ಸರ್ ಸಿ.ವಿ. ರಾಮನ್ ಅವರ 'ರಾಮನ್ ಪರಿಣಾಮ' ಭೌತಶಾಸ್ತ್ರದಲ್ಲಿ ಮಹತ್ವದ ಸಂಶೋಧನೆಯಾಗಿದೆ. ಬೆಳಕು ದ್ರವದ ಮೂಲಕ ಹಾದುಹೋದಾಗ ಅದರ ಬಣ್ಣ ಬದಲಾಗುವುದನ್ನು ಇದು ವಿವರಿಸುತ್ತದೆ, ಇದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕ್ರಾಂತಿಯನ್ನುಂಟು ಮಾಡಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

1986ರಲ್ಲಿ, ಪ್ರಧಾನಿ ರಾಜೀವ್ ಗಾಂಧಿಯವರ ನೇತೃತ್ವದ ಭಾರತ ಸರ್ಕಾರ ಸರ್ ಸಿ ವಿ ರಾಮನ್ ಅವರ ಅಸಾಧಾರಣ ಸಂಶೋಧನೆಯಾದ 'ರಾಮನ್ ಪರಿಣಾಮ'ವನ್ನು ಗೌರವಿಸುವ ಸಲುವಾಗಿ ಫೆಬ್ರವರಿ 28ನ್ನು 'ರಾಷ್ಟ್ರೀಯ ವಿಜ್ಞಾನ ದಿನ'ವನ್ನಾಗಿ ಘೋಷಿಸಿತು. 1928ರ ಫೆಬ್ರವರಿ 28ರಂದು ಸರ್ ಸಿ ವಿ ರಾಮನ್ ಅವರು ತನ್ನ ಸಂಶೋಧನೆಯನ್ನು ವೈಜ್ಞಾನಿಕ ಜಗತ್ತಿನೊಡನೆ ಹಂಚಿಕೊಂಡರು. ಇದು ಭೌತಶಾಸ್ತ್ರದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಯಿತು.

ಬೆಳಕು ವಿವಿಧ ವಸ್ತುಗಳ ಮೂಲಕ ಹಾದುಹೋದಾಗ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂದು ತಿಳಿಯಲು ಈ ಅನ್ವೇಷಣೆ ವಿಜ್ಞಾನಿಗಳಿಗೆ ನೆರವಾಯಿತು. ಪ್ರತಿವರ್ಷವೂ ಈ ಮಹತ್ವದ ಸಾಧನೆಯನ್ನು ಸ್ಮರಿಸುವ ಸಲುವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ಈ ಅಸಾಧಾರಣ ಸಂಶೋಧನೆಗಾಗಿ ಸರ್ ಸಿ ವಿ ರಾಮನ್ ಅವರು 1930ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು.

ಒಂದು ಸರಳವಾದ ಪ್ರಯೋಗವನ್ನು ನಡೆಸುವುದರಿಂದ, ದ್ರವ ವಸ್ತುವಿನ ಮೂಲಕ ಬೆಳಕು ಹಾದುಹೋದಾಗ, ಚದುರಿದ ಬೆಳಕಿನ ಸಣ್ಣ ಭಾಗ ತನ್ನ ಬಣ್ಣವನ್ನು ಬದಲಿಸುತ್ತದೆ ಎಂದು ರಾಮನ್ ಕಂಡುಹಿಡಿದರು.

ವಿಜ್ಞಾನಿಗಳು ರಾಮನ್ ಪರಿಣಾಮ ಮಹತ್ವದ ಮೈಲಿಗಲ್ಲು ಎಂದು ಗುರುತಿಸಿದರು. ಬಳಿಕ, ಕೇವಲ ಏಳು ವರ್ಷಗಳ ಒಳಗೆ ಇದರ ಕುರಿತು 700ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಟ್ಟವು!

ಹಾಗಾದರೆ, ರಾಮನ್ ಪರಿಣಾಮ ಎಂದರೇನು? ಇದರ ಮಹತ್ವವೇನು? ಎಲ್ಲಕ್ಕೂ ಹೆಚ್ಚಾಗಿ, ಈ ಅಸಾಧಾರಣ ಸಂಶೋಧನೆಯ ಹಿಂದಿನ ಶಕ್ತಿ ಯಾರು?

