Pilot Smith Machhar survival story: ಫ್ಲೈದುಬೈ ವಿಮಾನ ಹೈಜಾಕ್ ಮತ್ತು ಪತನವನ್ನು ತಡೆಯುವಾಗ ಸಹಪೈಲಟ್‌ನಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಛರ್ ಆಸ್ಪತ್ರೆಯಿಂದಲೇ ಘಟನೆಯ ಬಗ್ಗೆ ವಿವರಿಸಿದ್ದಾರೆ.

ದುಬೈ: ಫ್ಲೈದುಬೈ ವಿಮಾನ ಹೈಜಾಕ್‌, ಪತನ ತಡೆವ ವೇಳೆ ಸಹಪೈಲಟ್‌ನಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ಸ್ಮಿತ್‌ ಮಚ್ಛರ್‌ ಘಟನೆಯ ಕುರಿತು ಮತ್ತಷ್ಟು ಬೆಳಕು ಚೆಲ್ಲಿದ್ದಾರೆ.

ಆಸ್ಪತ್ರೆಯಿಂದಲೇ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಸ್ಮಿತ್‌, ‘ವಿಮಾನ ಹೊರಟು 2 ಗಂಟೆ ಆಗಿತ್ತು. ಮೊದಲ ಬಾರಿ ಒಮಾನಿ ಸಲಪೈಲಟ್‌ ಜೊತೆ ಸಂಚಾರ ಆರಂಭಿಸಿದ್ದೆ. ಈ ವೇಳೆ ಇಸ್ರೇಲ್‌ನಿಂದ ನನ್ನೊಂದಿಗೆ ಮರಳಬೇಕಿದ್ದ ಮತ್ತೊಬ್ಬ ಪೈಲಟ್‌ ಕಾಕ್‌ಪೀಟ್‌ಗೆ ನನಗೆ ಶುಭ ಕೋರಲು ಬಂದಿದ್ದರು. ಇದೇ ಹೊತ್ತಲ್ಲಿ ಒಮಾನಿ ಪೈಲಟ್‌ ಶೌಚಾಲಯಕ್ಕೆ ತೆರಳಿ ಅಲ್ಲಿಂದ ಮರಳಿದರು. ಹೀಗೆ ಬಂದವರೆ ನಾನು ಪ್ರಾರ್ಥನೆ ಮಾಡಬೇಕು ಜಾಗ ಬಿಡಿ ಎಂದು ಇನ್ನೊಬ್ಬ ಪೈಲಟ್‌ಗೆ ಹೇಳಿದರು.

ಹೇಳಿಕೆಗೆ ನಮಗೆ ಅಸಹಜ ಎನ್ನಿಸಲಿಲ್ಲ

ಆತನ ಹೇಳಿಕೆಗೆ ನಮಗೆ ಅಸಹಜ ಎನ್ನಿಸಲಿಲ್ಲ. ನಾನು ವಿಮಾನದ ಚಲನವಲನ ಗಮನಿಸುತ್ತಿದ್ದೆ. ಸಹಪೈಲಟ್‌ ಹಿಂದಿದ್ದ. ಆದಾದ ಕೆಲವೇ ಕ್ಷಣಗಳಲ್ಲಿ ನನ್ನ ತಲೆಗೆ ಭಾರೀ ಪೆಟ್ಟು ಬಿತ್ತು. ನಾನು ವಿಮಾನದ ಮೇಲ್ಭಾಗ ಕಿತ್ತುಬಂದ ತಲೆಗೆ ಅಪ್ಪಳಿಸಿರಬೇಕು ಅಂದುಕೊಂಡೆ. ಬಳಿಕ ಅದು ದಾಳಿ ಎಂದು ಖಚಿತವಾಯ್ತು.

ಆಗ ನನ್ನ ಮೊದಲ ಪ್ರಕ್ರಿಯೆ ಮತ್ತಷ್ಟು ದಾಳಿ ತಡೆಯುವುದಾಗಿತ್ತು. ಹೀಗಾಗಿ ಸೀಟ್‌ನ ಬೆಲ್ಟ್‌ ತೆಗೆದು ಹೊರಗಡೆ ಇದ್ದ ಇತರೆ ಪೈಲಟ್‌ಗೆ ಮೊರೆ ಇಟ್ಟೆ. ಜೊತೆಗೆ ಕಾಕ್‌ಪೀಟ್‌ನ ಬಾಗಿಲು ತೆರೆಯಲು ಯತ್ನಿಸಿದೆ. ಆಗ ಮೊದಲ ಬಾರಿಗೆ ನನ್ನ ಪ್ರಜ್ಞೆ ತಪ್ಪಿತ್ತು. ಮತ್ತೆ ಪ್ರಜ್ಞೆ ಬಂದ ಬಳಿಕ ಹೇಗೋ ಸಾವರಿಸಿಕೊಂಡು ಬಾಗಿಲು ತೆಗೆದು ಆಚೆ ಬಿದ್ದೆ. ಮುಂದಿನದ್ದು ಇತಿಹಾಸ. ಆ ಹೊತ್ತಿನಲ್ಲಿ ನನ್ನ ತಲೆಗೆ ಬಂದ ವಿಷಯವೆಂದರೆ, ‘ಸ್ಮಿತ್‌ ಏನಾದರು ಮಾಡು, ನೀನು ಹೀಗೆ ಸಾಯಬಾರದು’ ಎಂದು ನನಗೆ ನಾನೇ ಧೈರ್ಯ ಹೇಳಿಕೊಂಡಿದ್ದು. ಹೀಗೆ ಬದುಕಿಬಂದೆ ಎಂದು ಸ್ಮಿತ್‌ ಘಟನೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.