ಸ್ಕಾಟ್ಲೆಂಡ್‌ನಲ್ಲಿ ರಾಯಭಾರಿಯ ಗುರುದ್ವಾರ ಭೇಟಿ ತಡೆದ ಖಲಿಸ್ತಾನಿಗಳು, ಸಮನ್ಸ್ ನೀಡಿದ ಭಾರತ!
ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಗುರುದ್ವಾರಕ್ಕೆ ಭಾರತದ ರಾಯಭಾರಿಯ ಭೇಟಿಯನ್ನು ಖಲಿಸ್ತಾನಿಗಳು ತಡೆದಿದ್ದಾರೆ. ಭಾರತ ಈ ವಿಚಾರವನ್ನು ರಿಷಿ ಸುನಕ್ ಸರ್ಕಾರದ ಎದುರು ಪ್ರಸ್ತಾಪ ಮಾಡಿದೆ.

ನವದೆಹಲಿ (ಸೆ.30): ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರಿಗೆ ಖಲಿಸ್ತಾನಿಗಳು ಗುರುದ್ವಾರಕ್ಕೆ ಭೇಟಿ ನೀಡಲು ತಡೆದಿದ್ದಾರೆ. ಇದೇ ಗುರುದ್ವಾರದಲ್ಲಿ ದೊರೈಸ್ವಾಮಿ ಅವರು ಖಾಲಿಸ್ತಾನ ಚಟುವಟಿಕೆಗಳ ಕುರಿತು ಗುರುದ್ವಾರ ಸಮಿತಿಯೊಂದಿಗೆ ಸಭೆ ನಡೆಸಲು ಬಂದಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲಿಯೇ ಭಾರತ ಸರ್ಕಾರ ಬ್ರಿಟನ್‌ನ ರಿಷಿ ಸುನಕ್ ಸರ್ಕಾರದ ಎದುರು ಪ್ರಸ್ತಾಪ ಮಾಡಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಗುರುದ್ವಾರಕ್ಕೆ ಬ್ರಿಟನ್‌ನ ಭಾರತೀಯ ರಾಯಭಾರಿ ವಿಕ್ರಮ್ ದೊರೈಸ್ವಾಮಿ ಭೇಟಿ ನೀಡಲು ತೆರಳಿದ್ದರು. ಈ ವೇಳೆ ತೀವ್ರಗಾಮಿ ಖಲಿಸ್ತಾನಿಗಳ ಗುಂಪು ಅವರನ್ನು ತಡೆದಿದೆ. ಅವರ ಕಾರ್ ಬಂದು ನಿಂತಾಗ ಅದರ ಸುತ್ತಲೂ ಸುತ್ತುವರಿಯುವ ಖಲಿಸ್ತಾನಿಗಳು ಅವರನ್ನು ಕಾರ್‌ನಿಂದ ಕೆಳಗಿಳಿಯಲು ಕೂಡ ಬಿಡೋದಿಲ್ಲ. ಇದಾದ ಬಳಿಕ ದೊರೈಸ್ವಾಮಿ ಕಾರಿನಲ್ಲಿ ಕುಳಿತು ಅಲ್ಲಿಂದ ಹೊರಟರು. ಅವರ ನಿರ್ಗಮನದ ನಂತರವೂ, ಖಲಿಸ್ತಾನ್ ಬೆಂಬಲಿಗರು ಮತ್ತೆ ಅಲ್ಲಿಗೆ ಬರದಂತೆ ಸೂಚನೆ ನೀಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಭಾರತವು ಈ ವಿಷಯದಲ್ಲಿ ಬ್ರಿಟನ್‌ನಲ್ಲಿರುವ ವಿದೇಶಾಂಗ ಕಚೇರಿಗೆ ಸಮನ್ಸ್ ನೀಡಿ ಆಕ್ರೋಶ ವ್ಯಕ್ತಪಡಿಸಿದೆ.