ವಿದ್ವಾಂಸನಿಂದ ವಿಜ್ಞಾನಿಯಾಗುವತ್ತ ರಾಮನ್ ಸಾಗಿದ ಹಾದಿ

ರಾಮನ್ ಅವರು 1888ರಲ್ಲಿ ಅಂದಿನ ಮದ್ರಾಸ್ ಸಂಸ್ಥಾನದ ಟ್ರಿಚಿಯಲ್ಲಿ (ತಿರುಚಿರಾಪಳ್ಳಿ) ಸಂಸ್ಕೃತ ವಿದ್ವಾಂಸರ ಕುಟುಂಬದಲ್ಲಿ ಜನಿಸಿದರು.

ಕೇವಲ 16ರ ಹರೆಯದಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎ ಪದವಿ ಪಡೆದ ರಾಮನ್, ತನ್ನ ತರಗತಿಯಲ್ಲಿ ಮೊದಲ ಸ್ಥಾನ ಸಂಪಾದಿಸಿದರು.

ಕೇವಲ 18ರ ಹರೆಯದಲ್ಲಿ ಎಂಎ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ರಾಮನ್ 'ದ ಫಿಲಾಸಫಿಕಲ್ ಮ್ಯಾಗಜಿನ್'ನಲ್ಲಿ ಸಂಶೋಧನಾ ಪ್ರಬಂಧವೊಂದನ್ನು ಪ್ರಕಟಿಸಿದರು. ಅದು ಪ್ರೆಸಿಡೆನ್ಸಿ ಕಾಲೇಜಿನಿಂದ ತೆರಳಿದ ಪ್ರಥಮ ಸಂಶೋಧನಾ ಪ್ರಬಂಧವಾಗಿತ್ತು.

ವಿದೇಶದಲ್ಲಿ ಉನ್ನತ ವ್ಯಾಸಂಗ ನಡೆಸುವ ಉದ್ದೇಶ ಹೊಂದಿದ್ದರೂ, ಅವರ ಆರೋಗ್ಯ ಸಮಸ್ಯೆ ವಿದೇಶ ಪ್ರಯಾಣಕ್ಕೆ ಅನುಮತಿಸಲಿಲ್ಲ. ಆದ್ದರಿಂದ, 1907ರಲ್ಲಿ ವಿವಾಹವಾಗಿ, ಕಲ್ಕತ್ತಾಗೆ ತೆರಳಿದ ರಾಮನ್, ಅಲ್ಲಿ ಸಹಾಯಕ ಮಹಾಲೇಖರಾಗಿ ಕಾರ್ಯ ಆರಂಭಿಸಿದರು.

ಪೂರ್ಣ ಪ್ರಮಾಣದಲ್ಲಿ ನಾಗರಿಕ ಸೇವಾ ಉದ್ಯೋಗದಲ್ಲಿ ತೊಡಗಿದ್ದರೂ, ತನ್ನ ಬಿಡುವಿನ ವೇಳೆಯಲ್ಲಿ ರಾಮನ್ ಇಂಡಿಯನ್ ಅಸೋಸಿಯೇಷನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್ (ಐಎಸಿಎಸ್) ಸಂಸ್ಥೆಯಲ್ಲಿ ಸಂಶೋಧನೆಯಲ್ಲಿ ನಿರತರಾಗಿರುತ್ತಿದ್ದರು.

ಕೆಲವು ಪ್ರಶಸ್ತಿ ವಿಜೇತ ಸಂಶೋಧನೆಗಳನ್ನು ನಡೆಸುವ ಮೂಲಕ ಮತ್ತು ಜನರನ್ನು ಸೆಳೆಯುವ ವೈಜ್ಞಾನಿಕ ಪ್ರದರ್ಶನಗಳ ಮೂಲಕ ರಾಮನ್ ಐಎಸಿಎಸ್ ಹೆಚ್ಚು ಜನಪ್ರಿಯವಾಗುವಂತೆ ಮಾಡಿದರು.

