ಉಕ್ರೇನ್ ಅಧ್ಯಕ್ಷ ಜೆಲೆನ್ಸ್‌ಕಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಶ್ವೇತಭವನದಲ್ಲಿ ತೀವ್ರ ವಾಗ್ದಾಳಿ ನಡೆದಿದೆ. ಟ್ರಂಪ್, ಜೆಲೆನ್ಸ್‌ಕಿ ಅಮೆರಿಕಾಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ, ಉಕ್ರೇನ್ ಯುದ್ಧದ ಭವಿಷ್ಯ ಅತಂತ್ರವಾಗಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಫೆಬ್ರವರಿ 24, 2022ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವಧಿಯಲ್ಲಿ ರಷ್ಯಾ - ಉಕ್ರೇನ್ ಯುದ್ಧ ಆರಂಭಗೊಂಡು, ಬಳಿಕ ರಷ್ಯನ್ ಪಡೆಗಳು ಉಕ್ರೇನಿನ ಸಾರ್ವಭೌಮತ್ವದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆಸಿದವು. ಯುದ್ಧ ಆರಂಭಗೊಂಡ ಬಳಿಕ, ಡೊನಾಲ್ಡ್ ಟ್ರಂಪ್ ಅವರು ಜೆಲೆನ್ಸ್‌ಕಿ ಅವರನ್ನು 'ಸರ್ವಾಧಿಕಾರಿ' ಎಂದು ಕರೆದಿದ್ದರು. ಈಗ ಅಮೆರಿಕಾ ಅಧ್ಯಕ್ಷ ಟ್ರಂಪ್ ಸ್ಥಾಪಿತ ಜಾಗತಿಕ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡಿರುವಂತೆ ಕಾಣುತ್ತಿದ್ದಾರೆ.

ಗುರುವಾರ ಶ್ವೇತ ಭವನದಲ್ಲಿ ಅಪರೂಪದ ಖನಿಜಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಬಹುನಿರೀಕ್ಷಿತ ಸಮಾಲೋಚನೆ ನಡೆಸಲು ಜೆಲೆನ್ಸ್‌ಕಿ ಆಗಮಿಸಿದ್ದರು. ಆರಂಭದಲ್ಲಿ ಅವರಿಗೆ ಶ್ವೇತ ಭವನದ ಅದ್ಧೂರಿ ಸ್ವಾಗತ ನೀಡಲಾಯಿತು. ಆದರೆ, ಮಾತುಕತೆ ಆರಂಭಗೊಂಡ ಬಳಿಕ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತನ್ನ ಬಣ್ಣ ಬದಲಾಯಿಸಿದ್ದಾರೆ ಎಂದು ಉಕ್ರೇನ್ ಮಾಧ್ಯಮ ಸಂಸ್ಥೆ ಇಂಟರ್‌ಫ್ಯಾಕ್ಸ್ ಆರೋಪಿಸಿದೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್ ಬಹಳಷ್ಟು ಸಮಾಧಾನದಿಂದಿರುವಂತೆ ಕಂಡಿದ್ದರು. ಜೆಲೆನ್ಸ್‌ಕಿ ಜೊತೆ ಭೇಟಿಯ ಮುನ್ನಾದಿನ ಮಾಧ್ಯಮಗಳೊಡನೆ ಮಾತನಾಡುತ್ತ, ತನಗೆ ಜೆಲೆನ್ಸ್‌ಕಿ ಕುರಿತು ಅಪಾರ ಗೌರವವಿದೆ ಎಂದಿದ್ದ ಟ್ರಂಪ್, ಅವರೊಡನೆ ಫಲಪ್ರದ ಮಾತುಕತೆ ನಡೆಸುವ ವಿಶ್ವಾಸ ಹೊಂದಿದ್ದೇನೆ ಎಂದಿದ್ದರು.

