ಮಸೀದಿ ಕೆಡವಿ ಮಂದಿರ ಕಟ್ಟಿದ್ದನ್ನ ಒಪ್ಪೋದಿಲ್ಲ: ಉದಯನಿಧಿ ಸ್ಟ್ಯಾಲಿನ್
Udhayanidhi Stalin on Ram Mandir ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮದ ವಿರುದ್ಧ ಅಲ್ಲ, ಆದರೆ ಮಸೀದಿ ಕೆಡವಿ ಮಂದಿರ ನಿರ್ಮಿಸುವುದನ್ನು ನಾವು ಒಪ್ಪೋದಿಲ್ಲ ಎಂದಿದ್ದಾರೆ.
ಚೆನ್ನೈ (ಜ.18): ಸನಾತನ ಧರ್ಮದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ದೇಶಾದ್ಯಂತ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳುನಾಡು ಕ್ರೀಡಾ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಈಗ ರಾಮಮಂದಿರ ವಿಚಾರವಾಗಿ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಬಗ್ಗೆ ಮಾತನಾಡಿರುವ ಸ್ಟ್ಯಾಲಿನ್, ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದು, ಮಸೀದಿ ಕೆಡವಿ ಮಂದಿರ ಕಟ್ಟುವುದನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ. ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಕರುಣಾನಿಧಿ ಅವರು ಯಾವಾಗಲೂ ಹೇಳುತ್ತಿದ್ದರು, ಮಂದಿರ ಕಟ್ಟುವುದು ಸಮಸ್ಯೆಯಲ್ಲ, ಆದರೆ ಮಸೀದಿ ಕೆಡವಿ ಅಲ್ಲಿ ಮಂದಿರ ನಿರ್ಮಿಸುವುದನ್ನು ನಾವು ಒಪ್ಪುವುದಿಲ್ಲ, ಆಧ್ಯಾತ್ಮಿಕತೆ ಮತ್ತು ರಾಜಕೀಯವನ್ನು ಬೆರೆಸಬೇಡಿ ಎಂದು ಉದಯನಿಧಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದ್ದಉ, ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಧು-ಸಂತರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿಲಿದ್ದಾರೆ. ಸಾಕಷ್ಟು ವಿರೋಧ ಪಕ್ಷಗಳ ಪ್ರಮುಖ ನಾಯಕರಿಗೆ ಮಂದಿರದ ಆಹ್ವಾನವನ್ನು ನೀಡಲಾಗಿದೆ. ಆದರೆ, ಹೆಚ್ಚಿನ ನಾಯಕರು ಈ ಕಾರ್ಯಕ್ರಮಕ್ಕೆ ತಾವು ಬರೋದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಅಧೀರ್ ರಂಜನ್ ಚೌಧರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಅದರೊಂದಿಗೆ ಇಂಡಿಯಾ ಮೈತ್ರಿಕೂಟದ ಹಲವು ಪಕ್ಷಗಳು ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ತಿಳಿಸಿದೆ.
ಸನಾತನ ಮತ್ತು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಉದಯನಿಧಿ ಸ್ಟಾಲಿನ್ ಸುದ್ದಿಯಾಗಿದ್ದರು. ಸ್ಟ್ಯಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದರು. ಸನಾತನ ಸಂಸ್ಥೆಯನ್ನು ವಿರೋಧಿಸುವುದು ಮಾತ್ರವಲ್ಲದೆ ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಚರ್ಚೆಗ ಕಾರಣರಾಗಿದ್ದರು. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಹೇಳಿದರು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು. ಹಾಗೆಯೇ ಸನಾತನವನ್ನೂ ನಾಶಪಡಿಸಬೇಕು ಎಂದಿದ್ದರು.
ಸನಾತನ ಧರ್ಮ ನಾಶಕ್ಕೆ ಕರೆಕೊಟ್ಟ ಉದಯನಿಧಿ ಸ್ಟಾಲಿನ್‌ಗೆ ಶೀಘ್ರದಲ್ಲಿ ಉಪಮುಖ್ಯಮಂತ್ರಿ ಪಟ್ಟ!
ಉದಯನಿಧಿ ಸ್ಟಾಲಿನ್ ಕರುಣಾನಿಧಿಯವರ ಮೊಮ್ಮಗ: ಉದಯನಿಧಿ ಸ್ಟಾಲಿನ್‌ಗೆ ವಂಶಪಾರಂಪರ್ಯವಾಗಿ ರಾಜಕೀಯ ಬಂದಿದೆ. ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ನಾಯಕ ದಿವಂಗತ ಎಂ ಕರುಣಾನಿಧಿ ಅವರ ಮೊಮ್ಮಗ. ಉದಯನಿಧಿ ಅವರ ತಂದೆ ಎಂಕೆ ಸ್ಟಾಲಿನ್ ಅವರು ಡಿಎಂಕೆ ಮುಖ್ಯಸ್ಥ ಮತ್ತು ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ. ಕಳೆದ ವರ್ಷವಷ್ಟೇ ಅವರನ್ನು ಸ್ಟಾಲಿನ್ ಸರ್ಕಾರದಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು. ಇದಲ್ಲದೇ ಡಿಎಂಕೆ ಯುವ ಘಟಕದ ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ.
'ಯಾರಪ್ಪನ ಮನೆಯ ಹಣ ಕೇಳ್ತಿಲ್ಲ' ಎಂದ ಉದಯನಿಧಿ, ನಾಲಿಗೆಯ ಮೇಲೆ ಹಿಡಿತವಿರಲಿ, ಎಚ್ಚರಿಸಿದ ವಿತ್ತ ಸಚಿವೆ!