ತಮ್ಮ 29ನೇ ವಯಸ್ಸಿನಲ್ಲಿ ರಾಮನ್ ನಾಗರಿಕ ಸೇವಾ ಉದ್ಯೋಗವನ್ನು ತ್ಯಜಿಸಿ, ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸಕರಾದರು.

1921ರ ವೇಳೆಗಾಗಲೇ ರಾಮನ್ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅಸಾಧಾರಣ ವಿಜ್ಞಾನಿ ಎಂದು ಹೆಸರು ಸಂಪಾದಿಸಿದ್ದರು.

ಆ ವರ್ಷ ಅವರು ಮೊದಲ ಬಾರಿಗೆ ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿಂದ ಮರಳಿ ಭಾರತಕ್ಕೆ ಆಗಮಿಸುವ ಸಂದರ್ಭದಲ್ಲಿ, ರಾಮನ್ ತನ್ನ ಜೀವನ ಮತ್ತು ವೈಜ್ಞಾನಿಕ ಜಗತ್ತನ್ನೇ ಶಾಶ್ವತವಾಗಿ ಬದಲಾಯಿಸುವಂತಹ ಅಧ್ಯಯನವೊಂದನ್ನು ಕೈಗೊಂಡಿದ್ದರು!

ಮೆಡಿಟರೇನಿಯನ್ ಸಮುದ್ರದ ಮೂಲಕ ಸಾಗುವಾಗ, ಅದರ ಗಾಢ ನೀಲಿ ಬಣ್ಣವನ್ನು ರಾಮನ್ ವಿಸ್ಮಯದಿಂದ ಗಮನಿಸಿದ್ದರು.

ಸಮುದ್ರದ ಬಣ್ಣ ಕೇವಲ ಆಕಾಶದ ಪ್ರತಿಫಲನವಷ್ಟೇ ಎಂಬ ಸಾಮಾನ್ಯ ನಂಬಿಕೆಯನ್ನು ಒಪ್ಪಲು ರಾಮನ್ ಸಿದ್ಧರಿರಲಿಲ್ಲ. ಸಮುದ್ರದ ಬಣ್ಣ ಅವರ ಆಸಕ್ತಿಯನ್ನು ಹೆಚ್ಚಿಸಿ, ಅದರ ಕುರಿತು ಅನ್ವೇಷಿಸುವಂತೆ ಮಾಡಿತು.

ಕೆಲ ಸಮಯದಲ್ಲೇ ಬಹಳಷ್ಟು ಜನರು ಅಂದುಕೊಂಡಿರುವಂತೆ ಸಮುದ್ರದ ಬಣ್ಣ ಆಕಾಶದ ಪ್ರತಿಫಲನವಲ್ಲ ಎನ್ನುವುದನ್ನು ರಾಮನ್ ಕಂಡುಹಿಡಿದರು. ಬದಲಿಗೆ, ನೀರಿನಲ್ಲಿರುವ ಸಣ್ಣ ಕಣಗಳ (ನೀರಿನ ಅಣುಗಳು) ಕಾರಣದಿಂದ ಸೂರ್ಯನ ಬೆಳಕು ಚದುರುತ್ತದೆ ಎಂದು ಅವರು ಪತ್ತೆಹಚ್ಚಿದರು. ಈ ಚದುರುವಿಕೆಯ ಸಂದರ್ಭದಲ್ಲಿ, ನೀಲಿ ಬೆಳಕು ಇತರ ಬಣ್ಣಗಳಿಂದ ಹೆಚ್ಚು ಚದುರಿ, ಸಮುದ್ರ ನಮ್ಮ ಕಣ್ಣಿಗೆ ಹೆಚ್ಚು ನೀಲಿಯಾಗಿ ಕಾಣುವಂತೆ ಮಾಡುತ್ತದೆ. ನೀರು ನೀರಿನ ಅಣುಗಳೆಂಬ (ಮಾಲೆಕ್ಯುಲ್) ಎಂಬ ಸಣ್ಣ ಕಣಗಳಿಂದ ಮಾಡಲ್ಪಟ್ಟಿದ್ದು, ಪ್ರತಿಯೊಂದು ಅಣುವೂ ಎರಡು ಜಲಜನಕದ ಪರಮಾಣುಗಳು ಮತ್ತು ಒಂದು ಆಮ್ಲಜನಕದ ಪರಮಾಣುವನ್ನು (H2O) ಹೊಂದಿರುತ್ತದೆ. ಈ ಅಣುಗಳು ಜೊತೆಯಾಗಿ, ದ್ರವ, ಘನ ಅಥವಾ ಅನಿಲ ರೂಪದ ನೀರನ್ನು ಸೃಷ್ಟಿಸುತ್ತವೆ.

