ಹೈದರಾಬಾದ್‌ನಲ್ಲಿ ಬೃಹತ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಇವರು ಆನ್‌ಲೈನ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಿ ವಿಜಿಯನಗರಂನಲ್ಲಿ ಪ್ರಯೋಗ ನಡೆಸಿದ್ದರು.

ನವದೆಹಲಿ: ಹೈದರಾಬಾದ್‌ನಲ್ಲಿ ಬೃಹತ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ತೆಲಂಗಾಣದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಭಾನುವಾರ ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಸಯೀದ್ ಸಮೀರ್ (28) ಮತ್ತು ಸಿರಾಜ್-ಉರ್-ರೆಹಮಾನ್ (29) ಎಂದು ಗುರುತಿಸಲಾಗಿದೆ.

‘ಸಾಮಾಜಿಕ ಮಾಧ್ಯಮದ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಆ ಬಳಿಕ ಐಸಿಸ್‌ಗಾಗಿ ಕೆಲಸ ಮಾಡಲು ಆರಂಭಿಸಿದ್ದರು. ಆನ್ಲೈನ್ ಮೂಲಕ ಸ್ಫೋಟಕಗಳನ್ನು ಖರೀದಿಸಿ ವಿಜಿಯನಗರಂನಲ್ಲಿ ಪ್ರಯೋಗ ನಡೆಸಿದ್ದರು. ಈ ಪ್ರಯೋಗದ ಯಶಸ್ಸಿನೊಂದಿಗೆ, ಸೌದಿ ಅರೇಬಿಯಾದಲ್ಲಿರುವ ಉಗ್ರನ ನೆರವಿನೊಂದಿಗೆ ಹೈದರಾಬಅದ್‌ನಲ್ಲಿ ದೊಡ್ಡ ಸ್ಫೋಟವನ್ನು ಕೈಗೊಳ್ಳುವ ಸಂಚು ರೂಪಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರವಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೆ ಇನ್ನಿಬ್ಬರ ಸೆರೆಯಾಗಿದೆ.

ಧ್ವಂಸದ ಫೋಟೋ ಬಿಡುಗಡೆ
ಆಪರೇಷನ್‌ ಸಿಂದೂರ ಕಾರ್ಯಾಚರಣೆಯ ಹೊಸ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸಲಾಗಿದೆ ಎಂಬ ಸಂದೇಶವನ್ನು ಈ ಮೂಲಕ ನೀಡಿದೆ.

ಗಡಿಯಲ್ಲಿರುವ ಪಾಕಿಸ್ತಾನದ ಔಟ್‌ಪೋಸ್ಟ್‌ಗಳನ್ನು ಶೆಲ್‌ ದಾಳಿ ಮೂಲಕ ನಾಶಮಾಡುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಭಾರತೀಯ ಸೇನೆಯ ಪಶ್ಚಿಮ ಕಮಾಂಡ್‌, ''''ಯೋಜನೆ ಹಾಕಿ, ತರಬೇತಿ ಪಡೆದು, ಕಾರ್ಯಗತಗೊಳಿಸಲಾಗಿದೆ, ನ್ಯಾಯ ಒದಗಿಸಲಾಗಿದೆ'''' ಎಂದು ವಿಡಿಯೋಗೆ ಟಿಪ್ಪಣಿ ಬರೆದುಕೊಂಡಿದೆ.