ಇದನ್ನೂ ಓದಿ: ಭೌತಶಾಸ್ತ್ರವನ್ನು ಶಾಶ್ವತವಾಗಿ ಬದಲಾಯಿಸಿದ 'ರಾಮನ್ ಪರಿಣಾಮ'

ಆದರೆ, ಶುಕ್ರವಾರ (ಫೆಬ್ರವರಿ 28), ಉಕ್ರೇನ್ ಯುದ್ಧ ಆರಂಭಗೊಂಡು ಬಹುತೇಕ ಮೂರು ವರ್ಷಗಳ ಬಳಿಕ, ಡೊನಾಲ್ಡ್ ಟ್ರಂಪ್ ಅವರೊಡನೆ ಯುದ್ಧವನ್ನು ಕೊನೆಗೊಳಿಸುವ ಕುರಿತು ಸಮಾಲೋಚನೆ ನಡೆಸಲು ಮತ್ತು ಸಂಭಾವ್ಯ ಖನಿಜ ಒಪ್ಪಂದಕ್ಕೆ ಸಹಿ ಹಾಕಲು ಜೆಲೆನ್ಸ್‌ಕಿ ಶ್ವೇತ ಭವನಕ್ಕೆ ಆಗಮಿಸಿದ ಬಳಿಕ, ನಂಬಲಸಾಧ್ಯವಾದ ರೀತಿಯಲ್ಲಿ, ಉಭಯ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಂಪ್ ಮಾತನಾಡುತ್ತಾ, ಜೆಲೆನ್ಸ್‌ಕಿ ಬಳಿ "ಒಂದೋ ನೀವು ಒಪ್ಪಂದ ಮಾಡಿಕೊಳ್ಳಿ, ಇಲ್ಲವಾದರೆ ನಾವು ಹೊರನಡೆಯುತ್ತೇವೆ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಜೆಲೆನ್ಸ್‌ಕಿ ಈಗ ಭಾರೀ ತೊಂದರೆಯಲ್ಲಿದ್ದು, ಅವರು ಗೆಲ್ಲುವ ಕೈಯನ್ನು ಹಿಡಿದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಸಮಚಿತ್ತತೆ ಕಾಪಾಡಿಕೊಂಡು ಮಾತನಾಡಿದ ಜೆಲೆನ್ಸ್‌ಕಿ, "ನಾವು ನಮ್ಮದೇ ಸ್ವಂತ ದೇಶದಲ್ಲಿದ್ದೇವೆ. ನಾವು ಇಲ್ಲಿಯತನಕವೂ ಗಟ್ಟಿಯಾಗಿಯೇ ನಿಂತಿದ್ದೇವೆ. ನೀವು ನಮಗೆ ನೀಡಿದ ಬೆಂಬಲಕ್ಕಾಗಿ ನಾವು ನಿಮಗೆ ಧನ್ಯವಾದಗಳನ್ನೂ ಸಲ್ಲಿಸಿದ್ದೇವೆ" ಎಂದಿದ್ದಾರೆ.

ಜಾಗತಿಕ ಮಾಧ್ಯಮಗಳು ಆಶ್ಚರ್ಯದಿಂದ ನೋಡುತ್ತಿದ್ದ ಹಾಗೇ, ತೀವ್ರವಾದ ವಾಗ್ದಾಳಿ ನಡೆದಿದ್ದು, ಡೊನಾಲ್ಡ್ ಟ್ರಂಪ್ ಅವರು "ಈ ರೀತಿಯಲ್ಲಿ ವ್ಯವಹರಿಸುವುದರಿಂದ ಮುಂದೆ ಬಹಳಷ್ಟು ಕಷ್ಟಗಳು ಎದುರಾಗಲಿವೆ" ಎಂದು ಎಚ್ಚರಿಕೆ ನೀಡಿದ್ದಾರೆ. ವೊಲೊಡಿಮಿರ್ ಜೆಲೆನ್ಸ್‌ಕಿ ಅವರು ಮೂರನೇ ಮಹಾಯುದ್ಧ ಏರ್ಪಡುವ ಅಪಾಯವನ್ನು ಮುಂದಿಟ್ಟುಕೊಂಡು, ದೊಡ್ಡ ಜೂಜಾಟವನ್ನೇ ನಡೆಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಲಕ್ಷಾಂತರ ಜನರ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳು ಈಗ ಹೆಚ್ಚಾಗಿ ಗೋಚರಿಸುತ್ತಿವೆ ಎಂದ ಟ್ರಂಪ್, ಜೆಲೆನ್ಸ್‌ಕಿ ಅಮೆರಿಕಾ ಕುರಿತು ಅಪಾರ ಅಗೌರವ ತೋರಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಉಕ್ರೇನಿನಲ್ಲಿ ಶಾಂತಿ ಏರ್ಪಡುವ ಕುರಿತು ಇಲ್ಲಿಯ ತನಕ ಇದ್ದ ಅಪಾರ ಭರವಸೆ ಈಗ ಒಂದು ಹಗ್ಗದ ಮೇಲಿನ ನಡಿಗೆಯಂತೆ ಭಾಸವಾಗುತ್ತಿದೆ.