ಬೆಳಕು ಹೇಗೆ ಚದುರುತ್ತದೆ ಎಂಬ ಕುರಿತು ಕುತೂಹಲ ತಾಳಿದ ರಾಮನ್ ಮತ್ತು ಕಲ್ಕತ್ತಾದ ಅವರ ತಂಡ ಬಹಳಷ್ಟು ಪ್ರಯೋಗಗಳನ್ನು ನಡೆಸಿದರು. ಅವರ ಅವಿರತ ಪರಿಶ್ರಮದ ಪರಿಣಾಮವಾಗಿ, ಇಂದು 'ರಾಮನ್ ಪರಿಣಾಮ' ಎಂದು ಕರೆಯಲ್ಪಡುವ ಮಹತ್ವದ ಅನ್ವೇಷಣೆ ಸಾಧ್ಯವಾಯಿತು.

ರಾಮನ್ ಪರಿಣಾಮ

ಬೆಳಕು ಒಂದು ದ್ರವದ ಮೂಲಕ ಸಾಗಿ, ಅದರಲ್ಲಿ ಚದುರಿದ ಒಂದಷ್ಟು ಬೆಳಕು ಬಣ್ಣ ಬದಲಾಯಿಸಿದಾಗ ರಾಮನ್ ಪರಿಣಾಮ ಉಂಟಾಗುತ್ತದೆ. ದ್ರವದಲ್ಲಿನ ಅಣುಗಳೊಡನೆ ಬೆಳಕು ವರ್ತಿಸುವುದರಿಂದ, ಅದರ ಶಕ್ತಿ ಮತ್ತು ತರಂಗಾಂತರ ಬದಲಾಗುತ್ತದೆ. ಸರಳವಾಗಿ ವಿವರಿಸುವುದಾದರೆ, ಬೆಳಕು ದ್ರವದ ಅಣುಗಳಿಗೆ ಹೊಡೆದಾಗ, ಬೆಳಕಿನ ತರಂಗಾಂತರ ಕೊಂಚ ಬದಲಾಗಿ, ಅದರ ಬಣ್ಣ ಬದಲಾವಣೆ ಹೊಂದುತ್ತದೆ.

ಬೆಳಕು ಯಾವುದಾದರೂ ವಸ್ತುವಿಗೆ ತಾಗಿದಾಗ, ಅದು ಹಿಂದಕ್ಕೆ ಬರಬಹುದು (ಪ್ರತಿಫಲನ), ಬಾಗಬಹುದು (ವಕ್ರೀಭವನ), ಅಥವಾ ಅದರ ಮೂಲಕ ಸಾಗಿ ಹೋಗಬಹುದು.

ಬೆಳಕು ಡಿಕ್ಕಿಯಾಗುವ ಕಣಗಳು ಬೆಳಕಿನ ಶಕ್ತಿಯನ್ನು ಬದಲಾಯಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ಬೆಳಕು ಹೇಗೆ ಚದುರುತ್ತದೆ ಎಂದು ವಿಜ್ಞಾನಿಗಳು ಅಧ್ಯಯನ ನಡೆಸುತ್ತಾರೆ. ಅಂದರೆ, ಬೆಳಕು ಯಾವುದಾದರೂ ಕಣದೊಡನೆ ವರ್ತಿಸಿದಾಗ, ಅದು ಶಕ್ತಿಯನ್ನು ಪಡೆಯಬಹುದು, ಅಥವಾ ಕಳೆದುಕೊಳ್ಳಬಹುದು. ಇದರಿಂದ ಬೆಳಕಿನ ತರಂಗಾಂತರ ಅಥವಾ ಬಣ್ಣ ಕೊಂಚ ಮಟ್ಟಿಗೆ ಬದಲಾಗುತ್ತದೆ.

