ಪ್ರವಾಸದಿಂದ ಮರಳುವಾಗ ಕಾರಿಗೆ ಟ್ರಕ್ ಡಿಕ್ಕಿ, ಅಪಘಾತದಲ್ಲಿ ಇಬ್ಬರು ಬಿಜೆಪಿ ನಾಯಕರು ಮೃತ
ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಿಜೆಪಿ ನಾಯಕರು ಮೃತಪಟ್ಟ ಘಟನೆ ನಡೆದಿದೆ. ನಾಯಕರು ಸಂಚರಿಸುತ್ತಿದ್ದ ಕಾರಿಗೆ ಹಿಂದಿನಿಂದ ಟ್ರಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪೊಲೀಸ್ ತನಿಖೆಯಲ್ಲಿ ಅಚ್ಚರಿ ಅಂಶಗಳು ಹೊರಬಂದಿದೆ.
ಭುವನೇಶ್ವರ್(ಜ.05) ಇಬ್ಬರು ಬಿಜೆಪಿ ನಾಯಕರು ಸೇರಿದಂತೆ ಒಟ್ಟು 6 ಮಂದಿ ಸಂಚರಿಸುತ್ತಿದ್ದ ಕಾರಿಗೆ ಹಿಂದಿನಿಂದ ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಬಿಜೆಪಿ ನಾಯಕರು ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾ ಬಿಜೆಪಿಯ ನಾಯಕರಾದ ದೇಬೇಂದ್ರ ನಾಯಕ್ ಹಾಗೂ ಮುರಳೀಧರ್ ಚುರಿಯಾ ಮೃತಪಟ್ಟಿದ್ದಾರೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ಈ ಘಟನೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲ ಅಚ್ಚರಿ ಎದುರಾಗಿದೆ. ಇದು ಸಾಮಾನ್ಯವಾಗಿ ನಡೆದ ಅಪಘಾತವಲ್ಲ, ಕೊನೆಯ ಶಂಕೆಗಳು ವ್ಯಕ್ತವಾಗಿದೆ.
ಬಿಜೆಪಿ ಗೋಶಾಲ ಮಂಡಲ ಅಧ್ಯಕ್ಷರಾಗಿದ್ದ ದೇಬೇಂದ್ರ ನಾಯಕ್, ಪಂಚಾಯತ್ ಬಿಜೆಪಿ ಮಾಜಿ ಅಧ್ಯಕ್ಷ ಮುರಳೀಧರ್ ಚುರಿಯಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ನಾಯಕರು ಒಡಿಶಾ ಬಿಜೆಪಿಯ ಪ್ರಭಾವಿ ಹಾಗೂ ಪ್ರಮುಖ ನಾಯಕ ನೌರಿ ನಾಯಕ್ ಆಪ್ತರಾಗಿದ್ದರು. ಇಬ್ಬರು ಬಿಜೆಪಿ ನಾಯಕರು ಹಾಗೂ ಇತರ ನಾಲ್ವರು ಭುವೇಶ್ವರ್‌ಗೆ ಪ್ರವಾಸ ಕೈಗೊಂಡಿದ್ದರು. ಪಕ್ಷದ ಕೆಲ ಕಾರ್ಯಕ್ರಮ ಸೇರಿದಂತೆ ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳಿಗೆ ಒಟ್ಟು 6 ಮಂದಿ ಪ್ರಯಾಣ ಬೆಳೆಸಿದ್ದರು.
ಕಾರ್ಯಕ್ರಮ ಮುಗಿಸಿ ಕರ್ಡೋಲಾದಲ್ಲಿರುವ ಮನೆಗೆ ಮರಳಲು ಭುವನೇಶ್ವರದಿಂದ ಹೊರಟಿದ್ದಾರೆ. ಸಂಭಲಪುರ ಜಿಲ್ಲೆಯ ಬಳಿ ಸರಿಸುಮಾರು ರಾತ್ರಿ 1.30ಕ್ಕೆ ಭೀಕರ ಅಪಘಾತ ಸಂಭವಿಸಿದೆ. ಹಿಂದಿನಿಂದ ವೇಗವಾಗಿ ಬಂದ ಟ್ರಕ್, ನಾಯಕರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡು ಕಾರು ಅಫಘಾತವಾಗಿದೆ. ಈ ಅಪಘಾತದಲ್ಲಿ ಕಾರು ನಜ್ಜು ಗುಜ್ಜಾಗಿದೆ. ಘಟನೆ ಬೆನ್ನಲ್ಲೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸ ಮಾಡಿ ಕಾರಿನಲ್ಲಿದ್ದ ಪ್ರಯಾಣಿಕರ ಹೊರತೆಗೆದು ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾರೆ.
