಾಗೂ ಸಿಎಂ ನಿತೀಶ್ ಕುಮಾರ್ ಅವರಿಗೆ ಜಾಕ್‌ಪಾಟ್ ಹೊಡೆದಂತಾಗಿದೆ. ಹೀಗಾಗಿ ಈ ವಿಚಾರ ಕೆಲ ಕ್ಷಣಗಳಲ್ಲೇ ಇಂಟರ್‌ನೆಟ್ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಬ್ಬಕ್ಕೆ ಕಾರಣವಾಯಿತು.
ಹಿಂದುಳಿದಿರುವ ಬಿಹಾರ ರಾಜ್ಯದ ಸ್ಥಿತಿಯನ್ನು ಸುಧಾರಿಸಲು ಹಣಕಾಸು ಸಚಿವರು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಅನುಮೋದನೆ ಮಾಡಿದ್ದು, ಅದರಲ್ಲಿ ಮುಖ್ಯವಾಗಿ ಬಿಹಾರದಲ್ಲಿ ಮಖಾನಾ ಮಂಡಳಿಯ ಪ್ರಸ್ತಾಪ ಮತ್ತು ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ ಸ್ಥಾಪನೆ ಹೆಚ್ಚು ಗಮನ ಸೆಳೆದಿದೆ. ಒಟ್ಟಾರೆಯಾಗಿ ಬಜೆಟ್ ಅಲ್ಲಿನ ಬಡವರು, ಯುವಕರು, ರೈತ ಮತ್ತು ಮಹಿಳೆಯರ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ.
ಆದರೆ ಬಿಹಾರಕ್ಕೆ ಸಿಕ್ಕಿರುವಂತಹ ಇಷ್ಟೊಂದು ಯೋಜನೆಗಳ ಅರ್ಧವೂ ಬೇರೆ ರಾಜ್ಯಗಳಿಗೆ ಸಿಕ್ಕಿಲ್ಲ, ಈ ಹಿನ್ನೆಲೆಯಲ್ಲಿ ಬಿಹಾರವನ್ನು ನೋಡಿ ಬೇರೆ ರಾಜ್ಯಗಳು ಅಸೂಯೆ ಪಡುತ್ತಿವೆ. ನಿರ್ಮಾಲಾ ಸೀತಾರಾಮನ್ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಬೆಸ್ಟ್ ಫ್ರೆಂಡ್‌ಗಳಾಗಿ ಬದಲಾಗುತ್ತಿದ್ದಾರೆ ಎಂದು ಹೇಳುವಂತಹ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಹಾರ ಸಿಎಂ ಮೀಮ್ಸ್ ಮತ್ತು ಮಧ್ಯಮ ವರ್ಗದ ನಿರೀಕ್ಷೆಗಳ ಕುರಿತಾದ ಜೋಕ್‌ಗಳ ಜೊತೆಗೆ, ತೆರಿಗೆ ಸ್ಲ್ಯಾಬ್‌ಗಳಿಗೆ ಸಂಬಂಧಿಸಿದ ಮೀಮ್ಸ್‌ಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.. ಸೀತಾರಾಮನ್ ಅವರ ಮಧುಬನಿ ಕಲಾ ಸೀರೆ ಮತ್ತು ಸಾಂಪ್ರದಾಯಿಕ 'ಬಹಿ-ಖಾಟಾ' (ಭಾರತೀಯ ಲೆಡ್ಜರ್) ಶೈಲಿಯ ಚೀಲದಲ್ಲಿ ಸುತ್ತಿದ ಅವರ ಡಿಜಿಟಲ್ ಟ್ಯಾಬ್ಲೆಟ್ ಕೂಡ ಅಷ್ಟೇ ಗಮನ ಸೆಳೆಯಿತು. ಈ ಮಧುಬನಿ ಕಲಾ ಸೀರೆಯನ್ನು 2021 ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರು ಹಣಕಾಸು ಸಚಿವರಿಗೆ ಉಡುಗೊರೆಯಾಗಿ ನೀಡಿದ್ದರು.
ಈ ಬಜೆಟ್ ಅಧಿವೇಶನವೂ ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆ ಮತ್ತು ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ನಿನ್ನೆಯಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಇದು ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಫೆಬ್ರವರಿ 13 ರಂದು ಕೊನೆಗೊಳ್ಳುತ್ತದೆ ಮತ್ತು 2ನೇ ಹಂತ ಮಾರ್ಚ್ 10 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್ 4 ರಂದು ಕೊನೆಗೊಳ್ಳಲಿದೆ.