ಈ ವಿಚಾರವನ್ನು ಸರಳವಾಗಿ ಅರ್ಥ ಮಾಡಿಕೊಳ್ಳೋಣ:

* ಬೆಳಕು ಫೋಟಾನ್‌ಗಳೆಂದ ಸಣ್ಣ ಶಕ್ತಿಯುತ ಕಣಗಳಿಂದ ನಿರ್ಮಿತವಾಗಿದೆ.

* ಈ ಫೋಟಾನ್ ಬೇರೆ ಅಣುಗಳೊಡನೆ ವರ್ತಿಸಿದಾಗ, ಅದು ಶಕ್ತಿಯನ್ನು ಪಡೆದುಕೊಳ್ಳಬಹುದು, ಅಥವಾ ಕಳೆದುಕೊಳ್ಳಬಹುದು.

* ಶಕ್ತಿಯಲ್ಲಿನ ಬದಲಾವಣೆ ಫೋಟಾನಿನ ತರಂಗಾಂತರದ ಮೇಲೆ ಪರಿಣಾಮ ಬೀರುತ್ತದೆ:

~ ಹೆಚ್ಚಿನ ಶಕ್ತಿ - ಸಣ್ಣ ತರಂಗಾಂತರ (ನೀಲಿ ಬೆಳಕಿನತ್ತ ಸಾಗುತ್ತದೆ)

~ ಕಡಿಮೆ ಶಕ್ತಿ - ದೊಡ್ಡ ತರಂಗಾಂತರ (ಕೆಂಪು ಬೆಳಕಿನತ್ತ ಸಾಗುತ್ತದೆ)

ಆದರೆ, ಈ ಪ್ರಕ್ರಿಯೆಯ ಸಂದರ್ಭದಲ್ಲಿ ಇರುವ ಫೋಟಾನ್‌ಗಳ ಶಕ್ತಿಯಲ್ಲಿ ಬದಲಾವಣೆ ಉಂಟಾಗುತ್ತದೆಯೇ ಹೊರತು, ಫೋಟಾನ್‌ಗಳು ನಶಿಸುವುದಾಗಲಿ, ಹೊಸ ಫೋಟಾನ್‌ಗಳು ಸೃಷ್ಟಿಯಾಗುವುದಾಗಲಿ ನಡೆಯುವುದಿಲ್ಲ.

ರಾಮನ್ ಪರಿಣಾಮದಲ್ಲಿ ವಿವರಿಸಿರುವಂತೆ, ಬೆಳಕು ಈ ರೀತಿ ಅಣುಗಳೊಡನೆ ವರ್ತಿಸಿದಾಗ ಅದರ ಬಣ್ಣ ಸಣ್ಣ ಪ್ರಮಾಣದಲ್ಲಿ ಬದಲಾವಣೆ ಹೊಂದುತ್ತದೆ.

ಬೆಳಕಿನ ಚದುರುವಿಕೆ ಮತ್ತು ವಸ್ತು ವಿಶ್ಲೇಷಣೆ

ನೇಚರ್ ನಿಯತಕಾಲಿಕೆಯಲ್ಲಿ 'ಎ ನ್ಯೂ ಟೈಪ್ ಆಫ್ ಸೆಕೆಂಡರಿ ರೇಡಿಯೇಶನ್' ಎಂಬ ತಮ್ಮ ಮೊದಲ ವರದಿಯನ್ನು ಪ್ರಕಟಿಸುವಾಗ ಸಿ ವಿ ರಾಮನ್ ಮತ್ತು ಕೆ ಎಸ್ ಕೃಷ್ಣನ್ ಅವರು 60 ವಿಭಿನ್ನ ದ್ರವಗಳ ಮೇಲೆ ಅಧ್ಯಯನ ನಡೆಸಿ, ತಮ್ಮ ಸಂಶೋಧನೆಯನ್ನು ಹಂಚಿಕೊಂಡಿದ್ದರು. ಪ್ರತಿಯೊಂದು ದ್ರವದಲ್ಲಿ ನಡೆಸಿದ ಪ್ರಯೋಗದಲ್ಲೂ ಚದುರಿದ ಬೆಳಕಿನ ಬಣ್ಣ ಮೂಲ ಬಣ್ಣಕ್ಕೆ ಹೋಲಿಸಿದಾಗ ಸಣ್ಣ ಪ್ರಮಾಣದಲ್ಲಿ ಬದಲಾಗಿತ್ತು ಎಂದು ಅವರು ಖಾತ್ರಿಪಡಿಸಿದ್ದರು. ರಾಮನ್ ಅವರು ಇದೊಂದು ಗುರುತಿಸಬೇಕಾದ, ಸಾರ್ವತ್ರಿಕ ಪ್ರಕ್ರಿಯೆ ಎಂದು ಕರೆದಿದ್ದರು.