ಜೆಲೆನ್ಸ್‌ಕಿ ಅಮೆರಿಕಾ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರನ್ನು ಜೋರಾಗಿ ಮಾತನಾಡುವ ಅವಶ್ಯಕತೆಯಿಲ್ಲ ಎಂದು ಹೇಳುತ್ತಿದ್ದಂತೆ, ಅವರೂ ವಾದ ವಿವಾದಕ್ಕೆ ಇಳಿದರು. ಅವರು ಜೆಲೆನ್ಸ್‌ಕಿ ಬಳಿ ಈ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕತೆಯೇ ಏಕೈಕ ಮಾರ್ಗ ಎಂದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಜೆಲೆನ್ಸ್‌ಕಿ, "ನೀವು ಯಾವ ರಾಜತಾಂತ್ರಿಕತೆಯ ಕುರಿತು ಮಾತನಾಡುತ್ತಿದ್ದೀರಿ?" ಪ್ರಶ್ನಿಸಿದ್ದಾರೆ. ಆದರೆ ವ್ಯಾನ್ಸ್ ಸ್ಥಿರವಾಗಿಯೇ ಮಾತನಾಡುತ್ತಾ, ಜೆಲೆನ್ಸ್‌ಕಿ ಅಮೆರಿಕಾ ಅಧ್ಯಕ್ಷರ ಕಚೇರಿಗೆ ಗೌರವ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಕ್ಷಣವೇ ವ್ಯಾನ್ಸ್ ಬೆಂಬಲಕ್ಕೆ ಬಂದ ಟ್ರಂಪ್, ಜೆಲೆನ್ಸ್‌ಕಿ ಮೇಲೆ ಆರೋಪ ಮಾಡತೊಡಗಿದರು. "ನಾವು ನಿಮಗೆ 350 ಬಿಲಿಯನ್ ಡಾಲರ್ ಮೊತ್ತವನ್ನು ನೀಡಿದ್ದೇವೆ. ನಿಮಗೆ ಮಿಲಿಟರಿ ಉಪಕರಣಗಳನ್ನು ಒದಗಿಸಿದ್ದೇವೆ. ಒಂದು ವೇಳೆ ನಾವು ನಿಮಗೆ ನೆರವು ನೀಡದಿದ್ದರೆ, ಈ ಯುದ್ಧ ಕೇವಲ ಎರಡು ವಾರಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು" ಎಂದು ಟ್ರಂಪ್ ಹೇಳಿದರು. ಅವರ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಜೆಲೆನ್ಸ್‌ಕಿ, "ಹೌದು ಹೌದು.. ಯುದ್ಧ ಖಂಡಿತಾ ಮೂರೇ ದಿನಗಳಲ್ಲಿ ಮುಗಿದುಹೋಗುತ್ತಿತ್ತು. ಪುಟಿನ್ ಅವರೂ ಇದೇ ಮಾತು ಹೇಳಿದ್ದನ್ನು ನಾನು ಕೇಳಿದ್ದೆ" ಎಂದಿದ್ದಾರೆ. ಪುಟಿನ್ ಅವರು ಆಡಿದ ಮಾತುಗಳನ್ನೇ ಟ್ರಂಪ್ ಸಹ ಹೇಳುತ್ತಿದ್ದಾರೆ ಎಂಬ ಅರ್ಥದಲ್ಲಿ ಜೆಲೆನ್ಸ್‌ಕಿ ಮಾತನಾಡಿದ್ದರು.

ಜೆಲೆನ್ಸ್‌ಕಿ ಈ ರೀತಿ ನೇರವಾಗಿ ಮಾತನಾಡಿದ್ದನ್ನು ಕೇಳಿ ಟ್ರಂಪ್ ಸಹ ಆಘಾತಗೊಂಡಿದ್ದರು. "ಈ ರೀತಿಯಲ್ಲಿ ವ್ಯವಹಾರ ಮಾಡುವುದನ್ನು ಮುಂದುವರಿಸುವುದು ಬಹಳ ಕಷ್ಟಕರ" ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ. ಜೆಲೆನ್ಸ್‌ಕಿ ಜೊತೆ ಖನಿಜ ಒಪ್ಪಂದ ನಡೆಸಲು ಟ್ರಂಪ್ ಅತ್ಯಂತ ಉತ್ಸಾಹ ಹೊಂದಿದ್ದರು. ಆದರೆ ಈಗ ಆ ಒಪ್ಪಂದವೂ ಕೈತಪ್ಪಿ ಹೋದಂತೆ ಕಾಣುತ್ತಿದ್ದು, ಅದರೊಡನೆ ಶಾಂತಿ ಒಪ್ಪಂದವೂ ಕೊನೆಯಾಗುವಂತೆ ಭಾಸವಾಗುತ್ತಿದೆ.

