*   ಆತ್ಮಹತ್ಯಾ ದಾಳಿಗೆಂದು ಬಂದಿದ್ದ ಪಾಕ್‌ನ ಜೈಷ್‌ ಉಗ್ರರು*   ಗುಂಡಿನ ದಾಳಿಯಲ್ಲಿ ಹತ್ಯೆ, ಒಬ್ಬ ಪೊಲೀಸ್‌ ಕೂಡ ಸಾವು*   ಮೋದಿ ಭೇಟಿ ಬುಡಮೇಲು ಮಾಡುವ ಸಂಚು 

ಜಮ್ಮು(ಏ.23):  ಪ್ರಧಾನಿ ನರೇಂದ್ರ ಮೋದಿ(Narenra Modi) ಅವರ ಭೇಟಿಗೆ ಎರಡು ದಿನಗಳ ಮುನ್ನ ಪಾಕಿಸ್ತಾನದ(Pakistan) ಜೈಷ್‌-ಎ-ಮೊಹಮ್ಮದ್‌ (JEM) ಭಯೋತ್ಪಾದಕ ಸಂಘಟನೆಯ ಇಬ್ಬರು ಆತ್ಮಹತ್ಯಾ ದಾಳಿಕೋರರನ್ನು ಪೊಲೀಸರು ಹತ್ಯೆಗೈಯುವ ಮೂಲಕ ಭಾರಿ ಅನಾಹುತ ತಪ್ಪಿಸಿದ್ದಾರೆ. ಏ.24ರ ಪಂಚಾಯತ್‌ ರಾಜ್‌ ದಿನದಂದು ಪ್ರಧಾನಿ ಭೇಟಿ ನೀಡಲಿರುವ ಸಾಂಬಾ ಜಿಲ್ಲೆಯ ಪಾಲಿ ಎಂಬ ಊರಿಗೆ 17 ಕಿ.ಮೀ. ದೂರದಲ್ಲೇ ಈ ಘಟನೆ ನಡೆದಿದೆ. ದಾಳಿಯಲ್ಲಿ ಸಿಐಎಸ್‌ಎಫ್‌ನ ಒಬ್ಬ ಅಧಿಕಾರಿ ಕೂಡ ಸಾವನ್ನಪ್ಪಿದ್ದಾರೆ.

‘ಈ ದಾಳಿಕೋರರು ಬಹುಶಃ ಮೋದಿ ಭೇಟಿಗೂ ಮುನ್ನ ಭಯೋತ್ಪಾದಕ ಕೃತ್ಯ ಎಸಗಿ ಭೇಟಿಯನ್ನು ಬುಡಮೇಲು ಮಾಡುವ ಸಂಚು ರೂಪಿಸಿದ್ದರು ಎಂಬ ಶಂಕೆ ಇದೆ’ ಎಂದು ಜಮ್ಮು-ಕಾಶ್ಮೀರ(Jammu Kashmir) ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ.

ಆಫ್ಘನ್‌ನಿಂದ ಮರಳಿದ 80 ಉಗ್ರರ ಭಾರತಕ್ಕೆ ಕಳಿಸಲು ಪಾಕ್‌ ಸಿದ್ಧತೆ

ಸಾಂಬಾ ಜಿಲ್ಲೆಯ ಗಡಿಯಲ್ಲಿ ಪಾಕ್‌ನಿಂದ ಒಳಗೆ ನುಸುಳಿದ್ದ ಈ ಉಗ್ರರು(Terrorists) ಸೇನಾಪಡೆಯ ಕ್ಯಾಂಪ್‌ಗೆ ಸಮೀಪದ ಪ್ರದೇಶದಲ್ಲೇ ವಾಸಿಸುತ್ತಿದ್ದರು. ಶುಕ್ರವಾರ ಬೆಳಗಿನ ಜಾವ 4.25ರ ಸಮಯದಲ್ಲಿ ಅವರು ಸುಂಜ್ವಾನ್‌ ಸೇನಾ ಕ್ಯಾಂಪ್‌ನತ್ತ ತೆರಳುತ್ತಿದ್ದರು. ಆ ವೇಳೆ ಸಿಐಎಸ್‌ಎಫ್‌ ಯೋಧರ ಬಸ್‌ ಜಮ್ಮು ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಅವರ ಬಸ್‌ಗೆ ಅರೆಸೇನಾಪಡೆಯ ವಾಹನ ಬೆಂಗಾವಲಾಗಿತ್ತು. ಆ ಸಮಯದಲ್ಲಿ ಉಗ್ರರು ಬಸ್‌ನತ್ತ ಗ್ರೆನೇಡ್‌ ಎಸೆದು, ಗುಂಡಿನ ದಾಳಿ(Firing) ನಡೆಸಿ ಪರಾರಿಯಾಗಿದ್ದಾರೆ. ಆಗ ಸಿಐಎಸ್‌ಎಫ್‌ನ ಎಎಸ್‌ಐ ಎಸ್‌.ಪಿ.ಪಟೇಲ್‌ ಎಂಬುವರು ಸಾವನ್ನಪ್ಪಿ, ಇನ್ನಿಬ್ಬರು ಗಾಯಗೊಂಡಿದ್ದಾರೆ. ನಂತರ ಸಿಐಎಸ್‌ಎಫ್‌ ಯೋಧರು(CRPF Soldiers) ಉಗ್ರರ ಬೆನ್ನತ್ತಿ ಹತ್ಯೆಗೈದಿದ್ದಾರೆ.

ಭಾರಿ ಶಸ್ತ್ರಾಸ್ತ್ರ, ಆತ್ಮಹತ್ಯಾ ಜಾಕೆಟ್‌ ಪತ್ತೆ:

ಹತ್ಯೆಯಾದ ಉಗ್ರರ ಬಳಿ ಎರಡು ಎಕೆ-47 ರೈಫಲ್‌ಗಳು, ಗ್ರೆನೇಡ್‌ ಲಾಂಚರ್‌ಗಳು, ಸ್ಯಾಟಲೈಟ್‌ ಫೋನ್‌, ಆತ್ಮಹತ್ಯಾ ಜಾಕೆಟ್‌ಗಳು ಪತ್ತೆಯಾಗಿವೆ. ಪ್ರಧಾನಿ ಭೇಟಿಯ ವೇಳೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದ್ದು, ಪಾಕ್‌ನಿಂದ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಸಿಐಎಸ್‌ಎಫ್‌ಗೆ ಬಂದಿತ್ತು. ಅವರಿಗಾಗಿ ಹುಡುಕಾಟ ಕೂಡ ನಡೆದಿತ್ತು. ಅದರ ನಡುವೆಯೇ ಉಗ್ರರ ಹತ್ಯೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಸ್ಥಳಗಳಲ್ಲಿ ಮೊಬೈಲ್‌ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.

2018ರಲ್ಲಿ ಸುಂಜ್ವಾನ್‌ ಸೇನಾ ಕ್ಯಾಂಪ್‌ ಮೇಲೆ ಮೂವರು ಜೈಷ್‌-ಎ-ಮೊಹಮ್ಮದ್‌ ಉಗ್ರರು ದಾಳಿ ನಡೆಸಿ ಆರು ಯೋಧರನ್ನು ಹತ್ಯೆಯಗೈದಿದ್ದರು. 2019ರ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಇದೇ ಮೊದಲ ಬಾರಿ ಏ.24ರಂದು ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. 2019 ಹಾಗೂ 2021ರಲ್ಲಿ ಜಮ್ಮುವಿನ ಗಡಿಗೆ ಅವರು ಭೇಟಿ ನೀಡಿದ್ದರು.