ರಾಮನ್ ಅವರು ಬಳಿಕ ಒಂದು ಸ್ಪೆಕ್ಟ್ರೋಸ್ಕೋಪ್ ಮೂಲಕ ನಿಖರವಾದ ಅಳತೆಯನ್ನು ದಾಖಲಿಸಿ, ತನ್ನ ಸಂಶೋಧನೆಯನ್ನು ಖಚಿತಪಡಿಸಿದರು. ಈ ವಿಸ್ತೃತ ಫಲಿತಾಂಶಗಳನ್ನು ರಾಮನ್ ಮಾರ್ಚ್ 31, 1928ರಂದು 'ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್'ನಲ್ಲಿ ಪ್ರಕಟಿಸಿದರು.

ಸ್ಪೆಕ್ಟ್ರೋಸ್ಕೋಪ್ ಎನ್ನುವುದು ಒಂದು ವೈಜ್ಞಾನಿಕ ಉಪಕರಣವಾಗಿದ್ದು, ಇದು ಬೆಳಕನ್ನು ವಿಭಿನ್ನ ಬಣ್ಣಗಳಲ್ಲಿ (ವರ್ಣಪಟಲ) ವಿಭಜಿಸಿ, ವಸ್ತುಗಳು ಹೇಗೆ ಬೆಳಕನ್ನು ಹೀರುತ್ತವೆ ಅಥವಾ ಹೊರಸೂಸುತ್ತವೆ ಎನ್ನುವುದನ್ನು ವಿಶ್ಲೇಷಿಸಲು ನೆರವಾಗುತ್ತದೆ. ಇದು ವಸ್ತುಗಳನ್ನು ಗುರುತಿಸಿ, ಬೆಳಕಿನ ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ನೆರವಾಗುತ್ತದೆ.

ಸಿ ವಿ ರಾಮನ್ ಅವರ ಸಂಶೋಧನೆ ಜಗತ್ತಿನಾದ್ಯಂತ ಭಾರೀ ಪರಿಣಾಮ ಬೀರಿ, ರಾಮನ್ ಊಹೆಯನ್ನೂ ಮೀರಿ ಜನಪ್ರಿಯವಾಯಿತು. 1930ರಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿ ಭಾಷಣ ಮಾಡಿದ ರಾಮನ್, ಬೆಳಕಿನ ಚದುರುವಿಕೆಯನ್ನು ಅಧ್ಯಯನ ಮಾಡುವುದರಿಂದ, ಅದು ಹಾದುಹೋಗುವ ವಸ್ತುಗಳ ಮೂಲಭೂತ ರಚನೆಯನ್ನು ತಿಳಿಯಲು ಸಾಧ್ಯವಿದೆ ಎಂದಿದ್ದರು.