ಬೆಂಗಳೂರು: BBMP ಕಸದ ಲಾರಿಗೆ ಇಬ್ಬರು ಸಹೋದರಿಯರು ಬಲಿ!
ಆದರೆ ಈ ಪೈಕಿ ಇಬ್ಬರು ಬಿಜೆಪಿ ನಾಯಕರಾದ ದೇಬೇಂದ್ರ ನಾಯಕ್ ಹಾಗೂ ಮರುಳೀಧರ್ ಚುರಿಯಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇನ್ನುಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ಗಾಯಗೊಂಡು ಸುರೇಶ್ ಚಂದಾ ಈ ಅಪಘಾತದ ಕುರಿತು ಹೇಳಿಕೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಚಂದಾ ಘಟನೆಯನ್ನು ವಿವರಿಸಿದ್ದಾರೆ.
ಕಾರು ವೇಗವಾಗಿ ಸಾಗುತ್ತಿತ್ತು. ಆದರೆ ಟ್ರಕ್ ಒಂದು ನಮ್ಮನ್ನು ಹಿಂಬಾಲಿಸುತ್ತಿತ್ತು. ಹೀಗಾಗಿ ಚಾಲಕ ಕಂತಪಲ್ಲಿ ಕ್ರಾಸ್ ಬಳಿ ತಕ್ಷಣ ಕಾರನ್ನು ಹೆದ್ದಾರಿಯಿಂದ ಸಣ್ಣ ರಸ್ತೆಗೆ ತಿರುಗಿಸಿದ್ದಾರೆ. ಈ ವೇಳೆ ಟ್ರಕ್ ಇದೇ ರಸ್ತೆಗೆ ತಿರುಗಿ ಬಂದು ವೇಗವಾಗಿ ಡಿಕ್ಕಿಯಾಗಿದೆ. ಟ್ರಕ್ ಡಿಕ್ಕಿಯಾದ ಬೆನ್ನಲ್ಲೇ ಕಾರು ಪಲ್ಟಿಯಾಗಿದೆ. ಎರಡು ಬಾರಿ ಟ್ರಕ್ ಕಾರಿಗೆ ಡಿಕ್ಕಿಯಾಗಿದೆ. ಹೀಗಾಗಿ ಕಾರು ನಜ್ಜುಗುಜ್ಜಾಗಿದೆ. ಜೊತೆಗೆ ಪಲ್ಟಿಯಾಗು ಮೂಲಕ ಅಪಘಾತದ ತೀವ್ರತೆ ಹೆಚ್ಚಾಗಿದೆ ಎಂದು ಸುರೇಶ್ ಚಂದಾ ಹೇಳಿದ್ದಾರೆ. ತಪ್ಪಾಗಿ ಕಾರಿಗೆ ಒಂದು ಬಾರಿ ಡಿಕ್ಕಿಯಾಗುವುದು ಸಹಜ. ಆದರೆ ಎರಡೆರಡು ಬಾರಿ ಕಾರಿಗೆ ಟ್ರಕ್ ಡಿಕ್ಕಿಯಾಗಿದೆ. ಇದು ಉದ್ದೇಶಪೂರ್ಕವಾಗಿ ನಡೆದಿರುವ ಅಪಘಾತವಾಗಿದೆ. ಕೊಲೆ ಸಂಚು ಇದರಲ್ಲಿದೆ ಎಂದು ಸುರೇಶ್ ಚಂದಾ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಟ್ರಕ್ ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ. ಟ್ರಕ್ ಚಾಲಕನ ಬಂಧಿಸಲಾಗಿದೆ. ಮೃತ ಬಿಜೆಪಿ ನಾಯಕರ ಕಟುಂಬಸ್ಥರು ಇದೀಗ ಉದ್ದೇಶಪೂರ್ಕವಾಗಿ ನಡೆದಿರುವ ಅಪಘಾತ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಕುಟುಂಬಸ್ಥರ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಯಲಿದೆ ಎಂದು ಎಸ್‌ಪಿ ಮುಕೇಶ್ ಕುಮಾರ್ ಹೇಳಿದ್ದಾರೆ.
ಕೊರಟಗೆರೆ: ಮಿನಿ ಲಾಲ್‌ಬಾಗ್ ವೀಕ್ಷಣೆಗೆ ತೆರಳಿದ್ದ ಟಾಟಾ ಏಸ್ ಪಲ್ಟಿ, 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