ತಕ್ಷಣ ಮತ್ತೆ ತಾವು ಸರಿಯಾಗಿದ್ದೇವೆ ಎನ್ನುವುದನ್ನು ಸಾಬೀತುಪಡಿಸಲು ಪ್ರಯತ್ನ ನಡೆಸಿದ ವ್ಯಾನ್ಸ್, "ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಖಂಡಿತಾ ಇವೆ. ನೀವು ತಪ್ಪು ಮಾಡಿರುವುದು ಸ್ಪಷ್ಟವಾಗಿರುವಾಗ, ಅಮೆರಿಕಾದ ಮಾಧ್ಯಮಗಳ ಮುಂದೆ ನಾವು ಜಗಳಾಡುವ ಬದಲು, ಆ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ನಾವು ಪ್ರಯತ್ನ ನಡೆಸೋಣ. ನೀವು (ಜೆಲೆನ್ಸ್‌ಕಿ) ತಪ್ಪು ಮಾಡಿದ್ದೀರಿ ಎನ್ನುವುದು ನಮಗೆ ತಿಳಿದಿದೆ" ಎಂದರು.

ಆದರೆ, ಸಿಡುಕಿನ ಸ್ವಭಾವದ ಟ್ರಂಪ್ ಅಷ್ಟಕ್ಕೇ ಸುಮ್ಮನಾಗಲು ಸಿದ್ಧರಿರಲಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಅಮೆರಿಕನ್ನರ ಗಮನಕ್ಕೆ ಬರಬೇಕು ಎಂಬಂತೆ ಮಾತನಾಡಿದ ಟ್ರಂಪ್, ಅಮೆರಿಕಾ ನೀಡಿದ ನೆರವಿಗೆ ಜೆಲೆನ್ಸ್‌ಕಿ ಕೃತಜ್ಞರಾಗಿರಬೇಕು ಎಂದರು. "ನಿಮ್ಮ ಬಳಿ ಈಗ ಆಡವಾಡಲು ಯಾವುದೇ ದಾಳಗಳು ಉಳಿದಿಲ್ಲ. ಈಗಾಗಲೇ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಬಳಿ ಸೈನಿಕರ ಸಂಖ್ಯೆಯೂ ಕುಸಿಯುತ್ತಿದೆ. ಇಷ್ಟಾದರೂ ನೀವು 'ನನಗೆ ಕದನ ವಿರಾಮ ಬೇಡ' ಎನ್ನುತ್ತಿದ್ದೀರಿ. ನಾನು ಯುದ್ಧ ಮುಂದುವರಿಸುತ್ತೇನೆ ಎನ್ನುತ್ತೀರಿ. ಇನ್ನು ಮದ್ದುಗುಂಡುಗಳ ಹಾರಾಟ ನಿಲ್ಲಿಸಬೇಕಾದರೆ, ಜನರು ಪ್ರಾಣ ಕಳೆದುಕೊಳ್ಳುವುದನ್ನು ತಡೆಯಬೇಕಾದರೆ, ನೀವು ತಕ್ಷಣವೇ ಕದನ ವಿರಾಮಕ್ಕೆ ಕರೆ ನೀಡಬೇಕು. ನಾನು ಇಲ್ಲಿ ನಿಮ್ಮೊಡನೆ ಇದ್ದೇನೆ, ನನಗೆ ಕದನ ವಿರಾಮ ಜಾರಿಯಾಗಬೇಕು ಎಂದಿದೆ. ಆದರೆ, ನಿಮಗೆ ಕದನ ವಿರಾಮ ಬೇಡ ಎನ್ನುವುದು ಸ್ಪಷ್ಟವಾಗಿದೆ" ಎಂದು ಟ್ರಂಪ್ ಹೇಳಿದ್ದಾರೆ.