ಆ ಸಮಯದಲ್ಲಿ ವಿಜ್ಞಾನಿಗಳು ಸಣ್ಣ ಕಣಗಳು ಹೇಗೆ ವರ್ತಿಸುತ್ತವೆ ಎಂದು ತಿಳಿಸುವ ಕ್ವಾಂಟಂ ಸಿದ್ಧಾಂತದ ಮೇಲೆ ಹೆಚ್ಚಿನ ಗಮನ ಹರಿಸಿದ್ದರು. ರಾಮನ್ ಸಂಶೋಧನೆ ಬೆಳಕು ಬೇರೆ ಬೇರೆ ವಸ್ತುಗಳೊಡನೆ ಅತ್ಯಂತ ತಳಮಟ್ಟದಲ್ಲಿ ಹೇಗೆ ವರ್ತಿಸುತ್ತದೆ ಎಂದು ತಿಳಿಸುವ ಮೂಲಕ ವಿಜ್ಞಾನಿಗಳಿಗೆ ನೆರವಾಗುವ ಮೂಲಕ ಅತ್ಯಂತ ಮಹತ್ವದ ಸಂಶೋಧನೆಯಾಗಿ ಹೊರಹೊಮ್ಮಿತು. ರಾಮನ್ ಸಂಶೋಧನೆ ಬೆಳಕಿನ ಲಕ್ಷಣಗಳ ಕುರಿತು ಹೊಸ ಹೊಳಹನ್ನು ನೀಡಿ, ಭೌತಶಾಸ್ತ್ರದ ಮೇಲೆ ಮಹತ್ವದ ಪರಿಣಾಮ ಬೀರಿತು.

ಇದನ್ನೂ ಓದಿ: ಇಸ್ರೋ ಬಾಹ್ಯಾಕಾಶ ನಿಲ್ದಾಣಗಳ ಡಾಕಿಂಗ್‌ ಪ್ರಯೋಗ: ಇದರ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು

ಬೆಳಕು ಮತ್ತು ವಸ್ತು: ಒಂದು ವೈಜ್ಞಾನಿಕ ಬಾಂಧವ್ಯ

ಬೆಳಕು ಶಕ್ತಿಯ ಒಂದು ರೂಪವಾಗಿದ್ದು, ತರಂಗದ ರೂಪದಲ್ಲಿ ಸಾಗುತ್ತಾ ನಮಗೆ ಬೇರೆ ಬೇರೆ ವಿಚಾರಗಳನ್ನು ನೋಡಲು ಸಾಧ್ಯವಾಗಿಸುತ್ತದೆ. ಬೆಳಕು ದೃಗ್ಗೋಚರ ಬೆಳಕಿನಿಂದ ಹಿಡಿದು ಕಣ್ಣಿಗೆ ಕಾಣದ ಕ್ಷ ಕಿರಣಗಳು ಮತ್ತು ಅತಿಗೆಂಪು ಕಿರಣಗಳನ್ನು ಒಳಗೊಂಡಿದೆ.

ತೂಕವನ್ನು ಹೊಂದಿರುವ, ತನ್ನ ಸುತ್ತಲಿನ ಅವಕಾಶವನ್ನು ವ್ಯಾಪಿಸುವ ಯಾವುದನ್ನೇ ಆದರೂ ವಸ್ತು ಎನ್ನಬಹುದು. ಇದಕ್ಕೆ ಗಾಳಿ, ನೀರು, ಕಲ್ಲು, ಅಷ್ಟೇ ಏಕೆ, ನಮ್ಮ ದೇಹವನ್ನೂ ಉದಾಹರಣೆಯಾಗಿ ನೀಡಬಹುದು. ಇವೆಲ್ಲವೂ ಅಣುಗಳಿಂದ ನಿರ್ಮಿತವಾಗಿರುತ್ತವೆ.

ಬೆಳಕು ಈ ವಸ್ತುವಿನೊಡನೆ ವರ್ತಿಸಿದಾಗ, ಅದು ಹೀರಲ್ಪಡಬಹುದು, ಪ್ರತಿಫಲಿಸಲ್ಪಡಬಹುದು, ಅಥವಾ ಚದುರಬಹುದು, ಕೆಲವೊಂದು ಸಂದರ್ಭಗಳಲ್ಲಿ ಬೆಳಕು ತನ್ನ ಬಣ್ಣ ಮತ್ತು ದಿಕ್ಕನ್ನು ಬದಲಾಯಿಸಬಹುದು.