ಸೇನಾ ಸಿಬ್ಬಂದಿಯೊಬ್ಬರು ಮಾತನಾಡಿ, ಇದೆಲ್ಲ ಆರಂಭವಾಗಿದ್ದು ಪಹಲ್ಗಾಂ ಉಗ್ರ ದಾಳಿಯಿಂದ. ಈ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗ ಎಲ್ಲರ ಮನಸ್ಸಿನ ಭಾವನೆ ಒಂದೇ ಆಗಿತ್ತು. ಈ ಬಾರಿ ಪಾಕಿಸ್ತಾನವು ತಲೆಮಾರುವರೆಗೆ ನೆನಪಿಟ್ಟುಕೊಳ್ಳುವಂಥ ಪಾಠ ಕಲಿಸಬೇಕು. ಇದು ಪ್ರತೀಕಾರ ಅಲ್ಲ, ನ್ಯಾಯ. ಮೇ 9ರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಪಾಕಿಸ್ತಾನದ ಯಾವೆಲ್ಲ ಪೋಸ್ಟ್‌ ಕದನ ವಿರಾಮ ಉಲ್ಲಂಘಿಸಿತೋ ಅವನ್ನೆಲ್ಲ ಭಾರತೀಯ ಸೇನೆ ಸಂಪೂರ್ಣವಾಗಿ ನಾಶ ಮಾಡಿತು. ಆಪರೇಷನ್‌ ಸಿಂದೂರ ಕೇವಲ ಒಂದು ಕಾರ್ಯಾಚರಣೆ ಅಲ್ಲ, ದಶಕಗಳಾದರೂ ಬುದ್ಧಿಕಲಿಯದ ಪಾಕಿಸ್ತಾನಕ್ಕೆ ಕಲಿಸಿದ ಪಾಠ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಪಹಲ್ಗಾಂ, ಪುರಿ, ಕೇರಳ, ಕುಂಭಕ್ಕೆ ಜ್ಯೋತಿ ಭೇಟಿ
ಪಾಕ್‌ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯುಟ್ಯೂಬರ್‌ ಜ್ಯೋತಿ, 26 ಪ್ರವಾಸಿಗರ ನರಮೇಧಗೈದ ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲಕ್ಕೂ ಭೇಟಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಈ ಸ್ಥಳಗಳ ಕುರಿತು ಆಕೆ ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಜ್ಯೋತಿ ಇದೇ ವರ್ಷದ ಜನವರಿಯಲ್ಲಿ ಕಾಶ್ಮೀರದ ಶ್ರೀನಗರ, ಸೋನ್ಮಾರ್ಗ್‌, ಗುಲ್ಮಾರ್ಗ್‌ ಮತ್ತು ಇತ್ತೀಚೆಗೆ ಉಗ್ರದಾಳಿಗೆ ಸಾಕ್ಷಿಯಾದ ಪಹಲ್ಗಾಂಗೆ ಭೇಟಿ ನೀಡಿದ್ದಳು. ಅದಾದ ಬಳಿಕ, ದಕ್ಷಿಣದ ರಾಜ್ಯವಾದ ಕೇರಳಕ್ಕೆ ಪ್ರವಾಸ ಕೈಗೊಂಡಿದ್ದಳು. ಯೋಜನೆಯ ಪ್ರಕಾರ, ಕೊಚ್ಚಿ ಮೂಲಕ ಕೇರಳ ಪ್ರವೇಶಿಸುವುದಾಗಿ ಹೇಳಿಕೊಂಡಿದ್ದಳಾದರೂ, ಅಲ್ಲಿಗೆ ಹೋಗದೆ ಕಣ್ಣೂರಿನ ದಾರಿ ಹಿಡಿದಳು. ಆ ಊರನ್ನೂ ನೋಡದೆ, ಅಲಕ್ಕಾಡಿಗೆ ಹೋದಳು. ಅದು ಎಳಿಮಲ ನೌಕಾ ತರಬೇತಿ ಅಕಾಡೆಮಿಯಿಂದ ಕೇವಲ 17 ಕಿ.ಮೀ. ದೂರದಲ್ಲಿದೆ ಹಾಗೂ 11 ಯುವಕರು ಐಸಿಸ್‌ ಸೇರಿದ ಪದನ್ನಾ ಗ್ರಾಮವೂ ಇಲ್ಲಿಗೆ ಹತ್ತಿರ.

ಇದಾದ ಬಳಿಕ, ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳಕ್ಕೂ ಜ್ಯೋತಿ ಹೋಗಿದ್ದಳು. ನಂತರ ಒಮ್ಮೆ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದಳು. ಸಾಲದ್ದಕ್ಕೆ, ಪಹಲ್ಗಾಂ ದಾಳಿ ನಡೆದಾಗಲೂ ಪಾಕ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಳು. ಇನ್ನು 2024ರ ನವೆಂಬರ್‌ನಲ್ಲಿ ಈಕೆ ಒಡಿಶಾದ ಪುರಿಗೆ ಭೇಟಿ ನೀಡಿ, ಜಗನ್ನಾಥ ದೇವಸ್ಥಾನ, ಸಮುದ್ರತೀರ ಮತ್ತು ಊರಿನ ಫೋಟೋಗಳನ್ನು ಹಂಚಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ, ಆಕೆ ಪುರಿ ಕುರಿತ ಮಾಹಿತಿಯನ್ನೂ ಪಾಕ್‌ ಜತೆ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.