ಮಾತು ಕೇಳಿಸಿಕೊಂಡು ಸುಮ್ಮನಿರುವ ಸ್ವಭಾವದವರಲ್ಲದ ಜೆಲೆನ್ಸ್‌ಕಿ ತಕ್ಷಣವೇ ತಿರುಗಿ ಉತ್ತರಿಸಿದ್ದಾರೆ. "ಕದನ ವಿರಾಮಕ್ಕೆ ಸಂಬಂಧಿಸಿದಂತೆ ನಿಮ್ಮ ಹಿಂದಿನ ಆಡಳಿತಗಾರರು ಏನು ಹೇಳುತ್ತಾರೆ ಎಂದು ನೀವೇ ಕೇಳಿ ನೋಡಿ" ಎಂದು ಜೆಲೆನ್ಸ್‌ಕಿ ಹೇಳಿದ್ದಾರೆ. ಟ್ರಂಪ್ ತಕ್ಷಣವೇ, "ನನಗಿಂತ ಮುನ್ನ ಇದ್ದವರು ಬೈಡನ್ ಎಂಬ ವ್ಯಕ್ತಿ. ಆತ ಅಷ್ಟೊಂದು ಬುದ್ಧಿವಂತನೇನಲ್ಲ" ಎಂದಿದ್ದಾರೆ.

ತಕ್ಷಣವೇ ಪ್ರತಿಕ್ರಿಯಿಸಿದ ಜೆಲೆನ್ಸ್‌ಕಿ, "ಆದರೂ ಅವರು ನಿಮ್ಮ ಅಧ್ಯಕ್ಷರಾಗಿದ್ದವರು!" ಎಂದಿದ್ದಾರೆ. "ನಾನು ನಿಮಗೆ ಜಾವೆಲಿನ್‌ಗಳನ್ನು (ಸಾಗಿಸಬಹುದಾದ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು) ಒದಗಿಸಿದ್ದೇನೆ. ಆದರೆ ಒಬಾಮಾ ನಿಮಗೆ ಸತ್ತವರನ್ನು ಮುಚ್ಚಿಡಲು ಹಾಳೆಗಳನ್ನು ನೀಡಿದ್ದಾರೆ. ವಾಸ್ತವವಾಗಿ ನಿಮಗೆ ಯಾರು ಸಹಾಯ ಮಾಡಿದ್ದಾರೋ, ಅವರ ಕುರಿತು ನಿಮಗೆ ಕೃತಜ್ಞತೆ ಇರಬೇಕು" ಎಂದು ಟ್ರಂಪ್‌ ನೇರವಾಗಿ ಹೇಳಿದ್ದಾರೆ. ಈ ಮೂಲಕ, ಅಮೆರಿಕಾ ನಿಮ್ಮ ಜೊತೆ ನಿಂತ ಕಾರಣ ನೀವು ಇಷ್ಟು ದಿನ ಆಟ ಮುಂದುವರಿಸಲು ಸಾಧ್ಯವಾಗಿದೆ. ಅಮೆರಿಕಾ ಇರದಿದ್ದರೆ ಏನೂ ಸಾಧ್ಯವಿರಲಿಲ್ಲ ಎಂದು ಟ್ರಂಪ್ ನೇರವಾಗಿ ಜೆಲೆನ್ಸ್‌ಕಿಗೆ ಸಂದೇಶ ನೀಡಿದ್ದಾರೆ.

ಮಾಧ್ಯಮಗಳು ಪ್ರಶ್ನೆಗಳ ಸುರಿಮಳೆ ನಡೆಸಲು ಸಿದ್ಧವಾಗಿದ್ದವು. ಆದರೆ, ಡೊನಾಲ್ಡ್ ಟ್ರಂಪ್ ಜೊತೆ ವೇದಿಕೆ ಏರಿ, ಪೂರ್ವ ನಿಯೋಜಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಮೊದಲೇ ತನ್ನನ್ನು ಶ್ವೇತ ಭವನದಿಂದ ತೆರಳುವಂತೆ ಸೂಚನೆ ನೀಡಲಾಯಿತು ಎಂದು ಜೆಲೆನ್ಸ್‌ಕಿ ಹೇಳಿದ್ದಾರೆ. ಅದರೊಡನೆ, ಬಹು ನಿರೀಕ್ಷಿತ ಖನಿಜ ಒಪ್ಪಂದಕ್ಕೂ ಈ ಭೇಟಿಯ ವೇಳೆ ಸಹಿ ಹಾಕಲಾಗಿಲ್ಲ.