ರಾಮನ್ ಸ್ಪೆಕ್ಟ್ರೋಸ್ಕೊಪಿ ಮೂಲಕ ವಸ್ತುಗಳ ಅಧ್ಯಯನ

ರಾಮನ್ ಸಂಶೋಧನೆ ರಸಾಯನಶಾಸ್ತ್ರಕ್ಕೂ ಅತ್ಯಂತ ಉಪಯುಕ್ತವಾಗಿ ರಾಮನ್ ಸ್ಪೆಕ್ಟ್ರೋಸ್ಕೊಪಿ ಎಂಬ ಹೊಸ ತಂತ್ರದ ಅಭಿವೃದ್ಧಿಗೆ ಕಾರಣವಾಯಿತು. ಈ ವಿಧಾನ ವಿಜ್ಞಾನಿಗಳಿಗೆ ಬೇರೆ ಬೇರೆ ವಸ್ತುಗಳನ್ನು ಅವುಗಳಿಗೆ ಹಾನಿ ಮಾಡದೆಯೇ ಅಧ್ಯಯನ ನಡೆಸಲು ನೆರವಾಗುತ್ತದೆ. ಇದು ನೈಸರ್ಗಿಕ ಮತ್ತು ಕೃತಕ ವಸ್ತುಗಳೆರಡನ್ನೂ ವಿಶ್ಲೇಷಿಸಲು ಬಳಕೆಯಾಗಿ, ರಾಸಾಯನಿಕಗಳನ್ನು ಗುರುತಿಸಲು ಮತ್ತು ಅರ್ಥ ಮಾಡಿಕೊಳ್ಳಲು ಶಕ್ತಿಶಾಲಿ ವಿಧಾನವಾಗಿದೆ.

ಅತ್ಯಂತ ಶಕ್ತಿಶಾಲಿಯಾದ ಮತ್ತು ಹೆಚ್ಚು ಕೇಂದ್ರೀಕೃತ ಬೆಳಕಿನ ಕಿರಣಗಳನ್ನು ಉತ್ಪಾದಿಸುವ ಲೇಸರ್‌ಗಳ ಅಭಿವೃದ್ಧಿಯ ಬಳಿಕವಂತೂ ರಾಮ‌ನ್ ಸ್ಪೆಕ್ಟ್ರೋಸ್ಕೊಪಿ ಹೆಚ್ಚು ಹೆಚ್ಚು ಉಪಯೋಗಕ್ಕೆ ಬರುತ್ತಿದೆ. ಕಾಲಕ್ರಮೇಣ ಅದರ ಬಳಕೆಯೂ ಹೆಚ್ಚುತ್ತಿದ್ದು, ಬಹಳಷ್ಟು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮುಖ್ಯವಾಗುತ್ತಿದೆ.

ಇಂದು ರಾಮನ್ ಸ್ಪೆಕ್ಟ್ರೋಸ್ಕೊಪಿ ವಿವಿಧ ರೀತಿಗಳಲ್ಲಿ ಬಳಕೆಯಾಗುತ್ತಿದೆ. ಇದು ತಜ್ಞರಿಗೆ ಕಲಾಕೃತಿಗಳ ಅಧ್ಯಯನ ಮಾಡಲು, ಮತ್ತು ಐತಿಹಾಸಿಕ ವಸ್ತುಗಳಿಗೆ ಹಾನಿಯಾಗದಂತೆ ಅವುಗಳನ್ನು ಪರಿಶೀಲಿಸಲು ನೆರವಾಗುತ್ತದೆ. ವಿಮಾನ ನಿಲ್ದಾಣಗಳು ಮತ್ತು ಗಡಿ ಪ್ರದೇಶಗಳಲ್ಲಿ ಚೀಲಗಳೊಳಗೆ ಮಾದಕ ವಸ್ತುಗಳ ಸಾಗಾಣಿಕೆಯನ್ನು ಪತ್ತಹೆಚ್ಚಲೂ ಇದು ಬಳಕೆಯಾಗುತ್ತದೆ.

ಇದನ್ನೂ ಓದಿ : ಏರೋ ಇಂಡಿಯಾ 2025: ಜಾಗತಿಕ ಅವಕಾಶಗಳ ರನ್‌ವೇ, ರೋಮಾಂಚಕ ವೈಮಾನಿಕ ಪ್ರದರ್ಶನ