ಹೈಕಮಿಷನರ್ ಅವರನ್ನು ತಡೆದವರಲ್ಲಿ ಪೈಕಿ ಒಬ್ಬ ಖಲಿಸ್ತಾನಿ ಬೆಂಬಲಿಗ, ಭಾರತೀಯ ರಾಯಭಾರಿ ಇಲ್ಲಿಗೆ ಬರಲಿದ್ದಾರೆ ಎಂದು ನಮಗೆ ತಿಳಿದಿತ್ತು. ನಾವು ಅವರನ್ನು ನಿಲ್ಲಿಸಿದಾಗ, ಅವರು ಕಾರಿನಲ್ಲಿ ಕುಳಿತು ವಾಪಾಸ್ ಹೋಗಿದ್ದಾರೆ. ಭಾರತ ಸರ್ಕಾರದಿಂದ ಗುರುದ್ವಾರಕ್ಕೆ ಬರುವ ಯಾವುದೇ ವ್ಯಕ್ತಿಗೆ, ಅವರು ಯಾವುದೇ ನೆಪದಲ್ಲಿ ಇಲ್ಲಿಗೆ ಬಂದರೂ ಅದೇ ಸಂಭವಿಸುತ್ತದೆ. ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ಕೆನಡಾದಲ್ಲಿ ಏನಾಯಿತು ಎಂದು ನಾವು ನೋಡಿದ್ದೇವೆ. ಕೆನಡಾದ ಪ್ರಧಾನಿ ಭಾರತವನ್ನು ಸ್ಪಷ್ಟವಾಗಿ ಖಂಡಿಸಿದ್ದಾರೆ. ಅವರ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದರು. ಇಂತಹ ಪರಿಸ್ಥಿತಿಯಲ್ಲಿ ಗುರುದ್ವಾರಕ್ಕೆ ಭೇಟಿ ನೀಡಲು ಅವರನ್ನು ಆಹ್ವಾನಿಸಿರುವುದು ತಪ್ಪು ಎಂದಿದ್ದಾರೆ.
ನಿಜ್ಜರ್ ಹತ್ಯೆ ಕೆನಡಾ ತನಿಖೆಗೆ ಸಹಕರಿಸಿ, ಭಾರತಕ್ಕೆ ಅಮೆರಿಕ ಒತ್ತಾಯ
ಈ ಘಟನೆಯ ನಂತರ ಬಿಜೆಪಿ ನಾಯಕ ಮಣಿಂದರ್ ಸಿಂಗ್ ಸಿರ್ಸಾ ಮಾತನಾಡಿದ್ದು, ಸ್ಕಾಟ್ಲೆಂಡ್‌ನಲ್ಲಿ ನಡೆದದ್ದನ್ನು ನಾನು ಖಂಡಿಸುತ್ತೇನೆ. ಗುರುದ್ವಾರಕ್ಕೆ ಭೇಟಿ ನೀಡಲು ಯಾರಿಗಾದರೂ ಸಂಪೂರ್ಣ ಹಕ್ಕಿದೆ. ನಮ್ಮ ಧರ್ಮವು ಹಿಂಸೆಯನ್ನು ಹರಡಲು ಕರೆ ನೀಡುವುದಿಲ್ಲ ಆದರೆ ನಾವು ಮಾನವೀಯತೆಯನ್ನು ರಕ್ಷಿಸುತ್ತೇವೆ. ಪ್ರಧಾನಿ ಮೋದಿ ಕೂಡ ನಮ್ಮ ಸಮುದಾಯವನ್ನು ಹೊಗಳಿದ್ದರು. ಸಿಖ್ಖರಿಗೆ ಭಾರತ ಅತ್ಯಂತ ಸುರಕ್ಷಿತ ಸ್ಥಳವಾಗಿದೆ ಎಂದಿದ್ದಾರೆ.
ಭಾರತ, ಕೆನಡಾ ಬಿಕ್ಕಟು ನಡುವೆಯೇ ಅಮೆರಿಕಾ ವಿದೇಶಾಂಗ ಸಚಿವರ ಭೇಟಿ ಮಾಡಿದ ಜೈಶಂಕರ್
ಕಳೆದ ಮಾರ್ಚ್‌ನಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈ ಕಮೀಷನ್ ಕಚೇರಿಗೆ ಹೊಕ್ಕಿದ್ದ ಖಲಿಸ್ತಾನಿ ಬೆಂಬಲಿಗರು ಇಡೀ ಕಚೇರಿಯನ್ನು ಧ್ವಂಸ ಮಾಡಿದ್ದರು. ಇದಾದ ಬಳಿಕ ಕಚೇರಿಯ ಮೇಲೆ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ತೆಗೆದುಹಾಕಲಾಗಿದೆ. ಅಮೃತಪಾಲ್ ಸಿಂಗ್ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಕ್ರಮವನ್ನು ವಿರೋಧಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಇದರ ನಂತರ, ಮೊದಲ ಬಾರಿಗೆ ಎನ್‌ಐಎ ತಂಡ ತನಿಖೆಗಾಗಿ ವಿದೇಶಕ್ಕೆ ಪ್ರಯಾಣ ಮಾಡಿತ್ತು.