ಜೆಲೆನ್ಸ್‌ಕಿ ಕಾರು ಶ್ವೇತ ಭವನದ ಆವರಣವನ್ನು ದಾಟಿ ತೆರಳುವ ಮುನ್ನವೇ ಡೊನಾಲ್ಡ್ ಟ್ರಂಪ್ ತನ್ನ ಟ್ರುತ್ ಸೋಷಿಯಲ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದು, "ಭಾವನೆಗಳ ರೂಪದಲ್ಲಿ ಎಂತಹ ಮಾತುಗಳು ಹೊರ ಬರುತ್ತವೆ ಎನ್ನುವುದು ಆಶ್ಚರ್ಯಕರ. ಜೆಲೆನ್ಸ್‌ಕಿ ಜೊತೆಗಿನ ಮಾತುಕತೆಯ ನಂತರ, ಅಮೆರಿಕಾದ ನೆರವಿನಿಂದ ಶಾಂತಿ ಸ್ಥಾಪನೆಯಾಗುವುದು ಅವರಿಗೆ ಬೇಕಾಗಿಲ್ಲ. ನನಗೆ ಶಾಂತಿ ಸ್ಥಾಪನೆಯಾಗಬೇಕೆಂಬ ಹಂಬಲವಿದೆ. ಆದರೆ ಜೆಲೆನ್ಸ್‌ಕಿ ಅಮೆರಿಕಾ ಮತ್ತು ಅದರ ಗೌರವಯುತ ಓವಲ್ ಆಫೀಸ್ ಅನ್ನು ಅಗೌರವಿಸಿದ್ದಾರೆ. ಅವರಿಗೆ ನಿಜಕ್ಕೂ ಶಾಂತಿ ಬೇಕು ಎನಿಸಿದಾಗ ಜೆಲೆನ್ಸ್‌ಕಿ ಮತ್ತೆ ಅಮೆರಿಕಾಗೆ ಬರಬಹುದು" ಎಂದಿದ್ದಾರೆ.

ಇದನ್ನೂ ಓದಿ: 'ಗಗನಯಾನ'ದಲ್ಲಿ ಬಾಹ್ಯಾಕಾಶ ಡಾಕಿಂಗ್: ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ ಭಾರತ

ಮಾಧ್ಯಮ ವರದಿಗಳ ಪ್ರಕಾರ, ಉಕ್ರೇನ್ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಮುಂದಿನ ನಡೆಗಳ ಕುರಿತು ಚರ್ಚಿಸುವ ಸಲುವಾಗಿ, ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಮತ್ತು ಇಟಲಿ ಸೇರಿದಂತೆ ಯುರೋಪಿನ ರಾಷ್ಟ್ರಗಳು, ಟರ್ಕಿ, ನ್ಯಾಟೋ, ಮತ್ತು ಐರೋಪ್ಯ ಒಕ್ಕೂಟಗಳನ್ನು ಮಾರ್ಚ್ 2, ಭಾನುವಾರದಂದು ಸಭೆಗೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

ಸ್ಟಾರ್ಮರ್ ಅವರು ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಸ್ಪೇನ್, ಫಿನ್ಲೆಂಡ್, ಸ್ವೀಡನ್, ಜೆಕ್ ರಿಪಬ್ಲಿಕ್, ಮತ್ತು ರೊಮಾನಿಯಾಗಳನ್ನೂ ಸಭೆಗೆ ಆಹ್ವಾನಿಸಿದ್ದಾರೆ. ಆದರೆ, ಜೆಲೆನ್ಸ್‌ಕಿ ಅವರನ್ನು ಡೌನಿಂಗ್ ಸ್ಟ್ರೀಟ್‌ಗೆ ಸ್ವಾಗತಿಸಿ, ರಷ್ಯಾ ಯುದ್ಧದ ಕುರಿತು ಚರ್ಚೆ ನಡೆಸುವ ಮುನ್ನ, ಸ್ಟಾರ್ಮರ್ ಅವರು ಬೆಳಗ್ಗೆ ಬಾಲ್ಟಿಕ್ ದೇಶಗಳೊಡನೆ ಸಭೆ ನಡೆಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಶುಕ್ರವಾರ ಮಾಹಿತಿ ನೀಡಿದೆ.

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)